ಇವತ್ತು ಕನ್ನಡದಲ್ಲಿ ಪ್ರಯೋಗಗಳು ನಡೆಯುತ್ತಿವೆ. ನಮ್ಮವರ ಸಾಧನೆಯನ್ನು ಹೊಗಳಿದರೆ, ಇನ್ನೊಬ್ಬರಿಗೆ ಆಗಲ್ಲ. ಕನ್ನಡಿಗರ ಬೆಳವಣಿಗೆ ನೋಡಿ ಅಕ್ಕ ಪಕ್ಕದ ರಾಜ್ಯದವರೆಲ್ಲ ಅದುರಿಹೋಗಿದ್ದಾರೆ. ನಮ್ಮವರ ಗೆಲುವನ್ನು ಹೆಮ್ಮೆಯಿಂದ ಹೇಳಿಕೊಂಡರೂ ಉರ್ಕೊಳ್ಳೋರಿದ್ದಾರೆ. ನಮ್ಮವರೇ ‘ಯಾವುದೋ ಪ್ರೆಸ್ ಮೀಟಲ್ಲಿ ಜಗ್ಗೇಶ್ ಹಿಂಗಂದ್ರು’ ಅಂತಾ ಹಾಕ್ಕೊಟ್ಟುಬಿಡ್ತಾರೆ. ಅಲ್ಲೊಬ್ಬರು ಸೂಪರ್ ಸ್ಟಾರ್ ನನ್ನ ಜೊತೆ ಮಾತಾಡೋದನ್ನೇ ಬಿಟ್ಟರು. ಅಪರೂಪಕ್ಕೆ ಫೋನ್ ಮಾಡಿದಾಗ ಚನ್ನಾಗಿ ಮಾತಾಡುತ್ತಿದ್ದವರು ಈಗ ನಿಲ್ಲಿಸಿಬಿಟ್ಟರು. ಅದರಿಂದ ನನಗೆ ಯಾವುದೇ ನಷ್ಟವಿಲ್ಲ. ನನ್ನ ಕನ್ನಡದ ನಟರು, ನಟಿಯರು ನನ್ನ ಮೇಲೆ ಬೇಜಾರು ಮಾಡಿಕೊಂಡರೆ ನಾನು ನಿಜಕ್ಕೂ ಕಂಗಾಲಾಗುತ್ತೇನೆ. ಆದರೆ ಅಕ್ಕ ಪಕ್ಕ ರಾಜ್ಯದವರನ್ನು ಕಟ್ಟಿಕೊಂಡು ನನಗೇನೂ ಆಗಬೇಕಿಲ್ಲ. ನಮ್ಮವರು ಹಸುವಿನ ಹಾಲು, ಅನ್ಯರು ನಾಯಿ ಮೊಲೆ ಹಾಲು. ನನಗೆ ನನ್ನವರಷ್ಟೇ ಮುಖ್ಯ.
ಹೀಗೆ ಜಗ್ಗೇಶ್ ಮಾರ್ಮಿಕವಾಗಿ ಪರರಾಜ್ಯದ ಸೂಪರ್ ಸ್ಟಾರ್ ಒಬ್ಬರ ಮೇಲೆ ಸಿಡಿಮಿಡಿಗೊಂಡು ಮಾತಾಡಿದ್ದಾರೆ. ಯಾರು ಆ ಸೂಪರ್ ಸ್ಟಾರ್? ಅಂತಾ ನೇರವಾಗಿ ಹೇಳಿಲ್ಲ.
ಜಗ್ಗೇಶ್ ತೀರಾ ಆತ್ಮೀಯವಾಗಿದ್ದ ಪಕ್ಕದ ರಾಜ್ಯದ ಸೂಪರ್ ಸ್ಟಾರ್ ಅಂದರೆ, ಎಲ್ಲರಿಗೂ ಗೊತ್ತಿರುವಂತೆ ಅದು ತಲೈವಾ ರಜನಿಕಾಂತ್. ಇಷ್ಟಕ್ಕೂ ಕನ್ನಡದ ಸ್ಟಾರ್’ಗಳನ್ನು ಹೊಗಳಿದರೆ ಕನ್ನಡದವರೇ ಆದ ರಜನಿ ಯಾಕೆ ಮುನಿಸಿಕೊಳ್ಳಬೇಕು? ಇಷ್ಟಕ್ಕೂ ರಜನಿ ಅಷ್ಟು ಚಿಕ್ಕ ಮನಸ್ಥಿತಿಯವರಾ? ಹಾಗಾದರೆ ತಲೈವಾ ಬಿಟ್ಟರೆ ಜಗ್ಗಣ್ಣನಿಗೆ ಕ್ಲೋಸಾಗಿರುವ ಮತ್ತೊಬ್ಬ ಸೂಪರ್ ಸ್ಟಾರ್ ಯಾರು? ಯಾವ ರಾಜ್ಯದವರು? ಉಹ್ಞೂಂ… ಸದ್ಯಕ್ಕೆ ಯಾರಿಗೂ ಗೊತ್ತಾಗುತ್ತಿಲ್ಲ. ನವರಸನಾಯಕರೇ ಯಾವತ್ತಾದರೊಮ್ಮೆ ಬಾಯಿ ಬಿಡಬೇಕು!