ತುಂಬಾ ಸಲೀಸಾಗಿ ದುಡ್ಡು ಮಾಡಿಬಿಡಬೇಕು. ತಲೆಮಾರುಗಳ ಕಷ್ಟಗಳೆಲ್ಲಾ ಒಂದೇ ಏಟಿಗೆ ಗುಡಿಸಿಕೊಂಡು ಹೋಗಬೇಕು. ಅಷ್ಟೊಂದು ಧಾವಂತ. ಶ್ರಮ ವಹಿಸಿ ದುಡಿಯುವ ತಾಳ್ಮೆ ಇಲ್ಲಿ ಯಾರಿಗೂ ಇಲ್ಲ. ಮತ್ಯಾರದ್ದೋ ಹತ್ತು ಹಲವು ವರ್ಷಗಳ ಕನಸು, ಶ್ರಮವನ್ನು ಏಕಾ ಏಕಿ ತಮ್ಮ ಲಾಭಕ್ಕೆ ಕನ್ವರ್ಟ್ ಮಾಡಿಕೊಳ್ಳುವ ದುರ್ಬುದ್ದಿ, ದುಡಿಮೆಗೆ ಅಂತಾ ಜೊತೆಗಿಟ್ಟುಕೊಂಡರೆ ಗಂಟಿನ ಮೇಲೆ ಕಣ್ಣಿಡುವ ದುರಾಸೆ. ಅದಕ್ಕಾಗಿ ಒಳಗೊಳಗೇ ಮಸಲತ್ತು, ಮಿಲಾಖತ್ ಮಾಡಿಕೊಳ್ಳುತ್ತಾರೆ. ಮನುಷ್ಯತ್ವವನ್ನು ಮರೆತು ಹಣಕ್ಕಷ್ಟೇ ಪ್ರಾಮುಖ್ಯತೆ ಕೊಡುವ ನೀಚರು ಇಲ್ಲಿದ್ದಾರೆ. ಯಕಃಶ್ಚಿತ್ ಹಣಕ್ಕಾಗಿ ಸ್ನೇಹ, ವಿಶ್ವಾಸಗಳ ಕತ್ತು ಕೊಯ್ಯುವವರಿಗೇನು ಕಡಿಮೆಯಾ? – ಈ ಅಂಶಗಳನ್ನೇ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಚಿತ್ರ ಇನ್ ಸ್ಟಂಟ್ ಕರ್ಮ.
ಐದು ಜನ ಒಂದು ಕಡೆ ಸೇರುತ್ತಾರೆ. ಒಬ್ಬರಿಗೆ ಒಬ್ಬರ ಪರಿಚಯವೇ ಇರುವುದಿಲ್ಲ. ಅವರವರ ಒರಿಜಿನಲ್ ಹೆಸರು ಕೂಡಾ ಗೊತ್ತಾಗೋದಿಲ್ಲ. ಗೊತ್ತಾಗಬಾರದು ಅನ್ನೋದೇ ಉದ್ದೇಶ ಕೂಡಾ. ದೊಡ್ಡ ಮೊತ್ತವನ್ನು ಎಗರಿಸಿ, ಸಮಾನ ಪಾಲು ಮಾಡಿಕೊಂಡು, ಬೇರ್ಪಡೋದು ಪ್ಲಾನು. ಎಲ್ಲೆಲ್ಲಿಂದಲೋ ಬಂದು ಜೊತೆಯಾದವರು, ಕೆಲಸ ಮುಗಿದ ಮೇಲೆ ಸಿಕ್ಕಿಕೊಳ್ಳಬಾರದು ಅನ್ನೋ ಉದ್ದೇಶದಿಂದ ನಾಯಿ, ಕೋತಿ, ಹಂದಿ, ಕುರಿ, ಕೋಣ ಅಂತಾ ನಾಮಕರಣ ಮಾಡಿಕೊಳ್ಳುತ್ತಾರೆ. ಅಂದುಕೊಂಡ ಲೂಟಿ ಕೈ ಸೇರುತ್ತದಾ? ಹಾಗೊಮ್ಮೆ ಹಣ ಕೈಗೆ ಬಂದಮೇಲೆ ಏನೇನು ನಡೆಯಬಹುದು? ಅನ್ನೋದೆಲ್ಲಾ ಚಿತ್ರದಲ್ಲಿರುವ ಇಂಟರೆಸ್ಟಿಂಗ್ ವಿಚಾರ.
ಐದೂ ಜನರ ಹಿನ್ನೆಲೆಯ ಜೊತೆಗೆ ಯಾರಿಗೆ ಯಾವ ಕಾರಣಕ್ಕೆ ಹಣದ ಅವಶ್ಯಕತೆ ಇರುತ್ತದೆ ಅನ್ನೋದು ಕೂಡಾ ಹಂತ ಹಂತವಾಗಿ ಬಿಚ್ಚಿಕೊಳ್ಳುತ್ತದೆ. ʻʻಬಡವರಿಗೆ ಕಾಯಿಲೆ ಬರಬಾರದು. ಬಂದರೂ ಆಸ್ಪತ್ರೆಗೆ ಹೋಗಬಾರದುʼʼ ಅಂತಾ ತಾಯಿಯೊಬ್ಬಳು ಹೇಳುವಾಗ ಎಂಥವರಿಗಾದರೂ ಕರುಳು ಚುರುಕ್ಕೆನ್ನುತ್ತದೆ. ತಾಯಿಯ ಆಪರೇಷನ್ನಿಗೆಂದು ಸಹಾಯಕ್ಕೆ ಕೈ ಚಾಚಿದರೆ, ʻಅಷ್ಟೆಲ್ಲಾ ಖರ್ಚು ಮಾಡುಬ ಬದಲು ವೆಂಟಿಲೇಟರ್ ತೆಗೆಸಿಬಿಡು, ಸಲೀಸಾಗಿ ಜೀವ ಹೋಗುತ್ತದೆ. ಮುಂದಿನ ಕಾರ್ಯಕ್ಕೆ ಹಣ ಕೊಡ್ತೀನಿʼ ಎನ್ನುವ ಶ್ರೀಮಂರಿಕೆಯ ಧಿಮಾಕು, ಜೀವವನ್ನೂ ದುಡ್ಡಿನಲ್ಲಿ ಅಳೆಯುವ ಮನಸ್ಥಿತಿ ಮತ್ತೆ ಮತ್ತೆ ನೆನಪಾಗಿ ಕಾಡುವಂತಿದೆ.
ಯಾರಿಗೆ ಯಾರೂ ನಿಯತ್ತಾಗಿರೋದಿಲ್ಲ. ಅಸಲಿಗೆ ನಾಯಿಯನ್ನು ಕೂಡಾ ಜನ ಸುಮ್ಮನೇ ಸಾಕಲ್ಲ. ಹಾಗಂತ ಮಾಡಿದ ಅನ್ಯಾಯಗಳನ್ನು ಜೀರ್ಣಿಸಿಕೊಳ್ಳಲೂ ಸಾಧ್ಯವಿಲ್ಲ. ಇಲ್ಲಿ ಮಾಡಿದ ಕರ್ಮಕ್ಕೆ ಇಲ್ಲೇ ಪ್ರತಿಫಲ ಅನುಭವಿಸಬೇಕು.ʼʼ ಎನ್ನುವ ಹಗಲು ಸತ್ಯವನ್ನು ಎತ್ತಿಹಿಡಿಯುವ ಸಿನಿಮಾ ಇನ್ ಸ್ಟಂಟ್ ಕರ್ಮ.
ಯಶ್ ಶೆಟ್ಟಿ, ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಮಲ್ಲೇಶ್, ಹರಿ ಧನಂಜಯ, ಬಾಲ ರಾಜವಾಡಿ, ಪುನೀತ್, ರೂಪ ವರ್ಕಾಡಿ, ಸೋಮ್ ಸಿಂಗ್ ಮುಂತಾದವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐದು ಜನ ಹುಡುಗರಲ್ಲಿ ಎಲ್ಲರೂ ಉತ್ತಮವಾಗೇ ನಟಿಸಿದ್ದಾರೆ. ಕೆಂಡ ಮಲ್ಲೇಶನ ಕಾಮಿಡಿ ಇಷ್ಟವಾಗುತ್ತದೆ. ಕಣ್ಣುಗಳಲ್ಲೇ ನಟನೆ ತೋರುವ ಯಶ್ ಶೆಟ್ಟಿ ಹೆಚ್ಚು ಗಮನ ಸೆಳೆಯುತ್ತಾರೆ. ಗಟ್ಟಿಯಾದ ಕಂಟೆಂಟು ಹೊಂದಿರುವ ಚಿತ್ರವನ್ನು ಸರಳವಾಗಿ ಚಿತ್ರೀಕರಿಸಿದ್ದಾರೆ. ಭಾಸ್ಕರ್ ರೆಡ್ಡಿ ಕ್ಯಾಮೆರಾ, ಗ್ರಾಫಿಕ್ಸ್, ಸುರೇಶ್ ಆರ್ಮುಗಂ ಸಂಕಲನ ಕೆಲಸಗಳೆಲ್ಲಾ ಅಚ್ಚುಕಟ್ಟಾಗಿದೆ. ಈ ಚಿತ್ರವನ್ನು ಕಟ್ಟಿರುವ ನಿರ್ದೇಶಕ ಸಂದೀಪ್ ಮಹಾಂತೇಶ್ ಕತೆ ಹೇಳುವ ಧಾಟಿಯಲ್ಲೇ ಆವಿಷ್ಕಾರವಿದೆ. ಪರಸ್ಪರರ ಮಾತುಗಳಲ್ಲೇ ಸಿನಿಮಾ ಸಾಗಿದರೂ ಎಲ್ಲೂ ಎಳೆತ ಅನ್ನಿಸುವುದಿಲ್ಲ.
Comments