ಯಾವುದೇ ವ್ಯಕ್ತಿ ಕೆಲಸ ಕಾರ್ಯ ಅಂತಾ ತನ್ನನ್ನು ತಾನು ತೊಡಗಿಸಿಕೊಂಡಾಗ ಯಾವ ರೋಗವೂ ಬಾಧಿಸೋದಿಲ್ಲ. ಸುಮ್ಮನೇ ಕೂತಷ್ಟೂ ಮನಸ್ಸಿಗೆ ಜ್ವರ ಬಂದಂತಾಗಿ, ಮಾನಸಿಕ ಖಿನ್ನತೆ ಆರವರಿಸುತ್ತದೆ. ಕೆಲವೇ ತಿಂಗಳ ಹಿಂದೆ ನಟ, ನಿರ್ದೇಶಕ ವೆಂಕಟ್ ಹುಚ್ಚುಚ್ಚಾಗಿ ತಿರುಗಾಡುತ್ತಾ ರಸ್ತೆಗಳಲ್ಲಿ ನ್ಯೂಸೆನ್ಸ್ ಕ್ರಿಯೇಟ್ ಮಾಡುತ್ತಿದ್ದ. ಮಾಧ್ಯಮಗಳು ಈತನ ಹುಚ್ಚಾಟಗಳನ್ನು ಬ್ರೇಕಿಂಗ್ ನ್ಯೂಸ್ ಥರಾ ಪ್ರಸಾರ ಮಾಡುತ್ತಿದ್ದವು. ಎದುರಿಗೆ ಕ್ಯಾಮೆರಾ ಕಂಡ ಕೂಡಲೇ ವೆಂಕ್ಟನ ತಿಕ್ಕಲು ಮತ್ತಷ್ಟು ಹೆಚ್ಚುತ್ತಿತ್ತು.
ಹಾಗೆ ನೋಡಿದರೆ, ವೆಂಕಟ್ ನಿಜಕ್ಕೂ ಗಂಭೀರ ಸ್ವಾಭಾವದ ಮನುಷ್ಯ. ಈತ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಸಿನಿಮಾಗಳಲ್ಲಿ ಯಾವುದೂ ಲಾಭ ಮಾಡಿಲ್ಲ. ಗಮನಸಿಸಬೇಕಾದ ವಿಚಾರವೆಂದರೆ, ವೆಂಕಟ್ ಸಿನಿಮಾಗೆ ಕೆಲಸ ಮಾಡಿದ ಯಾರಿಗೂ ಕಾಸು ಕೊಡದೇ ಮೋಸ ಮಾಡಲಿಲ್ಲ. ಸಿನಿಮಾಗೆ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರಿಗೂ ಅಡ್ವಾನ್ಸ್ ಪೇಮೆಂಟ್ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಗುಣ ವೆಂಕಟನದ್ದು. ದೊಡ್ಡ ನಿರ್ಮಾಪಕರೆನಿಸಿಕೊಂಡರವರು, ಹೆಸರಲ್ಲೇ ಕೋಟಿ ಇಟ್ಟುಕೊಂಡವರೂ ಸಿನಿಮಾ ತಂತ್ರಜ್ಞರಿಂದ ದುಡಿಸಿಕೊಂಡು, ಅವರ ತಲೆಗೆ ಟೋಪಿ ಮಡಗುತ್ತಾರೆ. ಅಂಥವರೆಲ್ಲಾ ಈ ಹುಚ್ಚನ ಕಾಲಿನ ಕೆಳಗೊಮ್ಮೆ ನುಗ್ಗಿ ಬರಬೇಕು!
ಇಂಥ ಹುಚ್ಚ ವೆಂಕಟ್ ಲೈಫ್ ಈಗ ಓಕೆ ಎನ್ನುವ ಹಂತಕ್ಕೆ ಬಂದು ತಲುಪಿದಂತಿದೆ. ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಬಹುತೇಕ ಡಬ್ಬಿಂಗ್ ಧಾರಾವಾಹಿಗಳು, ಹಳಸಲು ಸರಕಿನ ರಿಯಾಲಿಟಿ ಶೋಗಳೇ ಹೆಚ್ಚು ಪ್ರಸಾರವಾಗುತ್ತಿವೆ. ಇದರ ನಡುವೆ ಸಿರಿ ಕನ್ನಡ ವಾಹಿನಿ ಒಂದಿಷ್ಟು ಸ್ವಂತಿಕೆಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ವಾಹಿನಿಯ ಮುಖ್ಯಸ್ಥ ಸಂಜಯ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಸದಭಿರುಚಿಯ ಪ್ರೋಗ್ರಾಮುಗಳು ಪ್ರಸಾರವಾಗುತ್ತಿವೆ. ಇತ್ತೀಚೆಗಷ್ಟೇ ಎರಡು ವರ್ಷ ಪೂರೈಸಿದ ಈ ವಾಹಿನಿ ಮೂರನೇ ವರ್ಷಕ್ಕೆ ಫುಲ್ ಜೋಶ್ʼನಿಂದ ಮುನ್ನುಗ್ಗುತ್ತಿದೆ.
ಮಾತಿನಿಂದಲೇ ಫೇಮಸ್ಸಾಗಿ, ಸೌಟು ಹಿಡಿದು ಸಕ್ಸಸ್ ಕಂಡ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ನಿರೂಪಣೆಯಲ್ಲಿ ಹೊಸದೊಂದು ಶೋ ಪ್ರಸಾರವಾಗಲು ಸಜ್ಜಾಗುತ್ತಿದೆ. ʻಲೈಫ್ ಓಕೆʼ ಹೆಸರಿನ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಶೋಷಣೆಗೆ ಒಳಗಾದ ರೈತ, ಕಾರ್ಮಿಕ, ಮಹಿಳೆಯರು, ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ವೇದಿಕೆ ಕಲ್ಪಿಸಲಾಗುತ್ತಿದೆ. ಸಾಮಾನ್ಯಕ್ಕೆ ಬಡವರ ಬದುಕನ್ನು ಸರಕು ಮಾಡಿಕೊಂಡು ಟಿ ಆರ್ ಪಿ ಹೆಚ್ಚಿಸಿಕೊಳ್ಳೋದು ಮನರಂಜನಾ ವಾಹಿನಿಗಳ ಎಣಿಕೆಯಾಗಿರುತ್ತದೆ. ಅದಕ್ಕೆಂದೇ ಕ್ಯಾಮೆರಾ ಮುಂದೆ ಗಂಡ-ಹೆಂಡತಿಯರನ್ನು ಕಿತ್ತಾಡಿಸುತ್ತಾರೆ. ಅನೈತಿಕ ಸಂಬಂಧಗಳ ಸುತ್ತಲಿನ ಜಗಳಗಳನ್ನು ವೈಭವೀಕರಿಸುತ್ತಾರೆ. ಮನುಷ್ಯ ಸಹಜ ಭಾವನೆಗಳನ್ನು ಮಾರಾಟಕ್ಕಿಟ್ಟಿರುವವರ ನಡುವೆ ಸಿರಿ ಕನ್ನಡ ಮಾನವೀಯ ಮೌಲ್ಯಗಳನ್ನು ಸಾರುವ ಚೆಂದದ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಿದೆ.
ಈ ಕಾರ್ಯಕ್ರಮದಲ್ಲಿ ಒಗ್ಗರಣೆ ಡಬ್ಬಿ ಮುರಳಿ ಮುಖ್ಯ ನಿರೂಪಕನಾದರೆ, ಪಕ್ಕದಲ್ಲಿ ಕುಳಿತು ಜಡ್ಜ್ ಮೆಂಟ್ ಕೊಡಲು ವೆಂಕಟ್ ರನ್ನು ನೇಮಿಸಿಕೊಳ್ಳಲಾಗಿದೆ. ಎಲ್ಲ ತಿಳಿದ ಬುದ್ದಿವಂತರಿಗಿಂತ ʻಹುಚ್ಚʼ ಅನ್ನಿಸಿಕೊಂಡವನ ತೀರ್ಪು ಹೆಚ್ಚು ಮೌಲ್ಯ ಹೊಂದಿರುತ್ತದೆ ಅನ್ನೋದು ಬಹುಶಃ ಈ ಶೋನ ಕಾನ್ಸೆಪ್ಟ್ ಇರಬಹುದು.
ಅದೇನೇ ಇರಲಿ, ವೆಂಕಟ್ ಪಾಲಿಗೆ ಗೌರವಯುತ ಸ್ಥಾನ ದಕ್ಕಿದೆ. ಅದನ್ನು ಕೊಡಮಾಡಿದ ಸಿರಿ ಕನ್ನಡದವರನ್ನು ಅಭಿನಂದಿಸೋಣ. ವೆಂಕಟ್ ಲೈಫ್ ಕೂಡಾ ಪೂರ್ತಿ ಓಕೆ ಆಗಲಿ ಅನ್ನೋದು ಆಶಯ…
No Comment! Be the first one.