ಪೊಲೀಸರು ಕಂಡುಹಿಡಿದ ಅದೆಷ್ಟೋ ಅಪರಾಧ ಪ್ರಕರಣಗಳು ಅಷ್ಟೇ ನೈಜವಾಗಿ ಸಿನಿಮಾಗಳಾಗಿ ರೂಪುಗೊಂಡಿವೆ. ಈಗ ʻಹೇ ರಾಮ್ʼ‌ ಸಿನಿಮಾದ ಮೂಲಕ ಅಂಥದ್ದೇ ಘಟನಾವಳಿಯೊಂದು ತೆರೆಮೇಲೆ ಮರುಸೃಷ್ಟಿಗೊಳ್ಳಲಿದೆ.

ಇತ್ತೀಚೆಗೆ ʻಹೇ ರಾಮ್ʼ ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ. ನಗರದ ಸಾಯಿ ಬಾಬಾ ದೇವಾಲಯದಲ್ಲಿ ನೆರವೇರಿತು. ಡಾಲಿ ಧನಂಜಯ್‌ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಆರಂಭಪಲಕ ತೋರಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಡಯಲ್‌ 1 ಕ್ರಿಯೇಟೀವ್‌ ಸ್ಟುಡಿಯೋ ಮಾಲೀಕರಾದ ಪ್ರವೀಣ್‌ ಬೇಲೂರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಕಾವೇರಿ ತೀರದ ಚರಿತ್ರೆ ಎಂಬ ಸಿನಿಮಾವನ್ನು ಡೈರೆಕ್ಟ್‌ ಮಾಡಿದ್ದ ಇವರಿಗೆ ʻಹೇ ರಾಮ್ʼ ಎರಡನೇ ಚಿತ್ರ. ನಿರ್ದೇಶನದ ಜೊತೆಗೆ ತಾವೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿ ಎಫ್‌ ಎಕ್ಸ್‌ ನೈಪುಣ್ಯತೆ ಹೊಂದಿರುವ ಪ್ರವೀಣ್‌ ಈ ಚಿತ್ರದ ವಿ ಎಫ್‌ ಎಕ್ಸ್‌ ಕೆಲಸವನ್ನೂ ನಿಭಾಯಿಸುತ್ತಿದ್ದಾರೆ.

ಹಿರಿಯ ಪೊಲೀಸ್‌ ಅಧಿಕಾರಿಯಾಗಿದ್ದು ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದವರು ಎಸ್.ಕೆ. ಉಮೇಶ್‌. ಅತ್ಯಂತ ಶಿಸ್ತು, ಪ್ರಾಮಾಣಿಕತೆಗೆ ಹೆಸರಾಗಿದ್ದ ಉಮೇಶ್‌ ಅವರು ಇಷ್ಟೂ ವರ್ಷ ತಾವು ಅಧಿಕಾರದಲ್ಲಿದ್ದಾಗ ಕಂಡ ಘಟನೆಗಳು, ತನಿಖೆಯಲ್ಲಿ ಭಾಗಿಯಾಗಿದ್ದ ಪ್ರಕರಣಗಳು ಇತ್ಯಾದಿ ವಿವರಗಳನ್ನು ಪುಸ್ತಕ ರೂಪದಲ್ಲಿ ದಾಖಲು ಮಾಡಿದ್ದರು. ಅದರ ಒಂದು ಭಾಗವನ್ನು ಸಿನಿಮಾ ಮಾಡುವ ಪ್ರಯತ್ನಕ್ಕೀಗ ಚಾಲನೆ ದೊರೆತಿದೆ. 2002ರಿಂದ 2013ರವರೆಗೆ ನಡೆದ ಒಂದಿಷ್ಟು ಘಟನಾವಳಿಗಳು ʻಹೇ ರಾಮ್‌ʼ ಚಿತ್ರದ ಸರಕಾಗಲಿದೆ. ಅಪರಾಧಗಳಿಂದ ಆಗುವ ತೊಂದರೆಗಳೇನು ಅನ್ನೋದು ಈ ಚಿತ್ರದಲ್ಲಿ ಅನಾವರಣಗೊಳ್ಳಲಿದೆ.

ಕತೆಯ ಬಗ್ಗೆ ಹೇಳುವುದಾದರೆ, ಉತ್ತಮ ವ್ಯಕ್ತಿ ಎನಿಸಿಕೊಂಡವನು ತನ್ನ ತಾಯಿ, ಅಕ್ಕ, ತಂಗಿಯ ಕಾರಣಕ್ಕಾಗಿ ಪಾತಕ ಲೋಕಕ್ಕೆ ಇಳಿದಾಗ ಆತ ಯಾವ ಮಟ್ಟಕ್ಕೆ ತಲುಪುತ್ತಾನೆ? ಬದುಕು ಹೇಗೆಲ್ಲಾ ತಿರುವು ಪಡೆದುಕೊಳ್ಳತದೆ? ಆತನ ಸುತ್ತ ಘಟನೆಗಳು ಹೇಗೆಲ್ಲಾ ಸುತ್ತಿಕೊಳ್ಳುತ್ತದೆ? ಇದರಿಂದ ಜಗತ್ತು ಆತನನ್ನು ಯಾವ ದೃಷ್ಟಿಯಲ್ಲಿ ನೋಡುತ್ತದೆ? ಈತನ ಜೀವನದಲ್ಲಿ ಪೊಲೀಸ್‌ ಇಲಾಖೆಯ ಪಾತ್ರವೇನು? ಅಂತಿಮವಾಗಿ ಪಾತಕಲೋಕದ ಸುಳಿಯಲ್ಲೇ ಸಿಲುಕುತ್ತಾನಾ? ಅಥವಾ ಅದರಿಂದ ಹೊರಬರಲು ಸಾಧ್ಯವಾಗುತ್ತದಾ? ಎಂಬಿತ್ಯಾದಿ ವಿವರಗಳು ʻಹೇ ರಾಮ್ʼನಲ್ಲಿ ಅಡಕವಾಗಲಿದೆ. ಕರ್ನಾಟಕದ ಸುಂದರ ಜಾಗಗಳಲ್ಲಿ ಹಂತ ಹಂತವಾಗಿ ಚಿತ್ರೀಕರಿಸಲು ಸಕಲ ತಯಾರಿ ನಡೆದಿದೆ.

ಸಾಕಷ್ಟು ಸಮಯದ ನಂತರ ನಟ ಧರ್ಮ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತಕಿಯ ಪಾತ್ರದ ಆಯ್ಕೆ ಪ್ರಕ್ರಿಯೆ ಇನ್ನೂ ಚಾಲನೆಯಲ್ಲಿದೆ. ಉಳಿದಂತೆ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಖ್ಯಾತಿಯ ಸಪ್ತಮಿ ಗೌಡ, ಬಿಗ್‌ ಬಾಸ್‌ ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಕನ್ನಡದ ಅಪ್ಪಟ ಪ್ರತಿಭೆ ಚೈತ್ರ ಕೋಟೂರು, ಸಚಿನ್‌ ಪುರೋಹಿತ್‌, ನವೀನ್‌ ರಾಜ್‌, ಮಂಜುನಾಥ್‌, ಪೂರ್ಣ ಮುಂತಾದವರ ತಾರಾಗಣವಿದೆ. ರಚನೆ, ಚಿತ್ರಕತೆ ಎಸ್.ಕೆ. ಉಮೇಶ್‌ ಅವರದ್ದು. ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿಯನ್ನು ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್‌ ವಹಿಸಿಕೊಂಡಿದ್ದಾರೆ. ಪ್ರದೀಪ್‌ ವಿ ಬಂಗಾರಪೇಟೆ ಛಾಯಾಗ್ರಹಣವಿದ್ದು, ನಟ ಡಾಲಿ ಧನಂಜಯ ಕತೆಗೆ ಒಂದಿಷ್ಟು ಸಲಹ ನೀಡಿದ್ದಾರೆ.

CG ARUN

ಗಣೇಶ್ ಕಾಸರಗೋಡು ಅವರ ಕಥೆ-ಚಿತ್ರಕಥೆ…

Previous article

ರಾಮಜನ್ಮಭೂಮಿಯ ಹಿನ್ನೆಲೆಯನ್ನು ತಿಳಿಸುವ ಅಯೋಧ್ಯಾ!

Next article

You may also like

Comments

Leave a reply

Your email address will not be published. Required fields are marked *