ತಾಳಿ ಕಟ್ಟಲು ಹಸೆಮಣೆ ಏರಿದವನ ಮನಸ್ಸಿನಲ್ಲಿ ಕಣ್ಮರೆಯಾದ ಹಳೇ ಹುಡುಗಿ ಕಾಟ ಕೊಡಲು ಶುರು ಮಾಡುತ್ತಾಳೆ… ಬಿಟ್ಟೂ ಬಿಡದಂತೆ ನೆನಪುಗಳಲ್ಲೇ ಕಾಡುತ್ತಾಳೆ. ʻʻಮದುವೆಮನೆಗೆ ಬರೋತನಕ ಯಾಕೆ ಕಾಯಬೇಕಿತ್ತು? ಮೊದಲೇ ಹೇಳಿಬಿಟ್ಟಿದ್ದರೆ ಆಗ್ತಿತ್ತು…ʼʼ ಅಂದುಕೊಂಡರೆ, ಆ ಪ್ರಯತ್ನ ಕೂಡಾ ನಡೆದಿರುತ್ತದೆ. ಹುಡುಗ ಹೇಳಿದ ಸತ್ಯವನ್ನು ಅರಗಿಸಿಕೊಳ್ಳದ ಹುಡುಗಿ ʻʻಹೇ ತಮಾಷೆ ಮಾಡ್ಬೇಡ ಸುಮ್ನಿರಪ್ಪ…ʼʼ ಅಂತಾ ಹೇಳಿ ಸುಮ್ಮನಾಗಿರುತ್ತಾಳೆ. ನಿಜಕ್ಕೂ ಇವನಿಗೆ ಮದುವೆಯಲ್ಲಿ ಇಷ್ಟವಿಲ್ಲ ಅನ್ನೋದು ಗೊತ್ತಾಗೋದೇ ಮದುವೆಯ ದಿನ.
ಅವಳು ರಾಧೆ. ಯಾವ ಹುಡುಗರನ್ನೂ ಒಪ್ಪದವಳು, ನೋಡೋಕೆ ಮುಂಚೇನೆ ರಿಜೆಕ್ಟ್ ಮಾಡಿಕಳಿಸುವ ಮನಸ್ಥಿತಿಯವಳು. ಅದು ಹೇಗೋ ಸಿದ್ ನನ್ನು ನೋಡುತ್ತಿದ್ದಂತೇ ಮನಸು ಜಾರಿಸಿರುತ್ತಾಳೆ. ಮದುವೆಗೆ ಒಪ್ಪಿಗೆಯನ್ನೂ ನೀಡಿರುತ್ತಾಳೆ. ಇವನಿಗೆ ಹಳೆಯ ನೆನಪುಗಳು ಕಾಡಲು ಶುರುವಾಗುತ್ತದೆ. ಮದುವೆ ಮುರಿದುಕೊಳ್ಳುತ್ತಾನೆ. ಇದಾದ ನಂತರವೂ ರಾಧೆ ಮತ್ತೆ ಸಿಗುತ್ತಾಳೆ, ʻಛಾನ್ಸುʼ ಕೊಡುತ್ತಾಳೆ! ಆದರೆ ಸಿದ್ ತೀರ್ಮಾನ ಸ್ಥಿರವಾಗಿರುತ್ತದೆ. ರಾಧೆ ಕೊಟ್ಟ ಆ ʻಅವಕಾಶʼವನ್ನು ಬಳಸಿಕೊಳ್ಳೋದಿಲ್ಲ. ಅನಾಹಿತಳನ್ನು ಹುಡುಕಿಕೊಂಡು ಹೊರಡುತ್ತಾನೆ. ಸಿದ್ ಪಾಲಿಗೆ ಅನಾಹಿತ ಮತ್ತೆ ದಕ್ಕುತ್ತಾಳಾ? ಹಾಗೊಮ್ಮೆ ಸಿಕ್ಕರೂ ಅವಳ ಸ್ಥಿತಿ ಏನಾಗಿರುತ್ತದೆ? ಅವಳು ಹೇಗೇ ಇದ್ದರೂ ಸ್ವೀಕರಿಸುವ ಮನಸ್ಥಿತಿ ಇವನದ್ದಾಗಿರುತ್ತದಾ? ಹೀಗೆ ಪ್ರಶ್ನೆಗಳ ಮೇಲೊಂದು ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ, ಕಾಡಿಸುವ ಕಥೆ ಇದರಲ್ಲಿದೆ.
ಶ್ರೀಮಂತನ ಮಗ, ತೀರಾ ಸಣ್ಣ ವಯಸ್ಸಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯೊಟ್ಟಿಗೆ ಬೆಳೆದವನು. ಕ್ರಿಕೆಟ್ ಆಟಗಾರನಾಗಬೇಕು ಅಂದುಕೊಂಡಿದ್ದರೂ ಅದು ಸಾಧ್ಯವಾಗಿರುವುದಿಲ್ಲ. ಅದಕ್ಕೂ ಒಂದು ಕಾರಣವಿರುತ್ತದೆ. ಅನಾಹಿತಳ ಹಿಂದೆ ಅವ್ಯಾಹತವಾಗಿ ತಿರುಗಾಡುವ ಸಿದ್ ಯಾಕೆ ಅವಳಿಂದ ದೂರವಾದ? ಎನ್ನುವ ಪ್ರಶ್ನೆಯನ್ನು ಹುಟ್ಟಿಸಿ, ಸಿನಿಮಾದ ಮಿಕ್ಕ ಭಾಗವನ್ನು ಉತ್ತರದಂತೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಇಂದ್ರಜಿತ್ ಬೆಳ್ಯಪ್ಪ. ಹಾಗೆ ನೋಡಿದರೆ, ಈ ಸಿನಿಮಾದ ಕಥೆ ತೀರಾ ಹೊಸದೇನಲ್ಲ. ಕನ್ನಡವೂ ಸೇರಿದಂತೆ ಹತ್ತು ಹಲವು ಭಾಷೆಗಳಲ್ಲಿ ಇಂಥದ್ದೇ ಮಾದರಿಯ ಸಿನಿಮಾಗಳು ಬಂದುಹೋಗಿದೆ. ಆದರೆ ಎಲ್ಲೂ ಗ್ರಾಫ್ ಡ್ರಾಪ್ ಆಗದಂತೆ ಹೇಳುತ್ತಾ ಹೋಗಿದ್ದಾರೆ. ಹೆಚ್ಚೂ ಕಡಿಮೆ ಎರಡೂಮುಕ್ಕಾಲು ಗಂಟೆ ಅವಧಿಯ ಸಿನಿಮಾವನ್ನು ಅಧ್ಯಾಯದಂತೆ ಹೇಳಿದ್ದಾರೆ. ಇದು ಸಿನಿಮಾಗಿರಬೇಕಾದ ಸ್ಪೀಡನ್ನು ಕಡಿಮೆ ಮಾಡಿದೆ. ವೆಬ್ ಸಿರೀಸ್ ಮಾದರಿಯನ್ನು ಅನುಸರಿಸಿದ್ದಾರಾ ಅಂತಲೂ ಅನ್ನಿಸುತ್ತದೆ. ಇವೆಲ್ಲದರ ನಡುವೆಯೂ ಚಿತ್ರ ನೋಡಿಸಿಕೊಂಡು ಹೋಗುವುದಲ್ಲದೇ, ಇಷ್ಟ ಕೂಡಾ ಆಗುತ್ತದೆ.
ಶ್ರೀವತ್ಸನ್ ಛಾಯಾಗ್ರಹಣ ಕಣ್ಣಿಗೆ ಹಿತ ನೀಡಿದರೆ, ಗಗನ್ ಬಡೇರಿಯಾ ಸಂಗೀತ ಮನಸಿಗೆ ಮುದ ನೀಡುತ್ತದೆ. ಈ ಹಿಂದೆ ವಿಹಾನ್ ನಟಿಸಿದ್ದ ಸಿನಿಮಾಗಳನ್ನು ನೋಡಿದ್ದರೆ, ಖಂಡಿತಾ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ಹಳೆಯ ವಿಹಾನ್ʼನನ್ನು ಸಂಪೂರ್ಣವಾಗಿ ಅಳಿಸಿ ಹೊಸಾ ನಟನನ್ನು ಪರಿಚಯಿಸಿರುವ ಕೀರ್ತಿ ನಿರ್ದೇಶಕ ಬೆಳ್ಯಪ್ಪನವರಿಗೆ ಸಲ್ಲಬೇಕು. ವಿಹಾನ್ ಅಷ್ಟು ಚೆಂದಗೆ ಕಾಣಿಸಿರುವುದು ಮಾತ್ರವಲ್ಲ ತುಂಬಾನೇ ನ್ಯಾಚುರಲ್ ಆಗಿ ನಟಿಸಿದ್ದಾರೆ. ಇನ್ನು ಈ ಸಿನಿಮಾದ ಮೂಲಕ ಇಬ್ಬರು ಮುದ್ದಾದ ಬ್ಯೂಟಿಫುಲ್ ನಟಿಯರು ಚಿತ್ರರಂಗಕ್ಕೆ ದೊರಕಿದ್ದಾರೆ. ರಾಧಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಯೂರಿಯನ್ನು ನೋಡಿದ ಯಾರಿಗೇ ಆದರೂ ಈಕೆಯ ಮೇಲೆ ಲವ್ವಾಗದೇ ಇರೋದಿಲ್ಲ. ಹಾಗೆಯೇ, ಅನಾಹಿತಳಾಗಿ ಅಂಕಿತಾ ಅಮರ್ ಬರಿಯ ಪಾತ್ರಪೋಷಣೆ ಮಾಡಿಲ್ಲ; ಆ ಪಾತ್ರವನ್ನು ಜೀವಿಸಿದ್ದಾರೆ.
ಸಿನಿಮಾದಲ್ಲಿ ಬರುವ ಇನ್ನಿತರೆ ಪಾತ್ರಗಳು ಕೂಡಾ ಸಹಜವಾಗಿವೆ. ಭಾಷೆ, ಚೆಲುವು, ಗೆಲುವುಗಳೆಲ್ಲವನ್ನೂ ಮೀರಿದ ಅಪ್ಪಟ ಜೀವ-ಜೀವನ ಪ್ರೀತಿಯ ಸಿನಿಮಾವೊಂದನ್ನು ನೋಡಬೇಕಿದ್ದರೆ ʻಇಬ್ಬನಿ ತಬ್ಬಿದ ಇಳೆʼಯನ್ನು ಮಿಸ್ ಮಾಡಿಕೊಳ್ಳಬೇಡಿ…!
No Comment! Be the first one.