ಬಾಲಿವುಡ್ ಕಂಡ ಪ್ರತಿಭಾವಂತ ನಟರಲ್ಲೊಬ್ಬರು ಇರ್ಫಾನ್ ಖಾನ್. ಹಲವಾರು ಸಿನಿಮಾಗಳಲ್ಲಿ ತಮ್ಮ ಶ್ರೇಷ್ಠ ನಟನೆಯಿಂದ ಸಿನಿಪ್ರಿಯರ ಮನಗೆದ್ದಿದ್ದಾರೆ. ಅವರು ನ್ಯೂರೋಎಂಡೋಕ್ರೈನ್ ಟ್ಯೂಮರ್‍ನಿಂದ ಬಳಲುತ್ತಿದ್ದಾರೆ ಎಂದು ತಿಳಿದಾಗ ಅಭಿಮಾನಿಗಳು ಕಂಬನಿ ಮಿಡಿದಿದ್ದರು. ನಟ ಶೀಘ್ರ ಗುಣಮುಖರಾಗಲಿ ಎಂದು ಬಾಲಿವುಡ್ ಸೇರಿದಂತೆ ಹಿತೈಷಿಗಳೆಲ್ಲರೂ ಹಾರೈಸಿದ್ದರು. ಚಿಕಿತ್ಸೆಗೆಂದು ಕಳೆದ ವರ್ಷ ಲಂಡನ್‍ಗೆ ತೆರಳಿದ್ದ ಅವರೀಗ ಭಾರತಕ್ಕೆ ಮರಳಿದ್ದಾರೆ. ಇರ್ಫಾನ್‍ಗೆ ‘ಪಾನ್ ಸಿಂಗ್ ತೋಮರ್’ ನಿರ್ದೇಶಿಸಿದ್ದ ತಿಗ್ಮಾನ್ಶು ಧುಲಿಯಾ ತಮ್ಮ ಹೊಸ ಚಿತ್ರಕ್ಕೆ ನಟ ಶೀಘ್ರವೇ ಬಣ್ಣ ಹಚ್ಚಲಿದ್ದಾರೆ ಎಂದಿದ್ದಾರೆ.
“ಇರ್ಫಾನ್ ಚಿಕಿತ್ಸೆ ಮುಗಿಸಿಕೊಂಡು ಭಾರತಕ್ಕೆ ಮರಳಿದ್ದಾರೆ. ‘ಹಿಂದಿ ಮೀಡಿಯಂ’ ಫ್ರಾಂಚೈಸ್ ಚಿತ್ರವನ್ನು ಅತಿ ಶೀಘ್ರದಲ್ಲೇ ಆರಂಭಿಸಲಿದ್ದೇವೆ. ಇರ್ಫಾನ್ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ” ಎಂದಿದ್ದಾರೆ ತಿಗ್ಮಾನ್ಶು. ಈ ಚಿತ್ರವಲ್ಲದೆ ಇರ್ಫಾನ್‍ಗಾಗಿ ತಾವು ಮತ್ತೊಂದು ಚಿತ್ರಕಥೆ ಮಾಡುತ್ತಿರುವುದಾಗಿಯೂ ಅವರು ಹೇಳಿದ್ದಾರೆ. ಇರ್ಫಾನ್ ಚಿಕಿತ್ಸೆಗೆಂದು ಕಳೆದ ವರ್ಷ ಲಂಡನ್‍ಗೆ ತೆರಳಿದ್ದರು. ಆನಂತರ ಇರ್ಫಾನ್‍ರ ‘ಕಾರ್ವಾ’ ಹಿಂದಿ ಸಿನಿಮಾ ತೆರೆಕಂಡಿತ್ತು. ಮಲಯಾಳಂ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ಈ ಚಿತ್ರದೊಂದಿಗೆ ಬಾಲಿವುಡ್ ಪ್ರವೇಶಿಸಿದ್ದರು. ಇದೀಗ ಇರ್ಫಾನ್ ಗುಣಮುಖರಾಗಿದ್ದು, ಮತ್ತೆ ಕ್ಯಾಮರಾ ಎದುರಿಸಲು ಸಜ್ಜಾಗಿದ್ದಾರೆ. ಅಲ್ಲಿಗೆ ಈ ವರ್ಷ ಅವರ ಒಂದೆರೆಡು ಸಿನಿಮಾಗಳು ತೆರೆಕಾಣುವುದು ನಿಶ್ಚಿತ ಎನ್ನಲಾಗುತ್ತಿದೆ.
No Comment! Be the first one.