ಕನ್ನಡದ ಮುದ್ದುಮುದ್ದಾದ ಹೀರೋ ದಿಗಂತ್. ಕರೋನಾ ಕ್ಲಿಯರ್ ಆಗುತ್ತಿದ್ದಂತೇ ಚಿತ್ರರಂಗದ ಜೊತೆಗೆ ದಿಗಂತ್ಗೆ ಕೂಡಾ ಮರುಹುಟ್ಟು ಸಿಗಲಿದೆ. ದೂದ್ ಪೇಡಾ ಪಾಲಿಗೆ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತದೆ ಅಂತಾ ಸ್ಟುಡಿಯೋಗಳಿಂದ ರಿಪೋರ್ಟು ಬರುತ್ತಿವೆ. ಯಾವುದೇ ಒಂದು ಚಿತ್ರದ ಗೆಲುವಿನ ಭವಿಷ್ಯ ಮೊದಲಿಗೆ ಹೊರಬೀಳುವುದು ವರ್ಕಿಂಗ್ ಟೇಬಲ್ಲುಗಳಿಂದ. ಆ ಪ್ರಕಾರವಾಗಿ ಹೇಳುವುದಾದರೆ ನಾಗರಾಜ್ ಬೇತೂರು ನಿರ್ದೇಶನದ ಹುಟ್ಟುಬ್ಬದ ಶುಭಾಶಯಗಳು ಸಿನಿಮಾ ಬ್ಯೂಟಿಫುಲ್ಲಾಗಿ ಮೂಡಿಬಂದಿದೆಯಂತೆ.
ಯಾವತ್ತು ಅನೌನ್ಸ್ ಆಯಿತೋ ಅವತ್ತೇ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡು ಮಾಡುತ್ತದೆ ಅಂತಾ ಚಿತ್ರರಂಗಕ್ಕೆ ಖಾತ್ರಿಯಾಗಿತ್ತು. ಯಾಕೆಂದರೆ, ಅಯೋಗ್ಯ, ಚಮಕ್ ಸೇರಿದಂತೆ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿರುವ ಕ್ರಿಸ್ಟಲ್ ಪಾರ್ಕ್ ಸಿನಿಮಾದ ಟಿ.ಆರ್. ಚಂದ್ರಶೇಖರ್ ಈ ಚಿತ್ರಕ್ಕೆ ನಿರ್ಮಾಪಕರು. ಚಂದ್ರಶೇಖರ್ ಮತ್ತು ಅವರ ಪುತ್ರ ಕಿಶೋರ್ ಬೇಕಾಬಿಟ್ಟಿ ಕತೆಗಳನ್ನು ಒಪ್ಪಿ ಯಾವತ್ತೂ ಸಿನಿಮಾ ಮಾಡಿದವರಲ್ಲ. ಏಕಕಾಲದಲ್ಲಿ ಹಲವು ಸಿನಿಮಾಗಳು ಈ ಸಂಸ್ಥೆಯಲ್ಲಿ ತಯಾರಾಗುತ್ತವೆ. ಹೀಗಾಗಿ ಕ್ರಿಸ್ಟಲ್ ಪಾರ್ಕ್ ಬ್ಯಾನರಿನ ಸಿನಿಮಾ ಅಂದರೇನೆ ಗುಣಮಟ್ಟ, ಘನತೆ ಎನ್ನುವಂತಾಗಿದೆ. ಉಪೇಂದ್ರ ಅಭಿನಯದ, ಭದ್ರಾವತಿ ಜಯರಾಂ ನಿರ್ದೇಶನದ ಬುದ್ಧಿವಂತ-೨ ಶೋಕಿವಾಲ ಮತ್ತು ಹುಟ್ಟುಹಬ್ಬದ ಶುಭಾಶಯಗಳು ಸದ್ಯ ಈ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಚಿತ್ರಗಳು.
ಹುಟ್ಟುಹಬ್ಬದ ಶುಭಾಶಯಗಳು ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಕೆಲಸಗಳು ಸಂಪೂರ್ಣವಾಗಿ ಮುಗಿದಿದ್ದು, ಸದ್ಯ ರೀರೆಕಾರ್ಡಿಂಗ್, ವಿಎಫ್ಎಕ್ಸ್ ಕೆಲಸಗಳು ಚಾಲನೆಯಲ್ಲಿವೆ. ಚಿತ್ರದಲ್ಲಿ ಸಾಕಷ್ಟು ಜನ ಕಲಾವಿದರಿದ್ದು, ಕವಿತಾ ಗೌಡ, ವಿನೋದ ಚಕ್ರವರ್ತಿ, ಹಾಸ್ಯಸಾರ್ವಭೌಮ, ಪರಿಹಾಸ ಪೇರರಸು ಮುಂದಾದ ಬಿರುದುಗಳಿಂದ ಪ್ರಖ್ಯಾತಿ ಪಡೆದಿರುವ ಸುಜಯ್ ಶಾಸ್ತ್ರಿ ಈ ಚಿತ್ರದಲ್ಲಿ ಎಂಥವರನ್ನೂ ನಗಿಸುತ್ತಾರಂತೆ. ಜೊತೆಗೆ ಚೇತನ್ ಗಂಧರ್ವ, ರತನ್ರಾಮ್, ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರ್ ಮನು, ಸೂರಜ್, ಸೂರ್ಯ, ವಾಣಿಶ್ರೀ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಹಾಗು ಆನಂದ್ ರಾಜ್ ವಿಕ್ರಮ್ ಅವರ ಸಂಗೀತ, ಯೋಗರಾಜ್ ಭಟ್ ಅವರ ಸಾಹಿತ್ಯ, ಅಭಿಲಾಷ್ ಕಲ್ಲತ್ತಿ ಅವರ ಛಾಯಾಗ್ರಹಣವಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೇ ಸಿನಿಮಾದ ಬಿಡುಗಡೆಯ ಕುರಿತು ಖುದ್ದು ಚಿತ್ರತಂಡ ಮಾಹಿತಿ ನೀಡಲಿದೆ..
Comments