ತಾಜ್ ಮಹಲ್, ಚಾರ್ ಮಿನಾರ್ನಂಥಾ ಪ್ರೇಮಕಾವ್ಯಗಳನ್ನು ಪ್ರೇಕ್ಷಕರಿಗೆ ತೋರಿಸಿದ್ದ ಆರ್ ಚಂದ್ರು ನಿರ್ದೇಶನದ ಚಿತ್ರ ಐ ಲವ್ ಯೂ. ಉಪೇಂದ್ರ ನಾಯಕರಾಗಿರೋ ಈ ಚಿತ್ರದ ಫಸ್ಟ್ ಲುಕ್ ಚೆಂದದೊಂದು ಕಾರ್ಯಕ್ರಮದ ಮೂಲಕ ಬಿಡುಗಡೆಯಾಗಿದೆ. ಹಾಗೆ ಬಿಡುಗಡೆಯಾಗಿರೋ ಫಸ್ಟ್ ಲುಕ್ಗೆ ಪ್ರೇಕ್ಷಕರೆಲ್ಲ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ದಶಕಗಳ ಹಿಂದೆ ತೆರೆ ಕಂಡಿದ್ದ ಉಪ್ಪಿ ಅಭಿನಯದ ಎ ಚಿತ್ರದ ಡೈಲಾಗುಗಳ ಮೂಲಕವೇ ಈ ಫಸ್ಟ್ ಲುಕ್ ತೆರೆದುಕೊಳ್ಳುತ್ತದೆ. ನಂತರ ಬೆಡ್ ರೂಮಲ್ಲಿ ಸಿಂಗಲ್ ಪೀಸಲ್ಲಿ ಪವಡಿಸಿ ಬಾಯಲ್ಲೊಂದು ರೆಡ್ ರೋಸ್ ಕಚ್ಚಿಕೊಂಡ ಉಪ್ಪಿ ಐ ಲವ್ ಯೂ ಪದವನ್ನು ವಿಶ್ಲೇಷಣೆ ಮಾಡೋ ಕಿಕ್ಕು ಕೊಡೋ ಡೈಲಾಗುಗಳಿವೆ. ಅಂತೂ ಈ ಮೂಲಕವೇ ನಿರ್ದೇಶಕ ಆರ್ ಚಂದ್ರು ದಶಕದ ಹಿಂದಿನ ಉಪ್ಪಿಯನ್ನು ಮತ್ತೆ ಅಭಿಮಾನಿಗಳ ಮುಂದೆ ತರಲು ಹೊರಟಿದ್ದಾರಾ ಎಂಬ ಕುತೂಹಲವೂ ಕಾಡಲಾರಂಭಿಸಿದೆ.
ಐ ಲವ್ ಯೂ ಚಿತ್ರದ ಫಸ್ಟ್ ಲುಕ್ಕನ್ನು ವಿತರಕರಾದ ಭಾಷಾ ಬಿಡುಗಡೆ ಮಾಡಿದ್ದಾರೆ. ರಾಜಕಾರಣಿ ರವಿ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಶಿಷ್ಟವಾದ ಆಲೋಚನೆಗಳಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರೋ ಉಪ್ಪಿಯವರ ಜೊತೆ ಎರಡನೇ ಸಲ ಚಿತ್ರ ಮಾಡಲು ಅವಕಾಶ ಸಿಕ್ಕಿದ್ದೇ ಪುಣ್ಯ ಅನ್ನುತ್ತಾ ಮಾತಿಗಾರಂಭಿಸಿದವರು ನಿರ್ದೇಶಕ ಕಂ ನಿರ್ಮಾಪಕ ಆರ್ ಚಂದ್ರು. ಅವರು ನಿರ್ದೇಶಕರ ನಟ. ಅವರ ವಿಶೇಷತೆಗಳೇನು ಎಂಬುದು ಬ್ರಹ್ಮ ಚಿತ್ರದ ಸಂದರ್ಭದಲ್ಲಿಯೇ ನನಗೆ ತಿಳಿದಿತ್ತು. ಆ ಚಿತ್ರದ ಬಾಕಿ ಹತ್ತು ಲಕ್ಷ ಕೊಡಲು ಹೋದಾಗ ಕೇಲವ ಒಂದು ಲಕ್ಷ ಮಾತ್ರ ತೆಗೆದುಕೊಂಡಿದ್ದ ಅವರ ಹೃದಯ ವೈಶ್ಯಾಲ್ಯತೆಯೂ ಬೆರಗು ಹುಟ್ಟಿಸಿತ್ತು. ಅದೇ ಸಮಯದಲ್ಲಿ ಅವರು ಹೊಸಾ ಚಿತ್ರ ಮಾಡಿ ನಾನು ನಿಮ್ಮ ಜೊತೆಗಿರುತ್ತೇನೆ ಎಂದೂ ಭರವಸೆ ತುಂಬಿದ್ದರು.
ನಂತರ ಅವರ ಅನಿಮತಿ ಇಲ್ಲದೆಯೆ ಚಿತ್ರ ಘೋಷಣೆ ಮಾಡಿ ಅವರ ಬಳಿ ಹೋದಾಗಲೂ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಬೇರೆಯವರಿಗೆ ನೀಡಿದ್ದ ಕಾಲ್ ಶೀಟನ್ನು ನನಗೆ ನೀಡಿದ್ದರು. ಸದ್ಯಕ್ಕೆ ಸಾಹಸ ಮತ್ತು ಹಾಡುಗಳು ಮಾತ್ರ ಬಾಕಿ ಉಳಿದಿವೆ. ಅದೆಲ್ಲದಕ್ಕೂ ಉಪ್ಪಿ ಸರ್ ತುಂಬು ಸಹಕಾರ ನೀಡುತ್ತಿದ್ದಾರೆಂದು ಉಪೇಂದ್ರರ ಗುಣಗಾನ ಮಾಡುತ್ತಲೇ ಚಂದ್ರು ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.
ಸದ್ಯ ಈ ಫಸ್ಟ್ ಲುಕ್ ಎಲ್ಲರ ಮನ ಗೆದ್ದಿದೆ. ಉಪೇಂದ್ರ ಈ ಚಿತ್ರದ ಮೂಲಕ ಮತ್ತೊಂದು ಗೆಲುವಿನ ಶಕೆ ಆರಂಭಿಸೋ ಲಕ್ಷಣಗಳೂ ಕಾಣಿಸುತ್ತಿವೆ. #
No Comment! Be the first one.