ಸುತ್ತ ಕಾಡು, ಅದರ ನಡುವೆ ಒಂದು ಎಸ್ಟೇಟು, ಅದರೊಳಗೊಂದು ಪುರಾತನ ಬಂಗಲೆ… ಅದರ ಸುತ್ತ ರಾಕ್ಷಸರಂಥಾ ಮನುಷ್ಯರು, ಅವರ ಜೊತೆಗೊಂದು ಭೇಟೆ ನಾಯಿ, ಮುದ್ದು ಮೊಲದಂತೆ ಮನೆ ತುಂಬಾ ಓಡಾಡುವ ಮೊಸಳೆ – ಇವೆಲ್ಲಕ್ಕೂ ಸೇರಿ ಒಬ್ಬ ಯಮರೂಪಿ ಬಾಸು. ಅವನಿಗೊಬ್ಬಳು ಮುದ್ದು ಮುದ್ದಾದ ಹೆಂಡತಿ. ಗಡವನಂತಾ ಗಂಡನನ್ನು ಕಟ್ಟಿಕೊಂಡವಳ ಬದುಕು ಅವಳದ್ದೇ ನೆರಿಗೆ ಮುದುರಿದ ಸೀರೆಯಂತೆ. ಕುಂತರೂ, ನಿಂತರೂ ಬೀಳುವ ಹೊಡೆತ. ಅವನು ಅವಳನ್ನು ಅನುಭವಿಸುತ್ತಿದ್ದರೆ ಅವಳಿಗದು ನರಕ ಯಾತನೆ.
***
ವೃತ್ತಿಯಿಂದ ಕ್ಷೌರಿಕ. ಪ್ರವೃತ್ತಿಲ್ಲಿ ಕುಡುಕ. ಅದಕ್ಕೆ ಕಾರಣ ಲವ್ ಫೇಲ್ಯೂರ್. ಅವನ ಪ್ರಕಾರ ಕೈಕೊಟ್ಟು ಹೋಗಿದ್ದು ಅವಳು. ಅವಳ ಪ್ರಕಾರ ಬಿಟ್ಟು ಹೋದವನು ಇವನು. ಒಟ್ಟಿನಲ್ಲಿ ಪ್ರೀತಿಸಿದವಳಿಂದ ದೂರಾದವನು. ಅವಳ ಕೊರಳ ಕೊಯ್ಯುವ ಕನಸು ಕಂಡು, ಕೊಂದು ಕೆಡವಿ ನನಸಾಗಿಸಿಕೊಳ್ಳಲು ಎದ್ದು ನಡೆಯುತ್ತಾನೆ.
***
ಯಾರ ಜೀವ ತೆಗೆಯಲು ಹೋಗಿ ನಿಲ್ಲುತ್ತಾನೋ? ಅವಳು ಮತ್ತೆ ಕೈ ಹಿಡಿದು ಜೀಕುತ್ತಾಳೆ. ಮತ್ತೊಮ್ಮೆ ಮನಸು ಗಿಲ್ಲುತ್ತಾಳೆ. ಇದು ಹೇಗೆ ಸಾಧ್ಯ ಅಂತಾ ಆಶ್ಚರ್ಯಪಡುತ್ತಾ? ಎಲ್ಲಿ ಆ ನರಕಾಸುರ ಎದ್ದು ಬಂದು ನೋಡಿಬಿಡುತ್ತಾನೋ? ಇವರಿಬ್ಬರ ಗತಿ ಏನಾಗುತ್ತದೋ ಅಂತಾ ತಳಮಳವಾಗೋದು ಸಹಜ. ಆದರೆ ಆ ಹೊತ್ತಿಗೆಲ್ಲಾ ಯಮರೂಪಿಯ ಹಣೆಯಲ್ಲಿ ಕುಕ್ಕರಿನ ವಿಜ಼ಲ್ಲು ಕೇಕೆ ಹಾಕುತ್ತಿರುತ್ತದೆ!!
ಸೈತಾನರು ಬೆನ್ನುಬೀಳುತ್ತಾರೆ. ಕಾಡಿನ ತುಂಬಾ ಅಟ್ಟಾಡಿಸುತ್ತಾರೆ. ಮರ ಹತ್ತಿಸುತ್ತಾರೆ. ಬಾಂಬು ಎಸೆಯುತ್ತಾರೆ. ಒಬ್ಬರನ್ನೊಬ್ಬರು ಬಡಿದುಕೊಳ್ಳುತ್ತಾ, ರಕ್ತ ಚಿಮ್ಮಿಸಿಕೊಂಡು ಇಟ್ಟಾಡುತ್ತಾರೆ!
ಇಷ್ಟೆಲ್ಲಾ ಆದಮೇಲೆ ಏನಾಗಲು ಸಾಧ್ಯ? ಅಸಲಿಗೆ ಇಲ್ಲಿ ಏನೇನು ನಡೆಯುತ್ತಿದೆ? ತೆರೆ ಮೇಲೆ ಓಡಾಡುವ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಧಾವಂತ. ಆದರೆ ಎಲ್ಲವನ್ನೂ ಸ್ಥಿತಪ್ರಜ್ಞತೆಯಿಂದ ಗಮನಿಸುತ್ತಾ, ಎಲ್ಲ ಅರ್ಥವಾದರೂ ಏನೂ ಗೊತ್ತಿಲ್ಲದವನಂತೆ, ಬಿರಿಯಾನಿ ಬೇಯಿಸುವುದರಲ್ಲಿ ಬ್ಯುಸಿಯಾಗಿರುತ್ತಾನಲ್ಲಾ? ಆ ಅಡುಗೆಯವನು…. ಹಾಗೇ ಪ್ರೇಕ್ಷಕ ಕೂಡಾ ಜಾಸ್ತಿ ಟೆನ್ಷನ್ ತೆಗೆದುಕೊಳ್ಳದೆ ನೋಡುತ್ತಿರಬೇಕು. ಅಷ್ಟೇ!
ಕೆಲವಾರು ಪಾತ್ರಗಳನ್ನಿಟ್ಟುಕೊಂಡು, ಸಿಕ್ಕ ಪರಿಸರವನ್ನೂ ಕಥೆಯ ಭಾಗವಾಗಿಸಿ ಸಿನಿಮಾ ಮಾಡೋದಿದೆಯಲ್ಲಾ? ಅದು ನಿಜಕ್ಕೂ ಸವಾಲಿನ ಕೆಲಸ. ನಿರ್ದೇಶಕ ಭರತ್ ರಾಜ್ ಅದನ್ನು ಸಾಧ್ಯವಾಗಿಸಿದ್ದಾರೆ. ʻಹೀರೋʼ ರಿಷಬ್, ವಿಲನ್ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಾನವಿ ಎಲ್ಲರೂ ಪಾತ್ರಗಳೇ ತಾವೆಂದುಕೊಂಡು ನಟಿಸಿದ್ದಾರೆ. ಭ್ರಮಾಲೋಕದಲ್ಲಿ ಘಟಿಸುತ್ತಿದೆ ಎನಿಸುವ ದೃಶ್ಯಗಳನ್ನು ಅರವಿಂದ್ ಕಷ್ಯಪ್ ಕನಸಿನಂತೆಯೇ ಕಟ್ಟಿಕೊಟ್ಟಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತದಲ್ಲೇ ಹ್ಯಾಂಗೋವರ್ ಸೃಷ್ಟಿಸಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ ರಿಷಬ್ ಕೈಲಿ ಹಿಡಿದ ಬ್ಲೇಡಿನಷ್ಟೇ ಶಾರ್ಪಾಗಿದೆ.
ಹೀರೋ ಸಿನಿಮಾವನ್ನು ನೋಡಿದ ನಂತರ ಇದು ಓಟಿಟಿ ಪ್ಲಾಟ್ ಫಾರ್ಮಿಗಾಗಿ ರೂಪಿಸಿದ ಸಿನಿಮಾ ಥರಾ ಇದೆಯಲ್ಲಾ ಅನ್ನಿಸಿದರೆ ಯಾವ ಆಶ್ಚರ್ಯವೂ ಇಲ್ಲ. ಯಾಕೆಂದರೆ ಈ ಚಿತ್ರದ ತಯಾರಿಯ ಹಿಂದಿನ ಪ್ರಧಾನ ಉದ್ದೇಶವೇ ಅದಾಗಿತ್ತು. ಆದರೂ ಥೇಟರಿನಲ್ಲಿ ಕೂತು ನೋಡುವ ಅರ್ಹತೆಯನ್ನೂ ʻಹೀರೋʼ ಉಳಿಸಿದೆ!
No Comment! Be the first one.