ಬಾಲಿವುಡ್ ಕಂಡ ಅಪ್ಪಟ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್. ಚಿತ್ರನಿರ್ದೇಶಕರು ಅವರಿಗೆಂದೇ ಚಿತ್ರಕಥೆ ಹೆಣೆಯುತ್ತಿದ್ದುದು ಹೌದು. ಪವರ್ಹೌಸ್ ಟ್ಯಾಲೆಂಟ್ ಎಂದೇ ಗುರುತಿಸಿಕೊಳ್ಳುವ ಇರ್ಫಾನ್ ಹಾಲಿವುಡ್ನಲ್ಲೂ ಛಾಪು ಮೂಡಿಸಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವ ಹೊತ್ತಿನಲ್ಲಿ ಅಭಿಮಾನಿಗಳಿಗೆ ಇರ್ಫಾನ್ ಕಡೆಯಿಂದ ಒಂದು ಶಾಕಿಂಗ್ ಸುದ್ದಿ ಬಂದಿತ್ತು. ನ್ಯೂರೋಎಂಡೋಕ್ರೈನ್ ಟ್ಯೂಮರ್ ಎನ್ನುವ ವಿಚಿತ್ರ ಕಾಯಿಲೆಯಿಂದ ಇರ್ಫಾನ್ ಬಳಲುತ್ತಿದ್ದಾರೆ ಎಂದು ವೈದ್ಯರು ಡಯಾಗ್ನೈಸ್ ಮಾಡಿದ್ದರು. ಇದೊಂದು ರೀತಿಯ ಕ್ಯಾನ್ಸರ್. ಇದರಿಂದ ಆತಂಕಕ್ಕಿಡಾಗಿದ್ದ ಇರ್ಫಾನ್ ಅಭಿಮಾನಿಗಳು ನಟ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದರು.
ವೈದ್ಯರ ಸಲಹೆಯಂತೆ ಇರ್ಫಾನ್ ಚಿಕಿತ್ಸೆಗಾಗಿ ಲಂಡನ್ಗೆ ತೆರಳಿದ್ದರು. ಎಂಟು ತಿಂಗಳ ಹಿಂದೆ ಲಂಡನ್ಗೆ ತೆರೆಳಿದ್ದ ಇರ್ಫಾನ್ ಚಿಕಿತ್ಸೆ ಕುರಿತಂತೆ ಹೆಚ್ಚಿನ ಅಪ್ಡೇಟ್ಸ್ ಇರಲಿಲ್ಲ. ಖುಷಿಯ ಸಂಗತಿ ಎನ್ನುವಂತೆ ಅವರೀಗ ಮುಂಬಯಿಗೆ ಹಿಂದಿರುಗಿದ್ದಾರೆ. ಮುಂಬಯಿ ಏರ್ಪೋರ್ಟ್ನಲ್ಲಿ ಅಭಿಮಾನಿಗಳು ಸೆರೆಹಿಡಿದ ಇರ್ಫಾನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಲೆಗೆ ಟೊಪ್ಪಿ ತೊಟ್ಟು ಸ್ಕಾರ್ಫ್ ಹಾಕಿಕೊಂಡು ಏರ್ಪೋರ್ಟ್ನಿಂದ ಇರ್ಫಾನ್ ಹೊರನಡೆಯುತ್ತಿರುವ ಫೋಟೋಗಳಿವು. ಇರ್ಫಾನ್ ಈಗ ಗುಣಮುಖರಾಗಿದ್ದು, ಚಿತ್ರೀಕರಣಕ್ಕೆ ಮರಳುವ ಸೂಚನೆ ಸಿಕ್ಕಿದೆ. ಸದ್ಯದಲ್ಲೇ ಅವರು ’ಹಿಂದಿ ಮೀಡಿಯಂ೨’ ಹಿಂದಿ ಚಿತ್ರಕ್ಕಾಗಿ ಕ್ಯಾಮರಾ ಎದುರಿಸಲಿದ್ದಾರೆ ಎನ್ನುವ ಸುದ್ದಿಯಿದೆ. ನಟನ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
No Comment! Be the first one.