ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದಭಿರುಚಿಯ ಸಿನಿಮಾಗಳನ್ನು ಮಾಡುತ್ತಲೇ ಸಿನಿ ರಸಿಕರಲ್ಲಿ ಒಂದು ರೀತಿಯ ಮೂಡ್ ಕ್ರಿಯೇಟ್ ಮಾಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾವನ್ನು ಮಾಡಿದ್ದಾರೆ. ವಿಶೇಷವೆಂದರೆ ನಾಗತಿಹಳ್ಳಿ ಚಂದ್ರಶೇಖರ್ ಸುಪುತ್ರಿ ಕನಸು ನಾಗತಿಹಳ್ಳಿ ವಿರಚಿತ ಕಥೆಯನ್ನೇ ಈ ಸಿನಿಮಾ ಆಧರಿಸಿದೆ.
ಪ್ರಚಾರದ ಮೊದಲ ಹಂತವಾಗಿ ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾದ ಪೋಸ್ಟರ್, ಮೇಕಿಂಗ್ ನ್ನು ಕನಸುಗಾರ ರವಿಚಂದ್ರನ್ ಅನಾವರಣಗೊಳಿಸಿದರು. ನಂತರ ಮಾತನಾಡುತ್ತಾ, “ಮೇಷ್ಟ್ರು ಯಾವುದೇ ಹೊಸ ಚಿತ್ರ ಮಾಡುವ ಮುನ್ನ ಇದರ ಕುರಿತಂತೆ ಹೇಳಲು ಭೇಟಿ ಮಾಡುತ್ತಾರೆ. ಪ್ರತಿ ಸಾರಿ ಬಂದಾಗಲೂ ನಿಮ್ಮ ಸಿನಿಮಾ ಏನಾಯಿತು ಅಂತ ಕೇಳುತ್ತಾರೆ. ಅದನ್ನು ಅಲ್ಲಿಗೆ ನಿಲ್ಲಿಸಿದ್ದೇನೆ, ಮತ್ತೆ ಶುರು ಮಾಡುತ್ತೇನೆಂದು ಹೇಳುತ್ತಾ ಬಂದಿದ್ದೇನೆ. ನಮ್ಮೂರು ಬಿಟ್ಟು ಬೇರೆ ಕಡೆ ಹೋದಾಗ ನಾವುಗಳು ಚೆನ್ನಾಗಿ ನಗುತ್ತೇವೆಂದು ಕೆಲ ತುಣುಕುಗಳನ್ನು ನೋಡಿದಾಗ ತಿಳಿಯುತ್ತದೆ. ಎಲ್ಲರೂ ಸಿನಿಮಾ ಮಾಡಬಹುದು. ಆದರೆ ಇವರ ಚಿತ್ರಗಳಲ್ಲಿ ಮನಸ್ಸಿನ ತೊಳಲಾಟ, ಸಂಕೀರ್ಣ ಅಂಶಗಳನ್ನು ಬಳಸುತ್ತಾರೆ. ಗಂಡು-ಹೆಣ್ಣು ಸಂಬಂಧ, ದೇಶದ ಸಂಸ್ಕೃತಿಯ ಮೇಲೆ ಹೆಚ್ಚು ಫೋಕಸ್ ಮಾಡಿರುತ್ತದೆ. ಈ ಚಿತ್ರವು ಕೂಡ ಅದೇ ಮಾದರಿಯಲ್ಲಿರಬಹುದೆಂದು ಭಾವಿಸುತ್ತೇನೆ” ಎಂದರು.
ಇನ್ನು ವಸಿಷ್ಟ ಸಿಂಹ, ಮಾನ್ವಿತಾ ಕಾಮತ್ ಲೀಡ್ ರೋಲ್ ನಲ್ಲಿದ್ದು, ಉಳಿದಂತೆ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸಾಧುಕೋಕಿಲ, ಸುಮಲತಾ ಅಂಬರೀಶ್, ಗಿರಿರಾಜ್, ಶಿವಮಣಿ ಮತ್ತಿತತರು ನಟಿಸಿದ್ದಾರೆ. ಉಳಿದಂತೆ ಸತ್ಯಹೆಗಡೆ ಮತ್ತು ಕೆ. ಕೃಷ್ಣಕುಮಾರ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ಇಷ್ಟಕಾಮ್ಯ ನಿರ್ಮಾಣ ಮಾಡಿದ್ದ ವೈ.ಎನ್.ಶಂಕರೇಗೌಡ, ಟೆಂಟ್ ಸಿನಿಮಾ ವಿದ್ಯಾರ್ಥಿಗಳಾದ ಭರತ್, ಅಶೋಕ್ ಮತ್ತು ಕನ್ನಡಿಗ ಎನ್ಆರ್ಐಗಳು ಸೇರಿಕೊಂಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯ ಇಂಡಿಯಾ ವರ್ಸಸ್ ಇಂಗ್ಲೆಂಡ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.
No Comment! Be the first one.