ಬಹುಶಃ ಇದು ಸಿನಿಮಾ ಮಾಧ್ಯಮಕ್ಕಿರುವ ಶಕ್ತಿಯಿರಬೇಕು. ಹೆತ್ತ ತಂದೆ ತಾಯಿಗೆ ಅನ್ನವಿಕ್ಕದ, ಒಡಹುಟ್ಟಿದವರೊಂದಿಗೆ ಯಾವತ್ತಿಗೂ ಪ್ರೀತಿತೋರದ, ಸಂವೇದನೆಯೇ ಇಲ್ಲದವರಂತೆ ಬದುಕುವವರೂ ಸಿನಿಮಾ ನಟರನ್ನು ಆರಾಧಿಸುವ ಪರಿ ಇದೆಯಲ್ಲಾ? ಅಬ್ಬಾ… ನೆಚ್ಚಿನ ನಟರ ಸಿನಿಮಾ ಬಿಡುಗಡೆಯಾದ ದಿನ ಅವರ ಕಟೌಟುಗಳಿಗೆ ಹಾಲಭಿಷೇಕ ಮಾಡೋದು, ಸ್ಟಾರ್ ಕಟ್ಟೋದು, ಪಟಾಕಿ ಸಿಡಿಸೋದು, ತೆರೆ ಮೇಲೆ ಹೀರೋ ಎಂಟ್ರಿ ಕೊಡುತ್ತಿದ್ದಂತೇ ಕಾಯಿನ್ನುಗಳನ್ನು ರಪರಪ ಎರಚೋದೇನು… ಇಂಥಾ ಅಭಿಮಾನ ಸುಮ್ಮನೇ ಯಾರಿಗೂ ಗಿಟ್ಟುವಂಥದ್ದಲ್ಲ.
ಇತ್ತೀಚೆಗೆ ಮೊದಲ ಸಿನಿಮಾಗೆ ಅಥವಾ ಕೆಲವು ನಿರ್ಮಾಪಕರ ಮಕ್ಕಳ ಸಿನಿಮಾಕ್ಕೆ ಹೀಗೆ ದುಡ್ಡುಕೊಟ್ಟು ಬಾಡಿಗೆ ಅಭಿಮಾನ ಪ್ರದರ್ಶಿಸೋದೂ ಇದೆ. ಆದರೆ ನಿಜವಾದ ಅಭಿಮಾನ ಪಡೆದ ಕನ್ನಡದ ಅದೆಷ್ಟೋ ಜನ ಹೀರೋಗಳಿದ್ದಾರೆ. ಅವರನ್ನು ಆರಾಧಿಸುವ ಅಭಿಮಾನಿಗಳನ್ನು ಕುರಿತಾದ ಅಂಕಣ ಇದು. ಡಾ. ರಾಜ್ಕುಮಾರ್ ತಮ್ಮನ್ನು ಆರಾಧಿಸುವವರಿಗೆ ‘ಅಭಿಮಾನಿ ದೇವ್ರು’ ಅಥೊಂದು ಹೆಸರಿಟ್ಟಿದ್ದರು. ಈ ಅಂಕಣಕ್ಕೆ ಇದೇ ಹೆಸರನ್ನಿಡಲಾಗಿದೆ. ಆಗಾಗ ಪ್ರಕಟಗೊಳ್ಳುವ ಈ ‘ಅಭಿಮಾನಿ ದೇವ್ರು’ ಸರಣಿ ನಿಮಗೆ ಮೆಚ್ಚುಗೆಯಾಗುತ್ತದೆನ್ನುವ ನಂಬಿಕೆ ನನ್ನದು.
– ಅರುಣ್
ಹರೀಶ್ ಕೆ.ಆರ್… ಕೋಲಾರ ಇವರ ಮೂಲ. ಬದುಕನ್ನರಸಿ ಬಂದು ಸೇರಿದ್ದು ಬೆಂಗಳೂರು. ಕಂಪ್ಯೂಟರ್ ಆಪರೇಟರ್ ಆಗಿ ಉದ್ಯೋಗ ಆರಂಭಿಸಿ ಈಗ ವಿನ್ಯಾಸ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರೀಶ್ ನೌಕರಿ ಸೇರಿದ ದಿನದಿಂದ ಹೆಚ್ಚು ಒಡನಾಟವಿಟ್ಟುಕೊಂಡಿರುವುದು ಸಾಹಿತ್ಯ ಕ್ಷೇತ್ರದೊಂದಿಗೆ. ಆದರೆ ಕನಸು ಮನಸಲ್ಲೂ ಧೇನಿಸುವುದು ಮಾತ್ರ ಸಿನಿಮಾವನ್ನು.
ಕನ್ನಡದ ಶ್ರೇಷ್ಠ ಕೃತಿಗಳನ್ನು, ವಿಚಾರ ಸಾಹಿತ್ಯಗಳನ್ನು ಪ್ರಕಟಿಸುತ್ತಾ ದೊಡ್ಡ ಹೆಸರು ಮಾಡಿರುವ ನವಕರ್ನಾಟಕ ಪಬ್ಲಿಕೇಷನ್ ಪ್ರಕಾಶನ ಸಂಸ್ಥೆಯಲ್ಲಿ ಹನ್ನೊಂದು ವರ್ಷ ಹನ್ನೊಂದು ತಿಂಗಳು ಉದ್ಯೋಗಕ್ಕಿದ್ದು, ಅಲ್ಲಿಂದ ಹೊರಬಂದು ಸೇರಿದ್ದು ಇಳಾ ಮುದ್ರಣಾಲಯವನ್ನು. ನಿರ್ದೇಶಕ ಬಿ. ಸುರೇಶ ಅವರ ತಾಯಿ ಮತ್ತು ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರ ಒಡೆತನದ ಮುದ್ರಣ ಸಂಸ್ಥೆಯಿದು.
ಇಳಾ ಸಂಸ್ಥೆಗೂ ಚಿತ್ರರಂಗಕ್ಕೂ ಬಹಳಾ ನಂಟಿದೆ. ಅದರದ್ದೇ ಒಂದು ಚರಿತ್ರೆಯೂ ಇದೆ. ನಟ ಪ್ರಕಾಶ್ರೈ ಸೇರಿದಂತೆ ಅನೇಕ ಕಲಾವಿದರು ಮತ್ತು ತಂತ್ರಜ್ಞರಿಗೆ ಆಶ್ರಯವಾಗಿದ್ದ ಪುರಾತನ ಸಂಸ್ಥೆಯಿದು. ಸದ್ಯ ಇಳಾ ಮುದ್ರಣಾಲಯಕ್ಕೆ ಬಿ. ಸುರೇಶ ಅವರ ಅಣ್ಣ ಬಿ. ಗುರುಮೂರ್ತಿಯವರು ಕ್ಯಾಪ್ಟನ್. ಗುರುಮೂರ್ತಿಯವರ ಮಗ ಅದ್ವೈತ ಸದ್ಯ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಛಾಯಾಗ್ರಾಹಕ. ಅದ್ವೈತರ ಪತ್ನಿ ಅಪೇಕ್ಷಾ ಕಿರುತೆರೆಯ ಜನಪ್ರಿಯ ನಟಿ…!
ಇಂಥಾ ಇಳಾ ಸಂಸ್ಥೆಯಲ್ಲಿ ವಿನ್ಯಾಸ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿರುವ ಹರೀಶ್ಗೆ ಸಿನಿಮಾನೇ ಉಸಿರು, ಊಟ ಎಲ್ಲವೂ! ಅನ್ನಾಹಾರ ಬಿಟ್ಟರೂ ಸಿನಿಮಾವನ್ನು ಬಿಡದ ಭಯಂಕರ ಸಿನಿಮಾ ಭಕ್ತಿ ಹರೀಶ್ ಅವರದ್ದು. ಶಿವಣ್ಣ, ಪುನೀತ್, ಸುದೀಪ್, ದುನಿಯಾ ವಿಜಯ್, ದರ್ಶನ್, ಯಶ್ ಹರೀಶ್ ಪಾಲಿನ ದೇವರುಗಳು. ಅದರಲ್ಲೂ ಶಿವರಾಜ್ ಕುಮಾರ್ ಎಂದರೆ ಪಂಚಪ್ರಾಣ. ಶಿವಣ್ಣ ನಟಿಸಿರುವ ಒಂದು ಚಿತ್ರವನ್ನೂ ಬಿಡದೇ ನೋಡಿರುವ ಹರೀಶ್ ಇಡೀ ರಥಸಪ್ತಮಿ ಸಿನಿಮಾವನ್ನು ಮೊದಲಿಂದ ಕೊನೇವರೆಗೂ ಕಂಠಪಾಟ ಮಾಡಿಕೊಂಡು ಒಂದು ಡೈಲಾಗೂ ಮಿಸ್ ಮಾಡದಂತೆ ಪಟಪಟನೆ ಉದುರಿಸುತ್ತಾರೆ ಎಂದರೆ ಎಷ್ಟು ಸಲ ಆ ಚಿತ್ರವನ್ನು ನೋಡಿರಬಹುದು ಊಹಿಸಿಕೊಳ್ಳಿ.
ಶಿವಣ್ಣನ ಯಾವುದೇ ಸಿನಿಮಾ ರಿಲೀಸಾದರೂ ಮೊದಲ ದಿನದ ಮೊದಲ ಶೋವನ್ನು ಇವರು ಮಿಸ್ ಮಡಿಕೊಳ್ಳೋದೇ ಇಲ್ಲವಂತೆ. ಅಂದಹಾಗೆ, ತಮ್ಮ ನೆಚ್ಚಿನ ನಟರ ಸಿನಿಮಾವನ್ನು ಮೊದಲ ಆಟದಲ್ಲೇ ನೋಡುವ ಭರದಲ್ಲಿ ಒಮ್ಮೆ ಸತ್ತಿರುವ ಅವರ ಅಜ್ಜಿಯನ್ನು ಅದೆಷ್ಟು ಬಾರಿ ಮತ್ತೆ ಮತ್ತೆ ಸಾಯಿಸಿದ್ದಾರೋ ಗೊತ್ತಿಲ್ಲ! ‘ನಮ್ಮಜ್ಜಿ ಹೋಗ್ಬಿಟ್ರು’ ಅಂತಾ ಹರೀಶ್ ಹೇಳಿದರೆಂದರೆ, ಅವತ್ತು ಯಾವುದೋ ದೊಡ್ಡ ಸ್ಟಾರ್ ಸಿನಿಮಾ ರಿಲೀಸ್ ಅಂತಲೇ ಅರ್ಥ!!
ಇಂಥ ಹರೀಶ್ಗೆ ಇಬ್ಬರು ಮಕ್ಕಳು ಎರಡನೇ ಮಗ ಸ್ಕಂದನಿಗೆ ಈಗಿನ್ನೂ ಹನ್ನೊಂದು ವರ್ಷ. ಅದ್ಭುತವಾಗಿ ಚಿತ್ರ ಬಿಡಿಸುತ್ತಾನೆ. ಜೊತೆಗೆ, ಈಗಲೇ ಅಪ್ಪನಂತೆಯೇ ಸಿನಿಮಾ ಹುಚ್ಚು ಹುಡುಗನಿಗೆ! ದೊಡ್ಡ ಮಗ ಶ್ರೀನಿವಾಸ ಅವಧಿಗೂ ಮುನ್ನ ಹುಟ್ಟಿದ ಕಾರಣದಿಂದ ಉಳಿದಿದ್ದು ಒಂಭತ್ತು ವರ್ಷಗಳಷ್ಟೇ. ಹುಟ್ಟಿನಿಂದ ಬದುಕಿದ್ದ ಅಷ್ಟೂ ದಿನ ಆ ಮಗು ಮೇಲೇಳಲೂ ಆಗಿರಲಿಲ್ಲ.
ಹೇಗಾದರೂ ಮಾಡಿ ಮಗನನ್ನು ಉಳಿಸಿಕೊಳ್ಳಬೇಕು ಅಂತಾ ಹರೀಶ್ ಹೋರಾಟ ನಡೆಸಿದ್ದು ಅಷ್ಟಿಷ್ಟಲ್ಲ. ಕಡೆಗೂ ಒಂದು ದಿನ ಶ್ರೀನಿವಾಸ ಚಿರನಿದ್ರೆಗೆ ಜಾರಿಬಿಟ್ಟ. ‘ಮಗ ತೀರಿಕೊಂಡ ದುಃಖವನ್ನು ಹೇಗಾದ್ರೂ ಸಹಿಸಿಕೊಂಡ್ರೋ’ ಅಂತ್ಯಾರಾದರೂ ಅಂದರೆ, ‘ಸಿನಿಮಾ ನೋಡೋದನ್ನ ಮತ್ತಷ್ಟು ಜಾಸ್ತಿ ಮಾಡಿಕೊಂಡೆ’ ಎಂದು ಹೇಳುವ ಹರೀಶ್ ಮಾತು ಕೇಳಿಸಿಕೊಂಡ ಯಾರಿಗೇ ಆದರೂ ಆಶ್ಚರ್ಯದೊಂದಿಗೆ ಕಣ್ಣು ತೇವವಾಗುತ್ತದೆ. ಮಗನ ಅಗಲಿಕೆಯ ದುಃಖವನ್ನು ನುಂಗಿಕೊಳ್ಳಲೂ ಈ ವ್ಯಕ್ತಿ ಚಿತ್ರಮಂದಿರದ ಸೀಟಿಗೇ ಒರಗಿಕೊಂಡರೆಂದರೆ, ಇವರ ಸಿನಿಮಾ ಅಭಿಮಾನ ಯಾವ ಮಟ್ಟದ್ದೆಂದು ಬಿಡಿಸಿ ಹೇಳಬೇಕಿಲ್ಲ. ಇವತ್ತಿಗೂ ಹರೀಶ್ ಬಿಡುಗಡೆಯಾಗುವ ಕನ್ನಡದ ಬಹುತೇಕ ಸಿನಿಮಾಗಳನ್ನು ನೋಡುತ್ತಾರೆ.
ಶಿವರಾಜ್ ಕುಮಾರ್ ಅವರನ್ನು ಆರಾಧಿಸುವ ಹರೀಶ್ ಈ ವರೆಗೂ ನೇರವಾಗಿ ಅವರನ್ನು ನೋಡಲು ಸಾಧ್ಯವೇ ಆಗಿಲ್ಲವಂತೆ. ಹಿರಿಯ ಪತ್ರಕರ್ತೆ ವಿಜಯಮ್ಮನವರು ಒಮ್ಮೆ ಭೇಟಿ ಮಾಡಿಸುತ್ತೇನೆ ಅಂತಾ ಹೇಳಿದ್ದರಾದರೂ ಅದಿನ್ನೂ ಸಾಧ್ಯವಾಗಿಲ್ಲ. ಈ ನಡುವೆ ಯಾವನೋ ಪುಣ್ಯಾತ್ಮ “ಶಿವಣ್ಣನನ್ನು ಮೀಟ್ ಮಾಡಿಸ್ತೀನಿ, ಅವರ ಜೊತೆಗೊಂದು ಫೋಟೋ ಕೂಡಾ ತೆಗೆಸಿಕೊಡ್ತೀನಿ. ಆದರೆ, ಒಂಚೂರು ಅಮೌಂಟು ಕೊಡಬೇಕಾಗುತ್ತೆ” ಅಂದಿದ್ದನಂತೆ. ಆದರೆ ಹರೀಶ್ ಅದಕ್ಕೊಪ್ಪಿಲ್ಲ. ಯಾವತ್ತಾದರೊಂದು ದಿನ ಶಿವಣ್ಣನ ದರ್ಶನವಾಗುತ್ತದೆ. ತಮ್ಮ ಮಗನೊಟ್ಟಿಗೆ ಅವರ ಜೊತೆಗೊಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನೋದು ಹರೀಶ್ ಬಯಕೆಯಿತ್ತು. ವರ್ಷಕ್ಕೆ ಮುಂಚೆ ಆ ಬಯಕೆ ಈಡೇರಿದ ಖುಷಿಯಲ್ಲಿದ್ದಾರೆ ಹರೀಶ್.
ಸಿನಿಮಾಗಳನ್ನು ಜೀವದಂತೆ ಪ್ರೀತಿಸುವ ಹರೀಶ್ ಯಾವತ್ತೂ ಸ್ಟಾರ್ಗಳ ಮನೆ ಮುಂದೆ ನಿಂತವರಲ್ಲ. ಸಮಯ ವ್ಯರ್ಥ ಮಾಡಿಕೊಂಡವರಲ್ಲ. ಸಿನಿಮಾ ನೋಡಲೆಂದೇ ಅಧಿಕ ಅವಧಿಯ ಕೆಲಸ ಮಾಡಿ ಹಣ ಸಂಪಾದಿಸಿದವರು. ಇಂಥ ಹರೀಶ್ರನ್ನು ಧಾರಾಳವಾಗಿ ‘ಅಭಿಮಾನಿ ದೇವ್ರು’ ಅನ್ನಬಹುದಲ್ವೇ?