ಮೊದಲ ಚಿತ್ರ ಜಲ್ಸಾ ಮೂಲಕವೇ ಭರವಸೆ ಹುಟ್ಟಿಸಿದ್ದ ಯುವ ನಿರ್ದೇಶಕ ಕಾಂತ ಕನ್ನಲ್ಲಿ. ಇವರು ನಿರ್ದೇಶನ ಮಾಡಿರುವ ಎರಡನೇ ಚಿತ್ರ ಇರುವುದೆಲ್ಲವ ಬಿಟ್ಟು… ಬಣ್ಣದ ಲೋಕದ ಕನಸುಗಳನ್ನು ಪುಟ್ಟ ಹಳ್ಳಿಯೊಂದರಲ್ಲಿ ಕಣ್ತುಂಬಿಕೊಂಡಿದ್ದ ಕಾಂತ ಚಿತ್ರರಂಗದ ಬಗ್ಗೆ ನಿರ್ಧಿಷ್ಟವಾಗಿ ಕನಸು ಕಾಣಲೂ ಸಾಧ್ಯವಾಗದಂಥಾ ಹಳ್ಳಿಯಿಂದ ಬಂದವರು. ಆದರೆ ಮನೆಯೊಳಗಿನ ಕಲೆಯ ವಾತಾವರಣದಿಂದ ಆ ನಂಟನ್ನು ಪೊರೆದುಕೊಂಡು ಬಂದಿದ್ದ ಕಾಂತ ಕನ್ನಲ್ಲಿ ನಿರ್ದೇಶಕನಾಗಿ ಹೊರ ಹೊಮ್ಮಿದ್ದರ ಹಿಂದೆ ಬಹು ದೂರದ ಪ್ರಯಾಣವೊಂದಿದೆ!
ಬೆಂಗಳೂರಿಗೆ ಹತ್ತಿರದಲ್ಲೇ ಇದ್ದಾರೂ ಹಳ್ಳಿಗಾಡಿನ ಸ್ವರೂಪವನ್ನೂ ಇನ್ನೂ ಇಟ್ಟುಕೊಂಡಿರೋ ಮಾಗಡಿ ಸಮೀಪದ ಕನ್ನಲ್ಲಿ ಕಾಂತಾರ ಊರು. ತಂದೆ ಶಿವಣ್ಣ ಹರಿಕಥೆಯಲ್ಲಿ ಪ್ರಸಿದ್ಧರಾಗಿದ್ದವರು. ನಾಟಕಗಳಲ್ಲಿಯೂ ಅಭಿನಯಿಸುತ್ತಿದ್ದ ತಂದೆಯ ಪ್ರಭಾವ ಬಾಲ್ಯದಿಂದಲೇ ಕಾಂತಾರ ಮೇಲಾಗಿತ್ತು. ತಂದೆಯ ಜೊತೆ ಹರಿಕಥೆಗಳಿಗೆ ಹಾರ್ಮೋನಿಯಂ ನುಡಿಸಲು ಹೋಗುತ್ತಿದ್ದ ಕಾಂತಾರ ಪಾಲಿಗೆ ಅದುವೇ ಕಲಾ ಜಗತ್ತಿನ ಮೊದಲ ಹೆಜ್ಜೆ.
ಕಾಂತಾ ಅವರಿಗೆ ಆರಂಭದಿಂದಲೂ ಸಿನಿಮಾ ಹಾಡುಗಳೆಂದರೆ ವಿಪರೀತ ಇಷ್ಟ. ಶಾಲಾ ದಿನಗಳಲ್ಲಿಯೇ ಸಿಗುತ್ತಿದ್ದ ಚಿಲ್ಲರೆ ಕಾಸನ್ನು ಕೂಡಿಟ್ಟು ಹೊಸಾ ಕ್ಯಾಸೆಟ್ಟುಗಳು ಬಿಡುಗಡೆಯಾದೇಟಿಗೆ ಖರೀದಿಸಿ ಕೇಳೋ ಕ್ರೇಜ಼ು ಕಾಂತಾಗಿತ್ತು. ಹೀಗೆ ಸಿನಿಮಾ ಹಾಡು ಕೇಳುತ್ತಲೇ ತಾನಾ ಹಾಡು ಬರೆಯಬೇಕೆಂದುಕೊಳ್ಳುತ್ತಿದ್ದ ಕಾಂತಾ ಕಾಲೇಜು ದಿನಗಳಲ್ಲಿ ಪ್ರಸಿದ್ಧ ಹಾಡಿಗೆ ತಾವೇ ಪರ್ಯಾಯ ಸಾಹಿತ್ಯ ಬರೆಯುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದರು. ಕಾಲೇಜಿನಲ್ಲಿ ಸ್ನೇಹಿತರನ್ನು ರೇಗಿಸಲು ಅಚಿಟಿಸಿಕೊಂಡಿದ್ದ ಈ ಗುಂಗು ಕ್ರಮೇಣ ಗೀತರಚನೆಗಾರನಾಗಬೆಂಕೆಂಬ ಕನಸು ಕಾಣಲೂ ಪ್ರೇರೇಪಿಸಿತ್ತು.
ಈ ನಡುವೆಯೇ ಓದು ಮುಗಿಸಿಕೊಂಡು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಲಾರಂಭಿಸಿದ್ದ ಕಾಂತಾ ಅವರಿಗೆ ಹೇಗಾದರೂ ಸಿನಿಮಾ ಜಗತ್ತಿಗೆ ಎಂಟ್ರಿ ಕೊಡಬೇಕೆಂಬ ವಾಂಛೆ ತೀವ್ರವಾಗಿತ್ತು. ಅದೇನೇ ಕೆಲಸವಿದ್ದರೂ ಪ್ರತೀ ಶುಕ್ರವಾರ ಸಿನಿಮಾ ನೋಡಿಯೇ ತೀರುತ್ತಿದ್ದ ಕಾಂತಾ ಹೊಸಬರಿಗೆ ಅವಕಾಶವಿದೆ ಎಂಬ ಸಿನಿಮಾ ಜಾಹೀರಾತೊಂದು ಪತ್ರಿಕೆಯಲ್ಲಿ ಕಣ್ಣಿಗೆ ಬಿದ್ದಾಕ್ಷಣವೇ ಸಿಈದಾ ಗಾಂಧಿನಗರಕ್ಕೆ ತೆರಳಿದರಾದರೂ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ.
ನಂತರ ಕಾಂತಾ ಅವೆನ್ಯೂ ರಸ್ತೆಯ ಜ಼ೆರಾಕ್ಸ್ ಅಂಗಡಿಯೊಂದರಲ್ಲಿ ಕೆಲಸ ಶುರು ಮಾಡಿಕೊಂಡು ಆ ಕಾಲದಲ್ಲಿಯೂ ಸಿನಿಮಾ ಎಂಟ್ರಿಗಾಗಿ ಪ್ರಯತ್ನಿಸುತ್ತಲೇ ಇದ್ದರು. ಈ ಜ಼ೆರಾಕ್ಸ್ ಅಂಗಡಿ ಕೆಲಸದ ಸಂದರ್ಭದಲ್ಲಿಯೇ ತಾನು ಎಸ್ ನಾರಾಯಣ್ ಅವರಿಗೆ ತುಂಬಾ ಕ್ಲೋಸು, ಅವರ ಬಳಿಯೇ ಕೆಲಸಕ್ಕೆ ಸೇರಿಸುತ್ತೇನೆ ಅಂತೆಲ್ಲ ಒಬ್ಬ ಆಸಾಮಿ ಆಸೆ ಹುಟ್ಟಿಸಿದ್ದನಂತೆ. ಆದರೆ ಅದೂ ಕೂಡಾ ಫಲಿಸಲಿಲ್ಲ. ಹೀಗೆ ಒಂದಷ್ಟು ವರ್ಷ ಕಳೆದ ಮೇಲೆ ಸಿಕ್ಕ ಫ್ಯಾಮಿಲಿ ಫ್ರೆಂಡ್ ಒಬ್ಬರು ಕಡೆಗೂ ಕಾಂತಾರನ್ನು ನಿರ್ದೇಶಕ ಶರಣ್ ಕಬ್ಬೂರ್ ಅವರ ಬಳಿ ಕರೆದುಕೊಂಡು ಹೋಗಿದ್ದರು. ಕಾಂತಾ ಪಾಲಿಗೆ ಅವರ ಕನಸಿನ ಬಾಗಿಲು ತೆರೆದುಕೊಂಡಿದ್ದು ಆ ಘಳಿಗೆಯಿಂದಲೇ.
ಕುಳ್ಳರ ಲೋಕ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ಶರಣ್ ಆ ನಂತರ ಡಾ ಬಿ ಆರ್ ಅಂಬೇಡ್ಕರ್ ಬಗೆಗಿನ ಚಿತ್ರ ಆರಂಭಿಸಿದ್ದರು. ಅದರಲ್ಲಿ ಅಸಿಸ್ಟೆಂಟ್ ಆಗಿರೋ ಅವಕಾಶವನ್ನು ಕಾಂತಾ ಅವರಿಗೆ ಕೊಟ್ಟಿದ್ದರು. ಇದಕ್ಕೆ ಪ್ರೊಡ್ಯೂಸರ್ ಆಗಿದ್ದವರು ಕಾಂತಾ ಅವರ ತಂದೆಯ ಸ್ನೇಹಿತ. ಅವರೂ ಕೂಡಾ ಚಿತ್ರರಂಗದ ಬಗ್ಗೆ ನೊಂದುಕೊಂಡು ಈ ಸಹವಾಸವೇ ಬೇಡ ಅಂತ ಕಾಂತಾರನ್ನು ಬೇರೆ ಕೆಲಸದತ್ತ ಕಳಿಸಿದ್ದರಂತೆ. ಆ ಹಂತದಲ್ಲಿ ಮತ್ತೆ ಬೇರೆ ಬ್ಯುಸಿನೆಸ್ ಶುರು ಮಾಡಿಕೊಂಡ ಕಾಂತಾ ನಿರ್ದೇಶಕನಾಗೋ ಕನಸನ್ನು ಹತ್ತಿಕ್ಕಲಾರದೆ ಹೇಗೋ ನಿರ್ದೇಶಕ ಎಂ ಡಿ ಶ್ರೀಧರ್ ಅವರ ಗರಡಿ ಸೇರಿಕೊಂಡಿದ್ದರು. ಅವರ ಬದುಕಿನ ಅಸಲೀ ಅಧ್ಯಾಯ ಶುರುವಾಗಿದ್ದು ಆವಾಗಿನಿಂದಲೇ.
ಎಂ ಡಿ ಶ್ರೀಧರ್ ಅವರ ಜೊತೆ ಜಾಲಿಡೇಸ್, ಪೊರ್ಕಿ ಮುಂತಾದ ಚಿತ್ರಗಳಿಗೆ ಕೆಲಸ ಮಾಡೋ ಮೂಲಕ ಕಾಂತಾ ನಿರ್ದೇಶನದ ಪಟ್ಟುಗಳನ್ನು ಅರಿತುಕೊಳ್ಳುವಂತಾಗಿತ್ತು. ಒಂದು ಅಚ್ಚುಕಟ್ಟಾದ ಚಿತ್ರ ರೂಪಿಸಲು ಏನೇನು ಬೇಕೆಂಬ ವಿಚಾರವೂ ಕಾಂತಾಗೆ ಪಕ್ಕಾ ಆಗಿತ್ತು. ಆ ನಂತರದಲ್ಲಿ ಗೀತರಚನೆ ಮಾಡೋ ಹಳೇ ಕನಸಿಗೆ ಪಾಲೀಶು ಹಾಕಿಕೊಂಡ ಕಾಂತಾ ಇಂದ್ರಜಿತ್ ಲಂಕೇಶ್ ನಿರ್ದೇಶನದ ಹುಡುಗ ಹುಡುಗಿ ಚಿತ್ರಕ್ಕೆ ಎರಡು ಹಾಡು ಬರೆದಿದ್ದರು. ನಂತರ ಬುಲೆಟ್ ಪ್ರಕಾಶ್ ಐತಲಕ್ಕಡಿ ಚಿತ್ರದಲ್ಲೊಂದು ಹಾಡು ಬರೆಯಲು ಸಾಧು ಕೋಕಿಲಾ ಅವಕಾಶ ಮಾಡಿಕೊಟ್ಟಿದ್ದರು. ಇದಾದ ನಂತರ ಶಶಾಂಕ್ ಅವರ ಜೊತೆ ಬಚ್ಚನ್, ಕೃಷ್ಣ ಲೀಲಾ ಚಿತ್ರಗಳಿಗೂ ಕೆಲಸ ಮಾಡಿದ ಕಾಂತಾಗೆ ತಾನು ಮಾಡಿದರೆ ನಿರ್ದೇಶನವನ್ನೇ ಮಾಡಬೇಕೆಂಬುದರ ಸಾಕ್ಷಾತ್ಕಾರವೂ ಆಗಿತ್ತು.
ಕಾಂತಾ ಅವರು ಮುಂಗಾರುಮಳೆ೨ ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿದ್ದ ಕಾಲದಲ್ಲಿಯೇ ಪರಿಚಿತರಾದವರೊಬ್ಬರು ನೀವೇ ಸಿನಿಮಾ ನಿರ್ದೇಶನ ಮಾಡಿ ಅಂತ ಹೇಳಿದ್ದಲ್ಲದೇ ಹಣ ಹೂಡಲೂ ತಯಾರಾಗಿ ನಿಂತಿದ್ದರಂತೆ. ಅದರ ಫಲವಾಗಿ ಶುರುವಾದದ್ದು ಜಲ್ಸಾ. ಇದೀಗ ಕಾಂತಾ ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಮತ್ತೆ ನಿರೀಕ್ಷೆ ಹುಟ್ಟಿಸಿದ್ದಾರೆ. ಹಣ ಹೂಡೋ ನಿರ್ಮಾಪಕರಿಗೆ ಚೂರೂ ತೊಂದರೆಯಾಗಕೂಡದೆಂಬ ಮನಸ್ಥಿತಿಯ ಕಾಂತಾಗೆ ಸಿನಿಮಾ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ಅಂಥಾ ಗಾಢವಾದ ಸಿನಿಮಾ ವ್ಯಾಮೋಹದಿಂದಲೇ ಅವರು ರೂಪಿಸಿರುವ ಇರುವುದೆಲ್ಲವ ಬಿಟ್ಟು ಚಿತ್ರವೀಗ ತೆರೆ ಕಾಣಲು ತಯಾರಾಗಿದೆ.
https://www.youtube.com/watch?v=RgcD826Cg-M
https://www.youtube.com/watch?v=t78yMnRQgOw&t=133s #
No Comment! Be the first one.