ಆರ್. ಚಂದ್ರು ಸಿನಿಮಾ ಅಂದರೆ, ಅಲ್ಲಿ ಅದ್ಭುತವಾದ ಹಾಡುಗಳಿರುತ್ತವೆ ಅನ್ನೋದು ಗ್ಯಾರೆಂಟಿ. ತಾಜ್ ಮಹಲ್‍ನಿಂದ ಹಿಡಿದು ಈವರೆಗೆ ಚಂದ್ರು ಅವರ ಪ್ರತಿಯೊಂದು ಚಿತ್ರದ ಹಾಡುಗಳೂ ಮುಲಾಜಿಲ್ಲದೆ ಹಿಟ್ ಆಗಿವೆ. ಚಂದ್ರು ಅವರ ಸಿನಿಮಾವೊಂದು ಶುರುವಾದಾಗಲೇ ಒಂದಿಷ್ಟು ಜನಪ್ರಿಯ ಹಾಡುಗಳು ಜೀವಪಡೆಯುತ್ತವೆ ಅಂತಾ ಸಿನಿಮಾಸಕ್ತರು ತೀರ್ಮಾನಿಸಿಬಿಟ್ಟಿರುತ್ತಾರೆ.

ಸಂಗೀತ ಸಂಯೋಜನೆ ಎಷ್ಟು ಕ್ರಿಯಾಶೀಲ ಕೆಲಸವೋ- ಹಾಗೆಯೇ ಒಳ್ಳೊಳ್ಳೆ ಟ್ಯೂನುಗಳನ್ನು ಆಯ್ಕೆ ಮಾಡಿಕೊಳ್ಳುವುದೂ ಒಂಥರಾ ಕಲೆಯೇ. ಇಲ್ಲಿ ತೀರಾ ಗಮನಿಸಲೇಬೇಕಾದ ಒಂದು ಅಂಶವಿದೆ. ಸಾಮಾನ್ಯವಾಗಿ ಟ್ರೆಂಡಿಂಗ್‍ನಲ್ಲಿರುವ ಮ್ಯೂಸಿಕ್ ಡೈರೆಕ್ಟರುಗಳನ್ನು ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಿಕೊಳ್ಳುವುದು ವಾಡಿಕೆ. ಆದರೆ ಆರ್. ಚಂದ್ರು ತಮ್ಮ ಮೊದಲ ಸಿನಿಮಾದಿಂದ ಹಿಡಿದು ಇಲ್ಲೀವರೆಗೆ ಒಂದೊಂದು ಸಿನಿಮಾಗೂ ಭಿನ್ನ ಸಂಗೀತ ನಿರ್ದೇಶಕರನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ.

ತಾಜ್ ಮಹಲ್‍ಗೆ ಅಭಿಮನ್ ರಾಯ್, ಪ್ರೇಮ್ ಕಹಾನಿಯಲ್ಲಿ ಸಂಗೀತ ಲೋಕದ ದಿಗ್ಗಜ ಇಳಯರಾಜ, ಚಾರ್ ಮಿನಾರ್‍ಗೆ ಹರಿ, ಮೈಲಾರಿ ಮತ್ತು ಬ್ರಹ್ಮದಲ್ಲಿ ಗುರುಕಿರಣ್, ಕೋಕೋ ಚಿತ್ರಕ್ಕೆ ರಮಣ ಗೋಗುಲ, ಲಕ್ಷ್ಮಣನಿಗೆ ಅರ್ಜುನ್ ಜನ್ಯಾ, ಹಾಡುಗಾರನಾಗಿದ್ದ ನವೀನ್ ಸಜ್ಜುನನ್ನು ಕನಕ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರನ್ನಾಗಿಸಿದ್ದರು.

ಹಾಗೆಯೇ ಸಿನಿಮಾ ವಿತರಣೆ ಮತ್ತು ಚಿತ್ರರಂಗದವರ ಸಾಂಗತ್ಯ ಹೊಂದಿದ್ದ ಬಿ.ಜಿ.ಎಸ್. ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಕಿರಣ್ ತೋಟಂಬೈಲು ಅವರನ್ನು ಈಗ `ಐ ಲವ್ ಯೂ’ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರನ್ನಾಗಿ ಪರಿಚಯಿಸಿದ್ದಾರೆ. ಕಿರಣ್ ಅವರು ಸಂಗೀತ ನಿರ್ದೇಶನವನ್ನೂ ಮಾಡಲಿದ್ದಾರೆ ಅನ್ನೋ ವಿಚಾರ ಅವರ ಆಪ್ತರಿಗೇ ಗೊತ್ತಿರಲಿಲ್ಲ. ಆದರೆ ಅವರೊಳಗಿದ್ದ ಸುಪ್ತ ಪ್ರತಿಭೆಯನ್ನು ಚಂದ್ರು  ಅನಾವರಣಗೊಳಿಸಿದ್ದಾರೆ. ಆ ಮೂಲಕ ಡಾ. ಕಿರಣ್ ಅವರು ಮತ್ತೊಂದು ಪ್ರೊಫೆಷನ್ನಿನಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ನಿನ್ನ ಹೃದಯ ಇರೋ ಜಾಗದಲ್ಲಿ ಒಂದು ಕಲ್ಲು ಇದೆ. ಅದು ಕಲ್ಲಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತ್ತಿದೆ – ಎನ್ನುವ ಹಾಡನ್ನು ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾವಂತ ಸಂಗೀತ ನಿರ್ದೇಶಕ, ಗೀತಸಾಹಿತಿ ಕೆ.ಎಂ. ಇಂದ್ರಾ ರೂಪಿಸಿದ್ದಾರೆ. ಲಹರಿ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈಗ ಬಿಡುಗಡೆಯಾಗಿರುವ ಈ ಹಾಡಿನ ಲಿರಿಕಲ್ ವಿಡಿಯೋ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಮುಂತಾದವರು ನಟಿಸಿರುವ ಈ ಚಿತ್ರದ ಮೂಲಕ ನಿರ್ದೇಶಕ ಆರ್. ಚಂದ್ರು ಪ್ರೇಕ್ಷಕರಿಗೆ ಮತ್ತಷ್ಟು ಆಪ್ತರಾಗೋದರಲ್ಲಿ ಡೌಟಿಲ್ಲ. ಒಬ್ಬ ಸೂಪರ್ ಸ್ಟಾರ್ ಮತ್ತು ಸ್ಟಾರ್ ಡೈರೆಕ್ಟರ್ ಸೇರಿ ಸಿನಿಮಾ ಮಾಡೋದು ಒಂದು ಚಿತ್ರಕ್ಕಷ್ಟೇ ಸೀಮಿತ ಎನ್ನುವಂತಿದೆ ಚಿತ್ರರಂಗದ ಸದ್ಯದ ಪರಿಸ್ಥಿತಿ. ಆದರೆ `ಬ್ರಹ್ಮ’ ಚಿತ್ರದ ನಂತರ ಮತ್ತೆ ಉಪ್ಪಿ ಮತ್ತು ಚಂದ್ರು ಜೋಡಿ ಒಂದಾಗಿದೆ.

ಅಲ್ಲದೇ ಪ್ರೀತಿಯ ಬಗ್ಗೆ ಉಪ್ಪಿ ಮತ್ತು ಚಂದ್ರು ಈವರೆಗೆ ಹೇಳುತ್ತಾ ಬಂದ ವ್ಯಾಖ್ಯಾನವೂ ಭಿನ್ನಭಿನ್ನ. `ಐ ಲವ್ ಯೂ’ ಸಿನಿಮಾದಲ್ಲಿ ಲವ್ ಬಗೆಗಿನ ಇಬ್ಬರ ಅಭಿಪ್ರಾಯಗಳೂ ಬೆರೆತಿದೆಯಂತೆ. ಅಲ್ಲಿಗೆ ಉಪ್ಪಿ ಅಭಿಮಾನಿಗಳಿಗೂ, ಚಂದ್ರು ಸೆಳೆದಿಟ್ಟುಕೊಂಡಿರುವ ಪ್ರೇಕ್ಷಕ ವರ್ಗಕ್ಕೂ `ಐ ಲವ್ ಯೂ’ ಪರಿಪೂರ್ಣವಾಗಿ ಖುಷಿಗೊಳಿಸೋದು ಖಂಡಿತಾ. ಇದರ ಜೊತೆಗೆ ಮುದ ನೀಡುವ ಸಂಗೀತ ಕೂಡಾ ಬೆರೆತಿರೋದು `ಐ ಲವ್ ಯು’ ಗೆಲುವನ್ನು ಖಾತ್ರಿಗೊಳಿಸುತ್ತಿದೆ.

CG ARUN

ಲವರ್ ಗಳಾಗಿದ್ದವರೂ ಎಂಗೇಜ್ ಆಗಲಿದ್ದಾರೆ!

Previous article

ಸ್ಯಾಂಡಲ್ ವುಡ್ ನ ಕ್ಯೂಟ್ ದಂಪತಿಗಳಿಗೆ ಅಗ್ನಿಪರೀಕ್ಷೆ!

Next article

You may also like

Comments

Leave a reply

Your email address will not be published. Required fields are marked *