ಕನ್ನಡ ಮತ್ತು ತುಳು ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದ ಯುವ ನಿರ್ದೇಶಕ ಮೊಹ್ಮದ್ ಹ್ಯಾರಿಸ್ ಮರಣ ಹೊಂದಿದ್ದಾರೆ. ದಕ್ಷಿಣ ಕನ್ನಡದಲ್ಲಿ ಮುಂಜಾನೆ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಈ ಯುವ ನಿರ್ದೇಶಕ ಬಲಿಯಾಗಿದ್ದಾರೆ.
ತುಳುನಾಡಿನವರೇ ಆದ ಹ್ಯಾರಿಸ್ ಇಂದು ಮುಂಜಾನೆ ವೇಳೆ ಮಾರುತಿ ಓಮ್ನಿಯಲ್ಲಿ ಮೂಡುಬಿದ್ರೆಯಿಂದ ಶಿರ್ತಾಡಿ ಕಡೆ ಹೊರಟಿದ್ದರು. ಶಿರ್ತಾಡಿ ಬಳಿ ರಸ್ತೆ ಬದಿಯ ಮರವೊಂದಕ್ಕೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಹ್ಯಾರಿಸ್ ಅವರೇ ಕಾರು ಚಲಾಯಿಸುತ್ತಿದ್ದರು. ನಿದ್ದೆಯ ಮಂಪರಿನಿಂದಲೇ ಈ ಅನಾಹುತ ಸಂಭವಿಸಿದೆ ಅಂತ ಪೊಲೀಸ್ ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.
ಮಹಮದ್ ಹ್ಯಾರಿಸ್ ಮಂಗಳೂರು ಮೂಲದವರು. ಆರಂಭ ಕಾಲದಿಂದಲೂ ಸಿನಿಮಾಸಕ್ತಿ ಹೊಂದಿದ್ದ ಅವರು ಕನ್ನಡ ಚಿತ್ರರಂಗದಲ್ಲಿ ಹೆಜ್ಜೆ ಗುರುತು ಮೂಡಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಈ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದ್ದ ಹ್ಯಾರಿಸ್ ಕಾಶೀನಾಥ್ ಜೊತೆಗೂ ಕೆಲ ಕಾಲ ಕೆಲಸ ಮಾಡಿದ್ದರು. ನಿರ್ದೇಶಕ ಆರ್ ಚಂದ್ರು ಅವರ ಗರಡಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದರು.
ಕನ್ನಡದಲ್ಲಿ ಏನಾದರೂ ಸಾಧಿಸುವ ಮಹತ್ವಾಕಾಂಕ್ಷೆಯೊಂದಿಗೇ ಹ್ಯಾರಿಸ್ ತುಳು ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದರು. ಇದೀಗ ಅವರೇ ಆಟಿಡೊಂಜಿ ದಿನ ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಇದರ ಚಿತ್ರೀಕರಣ ಕೂಡಾ ನಡೆಯುತ್ತಿತ್ತು. ಇನ್ನೇನು ಒಂದೆರಡು ತಿಂಗಳು ಕಳೆದಿದ್ದರೆ ಅವರ ಕನಸಿನಂಥಾ ಈ ಚಿತ್ರ ಬಿಡುಗಡೆಯಾಗಿ ಬಿಡುತ್ತಿತ್ತು. ಆದರೆ ಈ ರಸ್ತೆ ಅಪಘಾತ ಅವರನ್ನು ಬಲಿಯಾಗಿಸಿದೆ.
Leave a Reply
You must be logged in to post a comment.