ಅದು ಇಂದಿರಾ ಯುಗ. ಭಾರತ ದೇಶವನ್ನು ಇಂದಿರಾಗಾಂಧಿ ಪ್ರಭಲವಾಗಿ ಆಳುತ್ತಿದ್ದ ಕಾಲ. ಆ ತನಕ ಇದ್ದ ಫ್ಯೂಡಲ್ ಪದ್ಧತಿಯನ್ನು ತೊಡೆದುಹಾಕಬೇಕು ಅಂತಾ ನಿರ್ಧರಿಸಿರುತ್ತಾರೆ. ಪ್ರತೀ ರಾಜ್ಯ, ಜಿಲ್ಲೆ, ಕೇರಿಗಳಲ್ಲಿ ಯುವಪಡೆಗಳನ್ನು ಕಟ್ಟೋದರಿಂದ ಮಾತ್ರ ಅದು ಸಾಧ್ಯ ಅನ್ನೋದು ಮೇಡಂ ಇಂದಿರಾ ನಿಲುವಾಗಿರುತ್ತದೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ಅರಸು ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಯುವಕರು ಸಂಘಟಿತರಾಗುತ್ತಾರೆ. ಅದಕ್ಕಿಟ್ಟ ಹೆಸರು ಇಂದಿರಾ ಬ್ರಿಗೇಡ್.. ಈ ತಂಡದ ಲೀಡರ್ ಆಗಿ ಜಯರಾಜ್ ಅವರನ್ನು ನೇಮಿಸಲಾಗುತ್ತದೆ.
ತೀರಾ ಸಣ್ಣ ವಯಸ್ಸಿಗೇ ಹೊಡೆದಾಟ ಬಡಿದಾಟ ಮಾಡಿಕೊಂಡು ಗ್ಯಾಂಗ್ ಲೀಡರ್ ಆಗಿ ಬೆಳೆದ ಜಯರಾಜ್ ಗೆ ಕ್ರಮೇಣ ರಾಜಕಾರಣದ ನಂಟು ಶುರುವಾಗುತ್ತದೆ. ತಿಗಳರ ಪಾಳ್ಯ ಗಂಗಾ ಮತ್ತು ಸ್ಯಾಮ್ಸನ್ ಜೊತೆ ಸೇರಿ ಕಟ್ಟಿದ ಇಂದಿರಾ ಬ್ರಿಗೇಡ್ ಗೆ ಜಯರಾಜ್ ಅಧಿನಾಯಕ. ಈ ನಡುವೆ ಬೆಂಗಳೂರು ಕರಗದ ವಿಚಾರವಾಗಿ ಕಿತ್ತಾಟ ಶುರುವಾಗುತ್ತದೆ. ಗ್ಯಾಂಗಿನಿಂದ ಗಂಗಾ ಹೊರ ನಡೆಯುತ್ತಾನೆ. ಆ ನಂತರ ಗಂಗ ಯಾರೊಂದಿಗೆ ಸೇರುತ್ತಾನೆ? ಜಯರಾಜ್ ಮೇಲೆ ಅಟ್ಯಾಕ್ ಮಾಡುವವರು ಯಾರು? ನಂತರ ತಿರುಗಿಬಿದ್ದ ಜಯರಾಜ್ ಏನು ಮಾಡುತ್ತಾರೆ? ಬೆಂಗಳೂರಿನ ಭೂಗತ ಜಗತ್ತನ್ನು ರಾಜಕಾರಣಿಗಳು ಹೇಗೆ ತಮ್ಮ ದಾಳವನ್ನಾಗಿಸಿಕೊಳ್ಳುತ್ತಾರೆ? ಇದರಲ್ಲಿ ಕೊತ್ವಾಲ್ ಪಾತ್ರವೇನು? ಎಂಬಿತ್ಯಾದಿ ವಿವರಗಳನ್ನೊಳಗೊಂಡ ರಿಯಲಿಸ್ಟಿಕ್ ಸಿನಿಮಾ ಹೆಡ್ ಬುಷ್!
1970ರ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಮರುಸೃಷ್ಟಿಸಿದ್ದಾರೆ. ಅರಸು, ಎಂ.ಡಿ. ನಟರಾಜ್, ರತ್ನಪ್ರಭಾ, ಖಾನ್, ರಾವ್ ಪಾತ್ರಗಳ ಸಮೇತ ಆಗಿನ ಎಲ್ಲ ರೌಡಿಗಳೂ ಚಿತ್ರದಲ್ಲಿ ಬಂದು ಹೋಗುತ್ತಾರೆ. ಜಯರಾಜ್ ಪ್ರೇಮ ಪ್ರಕರಣ ಕೂಡಾ ಇಲ್ಲಿ ತೆರೆದುಕೊಳ್ಳುತ್ತದೆ. ಇದುವರೆಗೂ ಕ್ರೈಂ ವರದಿಗಳಲ್ಲಷ್ಟೇ ಓದಿ ತಿಳಿದುಕೊಂಡಿದ್ದ ಬೆಂಗಳೂರು ಭೂಗತ ಜಗತ್ತಿನ ಮತ್ತೊಂದು ಮಜಲು ಈಗ ತೆರೆಮೇಲೆ ಅರಳಿದೆ.
ರೌಡಿ ಅನ್ನಿಸಿಕೊಂಡಿದ್ದ ಜಯರಾಜ್ ಮಾಸ್ ಹೀರೋ ಆಗಿ ಬೆಳೆದದ್ದು ಹೇಗೆ ಅನ್ನೋದರ ಜೊತೆಗೆ ಸ್ನೇಹದಲ್ಲಿ ಶುರುವಾದ ಬಿರುಕು ಬೆಂಗಳೂರಿನ ರಕ್ತಸಿಕ್ತ ಇತಿಹಾಸಕ್ಕೆ ಹೇಗೆ ಮುನ್ನುಡಿ ಬರೆಯಿತು ಅನ್ನೋದನ್ನೂ ಹೆಡ್ ಬುಷ್ ನಲ್ಲಿ ವಿವರಿಸಿದ್ದಾರೆ. ಡಾಲಿ ಧನಂಜಯ ಡಾನ್ ಜಯರಾಜ್ ಆಗಿ ಅಕ್ಷರಶಃ ಮಾರ್ಪಾಟಾಗಿದ್ದಾರೆ. ಡಾಲಿ ಮತ್ತು ಲೂಸ್ ಮಾದ ಇಬ್ಬರ ನಟನೆ ಒಂದು ತೂಕವಾದರೆ, ಸ್ಯಾಮ್ಸನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲು ನಾಗೇಂದ್ರ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ಬೇರೆಲ್ಲ ಪಾತ್ರಧಾರಿಗಳನ್ನು ಪಕ್ಕಕ್ಕೆ ಸರಿಸಿ ಬಾಲು ಅಬ್ಬರಿಸಿದ್ದಾರೆ. ಬಾಲು ಬಾಯಲ್ಲಿ ಬರುವ ʻಡಬಲ್ ರೋಡ್ ಜಂಕ್ಷನ್ʼ ಡೈಲಾಗು ಎಲ್ಲರ ಬಾಯಲ್ಲೂ ಉಳಿಯುವಂತಾಗಿದೆ. ಸುನೋಜ್ ವೇಲಾಯುಧನ್ ಕ್ಯಾಮೆರಾ ಕೆಲಸಕ್ಕೆ ಮಲ್ಲ ಮಹೇಶ್ ಕಲಾ ನಿರ್ದೇಶನ ಪುಷ್ಟಿ ನೀಡಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಪ್ರತೀ ಸಲವೂ ಏನಾದರೊಂದು ಹೊಸದನ್ನು ಪ್ರಯತ್ನಿಸುತ್ತಾರೆ. ಹಾಡುಗಳಲ್ಲಿ ಅದು ವರ್ಕೌಟ್ ಆಗಿದೆ. ಆದರೆ, ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಅವರ ಎಕ್ಸ್ಪರಿಮೆಂಟೇ ಒಂಚೂರು ಕಿರಿಕಿರಿ ಅನ್ನಿಸುತ್ತದೆ. ಉಳಿದಂತೆ ಸಿನಿಮಾದ ಮಾತುಗಳೆಲ್ಲಾ ಪಕ್ಕಾ ರೌಡಿಸಂ ಭಾಷೆಯಲ್ಲೇ ಇದೆ. ಅಗ್ನಿ ಶ್ರೀಧರ್ ಬರೆದುಕೊಟ್ಟಿದ್ದನ್ನು ಶೂನ್ಯ ಯಥಾವತ್ತಾಗಿ ತೆರೆಗೆ ಅಳವಡಿಸಿದ್ದಾರೆ.
No Comment! Be the first one.