ಜನರಿಗೆ ಮನರಂಜನೆಯನ್ನು ಧಾರೆಯೆರೆಯುವ ಚಿತ್ರರಂಗದ ಒಳಗೆ ಹೇಳಿಕೊಳ್ಳಲಾರದ ಸಂಕಟಗಳಿವೆ. ಎಲ್ಲೋ ಕೆಲವರು ಆರಾಮಾಗಿರೋದನ್ನು ಬಿಟ್ಟರೆ, ಇಲ್ಲಿನ ನಿರ್ಮಾಪಕರು, ನಿರ್ದೇಶಕರು, ಕಲಾವಿದ, ತಂತ್ರಜ್ಞರು ಪಡಬಾರದ ಯಾತನೆಯಲ್ಲೇ ಬದುಕು ಸವೆಸುತ್ತಿದ್ದಾರೆ.

ಇದ್ಯಾವುದೋ ಕೋವಿಡ್‌ ಅನಿಷ್ಟ ಚಿತ್ರರಂಗವನ್ನು ನಂಬಿಕೊಂಡವರ ಬಾಯಿಗೆ ಅಕ್ಷರಶಃ ಮಣ್ಣು ಹಾಕಿದೆ. ಇಂಥ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದ ಸಂಕಷ್ಟಗಳಿಗೆ ಮಿಡಿಯಬೇಕಾದ್ದು ಇಲ್ಲಿನ ಸಂಘ ಸಂಸ್ಥೆಗಳ ಜವಾಬ್ದಾರಿ. ಕನ್ನಡ ಚಿತ್ರರಂಗದ ಹಿತ ಕಾಪಾಡಲು ಸ್ಥಾಪನೆಯಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎನ್ನುವ ಸಂಸ್ಥೆಯಿದೆ. ಇಲ್ಲಿರುವವರಿಗೆ ಅವರದ್ದೇ ಅವರಿಗೆ ಚಿಂತೆ, ಒಳಜಗಳಗಳು. ನಿರ್ದೇಶಕರ ಸಂಘವಂತೂ ಅಕ್ಷರಶಃ ಪ್ರಾಣ ಕಳೆದುಕೊಂಡಿದೆ. ಇರೋದರಲ್ಲಿ ಕಲಾವಿದರ ಸಂಘ, ನೃತ್ಯ ನಿರ್ದೇಶಕರ ಸಂಘಗಳು ಸದಸ್ಯರ ಹಿತ ಕಾಪಾಡುವ ಕೆಲಸಗಳನ್ನು ಮಾಡುತ್ತಿವೆ. ಆದರೆ ಇರುವ ಇಪ್ಪತ್ತೇಳು ವಿಭಾಗಗಳ ಹಿತ ಕಾಯುವ ಸಂಘಟನೆಯ ಕೊರತೆ ಇತ್ತು. ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿರುವ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್  ನಿಜಕ್ಕೂ ಆ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡುತ್ತಿದೆ.

ಸದ್ಯ ಇವತ್ತಿನಿಂದ ಚಿತ್ರಮಂದಿರಗಳು ನಿಧಾನಕ್ಕೆ ಬಾಗಿಲು ತೆರೆಯುತ್ತಿವೆ. ಈಗೆಲ್ಲಾ ಯು ಎಫ್‌ ಓ ಕ್ಯೂಬ್‌ ಗಳ ಮೂಲಕ ಸಿನಿಮಾ ಪ್ರದರ್ಶನಗೊಳ್ಳುತ್ತವೆ. ಅವರು ವಿಧಿಸಿರುವ ಶುಲ್ಕ ನೀಡಿ ಸಿನಿಮಾಗಳನ್ನು ತೆರೆಗೆ ತರೋದು ಅಸಾಧ್ಯದ ಕೆಲಸ. ಇದನ್ನರಿತ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಯು.ಎಫ್.‌ಓ ಮತ್ತು ಕ್ಯೂಬ್‌ ಸಂಸ್ಥೆಯ ಮುಖ್ಯಸ್ಥರಿಗೆ ಪತ್ರ ಬರೆದು ಶೇ.50ರಷ್ಟು ಠೇವಣಿ ಶುಲ್ಕ ಕಡಿತಗೊಳಿಸಲು ಮನವಿ ಮಾಡಿತ್ತು. ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಕೋರಿಕೆಗೆ ಸ್ಪಂದಿಸಿರುವ ಕಂಪೆನಿಗಳು ಠೇವಣಿ ಶುಲ್ಕವನ್ನು 50% ಕಡಿಮೆ ಮಾಡಿವೆ. ಸದ್ಯ ಚಿಂತಾಜನಕ ಸ್ಥಿತಿಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಇದು ಗುಟುಕು ಜೀವ ನೀಡಿದಂತಾಗಿದೆ. ಡಿಸೆಂಬರ್‌ 31ರ ತನಕ ಈ ರಿಯಾಯಿತಿ ಶುಲ್ಕ ಅನ್ವಯವಾಗಲಿದ್ದು.

ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಕರ್ನಾಟಕ ಅಲ್ಲದೆ ದೇಶದ ಆನೇಕ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದೆ. ಉತ್ತರ ಭಾರತದ ಶ್ರೀನಗರದಲ್ಲಿ ಮೊದಲು ಆರಂಭವಾದ ಈ ಸಂಸ್ಥೆ ಆನಂತರ ತೆಲಂಗಾಣಕ್ಕೆ ವಿಸ್ತಾರವಾಯಿತು. ಈಗ ಕರ್ನಾಟಕದಲ್ಲೂ ತನ್ನ ಸೇವೆ ಆರಂಭಿಸಿದ್ದು, ನಿರ್ಮಾಪಕ ಪಿ.ಮೂರ್ತಿ ಅವರು ಇದರ ಅಧ್ಯಕ್ಷರಾಗಿದ್ದು, ಸ್ಕೈಲೈನ್ ಸ್ಟುಡಿಯೋಸ್‍ನ ದಿಲೀಪ್‍ಕುಮಾರ್ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಸದಸ್ಯರಾದರೆ 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಯೋಜನೆ ಕೂಡ ಇರುತ್ತದೆ. ಇಎಫ್, ಪಿಎಫ್, ಗ್ರಾಚುಟಿಯಂಥ ಸೌಲಭ್ಯಗಳಿವೆ. ನಿರ್ಮಾಪಕರು ಇಲ್ಲಿ ಸದಸ್ಯರಾಗಲು 5 ಸಾವಿರ ರೂ. ಗಳನ್ನು ಪಾವತಿಸಬೇಕಾಗುತ್ತದೆ. ಇನ್ನುಳಿದಂತೆ ಉಳಿದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ಕೇವಲ 2500 ರೂಗಳನ್ನು ಪಾವತಿಸಿದರೆ ಸಾಕು, ನಿಮಗೆ ಗುರುತಿನ ಚೀಟಿ ಸಿಗುತ್ತದೆ. ದಕ್ಷಿಣ ಭಾರತದ ಮುಖ್ಯ ಕಚೇರಿಯಾಗಿ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಕಿರು ಚಿತ್ರ ನಿರ್ಮಾಪಕರು, ನಿರ್ದೇಶಕರು ಕೂಡ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಸದಸ್ಯರಾದವರು ದೇಶದ ಯಾವುದೇ ಮೂಲೆಯಲ್ಲಿ ಬೇಕದರೂ ಸಿನಿಮಾ ಇಂಡಸ್ಟ್ರಿಯ ಕೆಲಸ ಮಾಡಬಹುದು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತೆರೆದು ನಿಂತಳು ಪ್ರಿಯಾ ವಾರಿಯರ್‌

Previous article

ನಮ್ಮ ಮುನಿರತ್ನ ನಮ್ಮ ನಾಯಕ ಅನ್ನುತ್ತಿದ್ದಾರೆ ಜನ…!

Next article

You may also like

Comments

Leave a reply

Your email address will not be published. Required fields are marked *