ಸಂಗೀತ ನಿರ್ದೇಶಕರಾಗಿ ವಿಪರೀತ ಅವಕಾಶ ಹೊಂದಿದ್ದವರು ವಿ. ಹರಿಕೃಷ್ಣ. ‘ಎಲ್ಲ ಬಿಟ್ಟ ಬಂಗಿ ನೆಟ್ಟ’ ಅನ್ನೋ ಮಾತಿದೆಯಲ್ಲಾ? ಹಾಗೆ ಹರಿಕೃಷ್ಣಂಗೆ ಡೈರೆಕ್ಟರ್ ಆಗಬೇಕು ಅನ್ನೋ ಹುಚ್ಚು ಅದ್ಯಾವ ಘಳಿಗೆಯಲ್ಲಿ ತಲೆಗೇರಿತೋ ಗೊತ್ತಿಲ್ಲ. ಮೊದಲು ನಿರ್ದೇಶಿಸಿದ್ದ ಅರ್ಧ ಸಿನಿಮಾ ಒಂದು ಮಟ್ಟಕ್ಕೆ ನಿರೀಕ್ಷೆ ಹುಟ್ಟಿಸಿತ್ತು. ಆ ನಂತರದ ಬಂದ ಸಿನಿಮಾವಂತೂ ಹರಿ ಮೇಲಿದ್ದ ನಂಬಿಕೆಯನ್ನು ನೀರಲ್ಲಿ ಹೋಮ ಮಾಡಿಸಿದೆ.
ಈಗ ಹರಿಗೆ ಎರಡನೇ ಸಲ ಹುಚ್ಚು ಕೆದರಿಕೊಂಡಿತ್ತು. ಆದರೆ ನಿರ್ದೇಶಕನ ಸ್ಥಾನಕ್ಕೀತ ಅನ್ ಫಿಟ್ ಅನ್ನೋದು ಕೂಡಾ ಜಾಹೀರಾಗಿದೆ. ಹರಿಕೃಷ್ಣ ಕೆತ್ತಿಟ್ಟಿದ್ದ ಅತ್ಯದ್ಭುತ ಕಲಾಕೃತಿ ನೋಡಿದ ಎಲ್ಲರನ್ನೂ ʻದಿಗ್ಬ್ರಾಂತಿʼಗೆ ದೂಡಿದೆ. ಇವೆಲ್ಲವನ್ನೂ ನೋಡಿದರೆ ಹರಿಕೃಷ್ಣ ನಿರ್ದೇಶನವನ್ನು ಮುಂದುವರೆಸೋದು ಇನ್ನು ಕಷ್ಟ. ಸ್ಟಾರ್ ನಟನ ಸಿನಿಮಾ ಮಾಡಿದ ಮೇಲೆ ಅದೇ ಲೆವೆಲ್ಲಿನ ನಟನ ಸಿನಿಮಾವನ್ನೇ ಹಿಡಿಯಬೇಕು. ಇವರ ಕೆಲಸ ನೋಡಿದ ಯಾರೂ ಅಂಥಾ ದುಸ್ಸಾಹಸ ಮಾಡಲಾರರು. ಹೀಗಿರುವಾಗ ಮತ್ತೆ ಹರಿ ಸಂಗೀತ ಸುಧೆಯನ್ನೇ ಹರಿಸುತ್ತಾರಾ? ಸದ್ಯ ಹರಿಕೃಷ್ಣ ಯೋಗರಾಜ ಭಟ್ಟರ ಗರಡಿ ಸೇರಿದಂತೆ ಒಂದಿಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವ ಕೆಲಸ ಒಪ್ಪಿದ್ದಾರೆ.
ಎಲ್ಲ ವಿಚಾರದಲ್ಲೂ ಹರಿಕೃಷ್ಣ ಅವರನ್ನು ಅನುಕರಿಸುವ ಅರ್ಜುನ್ ಜನ್ಯಾ ಕೂಡಾ ಈಗ ಮ್ಯೂಸಿಕ್ಕು ಪಕ್ಕಕ್ಕಿಟ್ಟು ಡೈರೆಕ್ಷನ್ ಕ್ಯಾಪು ತೊಟ್ಟಿದ್ದಾರೆ. ಅದೇನಾಗುತ್ತೋ ನೋಡಬೇಕು!