ಕಾಂತ ಕನ್ನಲ್ಲಿ ನಿರ್ದೇಶನದ `ಇರುವುದೆಲ್ಲವ ಬಿಟ್ಟು’ ಚಿತ್ರವೀಗ ಎಲ್ಲೆಡೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಸಾಲೊಂದನ್ನು ಶೀರ್ಷಿಕೆಯಾಗಿಟ್ಟುಕೊಂಡಿರೋ ಈ ಚಿತ್ರದ ಕಥೆಯ ಬಗ್ಗೆ ಜನರಲ್ಲೊಂದು ಕುತೂಹಲವೂ ಹುಟ್ಟಿಕೊಂಡಿದೆ. ಕಥಾ ಎಳೆ ಏನಿರಬಹುದು ಎಂಬುದರ ಸಣ್ಣ ಸುಳಿವನ್ನಷ್ಟೇ ನಿರ್ದೇಶಕ ಕಾಂತ ಬಿಟ್ಟುಕೊಟ್ಟಿದ್ದಾರೆ.
ಈ ಹಿಂದೆ ಜಲ್ಸಾ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಕಾಂತ ಕನ್ನಲ್ಲಿ ಕನಸಿಟ್ಟು ಸೃಷ್ಟಿಸಿರುವ ಕಲಾಕೃತಿಯಿದು. ಬಹಳಷ್ಟು ವರ್ಷಗಳ ಹಿಂದೆಯೇ ಈ ಕಥೆಯನ್ನು ರೆಡಿ ಮಾಡಿಟ್ಟುಕೊಂಡು ತಾನು ಈ ಕಥೆಯನ್ನೇ ಮೊದಲು ಚಿತ್ರವಾಗಿಸಬೇಕು ಅಂದುಕೊಂಡಿದ್ದವರು ಕಾಂತ. ಆದರೆ ಇದು ಸಂಕೀರ್ಣವಾದ ಕಥಾ ಹಂದರ ಹೊಂದಿದ್ದರಿಂದ, ಸಿನಿಮಾವನ್ನು ಬೇರೆಯದ್ದೇ ರೀತಿಯಲ್ಲಿ ವ್ಯಾಮೋಹಿಸುವ ನಿರ್ಮಾಪಕರ ಅಗತ್ಯವೂ ಇದ್ದುದರಿಂದಾಗಿ ಈ ಕಥೆ ಹಾಗೆಯೇ ಉಳಿದುಕೊಂಡಿತ್ತಂತೆ.
ಆದರೆ, ಅದಾಗಲೇ ಒಂದು ಚಿತ್ರ ನಿರ್ಮಾಣ ಮಾಡಿ ಸರಿಯಾಗಿಯೇ ಏಟು ತಿಂದಿದ್ದ ನಿರ್ಮಾಪಕ ದೇವರಾಜ್ ಬಹಳಷ್ಟು ಇಷ್ಟಪಟ್ಟು ಈ ಚಿತ್ರವನ್ನು ಆರಂಭಿಸಲು ಮುಂದಾಗಿದ್ದರು. ಖರ್ಚು ಮಾಡೋ ಕಾಸು ಮತ್ತು ಅದರಿಂದಾಗುವ ಗಳಿಕೆಗಿಂತಲೂ ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿಗಾಗಿ ಹಂಬಲಿಸುತ್ತಿದ್ದ ದೇವರಾಜ್ ಅವರ ಪ್ರೀತಿಯ ಫಲವಾಗಿಯೇ ಈ ಚಿತ್ರ ಬಿಡುಗಡೆಗೆ ರೆಡಿಯಾಗಿ ನಿಂತಿದೆ.
ತನಗೆ ಸಿಕ್ಕ ಸಕಲ ಭಾಗ್ಯಗಳಾಚೆಗೆ ಇರದಿರೋದನ್ನೇನೋ ಅರಸಿ ಹೊರಡೋದು ಮನುಷ್ಯ ಮನಸ್ಸಿನ ಲಕ್ಷಣ. ಆದರೆ ಹೆಚ್ಚಿನ ಸಂದರ್ಭದಲ್ಲಿ ದೂರದಿಂದ ಏನೋ ಇದೆ ಅಂದುಕೊಂಡಿದ್ದು ಏನೇನೋ ಆಗಿರೋದಿಲ್ಲ. ನೋವಂದುಕೊಂಡಿದ್ದು ನೋವಲ್ಲ, ಸುಖವಂದುಕೊಂಡಿದ್ದು ಸುಖವೂ ಅಲ್ಲ… ಇಂಥಾ ನಾನಾ ಸೂಕ್ಷ್ಮ ಎಳೆಗಳನ್ನು ಹೊಂದಿರೋ ಈ ಚಿತ್ರ ಅನಾಥನಾಗಿ ಬೆಳೆದು ಸುಸ್ಥಿತಿಗೆ ಬಂದರೂ ತಾನೊಂದು ಕುಟುಂಬ ಕಟ್ಟಿಕೊಂಡು ಖುಷಿಯಾಗಿರಬೇಕೆಂದು ಹೊರಡೋ ಹುಡುಗನ ಕಥೆ. ಈತ ಇರುವುದನ್ನೆಲ್ಲ ಬಿಟ್ಟು ಇರದುದರೆಡೆಗೆ ಹೊರಟಾಗ, ಎಲ್ಲಾ ಇದ್ದೂ ಏನೂ ಇಲ್ಲದ ಮನ ಮಿಡಿಯುವ, ಕಾಡುವ ಕಥನ ತೆರೆದುಕೊಳ್ಳುತ್ತಾ ಸಾಗುತ್ತದೆ.
ಒಟ್ಟಾರೆಯಾಗಿ ಎಂಥವರನ್ನೂ ಆವರಿಸಿಕೊಳ್ಳುವ, ಹೊಸತೇನನ್ನೋ ಸಾಕ್ಷಾತ್ಕಾರವಾಗಿಸುವಂಥಾ ಈ ಚಿತ್ರ ಮನೋರಂಜನೆಯ ಉದ್ದೇಶವನ್ನೇ ಪ್ರಧಾನವಾಗಿಸಿಕೊಂಡಿದೆ. ಬೋಧನೆಯಿಂದ ಏನೂ ಉಪಯೋಗ ಇಲ್ಲ ಎಂಬುದನ್ನರಿತಿರುವ ನಿರ್ದೇಶಕರು ರಂಜನೆಯನ್ನು ಗಮನದಲ್ಲಿಟ್ಟುಕೊಂಡೇ ಗಂಭೀರವಾದೊಂದು ಕಥೆ ಹೇಳಿದ್ದಾರಂತೆ.
https://www.youtube.com/watch?v=9MYO5g0JHi4&feature=youtu.be #