ವಿಜಯ್ ಪ್ರಕಾಶ್! ಈ ಹೆಸರು ಕೇಳುತ್ತಿದ್ದ ಹಾಗೇ ಎಲ್ಲಕ್ಕಿಂತ ಮೊದಲು ಸುಳಿದು ಹೋಗೋದು ಮಿಲೇನಿಯರ್ ಮಿಂಚು. ಭಾರತಕ್ಕೆ ಆಸ್ಕರ್ ಗೌರವ ತಂದುಕೊಟ್ಟ ಸ್ಲಮ್ ಡಾಗ್ ಮಿಲೇನಿಯರ್ ಚಿತ್ರದ ಜೈ ಹೋ ಹಾಡಿಗೆ ದನಿಯಾದವರು ವಿಜಯ್ ಪ್ರಕಾಶ್. ಈ ಹಾಡನ್ನು ಹಾಡಿದ ನಾಲ್ವರಲ್ಲಿ ವಿಜಯ್ ಕೂಡ ಒಬ್ಬರಾಗಿದ್ದು ಕನ್ನಡಿಗರ ಹೆಮ್ಮೆ. ಅಪ್ಪಟ ಮೈಸೂರಿನ ಈ ಪ್ರತಿಭೆ ಹೀಗೆ ಹಠಾತ್ತನೆ ಜಾಗತಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಾಗ ಎಲ್ಲರೂ ಹುಬ್ಬೇರಿಸಿದವರೇ. ಈ ಪ್ರಶಸ್ತಿ ಘೊಷಣೆಯಾಗುವವರೆಗೆ ಕನ್ನಡ ನೆಲದಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದವರು ವಿಜಯ್. ಅನಂ ತರ ಹಬ್ಬಿಕೊಂಡ ಅವರ ಪ್ರಭೆಯ ಪ್ರಖರತೆ ಇಂದಿಗೂ ಮತ್ತಷ್ಟು ಇನ್ನಷ್ಟು ವ್ಯಾಪಿಸುತ್ತಲೇ ಸಾಗಿದೆ.
ವಿಜಯ್ ಪ್ರಕಾಶ್ ಸಂಗೀತದ ವಾತಾವರಣದಲ್ಲೆ ಹುಟ್ಟಿ ಬೆಳೆದವರು. ಅವರ ತಂದೆ ಸ್ವತಃ ಸಂಗೀತ ವಿದ್ವಾಂಸರು. ಅವರಿಂದಲೇ ಗಾಯನವನ್ನು ಕರಗತ ಮಾಡಿಕೊಂಡ ವಿಜಯ್ ಪ್ರಕಾಶ್ ಮುಂದೆ ಪಾಶ್ಚಾತ್ಯ ಸಂಗೀತವನ್ನೂ ಕಲಿತು ಪಳಗಿಸಿಕೊಂಡರು. ವಿಜಯ್ರ ತಾಯಿ ಲೋಪಾಮುದ್ರಾ ಪ್ರಕಾಶ್. ತಂದೆ ಎಲ್. ರಾಮಶೇಷ. ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಮುಂಬೈಗೆ ತೆರಳಿದ ವಿಜಯ್ ವಿದ್ವಾಂಸ ಸುರೇಶ್ ವಾಡ್ಕರ್ ಅವರ ಶಿಷ್ಯರಾದರು. ಇವರು ಝೀ ಟಿವಿಯ ಸಾರೆಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ೧೯೯೯ರಲ್ಲಿ ಮೆಗಾ ಫೈನಲ್ ಪ್ರವೇಶಿಸಿದ್ದರು. ಇವರ ಜತೆ ಶ್ರೇಯಾ ಘೋಶಾಲ್ ಹಾಗೂ ಕನ್ನಡದ ಅರ್ಚನಾ ಉಡುಪ ಕೂಡಾ ಇದ್ದರು. ಆ ಸಾರೆಗಮ ಸ್ಪರ್ಧೆಯಲ್ಲಿ ಕನಕದಾಸರ “ಬಾರೋ ಕೃಷ್ಣಯ್ಯ’ ಹಾಡಿ ಕನ್ನಡದ ಕಂಪನ್ನು ಪಸರಿಸಿದ್ದರು ವಿಜಯ್.
ಗಾಳಿಪಟ ಚಿತ್ರಕ್ಕೆ ಮುನ್ನ ಬಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲೆ ಹೆಚ್ಚು ಪರಿಚಿತರಿದ್ದ ವಿಜಯ್ ಪ್ರಕಾಶ್, ಎ. ಆರ್. ರೆಹೆಮಾನ್ ಸಂಗೀತದ, ಸುಭಾಷ್ ಘಾಯ್ ನಿರ್ದೇಶನದ “ಯುವರಾಜ್’ ಚಿತ್ರದಲ್ಲಿ “ಮನ್ ಮೋಹಿನಿ ಮೋರೆ” ಎಂಬ ಶಾಸ್ತ್ರೀಯ ಸಂಗೀತ ಮಿಳಿತಗೊಂಡಿರುವ ಹಾಡನ್ನು ಅತ್ಯದ್ಭುತವಾಗಿ ಹಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ೨೦೦೩ರಲ್ಲೇ ತಮಿಳು ಸಿನೆಮಾಕ್ಕಾಗಿ ಹಾಡಿದ್ದ ವಿಜಯ್, ಸ್ಲಮ್ ಡಾಗ್ ಸಿನೆಮಾಕ್ಕೆ ಮೊದಲೇ ಅಲ್ಲಿ ಅನೇಕ ಅವಕಾಶಗಳನ್ನು ಪಡೆದಿದ್ದರು. ಹಿಂದಿಯ ಕಾಲ್, ವಕ್ತ್, ಸ್ವದೇಸ್, ಚೀನಿ ಕಮ್, ಲಕ್ಷ್ಯ, ಮಾತೃಭೂಮಿ, ತೇರೆ ನಾಮ್ ಚಿತ್ರಗಳಿಗೆ ಹಾಡಿ ದೇಶಾದ್ಯಂತ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡರು. ಸ್ಲಮ್ ಡಾಗ್ ಮಿಲೇನಿಯರ್ ಜನಪ್ರಿಯತೆಯ ನಂತರ ಗೌತಮ್ ಮೆನನ್ರ ವಿನ್ನೈತ್ತಾಂಡಿ ವರುವಾಯ ಹಾಡೊಂದಕ್ಕೆ ದನಿಯಾಗಿದ್ದು ವಿಜಯ್ಗೆ ದೊಡ್ಡ ಬ್ರೇಕ್ ನೀಡಿತು. ತಮಿಳಿನ ಖ್ಯಾತ ನಿರ್ದೇಶಕ ಬಾಲಾ ನಿರ್ದೇಶನದ, ಆರ್ಯ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದ ನಾನ್ ಕಡುವಳ್ ಸಿನೆಮಾಕ್ಕಾಗಿ ಇಳಯರಾಜ ಸಂಗೀತ ನಿರ್ದೇಶನದಲ್ಲಿ ಶಿವೋಹಮ್ ಗೀತೆಯನ್ನು ಹಾಡಿ ಅಪಾರ ಮೆಚ್ಚುಗೆ ಗಳಿಸಿದ್ದರು ವಿಜಯ್. ಅಲ್ಲಿಂದ ಮುಂದೆ ಅವರು ಕಾಲಿವುಡ್ನ ಹಾರ್ಟ್ ಥ್ರೋಬ್ ಆಗಿ ಬೆಳೆದರು. ಮೂಲತಃ ಶಾಸ್ತ್ರೀಯ ಗಾಯಕರಾದರೂ ಆಯ್ಕೆಯಲ್ಲಿ ಮಡಿವಂತಿಕೆ ತೋರದೆ ಎಲ್ಲ ಬಗೆಯ ಹಾಡುಗಳನ್ನೂ ಹಾಡುತ್ತ ಬಂದರು.
ಕರ್ನಾಟಕದಿಂದ ಹೊರಗೆ ದನಿಯಾಗುತ್ತಲೇ ಪ್ರವರ್ಧಮಾನಕ್ಕೆ ಬಂದ ವಿಜಯ್ ಪ್ರಕಾಶ್, ಸ್ಯಾಂಡಲ್ವುಡ್ಡಿಗೆ ಅಧಿಕೃತ ಪದಾರ್ಪಣೆ ಮಾಡಿದ್ದು ಗಾಳಿಪಟ ಸಿನೆಮಾಕ್ಕಾಗಿ ಕವಿತೆ ನೀನೇಕ ಪದಗಳಲಿ ಅವಿತೆ ಹಾಡುವ ಮೂಲಕ. ಈ-ಟಿವಿ ಕನ್ನಡದಲ್ಲಿ (ಈಗ ಕಲರ್ಸ್) ಪ್ರಸಾರವಾಗುತ್ತಿದ್ದ ಟಿ. ಎನ್. ಸೀತಾರಾಮ್ ನಿರ್ದೇಶನದ ಮುಕ್ತ ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಹಾಡಿದ್ದು ಇವರೇ. ಕನ್ನಡದಲ್ಲಿ ಗಾಳಿಪಟ ಹಿಟ್ ನಂತರ ಮನಸಾರೆ, ಬಚ್ಚನ್, ಅಧ್ಯಕ್ಷ, ರಂಗಿತರಂಗ ಮೊದಲಾದ ಚಿತ್ರಗಳಿಗೆ ಹಾಡಿದರು. ಶರಣ್ ಅಭಿನಯದ ವಿಕ್ಟರಿ ಸಿನೆಮಾಕ್ಕಾಗಿ ಖಾಲಿ ಕ್ವಾಟ್ರು ಬಾಟ್ಲು ಹಾಡಿ ಜನಪ್ರಿಯಗೊಳಿಸಿದರು. ಉಳಿದವರು ಕಂಡಂತೆ ಸಿನೆಮಾದ ಥೀಮ್ ಆಫ್ ಉಳಿದವರು ಕಂಡಂತೆ ಹಾಡಿದ್ದು ಇವರೇ. ಈ ಗಾಯನಕ್ಕಾಗಿ ಇವರಿಗೆ ಫಿಲ್ಮ್ ಫೇರ್ ಅವಾರ್ಡ್ ಕೂಡ ಲಭಿಸಿದೆ. ಈವರೆಗೆ ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚು ಸಿನೆಮಾಗಳಿಗೆ ಹಾಡಿರುವ ವಿಜಯ್, ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋದ ಟೈಟಲ್ ಸಾಂಗಿಗೂ ದನಿಯಾದರು. ಹಿಂದಿ, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ವಿವಿಧ ಜಾಹೀರಾತುಗಳಲ್ಲೂ ತಮ್ಮ ಧ್ವನಿಯ ಜಾದೂ ತೋರಿಸಿದರು. ನಂತರದಲ್ಲಿ ಸುವರ್ಣ ವಾಹಿನಿಯ ಸ್ಟಾರ್ ಸಿಂಗರ್ ರಿಯಾಲಿಟಿ ಶೋದ ತೀರ್ಪುಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಂಡ ವಿಜಯ್ ಪ್ರಕಾಶ್ ತಮ್ಮ ಕನ್ನಡಾಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ಸ್ಟಾರ್ ಸಿಂಗರ್ನಲ್ಲಿ ವಿಜಯ್ರ ಮ್ಯಾನರಿಸಮ್, ಯುವ ಪ್ರತಿಭೆಗಳಿಗೆ ಅವರು ನೀಡುವ ಪ್ರೋತ್ಸಾಹದ ಮಾತುಗಳು, ಸೆಟ್ನಲ್ಲಿ ಅವರ ಸರಳತೆ ಎಲ್ಲವೂ ವಿಜಯ್ರನ್ನು ಮತ್ತಷ್ಟು ಆಪ್ತರನ್ನಾಗಿಸಿದವು. ಈ ಮನ್ನಣೆ, ಜನಪ್ರಿಯತೆಗಳೇ ವಿಜಯ್ ಪ್ರಕಾಶ್ರನ್ನು ಮತ್ತೊಂದು ಸಂಗೀತಕ್ಕೆ ಸಂಬಂಧಪಟ್ಟ ರಿಯಾಲಿಟಿ ಶೋನಲ್ಲಿ ತೀರ್ಪುಗಾರರ ಕುರ್ಚಿಯಲ್ಲಿ ಕೂರುವಂತೆ ಮಾಡಿತು. ಅದು, ಜೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ನ ಸೀಸನ್ ೧೩ ಶೋ. ಸದ್ಯಕ್ಕೆ ೧೭ನೇ ಸೀಜನ್ನಿನಲ್ಲಿ ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಜೊತೆ ತೀರ್ಪುಗಾರರಾಗಿ ಪ್ರತಿ ವಾರಾಂತ್ಯ ಕಾಣಿಸಿಕೊಳ್ಳುವ ವಿಜಯ್ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಡುವ ತಮ್ಮ ಗುಳಿ ಕೆನ್ನೆಯ ಮೋಡಿ ಮುಂದುವರೆಸಿದ್ದಾರೆ.
- ಸಮಾನ್ಯವಾಗಿ ಚಲನಚಿತ್ರ ಗಾಯಕರು ನಿರ್ದಿಷ್ಟ ನಟರಿಗೆ ದನಿಯಾಗಿ ಖ್ಯಾತರಾಗುತ್ತಾರೆ. ನೀವು ಯಾರ ದನಿಯಾಗಿ ಗುರುತಿಸಿಕೊಂಡಿದ್ದೀರಿ?
ನಾನು ಗುರುತಿಸಿಕೊಂಡಿದ್ದೀನಿ ಅನ್ನೋದಕ್ಕಿಂತ, ಜನ ನನ್ನನ್ನು ತಮಿಳು ಸಿನೆ ಸ್ಟಾರ್ ಅಜಿತ್ರ ಹಾಡುಗಳಿಗೆ ದನಿಯಾಗಿ ಇಷ್ಟಪಟ್ಟಿದ್ದಾರೆ. ಕಾಲಿವುಡ್ನಲ್ಲಿ ನನ್ನ ಗಾಯನದ ಮೊದಲ ಆದ್ಯತೆ ಅಜಿತ್ ಅಭಿನಯದ ಚಿತ್ರಗಳೇ ಆಗಿರುತ್ತವೆ.
- ಇತ್ತೀಚೆಗೆ ಸಿನೆಮಾಗಳಿಗೆ ಹಾಡೋದನ್ನ ಕಡಿಮೆ ಮಾಡಿದಂತೆ ಕಾಣುತ್ತದೆ. ಇದು ಬೇಕೆಂದೇ ತೆಗೆದುಕೊಂಡ ತೀರ್ಮಾನವಾ? ನೀವು ಹಾಡುಗಳ ಬಗ್ಗೆ ಹೆಚ್ಚು ಚೂಸಿ ಆಗ್ತಿದ್ದೀರಾ?
ಹಾಗೇನಿಲ್ಲ. ವಿಶ್ವಾದ್ಯಂತ ಅಭಿಮಾನಿಗಳು ನಾನು ಲೈವ್ ಹಾಡೋದನ್ನ ಕೇಳಲು ಇಷ್ಟಪಡುತ್ತಿದ್ದಾರೆ. ಅವರಿಗಾಗಿ ನಾನು ಹಾಡುತ್ತೇನೆ. ಈ ನಿಮಿತ್ತ ದೇಶವಿದೇಶ ತಿರುಗಾಟದಲ್ಲೆ ಹೆಚ್ಚಿನ ಸಮಯ ಹೊರಟು ಹೋಗುತ್ತಿದೆ. ಹೀಗಾಗಿ ನನಗೆ ಸಿನೆಮಾಗಳಲ್ಲಿ ಹೆಚ್ಚು ಹಾಡಲು ಸಾಧ್ಯವಾಗುತ್ತಿಲ್ಲ. ಹಾಗೇನೇ ಹಾಡುಗಳ ಮಟ್ಟಿಗೆ ನಾನು ಯಾವತ್ತೂ ಚೂಸಿ ಅಲ್ಲ. ಹಾಡು ಅದು ಯಾವುದಿದ್ದರೂ ಹಾಡೇ. ನಾನು ಅದನ್ನು ಹಾಗೆಯೇ ನೋಡುತ್ತೇನೆ. ಒಬ್ಬ ಸಂಗೀತನಿಷ್ಠೆಯ ಗಾಯಕ ಇದು ಹಾಡು, ಇದು ಹಾಡಲ್ಲ ಅನ್ನುವ ತಾರತಮ್ಯ ಮಾಡೋದಿಲ್ಲ. ಸಮಯದ ಕೊರತೆ ನನ್ನನ್ನು ಸಿನೆಮಾಗಳಿಂದ ದೂರ ಇರಿಸಿದೆ ಅಷ್ಟೇ.
- ಇತ್ತೀಚೆಗೆ ಸಂಗೀತ ನಿರ್ದೇಶಕರು ಜನಪ್ರಿಯ ಹಾಡುಗಳನ್ನು ಮಲ್ಟಿಪಲ್ ಸಿಂಗರ್ಗಳಿಂದ ಹಾಡಿಸುವ ಟ್ರೆಂಡ್ ಹುಟ್ಟು ಹಾಕ್ತಿದಾರೆ. ಇದರಿಂದ ಸೋಲೋ ಗಾಯನದ ಅವಕಾಶ ಕೈತಪ್ಪಿದಂತೆ ಆಗೋದಿಲ್ವ?
ವೈಯಕ್ತಿಕವಾಗಿ ಸೋಲೋ ಹಾಡಲು ನನಗೆ ಇಷ್ಟವೇ. ಯಾರಿಗೆ ತಾನೆ ಅದು ಇರೋದಿಲ್ಲ ಹೇಳಿ? ಆದರೆ ಮಲ್ಟಿಪಲ್ ಸಿಂಗರ್ಗಳಿಂದ ಹಾಡಿಸುವ ಟ್ರೆಂಡ್ ಕೂಡ ಒಳ್ಳೆಯದೆ. ಅದು ಬಹಳಷ್ಟು ಹಾಡುಗಾರರಿಗೆ ಸಮಾನಾವಕಾಶ ಒದಗಿಸುತ್ತದೆ. ಉದಾಹರಣೆಗೆ ಸ್ಲಮ್ ಡಾಗ್ ಮಿಲೇನಿಯರ್ನಲ್ಲಿ ಜೈ ಹೋ ಹಾಡು ಪೂರ್ತಿಯಾಗಿ ಹಾಡಿದ್ದು ಸುಖವಿಂದರ್ ಸಿಂಗ್. ಜೈ ಹೋ ಅನ್ನುವಾಗ ಮಾತ್ರ ನನ್ನ ದನಿ ಇದೆ. ಹಾಗಿದ್ದೂ ಅದಕ್ಕೆ ಆಸ್ಕರ್ ಮನ್ನಣೆ ದೊರೆತಾಗ ನಾನೂ ಆ ಹಾಡಿನ ಭಾಗವಾಗಿದ್ದ ಹೆಮ್ಮೆ ಮತ್ತು ಗೌರವಗಳನ್ನು ಅನುಭವಿಸಿದೆ.
- ಸಂಗೀತ ಸಂಯೋಜನೆ ಮಾಡುವ ಯೋಚನೆ ಇದೆಯಾ?
೨೦೧೨ರಲ್ಲಿ ಕನ್ನಡದ ಅಂದರ್ ಬಾಹರ್ ಸಿನೆಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ನನ್ನ ಮೊದಲ ಅನುಭವ. ಅದಕ್ಕೆ ಮೊದಲು ಐದೊಂದ್ಲ ಐದು ಸಿನೆಮಾಕ್ಕೆ ಗೆಸ್ಟ್ ಕಂಪೋಸರ್ ಆಗಿ ಕೆಲಸ ಮಾಡಿದ್ದೆ. ಸಂಗೀತ ಸಂಯೋಜನೆ ಬೇರೆಯದೇ ಬಗೆಯ ಕೆಲಸ. ಅದು ಕಷ್ಟ. ಅದು ಒಂದೇ ಸಲಕ್ಕೆ ಬಹಳಷ್ಟು ಸೃಜನಶೀಲರ ಜೊತೆ ಕುಳಿತು ಕೆಲಸ ಮಾಡುವುದನ್ನು ಅಪೇಕ್ಷಿಸುತ್ತದೆ. ಅದಕ್ಕೆಂದೇ ಪ್ರತ್ಯೇಕವಾಗಿ ಸಮಯ ಎತ್ತಿಡಬೇಕಾಗುತ್ತದೆ. ಸಂಗೀತದ ಬಗ್ಗೆ ಎಷ್ಟೇ ಒಲವಿದ್ದರೂ ಸಧ್ಯಕ್ಕಂತೂ ನನ್ನ ಬಳಿ ಅಷ್ಟು ಡೆಡಿಕೇಟೆಡ್ ಆಗಿ ನೀಡುವಷ್ಟು ಸಮಯವಿಲ್ಲ. ನನಗೆ ಹಾಡುವುದೇ ಸುಲಭ ಅಂತ ಅನ್ನಿಸಿದೆ.