ಕೊರೋನಾ ಲಾಕ್’ಡೌನು ಎಂಥಾ ಸೂಪರ್ ಸ್ಟಾರುಗಳನ್ನೂ ಕೈಕಾಲು ಕಟ್ಟಿಹಾಕಿ ಮನೆಯಲ್ಲಿ ಕೂರಿಸಿದೆ. ಇಂಥ ಹೊತ್ತಲ್ಲಿ ಸಿನಿಮಾ, ಕಿರುತೆರೆ ಕಲಾವಿದರು ಮನೆಯಲ್ಲೇ ಕುಂತು ಏನೇನು ಮಾಡುತ್ತಿದ್ದಾರೆ ಅನ್ನೋದರ ಬಗ್ಗೆ ಮಾಧ್ಯಮಗಳು ವರದಿ ನೀಡುತ್ತಿವೆ. ತಂತ್ರಜ್ಞರು ಈ ಎರಡು ತಿಂಗಳು ಏನೆಲ್ಲಾ ಮಾಡಿರಬಹುದು ಅಂತಾ ನೋಡಹೋದರೆ, ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಂಡು ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡ ಸಾಕಷ್ಟು ಜನರಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಹೆಸರು ಮಾಡಿರುವವರು ಗೌರಿಬಿದನೂರಿನ ಹೊಸ್ಮನೆ ಮೂರ್ತಿ. ನೂರೈವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಆರ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಹೊಸ್ಮನೆ ಮೂರ್ತಿ ಎಷ್ಟು ಚೆಂದಗೆ ಕೊಳಲು ನುಡಿಸಬಲ್ಲರು ಅನ್ನೋದನ್ನು ಈ ಲಾಕ್ ಡೌನ್ ತೋರಿಸಿದೆ. ಕಲಾನಿರ್ದೇಶನದ ಜೊತೆಜೊತೆಗೆ ಸಿಕ್ಕ ಅವಕಾಶಗಳಲ್ಲಿ ಅಭಿನಯಿಸುತ್ತಲೂ ಬಂದಿರುವ ಮೂರ್ತಿ ಕೊರೋನಾ ರಜೆಯಲ್ಲಿ ಕೊಳಲನ್ನು ಕೈಗೆತ್ತಿಕೊಂಡಿದ್ದಾರೆ. ಬಿಡುವಿರದ ಕೆಲಸಗಳ ನಡುವೆ ಎಂದೋ ಕಲಿತಿದ್ದ ಸಂಗೀತಕ್ಕೆ ಸದ್ದಡಗಿತ್ತಲ್ಲಾ… ಈಗ ಸಮಯ ಸಿಕ್ಕಿದ್ದೇ ಮರೆತಂತಿದ್ದ ಸ್ವರಗಳೆಲ್ಲಾ ಕೊಳಲ ನಾದವಾಗಿ ಹೊರಹೊಮ್ಮಿವೆ. ತಮ್ಮ ಫೇಸ್ ಬುಕ್ ಗೋಡೆಯಲ್ಲಿ ಮೂರ್ತಿಯವರು ಟ್ಯಾಗ್ ಮಾಡಿದ್ದ ಕೊಳಲು ವಾದನವನ್ನು ಕೇಳಿ ಸಾಕಷ್ಟು ಮಂದಿ ಖುಷಿ ಪಟ್ಟಿದ್ದಾರೆ.

ಕಲಾ ನಿರ್ದೇಶನವೆಂಬುದು ಹೊರ ಜಗತ್ತಿನ ಪಾಲಿಗೊಂದು ಅಚ್ಚರಿ. ಆದರೆ ಕಲೆಯ ಕೈ ಚಳಕದಿಂದ ಹೊಸತೇನನ್ನೋ ಸೃಷ್ಟಿಸುವ ಕಾರ್ಯ ಸಲೀಸಿನದ್ದೇನಲ್ಲ. ಹಗಲು ರಾತ್ರಿಗಳ ಪರಿವೆಯಿಲ್ಲದೆ ದುಡಿದರೆ ಮಾತ್ರವೇ ಕಲೆಯೆಂಬುದು ಕಣ್ಣಿಗೆ ಕಟ್ಟಿದಂತೆ ಜೀವ ತಳೆಯುತ್ತದೆ. ಹಾಗೆ ವರ್ಷಾಂತರಗಳ ಕಾಲ ಶ್ರಮಪಡುತ್ತಾ, ನೂರಾರು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ದುಡಿದಿರುವವರು ಹೊಸ್ಮನೆ ಮೂರ್ತಿ. ರಂಗಭೂಮಿಯಿಂದಲೇ ತಮ್ಮ ಕಲಾಯಾನವನ್ನು ಆರಂಭಿಸಿ, ಈಗಲೂ ಆ ಪ್ರೀತಿ ಉಳಿಸಿಕೊಂಡಿರೋ ಹೊಸ್ಮನೆ ಮೂರ್ತಿಯವರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪುರಸ್ಕಾರಗಳು ಲಭಿಸಿವೆ.

ಒಂದು ಕಾಲದಲ್ಲಿ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿಯ ರಾಜು ಆರ್ಟ್ನಲ್ಲಿ ಬಣ್ಣ ಅಂಟಿದ ಬ್ರಷ್ಗಳನ್ನು ತೊಳೆದುಕೊಂಡು, ಬೋರ್ಡು ಬರೆಯುವುದನ್ನು ಕಲಿತಿದ್ದರು. ಸೈನ್ ಬೋರ್ಡು ಬರೆಯುವ ಕೆಲಸದಿಂದ ಒಂದು ಹೆಜ್ಜೆ ಮುಂದೆ ಹೋಗಿ ಅಭಿನಯ ತರಂಗ ಸೇರಿ, ಡಿಪ್ಲೊಮಾ ಮುಗಿಸಿದ ಮೂರ್ತಿ,  ನಂತರ ಬಿ. ಜಯಶ್ರೀ ಅವರ ಸ್ಪಂದನ, ಸಂಕೇತ್ ಮತ್ತು ಅವರದ್ದೇ  ತಂಡವಾದ `ರಂಗವಲ್ಲಿ’ಯ ಮೂಲಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು. ಇದೇ ಸಂದರ್ಭದಲ್ಲಿ ಅವರಿಗೆ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಪರಿಚಯವಾಗಿ, ಅವರ ಕಾಲೇಜು ತರಂಗ, ಕಥೆಗಾರ, ಮಾಯಾಮೃಗ ಧಾರಾವಾಹಿಗಳಿಗೆ ಕಲಾನಿರ್ದೇಶನ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದರು.

ನಂತರ ರಾಮ್ದಾಸ್ ನಾಯ್ಡು ಅವರ `ಪ್ರೇರಣಾ’ ಎಂಬ ಕಲಾತ್ಮಕ ಚಿತ್ರದ ಮೂಲಕ ಸಿನಿಮಾ ಕಲೆಯನ್ನು ಆರಂಭಿಸಿದ ಮೂರ್ತಿಗೆ ಕಮರ್ಷಿಯಲ್ ಆದ ಅವಕಾಶ ಸಿಕ್ಕಿದ್ದು ಎನ್.ಎಸ್. ಶಂಕರ್ ಅವರ ಉಲ್ಟಾ ಪಲ್ಟಾದಿಂದ.. ನಂತರ ಪೂರ್ಣಾವಧಿ ಕಲಾನಿರ್ದೇಶಕನಾಗಿ ಹಲವಾರು ಸಿನೆಮಾಗಳಿಗೆ ಆರ್ಟ್ ಡೈರೆಕ್ಷನ್ ಮಾಡಿರುವ ಮೂರ್ತಿ  ನೀಲಾಂಬರಿ ಎಂಬ ಹಾರರ್ ಸಿನಿಮಾ, ಕೌರವ, ಇಂದ್ರಜಿತ್ ಲಂಕೇಶ್ ಅವರ ಮೊನಾಲಿಸಾ, ಲಂಕೇಶ್ ಪತ್ರಿಕೆ, ತುಂಟ ಮತ್ತು ಹಿಂದಿಯ ಶಾದಿಕೆ ಆಫ್ಟರ್ ಎಫೆಕ್ಟ್, ತೆಲುಗಿನ ಕೆ.ಎನ್.ಟಿ. ಶಾಸ್ತ್ರಿ ಅವರ ಕಮಲಿ ಮತ್ತು ತಿಲಗಾನು ಎಂಬ ಕಲಾತ್ಮಕ ಚಿತ್ರಗಳು ಸೇರಿದಂತೆ ಹಲವಾರು ಚಿತ್ರಗಳಿಗೆ ಕಾರ್ಯನಿರ್ವಹಿಸಿದ್ದಾರೆ. ಕಮರ್ಷಿಯಲ್ ಚಿತ್ರಗಳಾದ ತಾಜ್ ಮಹಲ್, ಪ್ರೇಮ್ ಕಹಾನಿ, ಬಿಂದಾಸ್ ಹುಡುಗಿ, ಶಿಶಿರ, ಪಂಚತಂತ್ರ ಮುಂತಾದ ಚಿತ್ರಗಳಿಗೆ ಇವರದ್ದೇ ಕಲಾನಿರ್ದೇಶನ. `ಒಲವೇ ಮಂದಾರ’ ಚಿತ್ರದ ಒಂದೊಂದು ಫ್ರೇಂಗಳೂ ಅಷ್ಟೊಂದು ಕಲಾತ್ಮಕವಾಗಿ ಮೂಡಿಬರಲು ಹೊಸ್ಮನೆಯವರ ಕೈಚಳಕವೇ ಕಾರಣ. ಇಲ್ಲೇ ಚಿಕ್ಕಮಗಳೂರು, ಬಾಳೆಹೊನ್ನೂರಿನ ನಿಸರ್ಗದ ಮಧ್ಯೆ ಥೇಟು ಅಸ್ಸಾಂ ಅನ್ನು ಹೋಲುವ ಸೆಟ್  ನಿರ್ಮಿಸಿ ಇಡೀ ಉದ್ಯಮವನ್ನೇ ಚಕಿತಗೊಳಿಸಿದ್ದವರು ಇವರು.  ಇತ್ತೀಚೆಗೆ ನಡೆದ ಮೈಸೂರು ದಸರಾ ಸಂಭ್ರಮದಲ್ಲಿಯೂ ಹೊಸ್ಮನೆ ಮೂರ್ತಿ ಅದ್ಭುತವಾದೊಂದು ಸ್ತಬ್ಧಚಿತ್ರವನ್ನು ರೂಪಿಸಿದ್ದರು. ವಿಧುರಾಶ್ವತದ ಆ ಸ್ತಬ್ಧ ಚಿತ್ರ ದ್ವಿತೀಯ ಬಹುಮಾನವನ್ನೂ ಪಡೆದುಕೊಂಡಿತ್ತು. ಈ ಮೂಲಕ ದಸರೆಯನ್ನು ತಮ್ಮ ತವರು ಜಿಲ್ಲೆ ಚಿಕ್ಕಬಳ್ಳಾಪುರದ ಪಾಲಿಗೆ ವಿಶೇಷವಾಗಿಸಿದ್ದರು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶುಭಾಶಯಗಳು ಸುಮನ್….

Previous article

ಇದು ವಿಜಯ ಪ್ರಸಾದ್ ಪ್ರಯೋಗ!

Next article

You may also like

Comments

Leave a reply

Your email address will not be published. Required fields are marked *