ಬಹುಭಾಷಾ ನಟಿ ಇಶಾ ಕೊಪ್ಪೀಕರ್ ಸೂಪರ್ಸ್ಟಾರ್ ರಜನೀಕಾಂತ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಅವರೇನೂ ಕಾಲಿವುಡ್ಗೆ ಹೊಸಬರಲ್ಲ. 90ರ ದಶಕದಲ್ಲಿ ಎನ್ ಸ್ವಾಸ ಕಾಟ್ರೆ, ನೆಂಜಿನಿಲೆ, ನರಸಿಂಹ, ಕಾದಲ್ ಕವಿತೈ ತಮಿಳು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಇದೇ ಅವಧಿಯಲ್ಲಿ ಅವರು ಸೂರ್ಯವಂಶ, ಓ ನನ್ನ ನಲ್ಲೆ ಸೇರಿದಂತೆ ಕೆಲವು ಕನ್ನಡ ಚಿತ್ರಗಳಲ್ಲೂ ನಟಿಸಿದ್ದರು. ನಂತರ ಬಾಲಿವುಡ್ಗೆ ತೆರಳಿದ ಅವರು ಇದೀಗ ಮತ್ತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಶಿವಕಾರ್ತಿಕೇಯನ್ ಹೀರೋ ಆಗಿ ನಟಿಸುತ್ತಿರುವ ಸೈಂಟಿಫಿಕ್ ಫಿಕ್ಷನ್ ಚಿತ್ರದ ನಾಯಕಿಯಾಗಿ ಇಶಾ ಆಯ್ಕೆಯಾಗಿದ್ದಾರೆ.
ಮೊನ್ನೆ ಈ ಚಿತ್ರ ಸೆಟ್ಟೇರುವ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಅವರು ಮಾತನಾಡಿರುವುದು ರಜನೀಕಾಂತ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಸಂದರ್ಶನದಲ್ಲಿ ಇಶಾ ತಮ್ಮ ಚಿತ್ರದ ಹೀರೋನನ್ನು ಹೊಗಳುವ ಭರದಲ್ಲಿ, ಶಿವಕಾರ್ತಿಕೇಯನ್ರನ್ನು ಸೂಪರ್ಸ್ಟಾರ್ ರಜನೀಕಾಂತ್ಗೆ ಹೋಲಿಕೆ ಮಾಡಿ ಮಾತನಾಡಿದ್ದರು. ಇದು ರಜನೀ ಅಭಿಮಾನಿಗಳನ್ನು ಕೆರಳಿಸಿದ್ದು, ಅವರಿಂದ ಇಶಾ ಟ್ರಾಲ್ಗೆ ಒಳಗಾಗಿದ್ದಾರೆ. ಮತ್ತೊಂದೆಡೆ ಕಾಲಿವುಡ್ನ ಮತ್ತೊಬ್ಬ ಜನಪ್ರಿಯ ನಟ ಅಜಿತ್ ಅಭಿಮಾನಿಗಳ ಕೋಪಕ್ಕೂ ಅವರು ಗುರಿಯಾಗಿದ್ದಾರೆ. ದಶಕದ ಹಿಂದೆ ಅಜಿತ್ ನನಗೆ ಇಷ್ಟವಾಗುತ್ತಿದ್ದರು.. ಎನ್ನುವ ಅವರ ಮಾತಿನ ಧಾಟಿ ವಿವಾದಕ್ಕೆ ಗುರಿಯಾಗಿದೆ. ಒಂದೆಡೆ ರಜನೀ ಅಭಿಮಾನಿಗಳು, ಮತ್ತೊಂದೆಡೆ ಅಜಿತ್ ಅಭಿಮಾನಿಗಳು ಇಶಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
No Comment! Be the first one.