`ನಾನು ಕರ್ನಾಟಕದ ಎರಡನೇ ಕೊಹಿನೂರ್’ ಅಂತಾ ಪದೇ ಪದೇ ಪಂಚ್ ಡೈಲಾಗ್ ಮಾತಾಡಿಕೊಂಡು, ಚೆಲ್ಲು ಚೆಲ್ಲಾಗಿ ಆಡುವ ಯಂಗ್ ಪೊಲೀಸ್ ಆಫೀಸರ್ ವಿಕ್ರಂ. ವಿಕ್ರಂ ಮಾತು, ಸ್ವಭಾವ ತಮಾಷೆಯಾದರೂ ಹೊಡೆದಾಟಕ್ಕೆ ನಿಂತರೆ ಪಕ್ಕಾ ಫೈಟರ್. ದುಷ್ಟರನ್ನು ಹುಡುಕಿ ಬಡಿಯುವ ಹಂಟರ್!
ಟಿವಿ ವಾಹಿನಿಯೊಂದರ ಎಡಿಟರ್ ಸೇರಿದಂತೆ ಆತನ ಫ್ಯಾಮಿಲಿಯ ಮೂವರು ಸದಸ್ಯರ ಮರ್ಡರ್ ನೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅತ್ಯುತ್ತಮ ತನಿಖಾಧಿಕಾರಿ ಎನಿಸಿಕೊಂಡವನೇ ಕೊಲೆ ಮಾಡಿ, ಅದರಿಂದ ಬಚಾವಾಗಿರುತ್ತಾನೆ. ಆ ಕೇಸು ಮತ್ತೆ ವಿಕ್ರಂ ಕೈಗೆ ಬರುತ್ತದೆ. ನಾಯಕಿಯೂ ಜೊತೆಯಾಗುತ್ತಾಳೆ. ಕೊಲೆಯ ಸುತ್ತ ಡ್ರಗ್ಸ್ ವಾಸನೆಯೂ ಮೆತ್ತಿಕೊಂಡಿರುತ್ತದೆ. ಕೊಲೆ ಮಾಡಿದ ಕಿರಾತನಿಗೂ ಒಂದು ಸೆಂಟಿಮೆಂಟ್ ಹಿನ್ನೆಲೆ ತೆರೆದುಕೊಳ್ಳುತ್ತದೆ. ಈ ಚಿತ್ರದಲ್ಲಿ ಹಾರರ್ ಕಥೆಯೂ ಬೆಸೆದುಕೊಂಡಿದೆಯಾ ಎನ್ನುವ ಅನುಮಾನ ಮೂಡಿಸುತ್ತಾರಾದರೂ ಕಡೆಗೆ ಆ ಅನಾಹುತವನ್ನು ತಪ್ಪಿಸಿ ಕೃತಾರ್ಥರಾಗಿದ್ದಾರೆ!
ಸೀರಿಯಸ್ ಕಥಾವಸ್ತುವನ್ನು ತಮಾಷೆ ನಿರೂಪಣೆ ಮೂಲಕ ಹೇಳುವ ಶೈಲಿಯನ್ನು ನಿರ್ದೇಶಕ ಶ್ರೀ ನರಸಿಂಹ ಆಯ್ಕೆ ಮಾಡಿಕೊಂಡಿದ್ದಾರೆ. ಇಡೀ ಸಿನಿಮಾ ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿದೆ. ಲೋಡುಗಟ್ಟಲೆ ಲೈಟುಗಳು, ಸೆಟ್ ಪ್ರಾಪರ್ಟಿ, ಜೂನಿಯರ್ ಕಲಾವಿದರನ್ನು ಬಳಸಿಕೊಂಡಿರುವುದು ಎದ್ದುಕಾಣುತ್ತದೆ. ಊರಿಡೀ ಬಣ್ಣ ಚೆಲ್ಲಿ ಗೋಕರ್ಣವನ್ನು ಹೊಸ ಬಗೆಯಲ್ಲಿ ತೋರಿಸಿದ್ದಾರೆ. ಸಣ್ಣ ಫ್ರೇಮನ್ನೂ ಕಲಾತ್ಮಕವಾಗಿ ಮೂಡಿಸಲು ಛಾಯಾಗ್ರಾಹಕ ನವೀನ್ ಕುಮಾರ್ ಶ್ರಮಿಸಿದ್ದಾರೆ. ಒಟ್ಟಾರೆ ಸಿನಿಮಾಗೆ ಬಳಸಿರುವ ಕಲರ್ ಟೋನ್ ಚೆಂದ ಎನಿಸುತ್ತದೆ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ವಾಹ್ ಎನಿಸುತ್ತದೆ. ಸಿನಿಮಾದ ಕಮರ್ಷಿಯಲ್ ತೂಕ ಹೆಚ್ಚಿಸಲು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ವಿಶೇಷ ಪಾತ್ರಕ್ಕೆ ಕರೆತಂದಿದ್ದಾರೆ. ಹಾಗೆ ನೋಡಿದರೆ ದರ್ಶನ್ ಅವರ ಅಗತ್ಯತೆಯೇ ಸಿನಿಮಾದಲ್ಲಿಲ್ಲ. ವ್ಯಾಪಾರೀ ದೃಷ್ಟಿಯಿಂದಷ್ಟೇ ಅವರನ್ನು ಬಳಸಿಕೊಂಡಂತೆ ಕಾಣುತ್ತದೆ.
ಗುರು ಕಷ್ಯಪ್ ಸಂಭಾಷಣೆ ಸಿನಿಮಾದ ಹೈಲೇಟ್. ತಾಂತ್ರಿಕವಾಗಿ ಶ್ರೀಮಂತಗೊಳಿಸುವ ಭರದಲ್ಲಿ ಚಿತ್ರಕತೆಯಲ್ಲಿ ಸಾಕಷ್ಟು ಕಡೆ ಲಾಜಿಕ್ ಮಿಸ್ ಆಗಿದೆ. ಕಂಟ್ಯೂನಿಟಿ ಕೂಡ ಕಳೆದುಕೊಂಡಿದೆ. ಸಿನಿಮಾದ ಆರಂಭದಲ್ಲಿ ಬರುವ ಫೈಟ್ ಮುಗಿದು ದೃಶ್ಯ ಮುಂದುವರೆಯುತ್ತದೆ. ಆ ಫೈಟ್ ನಲ್ಲಿ ಇಲ್ಲದ ಗಡ್ಡ ಮೀಸೆ ದೃಶ್ಯದಲ್ಲಿ ಹುಟ್ಟಿಕೊಂಡು ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳಿರುವುದು ಬಹುಶಃ ನಿರ್ದೇಶಕರ ಪ್ರಮಾದ!
ನಟ ರಘು ಮುಖರ್ಜಿ ಸ್ಟೈಲಿಷ್ ವಿಲನ್ ಆಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವನ್ನು ಮತ್ತಷ್ಟು ವೃದ್ದಿಸಿದ್ದಿದ್ದರೆ ಸಿನಿಮಾದ ತೂಕವೇ ಬೇರೆಯಾಗುತ್ತಿತ್ತು. ಪ್ರಜ್ವಲ್ ದೇವರಾಜ್, ಧರ್ಮಣ್ಣ ಮತ್ತು ಶೋಭರಾಜ್ ಜಿದ್ದಿಗೆ ಬಿದ್ದಂತೆ ನಟಿಸಿ ನಗಿಸುತ್ತಾರೆ. ಬಹುತೇಕ ಸಿನಿಮಾಗಳಲ್ಲಿ ಸೀರಿಯಸ್ಸಾಗಿ, angry young man ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರಜ್ವಲ್ ತಮಗೆ ನಗಿಸುವ ಕಲೆಯೂ ಗೊತ್ತು ಅನ್ನೋದನ್ನಿಲ್ಲಿ ತೋರಿಸಿದ್ದಾರೆ. ಸಿನಿಮಾದ ದ್ವಿತೀಯ ಭಾಗ ಎಳೆದಾಡಿದಂತಾಗಿದೆ. ಸಂಕಲನಕಾರ ಹರೀಶ್ ಕೊಮ್ಮೆ ಮತ್ತು ನಿರ್ದೇಶಕ ಶ್ರೀನರಸಿಂಹ ಮನಸ್ಸು ಮಾಡಿದ್ದರೆ ಒಂದಷ್ಟು ದೃಶ್ಯಗಳನ್ನು ಟ್ರಿಮ್ ಮಾಡಬಹುದಿತ್ತು. ಇವೆಲ್ಲದರ ನಡುವೆಯೂ ಇನ್ಸ್ ಪೆಕ್ಟರ್ ವಿಕ್ರಮನನ್ನು ಒಮ್ಮೆ ನೋಡಲು ಯಾವ ತಕರಾರೂ ಇಲ್ಲ!
No Comment! Be the first one.