ಧನುಷ್ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ಗುರುತಿಸಿಕೊಂಡಿರುವ ಧನುಷ್ ಬೇರೆ ನಟರು ಮುಟ್ಟದ ಪಾತ್ರಗಳನ್ನೂ ಸಲೀಸಾಗಿ ಒಪ್ಪಿಕೊಂಡು ನಟಿಸುತ್ತಾ ಬಂದಿದ್ದಾರೆ.
ಜನಸಾಮಾನ್ಯರ ಪ್ರತಿನಿಧಿಯಂತಾ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಧನುಷ್ ಲೋಕಲ್ ಕ್ಯಾರೆಕ್ಟರುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ವಡ ಚೆನ್ನೈ, ಅಸುರನ್, ಕರ್ಣನ್ ಸಿನಿಮಾಗಳ ಪಾತ್ರಗಳು ಧನುಷ್ಗೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸಂಪಾದಿಸಿಕೊಟ್ಟಿವೆ. ಧನುಷ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ಕಥೆ, ರೋಲುಗಳು ನಿಜಕ್ಕೂ ಡಿಫರೆಂಟಾಗಿರುತ್ತವೆ. ಸ್ವತಃ ನಿರ್ಮಾಪಕರೂ ಆಗಿರುವ ಧನುಷ್ ಅಪರೂಪದ ಕಥೆಗಳನ್ನು ತೆರೆಗೆ ತರುತ್ತಾ ಬರುತ್ತಿದ್ದಾರೆ.
ಹಾಗೆಂದು ಧನುಷ್ ಮಾಡಿರುವ ಎಲ್ಲ ಸಿನಿಮಾಗಳೂ ಅದ್ಭುತ ಅಂಥಾ ಹೇಳೋಕಾಗಲ್ಲ. ಪಿಜ್ಜಾ, ಜಿಗರ್ಥಾಂಡ ಮತ್ತು ರಜನಿಕಾಂತ್ ಅವರ ಪೇಟ್ಟಾ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದವರು ಕಾರ್ತಿಕ್ ಸುಬ್ಬರಾಜ್. ಸದ್ಯ ಓಟಿಟಿಯಲ್ಲಿ ರಿಲೀಸಾಗಿರುವ ಧನುಷ್ ಅಭಿನಯದ ಜಗಮೇ ತಂಧಿರಮ್ ಚಿತ್ರವನ್ನು ಡೈರೆಕ್ಟ್ ಮಾಡಿರೋದೂ ಇವರೇ. ಧನುಷ್ ಈಗ ಗ್ಲೋಬಲ್ ಲೆವೆಲ್ಲಿನಲ್ಲಿ ಮಾರ್ಕೆಟ್ ಹೊಂದಿರುವ ಹೀರೋ. ಹಾಲಿವುಡ್ಡಿನ ಸಿನಿಮಾಗಳಲ್ಲೂ ಇವರು ಪಾತ್ರ ನಿರ್ವಹಿಸುತ್ತಿದ್ದಾರೆ. ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಜಗಮೇ ತಂಧಿರಮ್ ಚಿತ್ರವನ್ನು ರೂಪಿಸಲಾಗಿದೆ.
ಜಗತ್ತಿನಲ್ಲಿರುವ ತಮಿಳರ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಕಥೆ ಈ ಚಿತ್ರದಲ್ಲಿದೆ. ಲೋಕಲ್ ರೌಡಿಸಂ, ಪರೋಟಾ ವ್ಯಾಪಾರದಿಂದ ಹಿಡಿದು, ಶ್ರೀಲಂಕಾ, ಲಂಡನ್ ತನಕ ಕಥೆಯನ್ನು ಟ್ರಾವಲ್ ಮಾಡಿಸಿದ್ದಾರೆ. ಹಾಲಿವುಡ್ ನಟ ಜೇಮ್ಸ್ ಕಾಸ್ಮೋ ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಕ್ಯಾನ್ವಾಸ್ ಇರುವ ಈ ಸಿನಿಮಾದ ಕಥೆಯೇ ಜಾಳು ಜಾಳಾಗಿರೋದರಿಂದ ಹೇಳಿಕೊಳ್ಳುವ ರೇಂಜಿಗೆ ಮೂಡಿಬಂದಿಲ್ಲ.
ಜಗಮೇ ತಂಧಿರಮ್ ಸಿನಿಮಾವನ್ನು ಓಟಿಟಿಗೆ ಬಿಡೋದು ಖುದ್ದು ಹೀರೋ ಧನುಷ್ಗೆ ಇಷ್ಟವಿರಲಿಲ್ಲ. ತಮ್ಮ ಸಿನಿಮಾವನ್ನು ಜನ ಥೇಟರಿನಲ್ಲೇ ನೋಡಬೇಕು ಅಂತಾ ಬಯಸಿದ್ದರು. ಆದರೆ, ದಿನದಿಂದ ದಿನಕ್ಕೆ ನಿರ್ಮಾಪಕರ ಸಾಲದ ಹೊರೆ ಮೇಲೆ ಬಡ್ಡಿ ಬೆಳೆಯುತ್ತಾ ಹೋಗುತ್ತಿದ್ದರಿಂದ ವಿಧಿಯಿಲ್ಲದೆ ಓಟಿಟಿಗೆ ನೀಡಲಾಗಿದೆ. ಒಂದುವೇಳೆ ಈ ಚಿತ್ರವೇನಾದರೂ ಥೇಟರುಗಳಲ್ಲಿ ರಿಲೀಸ್ ಆಗಿದ್ದಿದ್ದರೆ ಒಂದೇ ಒಂದು ಶೋಗೆ ಮಕಾಡೆ ಮಲಗಿಬಿಡುತ್ತಿತ್ತು.
ಜಗಮೇ ತಂದಿರಮ್ ಚಿತ್ರದ ನಿರ್ಮಾಣ ವೆಚ್ಚ 55 ಕೋಟಿ. ನಿರ್ಮಾಪಕರು ಸಾಲಕ್ಕೆ ಕಟ್ಟಿದ್ದ ಬಡ್ಡಿ 10 ಕೋಟಿ. ಅಲ್ಲಿಗೆ ಒಟ್ಟು ಬಂಡವಾಳ ಅರವತ್ತೈದು ಕೋಟಿಯಷ್ಟಾಯಿತು. ಇದರಲ್ಲಿ ಹೀರೋ ಧನುಷ್ಗೆ 15 ಕೋಟಿ ಸಂಭಾವನೆ, ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜ್ ಗೆ 5 ಕೋಟಿ ಪೇಮೆಂಟು ಕೂಡಾ ಸೇರಿಕೊಂಡಿದೆ. ಇನ್ನು ಆಡಿಯೋ ರೈಟ್ಸ್ 1 ಕೋಟಿ, ಹಿಂದಿ ಡಬ್ಬಿಂಗ್ಗೆ ಗೋಲ್ಡ್ ಮೈಂಡ್ ಟೆಲಿ ಫಿಲಂಸ್ ಆರೂವರೆ ಕೋಟಿ ಕೊಟ್ಟಿದೆ. ಸ್ಯಾಟಲೈಟ್ಗೆ 10 ಕೋಟಿ ನೀಡಿ ವಿಜಯ್ ಟೀವಿ ಖರೀದಿಸಿದೆ. ಡಿಜಿಟಲ್ ರೈಟ್ಸ್ 55 ಕೋಟಿಗೆ ನೆಟ್ ಫ್ಲಿಕ್ಸ್ ಪಡೆದಿದೆ. ಅರವತ್ತೈದು ಕೋಟಿ ಇನ್ವೆಸ್ಟ್ ಮಾಡಿದ್ದ ನಿರ್ಮಾಪಕರಿಗೆ ಏಳೂವರೆ ಕೋಟಿಯ ನಿವ್ವಳ ಲಾಭವಾಗಿದೆ. ಅರವತ್ತೈದು ಕೋಟಿ ಖರ್ಚು ಮಾಡಿ ವರ್ಷಗಟ್ಟಲೆ ಕಾದ ನಿರ್ಮಾಪಕರಿಗೆ ಸಿಕ್ಕಿರುವ ಲಾಭ ತೀರಾ ಕಡಿಮೆಯಾಯ್ತು ಅನ್ನೋದು ತಮಿಳು ಸಿನಿಮಾ ಇಂಡಸ್ಟ್ರಿಯ ಅಭಿಪ್ರಾಯ.
ಜಗಮೇ ತಂಧಿ ರಮ್ ಸಿನಿಮಾದ ಮುಂದುವರೆದ ಭಾಗವನ್ನೂ ರೆಡಿ ಮಾಡಿ ಅಂಥಾ ಧನುಷ್ ಹೇಳಿದ್ದರು. ಆದರೆ, ಚಿತ್ರಕ್ಕೆ ದೊರೆತಿರುವ ಭಯಾನಕ ರೆಸ್ಪಾನ್ಸ್ ಕಂಡು ಸ್ವತಃ ಧನುಷ್ ಬೆಚ್ಚಿಬಿದ್ದಿದ್ದಾರೆ. ಒಟ್ಟಾರೆಯಾಗಿ ನೋಡಿದರೆ, ಜಗಮೇ ತಂದಿರಮ್ ಸೀಕ್ವೆಲ್ ಪ್ಲಾನು ಗ್ಯಾರೆಂಟಿ ಹೊಗೇನೆ ಎನ್ನುವ ಪರಿಸ್ಥಿತಿಯಿದೆ!
No Comment! Be the first one.