ಇನ್ನೇನು ತೆರೆಗೆ ಬರಲು ತಯಾರಾಗಿರುವ, ನಾಗೇಶ್ ಕೋಗಿಲು ನಿರ್ಮಾಣದ ಚಿತ್ರ ‘ಟಕ್ಕರ್. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ಹೀರೋ ಆಗಿರೋದು ಈಗಾಗಲೇ ಎಲ್ಲೆಡೆ ದೊಡ್ಡ ಮಟ್ಟದಲ್ಲೇ ಸುದ್ದಿಗಳಾಗಿವೆ. ಟಕ್ಕರ್ ರಿಲೀಸಿಗೆ ಮುನ್ನವೇ ಮನೋಜ್ಗಾಗಿ ಸಿನಿಮಾ ಮಾಡಲು ಸಾಕಷ್ಟು ಜನ ನಿರ್ದೇಶಕರು ಕಥೆ ಹೇಳುವುದರಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲೇ ಮನೋಜ್ ಅಭಿನಯದ ಹೊಸ ಚಿತ್ರಗಳು ಅನೌನ್ಸ್ ಆಗುವ ಸಾಧ್ಯತೆಗಳೂ ಇವೆ. ಈ ನಡುವೆ ಮನೋಜ್ ನೀನಾಸಂ ರತ್ನಕ್ಕ ನಿರ್ಮಾಣದ ಹಿಕೋರಾ ಚಿತ್ರದ ಹಾಡೊಂದರಲ್ಲಿ ಅತಿಥಿ ನಟನಾಗಿ ಪಾತ್ರ ನಿರ್ವಹಿಸಿದ್ದಾರೆ.
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ… ಎಂದು ವಿವೇಕವಾಣಿಯ ಮೂಲಕ ಶುರುವಾಗುವ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಅದ್ಭುತವಾದ ಸಂಗೀತ ಸಂಯೋಜಿಸಿದ್ದಾರೆ. ಮೊನ್ನೆ ಎರಡು ಮೂರು ದಿನಗಳ ಕಾಲ ಎಚ್.ಎಂ.ಟಿ.ಯಲ್ಲಿ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ಮನೋಜ್ ಅವರೊಂದಿಗೆ ಯಶ್ವಂತ್ ಶೆಟ್ಟಿ, ಹತ್ತಾರು ಜನ ಡ್ಯಾನ್ಸರ್ಗಳು ಪಾಲ್ಗೊಂಡಿದ್ದರು. ಬೆಂಕಿ, ಮಳೆ, ಬಿಸಿಲು, ಗಾಳಿಯ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡು ಯುವಕರನ್ನು ಯುವ ಪೀಳಿಗೆಯನ್ನು ಬಡಿದೆಬ್ಬಿಸುವಂತಿದೆ.
ಒಂದು ಕಾಲಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀನಾಸಂ ರಂಗಶಾಲೆಯಲ್ಲಿ ಕಲಿಯಲು ಹೋದಾಗ ಸಾಕಷ್ಟು ಸಹಕಾರ ನೀಡಿದ್ದವರು ರತ್ನಕ್ಕ. ಅಲ್ಲಿನ ವಿದ್ಯಾರ್ಥಿಗಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದ ರತ್ನಕ್ಕ ಅಂದರೆ ದರ್ಶನ್ ಅವರಿಗೂ ಎಲ್ಲಿಲ್ಲದ ಪ್ರೀತಿ. ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಕೂಡಾ ರತ್ನಕ್ಕ ಬಂದು ತಮ್ಮ ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಶ್ರೀನೀಲಕಂಠೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ‘ಹಿಕೋರಾ‘ ಚಿತ್ರತಂಡ ಚಿತ್ರೀಕರಣ ಮುಗಿಸಿದ ಸಂತಸದಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ನೀನಾಸಂನಲ್ಲಿ ಸುಮಾರು ೧೮ವರ್ಷಗಳ ಕಾಲ ದುಡಿದು ಅಲ್ಲಿನ ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿದ್ದ ರತ್ನಶ್ರೀಧರ್ ಈ ಚಿತ್ರದ ನಿರ್ಮಾಪಕರು. ಬಹುತೇಕ ನೀನಾಸಂನಲ್ಲಿ ತರಬೇತಿ ಪಡೆದು, ತಮ್ಮ ಕೈ ತುತ್ತು ತಿಂದು ಬೆಳೆದವರನ್ನೆ ಈ ಚಿತ್ರದಲ್ಲಿ ಕಲಾವಿದರನ್ನಾಗಿ ಬಳಸಿಕೊಂಡಿದ್ದಾರೆ ನಿರ್ಮಾಪಕರು. ಈ ಚಿತ್ರದ ನಿರ್ದೇಶಕ ಮತ್ತು ನಾಯಕ ಎಂ.ಜಿ.ಕೃಷ್ಣ, ಯಶವಂತ ಶೆಟ್ಟಿ, ಸ್ಪಂದನ ಪ್ರಸಾದ್, ಮಹಾಂತೇಶ್, ಸರ್ದಾರ್ ಸತ್ಯ ಮುಂತದಾವರೆಲ್ಲ ನೀನಾಸಂನವರೆ.
ಚಿತ್ರದ ನಾಯಕರಾಗಿ ನಟಿಸಿರುವ ಕೃಷ್ಣಪೂರ್ಣ ಈ ಚಿತ್ರದ ನಿರ್ದೇಶಕರೂ ಹೌದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೃಷ್ಣಪೂರ್ಣ ಅವರೆ ಬರೆದಿದ್ದಾರೆ. ಪೂರ್ಣಚಂದ್ರತೇಜಸ್ವಿ ಸಂಗೀತ ನೀಡಿರುವ ಈ ಚಿತ್ರಕ್ಕೆ ‘ಆಪ್ತಮಿತ್ರ‘, ‘ಸಂಗೊಳ್ಳಿ ರಾಯಣ್ಣ‘ ಖ್ಯಾತಿಯ ರಮೇಶ್ಬಾಬು ಅವರ ಛಾಯಾಗ್ರಹಣವಿದೆ. ಕಿರಣ್ ಸಂಕಲನ, ಮದನ್ – ಹರಿಣಿ ನೃತ್ಯ ನಿರ್ದೇಶನ ಹಾಗೂ ನಾಗರಾಜ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಕುಮಾರಿ ಆದ್ಯ. ಸುನೀಲ್ ಯಾದವ್ ಹಾಗೂ ವಿನಾಯಕರಾಮ ಕಲಗಾರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪ್ರೊಡಕ್ಷನ್ ಕಂಟ್ರೋಲರ್ ಆಗಿ ಅಭಿರಾಮ್ ಕಾರ್ಯ ನಿರ್ವಹಿಸಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಚಿತ್ರ ಮೂಡಿಬಂದಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.
ಕೃಷ್ಣಪೂರ್ಣ, ಯಶ್ವಂತ್ ಶೆಟ್ಟಿ, ಸ್ಪಂದನಾ ಪ್ರಸಾದ್, ಪ್ರಕಾಶ್ ಬೆಳವಾಡಿ, ಸರ್ದಾರ್ ಸತ್ಯ, ಮಹಾಂತೇಶ್ ರಾಮದುರ್ಗ, ಆನಂದ್ ಮಾಸ್ಟರ್, ಲಾವಂತಿ, ಮುನಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟ ಪ್ರಕಾಶ್ ಬೆಳವಾಡಿ ಅತೀ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.
No Comment! Be the first one.