ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ತಿಲಕ್ ಶೇಖರ್ ಕೂಡಾ ನಾಯಕ. ಇದುವರೆಗೂ ವಿಲನ್ ರೋಲ್ಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಾ ಇತ್ತೀಚೆಗೆ ಹೀರೋ ಆಗಿಯೂ ನಟಿಸಲಾರಂಭಿಸಿರೋ ತಿಲಕ್ ಈ ಚಿತ್ರದಲ್ಲಿ ಈ ಜನರೇಷನ್ನಿನ ಹುಡುಗರ ಮನೋಭೂಮಿಕೆಯ ಪ್ರಾತಿನಿಧಿಕ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಸಿನಿಮಾ ತನ್ನ ಪಾಲಿಗೆ ತುಂಬಾ ಸ್ಪೆಷಲ್ ಎಂಬ ಖುಷಿ ಹೊಂದಿರೋ ತಿಲಕ್ ಅಷ್ಟೇ ಭಿನ್ನವಾದ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ.
ಇರುವುದೆಲ್ಲವ ಬಿಟ್ಟು ಮತ್ತೇನೋ ಬಯಸಲು ಹೋಗಿ ಇರುವೆ ಬಿಟ್ಟುಕೊಳ್ಳುವ ಕಥೆ ಹೊಂದಿರೋ ಈ ಸಿನಿಮಾದಲ್ಲಿ ತಿಲಕ್ ದೇವ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ಕಾರ್ಪೋರೇಟ್ ಜಗತ್ತಿನ ಭಾಗವಾಗಿರೋ ಪಾತ್ರ. ಇದರ ಕಣ್ಣಲ್ಲಿ ಸಂಬಂಧಗಳು ಹೇಗೆ ಕಾಣಿಸುತ್ತವೆ ಎಂಬುದೂ ಕೂಡಾ ಈ ಚಿತ್ರದ ವಿಶೇಷತೆಗಳಲ್ಲೊಂದು. ಮದುವೆಯಂಥಾ ಬಂಧಗಳೆಲ್ಲ ವೇಸ್ಟ್ ಆಫ್ ಟೈಮ್ ಎಂಬಂಥಾ ಮನಸ್ಥಿತಿಯ ದೇವ್ ಆಗಿ ನಟಿಸಿರೋ ತಿಲಕ್ ಅವರಿಗೆ ಈ ಸಿನೆಮಾ ತಮ್ಮ ವೃತ್ತಿ ಬದುಕಲ್ಲೊಂದು ಮಹತ್ವದ ತಿರುವು ನೀಡಲಿದೆ ಎಂಬ ಭರವಸೆಯಿದೆ.
ಗಂಡಹೆಂಡತಿ ಚಿತ್ರದ ಮೂಲಕ ನಟನಾದ ತಿಲಕ್ ಅಪ್ಪಟ ಬೆಂಗಳೂರಿನ ಹುಡುಗ. ಇವರ ನಟನಾ ಕೌಶಲ್ಯದ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಹೀರೋ ಆಗೋದಕ್ಕಿಂತ ಪರಿಪೂರ್ಣ ನಟನಾಗಿ ರೂಪುಗೊಳ್ಳುವುದೇ ಮುಖ್ಯ ಎಂಬ ಮನಸ್ಥಿತಿಯ ತಿಲಕ್ ಕನ್ನಡ ಪ್ರೇಕ್ಷಕರಲ್ಲಿ ನೆಗೆಟಿವ್ ರೋಲ್ಗಳಲ್ಲಿಯೇ ರಿಜಿಸ್ಟರ್ ಆಗಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ಯಾವ ಶೇಡ್ ಇದೆ ಎಂಬುದು ಇದೇ ಶುಕ್ರವಾರ ಜಾಹೀರಾಗಲಿದೆ.
ಈ ಸಿನಿಮಾ ಆರಂಭಿಸುವಾಗ ಪ್ರತೀ ಪಾತ್ರಗಳಿಗೂ ಅಳೆದೂ ತೂಗಿಯೇ ನಟ ನಟಿಯರನ್ನು ಕಾಂತ ಕನ್ನಲ್ಲಿ ಆಯ್ಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ದೇವ್ ಪಾತ್ರಕ್ಕೆ ತಿಲಕ್ ಅವರೇ ಆಗಬೇಕೆಂಬ ಇಚ್ಚೆಯಿಂದಲೇ ಅವರನ್ನು ಆಯ್ಕೆ ಮಾಡಿದ್ದರಂತೆ.
#
No Comment! Be the first one.