he puneetha karunade puneetha
he puneetha karunade puneetha

ಮುತ್ತುರಾಜನ ಮುತ್ತು ಕೈಜಾರಿ ತಿಂಗಳು ನಾಲ್ಕಾದವು. ಕರುನಾಡ ಮನೆಮಗನನ್ನು ಕಳೆದುಕೊಂಡ ನೋವು ಅಷ್ಟು ಸುಲಭಕ್ಕೆ ಮರೆಯಾಗುವಂಥದ್ದಲ್ಲ. ಭೌತಿಕವಾಗಿ ಅವರಿಲ್ಲ ಅನ್ನೋ ನೋವಿನ ನಡುವೆಯೇ ನೆನ್ನೆ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹಲವರು ಅಪ್ಪು ಕುರಿತಾಗಿ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

ಸ್ವಲ್ಪ ಭಿನ್ನವಾಗಿ ಯೋಚಿಸಿ, ಅಪ್ಪು ಕುರಿತಾಗಿ ಮಧುರವಾದ ಮತ್ತು ಅರ್ಥಪೂರ್ಣ ಹಾಡನ್ನೇಕೆ ರೂಪಿಸಬಾರದು ಅಂತಾ ಅಂದುಕೊಂಡವರು ಹಾಲೇಶ್‌ ಮಳಿಗೇರ್.‌ ಅಪ್ಪು ಅವರು ಬಿಟ್ಟುಹೋದ ಆದರ್ಶಗಳೊಂದಿಗೆ ನಾವು ಬದುಕಬೇಕು ಅನ್ನೋದನ್ನೇ ಗಮನದಲ್ಲಿಟ್ಟುಕೊಂಡು ಹಾಡೊಂದನ್ನು ಬರೆದರು.

ಹಾಲೇಶ್‌ ಸಾಕಷ್ಟು ವರ್ಷಗಳಿಂದ ವಾಹಿನಿಗಳಲ್ಲಿ ಕೆಲಸ ಮಾಡುತ್ತಾ ಬಂದವರು.  ಈ ಹಿಂದೆ ಉದಯ ಟಿ.ವಿ ಯಲ್ಲಿ ಧಾರಾವಾಹಿಗಳಲ್ಲಿ ಎಪಿಸೋಡ್ ಪ್ರೊಡ್ಯೂಸರ್, ಉದಯ‌ ಮ್ಯೂಸಿಕ್ ನ ಪ್ರೋಗ್ರಾಮ್ ಪ್ರೊಡ್ಯೂಸರ್ ಆಗಿ ಕೆಲಸ ನಿರ್ವಹಿಸಿದ್ದರು. ಸದ್ಯ ಪಬ್ಲಿಕ್‌ ಮ್ಯೂಸಿಕ್ ವಾಹಿನಿಯಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.  ವಾಹಿನಿಗಳಲ್ಲಿ  ಮ್ಯೂಸಿಕ್‌ ವಿಭಾಗದಲ್ಲಿ ಕೆಲಸ ಮಾಡುತ್ತಾ, ಹಾಡುಗಳ ಮಧ್ಯೆಯೇ ಬದುಕು ಕಟ್ಟಿಕೊಂಡಿರುವ ಹಾಲೇಶ್‌ ಅವರಿಗೆ ಮೊದಲಿನಿಂದಲೂ ಬರವಣಿಗೆಯ ಹವ್ಯಾಸವಿತ್ತು. ಈಗ ಪುನೀತ್‌ ಕುರಿತಾದ ಹಾಡು ಕೇಳಿದರೆ, ಹಾಲೇಶ್‌ ಅವರೊಳಗೊಬ್ಬ ವಿದ್ವತ್ತಿನ ಬರಹಗಾರ ಇರುವುದು ಗೊತ್ತಾಗುತ್ತದೆ. ʻಹೇ ಪುನೀತ.. ಹೇ ಪುನೀತ… ಕರುನಾಡೇ ಪುನೀತʼ  ಎನ್ನುವ ಸಾಲಿನಿಂದ ಶುರುವಾಗುವ ಹಾಡಿನ ಪ್ರತೀ ಪದದಲ್ಲೂ ಅಪ್ಪು ನೆನಪು ಕಾಡುತ್ತದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಬೆಳಗುತ್ತಿರುವ ಎ.ಟಿ. ರವೀಶ್‌ ಸಂಗೀತ ನಿರ್ದೇಶನದ ಈ ಹಾಡಿಗೆ ನಾದಿರಾ ಬಾನು ಮತ್ತು ಶರಣ್‌ ಅಯ್ಯಪ್ಪ ದನಿ ನೀಡಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಅವರ ಕೆಲವಾರು ವಿಡಿಯೋ, ಫೋಟೋ ಗಳನ್ನು ಬಳಸಿ ಈ ವಿಡಿಯೋ ಹಾಡನ್ನು ರೂಪಿಸಲಾಗಿದೆ.

ಹಾಲೇಶ್‌ ಅವರ ಕುಟುಂಬದ ಎಲ್ಲರೂ ಅಣ್ಣಾವ್ರ ಅಭಿಮಾನಿಗಳು. ಎಲ್ಲ ಅಂದುಕೊಂಡಂತೆ ಆಗಿದ್ದಿದ್ದರೆ ಹಾಲೇಶ್‌ ಮಳಿಗೇರ್‌ ಕೆಲಸದ ವಿಚಾರವಾಗಿ ಅಪ್ಪು ಅವರನ್ನು ಭೇಟಿಯಾಗಬೇಕಿತ್ತು. ಫೋನಿನಲ್ಲಿ ಒಮ್ಮೆ ಮಾತಾಡಿದ್ದರೂ, ನೇರ ಭೇಟಿ ಸಾಧ್ಯವೇ ಆಗಿರಲಿಲ್ಲ. ಈಗ ತಾವೇರ ಬರೆದ ಹಾಡಿನೊಂದಿಗೆ ಹಾಲೇಶ್‌ ಅಪ್ಪುವನ್ನು ಪ್ರೀತಿಸುವ ಎಲ್ಲರಿಗೂ ಹತ್ತಿರವಾಗಿದ್ದಾರೆ.

ಹಿರಿಯ ನಿರ್ದೇಶಕ ದೊರೆ ಭಗವಾನ್‌ ʻಕರುನಾಡೆ ಪುನೀತʼ  ಹಾಡಿನ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಈಗ ಪಬ್ಲಿಕ್‌ ಟೀವಿ ಕ್ಯಾಪ್ಟನ್‌ ಹೆಚ್.‌ ಆರ್‌. ರಂಗನಾಥ್‌  ವಿಡಿಯೋವನ್ನು ಅನಾವರಣಗೊಳಿಸಿದ್ದಾರೆ. ಕನ್ನಡ ಚಿತ್ರರಂಗದ ನಿರ್ಮಾಪಕ ಸ್ನೇಹಿ ಆಡಿಯೋ ಸಂಸ್ಥೆ ಅನ್ನಿಸಿಕೊಂಡಿರುವ ಎ2 ಚಾನೆಲ್ಲಿನಲ್ಲಿ ಈ ಹಾಡು ಬಿಡುಗಡೆಯಾಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸಖತ್ತಾಗಿದೆ ಬೈರಾಗಿ ಎಂಟ್ರಿ…!

Previous article

ಸ್ವಾಧೀನ ಕಳೆದುಕೊಂಡ ಅಭಿಮಾನಿಗೆ ಸಾಂತ್ವನ ಹೇಳಿದ ದರ್ಶನ್

Next article

You may also like

Comments

Leave a reply

Your email address will not be published.