ತಾಜ್‍ಮಹಲ್, ಚಾರ್ ಮಿನಾರ್‍ನಂಥಾ ಸದಾ ಕಾಡುವ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟವರು ನಿರ್ದೇಶಕ ಆರ್ ಚಂದ್ರು. ಇದೀಗ ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರ ತೆರೆಗೆ ಬಂದಿದೆ.

ಐ ಲವ್ ಯೂ ಅಂದರೆ ಪ್ರೇಮದ ಮೊದಲ ಪುಳಕಗಳು ಸಾಲುಗಟ್ಟಿ ನಿಲ್ಲುತ್ತವೆ. ಹಾಗೆಂದ ಮೇಲೆ ಇದೊಂದು ಅದ್ಭುತ ಪ್ರೇಮ ಕಥಾನಕ ಅನ್ನೋದರಲ್ಲಿ ಯಾವ ಡೌಟೂ ಇಲ್ಲ. ಆದರೆ ಅದರಾಚೆಗೂ ಕಥೆಯ ವಿಚಾರಗಳಲ್ಲಿ ಅಚ್ಚರಿಗಳು ಪ್ರೇಕ್ಷಕರಿಗಾಗಿ ಕಾದು ಕೂತಿವೆ.

ಪ್ರೀತಿ ಎಂದರೆ ಬರೀ ಕಾಮ  ಅಂತಾ ಪ್ರತಿಪಾದಿಸುವ, ಪ್ರೀತಿಸಿದವಳನ್ನು ಹುಡುಕಿಕೊಡು ಎಂದವನ ಕೈಗೆ ಕಾಂಡೋಮು ಪ್ಯಾಕೇಟು ಕೊಡುವ ಮೆಂಟಾಲಿಟಿಯ ಹೀರೋ. ಇಂಥ ವಿಕ್ಷಿಪ್ತ ಮನಸ್ಥಿತಿಯ ವ್ಯಕ್ತಿಯ ಬಗ್ಗೆ ಅಧ್ಯಯನ ನಡೆಸಲು ಬರುವ ಹುಡುಗಿ. ಇಷ್ಟಪಟ್ಟವಳು ಜೊತೆಗೇ ಇದ್ದಾಳಲ್ಲಾ ಅಂತಾ ತಿರುಗಿ ನೋಡಿದರೆ ಅವಳಾಗಲೇ ಎದ್ದು ನಡೆದಿರುತ್ತಾಳೆ. ಹೋದವಳ ಹಿಂದೆ ಪಾದ ಸವೆಸಿದವನಿಗೆ ಸಿಕ್ಕೋದು ಭರ್ತಿ ಸಂಕಟ. ಪ್ರೀತಿ ಅಂದರೆ ಸುಳ್ಳು, ಪುಸ್ತಕದ ಬದನೆಕಾಯಿ ಅಂದವನೇ ಪ್ರೀತಿಯ ಪ್ರಪಾತಕ್ಕೆ ಬಿದ್ದು ಒದ್ದಾಡುವ ಸಂದರ್ಭ ಎದುರಾಗುತ್ತದೆ. ಹಾಗೆಂದು ಆತ ದೇವದಾಸನಾಗೋದಿಲ್ಲ. ಯಾವ ಅಂತಸ್ತು, ಐಶ್ವರ್ಯಗಳಿಲ್ಲದ ಕಾರಣಕ್ಕೆ ಆಕೆ ದೂರಾಗುತ್ತಾಳೋ ಅದನ್ನೆಲ್ಲ ದಕ್ಕಿಸಿಕೊಳ್ಳುವ ಹಠಕ್ಕೆ ಬೀಳುತ್ತಾನೆ. ಪ್ರಖ್ಯಾತ ಉದ್ಯಮಿಯಾಗುತ್ತಾನೆ. ಮದುವೆ, ಮಗು ಎಲ್ಲವೂ ಆಗಿರುತ್ತದೆ.

ಆ ಹೊತ್ತಿಗೆ ಬಿಟ್ಟು ಹೋದವಳು ಮತ್ತೆ ಬರುತ್ತಾಳೆ. ಅಷ್ಟು ವರ್ಷದ ಸುದೀರ್ಘ ಅಂತರದಲ್ಲಿ ಆಕೆ ಬರುವುದಾದರೂ ಯಾತಕ್ಕೆ? ಬಂದವಳು ಈತನ `ಬಯಕೆ’ಗಳನ್ನು ಈಡೇರಿಸುತ್ತಾಳಾ?  ಹತ್ತು ವರ್ಷಗಳಲ್ಲಿ ಆಕೆಯ ಬದುಕಿನಲ್ಲಿ ಏನೆಲ್ಲಾ ಘಟಿಸಿರುತ್ತದೆ? ಅಸಲಿಗೆ ಆಕೆ ಮತ್ತೆ ಬರಲು ಕಾರಣರಾದರೂ ಯಾರು? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುವುದು `ಐ ಲವ್ ಯು’!

ಪ್ರೀತಿಯ ಬಗ್ಗೆ ಹಲವು ಬಗೆಯ ಫಿಲಾಸಫಿಗಳಿವೆ. ಅವೆಲ್ಲವನ್ನೂ ಒಟ್ಟಿಗೇ ಸೇರಿಸಿ ಕಟ್ಟಿಕೊಟ್ಟಿರುವ ಸಿನಿಮಾ ಇದು. ಐ ಲವ್ ಯೂ ಫ್ಯಾಮಿಲಿ ಸಮೇತ ಕೂತು ನೋಡಿ ಎಂಜಾಯ್ ಮಾಡುವಂಥಾ ಸಿನಿಮಾ ಮಾತ್ರವಲ್ಲ; ಫ್ಯಾಮಿಲಿ ಸಮೇತ ನೋಡಲೇಬೇಕಾದ ಚಿತ್ರ. ಇದು ಸಿನಿಮಾ ನೋಡಿದ ಮೇಲೂ ಹೊರಹೊಮ್ಮುವ ಸಾರ್ವತ್ರಿಕ ಅಭಿಪ್ರಾಯ. ಯಾಕೆಂದರೆ ಪ್ರೀತಿ ಪ್ರೇಮಗಳಾಚೆಗೂ ಇಲ್ಲಿ ಮೌಲ್ಯಯುತವಾದೊಂದು ಸಂದೇಶವಿದೆ. ಕ್ಲೈಮ್ಯಾಕ್ಸಿನಲ್ಲಿಯೂ ಯಾರೂ ಊಹಿಸಲಾರದ ವಿಶೇಷತೆಯಿದೆ. `ಈ ಪ್ರಪಂಚದಲ್ಲಿ ಎಡವೋರು ಇರೋ ತನಕ ಕೆಡವೋರು ಇದ್ದೇ ಇರ್ತಾರೆ’ ಎನ್ನುವ ಸಾಲೊಂದು ಸಾಕು ಈ ಚಿತ್ರದ ಡೈಲಾಗ್ ಹೇಗಿದೆ ಅನ್ನೋದನ್ನು ಹೇಳಲು. ಈ ಚಿತ್ರದಲ್ಲಿ ಪ್ರೀತಿ, ಪ್ರೇಮ, ಪ್ರಣಯದ ವಿಚಾರ ಮಾತ್ರವಲ್ಲದೆ, ತಂದೆ ಸೆಂಟಿಮೆಂಟು, ಸ್ನೇಹಿತರ ಕಕ್ಕುಲಾತಿ, ಹೆಂಡತಿಯ ಹಾರೈಕೆ… ಎಲ್ಲವೂ ಇದೆ. ಕೇವಲ ಬಾಹ್ಯ ಸೌಂದರ್ಯಕ್ಕಿಂದ ಆಂತರಿಕ ಬಂಧವೇ ನಿಜವಾದ ಪ್ರೀತಿ ಅನ್ನೋದನ್ನು ಐ ಲವ್ ಯು ಎತ್ತಿಹಿಡಿದಿದೆ.

ಉಪೇಂದ್ರ ಹತ್ತು ವರ್ಷಗಳ ಹಿಂದಿನ ಮತ್ತು ಇವತ್ತಿನ ಕಾಲಘಟ್ಟದ ಪಾತ್ರಗಳಲ್ಲಿ ವೈವಿದ್ಯಮಯವಾಗಿ ನಟಿಸಿದ್ದಾರೆ. ರಚಿತಾರನ್ನು ತೆರೆಮೇಲೆ ನೋಡುವುದೇ ಚೆಂದ. ಹಾಗೆಯೇ ಸೋನು ಗೌಡ ಕೂಡಾ ಅಪ್ಪಟ ಮನೆಮಗಳ ಪಾತ್ರದಲ್ಲಿ ಸೆಳೆಯುತ್ತಾರೆ. ಸುಜ್ಞಾನ್ ಕ್ಯಾಮೆರಾ, ಕಿರಣ್ ತೋಟಂಬೈಲು ಸಂಗೀತ, ಗುರುಕಿರಣ್ ಹಿನ್ನೆಲೆ ಸಂಗೀತ, ದೀಪು ಎಸ್. ಕುಮಾರ್ ಸಂಕಲನ ಇವೆಲ್ಲದರ ಜೊತೆಗೆ ಆರ್. ಚಂದ್ರು ಅವರ ಅಚ್ಚುಕಟ್ಟಾದ ನಿರ್ದೇಶವಿರುವ ಸಿನಿಮಾ ಐ ಲವ್ ಯು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಜೂನ್ 17ಕ್ಕೆ ರಾಂಧವ ಟೈಟಲ್ ಟ್ರ್ಯಾಕ್ ರಿಲೀಸ್!

Previous article

ಸ್ಲಂ ಹುಡುಗರ ಕಿರಿಕ್ ಸಾಧನೆ!

Next article

You may also like

Comments

Leave a reply

Your email address will not be published. Required fields are marked *