ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಸ್ಪೆಷಲ್ ಡೈಲಾಗ್ ಡೆಲಿವರಿಯ ಚಾಕಚಕ್ಯತೆಯಿಂದಲೇ ಕಮಾಲು ಮಾಡಿರುವವರು ಜಗ್ಗೇಶ್. ಹೀರೋಯಿಸಂ ಅಂದರೆ ಜನರಿಗಿದ್ದ ಕಲ್ಪನೆಯನ್ನೂ ಮೀರಿ ಮತ್ತೊಂದು ಬಗೆಯಲ್ಲಿ ಕನ್ನಡಿಗರನ್ನು ಆವರಿಸಿಕೊಂಡಿದ್ದ ನವರಸ ನಾಯಕ ಇದೀಗ ‘ತೋತಾಪುರಿ’ಯಲ್ಲಿ ತೊಟ್ಟು ಕೀಳಲು ತಯಾರಾಗಿದ್ದಾರೆ!

ಜಗ್ಗೇಶ್ ಈಗೊಂದಷ್ಟು ವರ್ಷಗಳಿಂದ ಆಗಾಗ ಒಂದಷ್ಟು ಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ಹಳೇ ಜಗ್ಗೇಶ್ ಅವರನ್ನು ನಿರೀಕ್ಷಿಸುತ್ತಲೇ ಇದ್ದಾರೆ. ನೀರ್ ದೋಸೆ ನಂತರ ತೋತಾಪುರಿಯಲ್ಲಿ ಜಗ್ಗೇಶ್ ತಮ್ಮ ಅಭಿಮಾನಿಗಳನ್ನು ಮತ್ತೆ ತಣಿಸೋದು ಗ್ಯಾರೆಂಟಿ ಎಂಬ ಮಾತು, ನಿರೀಕ್ಷೆ ಎಲ್ಲೆಡೆ ನಿಗಿ ನಿಗಿಸುತ್ತಿದೆ.

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ತೋತಾಪುರಿ. ಇದಕ್ಕೆ ಹತ್ತಾರು ಕಾರಣಗಳಿದ್ದಾವೆ. ಕನ್ನಡದ ಧೀಮಂತ ನಿರ್ಮಾಪಕ ಕೆ.ಎ. ಸುರೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನೀರ್ ದೋಸೆ ನಂತರ ವಿಜಯಪ್ರಕಾಶ್-ಜಗ್ಗೇಶ್ ಜೊತೆಗೂಡಿದ್ದಾರೆ. ಈ ಚಿತ್ರದ ಮೂಲಕವೇ ಜಗ್ಗೇಶ್ ಗೆಲುವಿನ ಮತೊಂದು ಅಧ್ಯಾಯ ಶುರುವಾದರೂ ಅಚ್ಚರಿಯೇನಿಲ್ಲ. ಯಾಕೆಂದರೆ ನವರಸ ನಾಯಕ ಸಾಗಿ ಬಂದ ಹಾದಿಯೇ ಅಂಥಾದ್ದಿದೆ!

ಸುಮಾರು ಎರಡೂವರೆ ದಶಕಗಳ ಹಿಂದೆ ಬಂದ ರವಿಚಂದ್ರನ್ ಅವರ ‘ಪ್ರೇಮಲೋಕ’ದ ಸರಿಗಮಪ ತಂಡದ ಸದಸ್ಯನಾಗಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಜಗ್ಗೇಶ್ ಎಲ್ಲರ ಗಮನ ಸೆಳೆದಿದ್ದರು. ಆದರೆ ಅವರಿಗೆ ನಿಜವಾದ ಬ್ರೇಕ್ ನೀಡಿದ್ದು ಮಾಲಾಶ್ರೀ ಜಮಾನಾದಲ್ಲಿ ಬಂದ ‘ರಾಣಿಮಹಾರಾಣಿ’. ಆ ಚಿತ್ರದಲ್ಲಿ ಉಮಾಶ್ರೀಯ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡ ಜಗ್ಗೇಶ್ ತಮ್ಮ ವಿಲಕ್ಷಣ ಅಂಗಚೇಷ್ಟೆಯೊಂದಿಗೆ ‘ಯಕ್ಕೋ…. ಕಡ್ಳೇಕಾಯ್ ಕಡ್ಳೇಕಾಯ್…’ ಎಂದು ಡೈಲಾಗು ಹೊಡೆಯುವುದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರವಾದ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆ ಒಂದೇ ಒಂದು ಡೈಲಾಗ್ ಜಗ್ಗೇಶರ ವೃತ್ತಿಬದುಕಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿತು. ಪಡ್ಡೆ ಪೋಕರಿಗಳು ‘ಕಡ್ಲೇಕಾಯ್ ಕಡ್ಲೇಕಾಯ್’ ಎನ್ನಲು ಆರಂಭಿಸಿದ್ದರು. ಬೀದಿ ಆರ್ಕೆಸ್ಟ್ರಾಗಳಲ್ಲೂ ಜಗ್ಗೇಶರ ಈ ಡೈಲಾಗನ್ನು ಜನ ಅನುಕರಿಸಲು ಶುರುಮಾಡಿದರು. ಹೀಗೆ ಬಡವರ ಬಾದಾಮಿ ಕಡ್ಳೇಕಾಯ್ ಜಗ್ಗೇಶ್ ಎಂಬ ಪುಟ್ಟ ನಟನನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದು ನಿಲ್ಲಿಸಿತ್ತು.

ಇವತ್ತಿನ ದಿನಗಳಲ್ಲಾದರೆ, ಹೀರೋ ಆಗಲು ಯಾವ ಅರ್ಹತೆಯಿಲ್ಲದಿದ್ದರೂ, ನಟನೆಯ ಗಂಧವೇ ಇಲ್ಲದಿದ್ದರೂ, ರಿಯಲ್ ಎಸ್ಟೇಟ್ ಹಣವನ್ನು ತಂದು ಬಹಳಷ್ಟು ಜನ ಹೀರೋಗಳಾಗಿಬಿಡುತ್ತಾರೆ. ಆದರೆ ಅಂದಿನ ದಿನಗಳ ಪರಿಸ್ಥಿತಿಯೇ ಬೇರೆಯಿತ್ತು. ‘ಹೀರೋ ಎಂದರೆ, ಡಾ. ರಾಜ್, ವಿಷ್ಣು, ಅಂಬರೀಶ್ ಮತ್ತು ರವಿಚಂದ್ರನ್ ಮಾತ್ರ’ ಎಂಬಂಥ ಕಾಲವದು. ಕಡೇ ಪಕ್ಷ ಹೊಸದಾಗಿ ಬರುವ ನಾಯಕನಟನಿಗೆ ಒಳ್ಳೆಯ ಫಿಸಿಕ್ಕು, ಬಣ್ಣ ಎಲ್ಲವೂ ಬೇಕು ಎನ್ನುವ ನಂಬಿಕೆ ಚಾಲ್ತಿಯಲ್ಲಿತ್ತು. ಇಂಥ ಸಂದರ್ಭದಲ್ಲಿ ಕರ್ರಗೆ, ಕುಳ್ಳಗಿದ್ದ ಜಗ್ಗೇಶ್ ನಾಯಕನಾಗಲು ಹೊರಟಾಗ ಲೇವಡಿ ಮಾಡಿದವರೇ ಹೆಚ್ಚು. ಆದರೆ ಜಗ್ಗೇಶ್‌ರಂಥ ನಟ ಮತ್ತು ಉಪೇಂದ್ರನಂಥ ನಿರ್ದೇಶಕ ಸೇರಿಕೊಂಡರೆ ಏನಾಗುತ್ತೋ ಅದೇ ಆಯಿತು. ಅವರಿಬ್ಬರೂ ಸೇರಿ ತಯಾರಿಸಿದ ಚಿತ್ರವೇ ‘ತರ‍್ಲೆ ನನ್‌ಮಗ’. ಈ ಚಿತ್ರ ಬಿಡುಗಡೆ ಆಗಿದ್ದೇ ತಡ ಜಗ್ಗೇಶ್ ಎಂಬ ಪೋಷಕ ಕಲಾವಿದ ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಜನಪ್ರಿಯ ನಾಯಕನನಟನಾಗಿ ಹೊರಹೊಮ್ಮಿದ್ದರು. ‘ಐತ್ತೆರಿ ಲಕಡಿ ಪಕಡಿ ಜುಮ್ಮಾ’ ಎನ್ನುವ ಜಗ್ಗೇಶರ ಡೈಲಾಗು ಸಾಮಾನ್ಯವರ್ಗದ ಪ್ರೇಕ್ಷರ ನಾಲಗೆ ಮೇಲೆ ಕುಣಿದು ಕುಪ್ಪಳಿಸಲು ಆರಂಭಿಸಿತು.

ಅಲ್ಲಿಂದ ಜಗ್ಗೇಶ್ ಪೂರ್ಣ ಪ್ರಮಾಣದ ನಾಯಕ ನಟನಾದರು. ಹಾಗೆ ನೋಡಿದರೆ ಜಗ್ಗೇಶ್ ಈ ಎರಡು ದಶಕಗಳಲ್ಲಿ ಹಲವು ಬಗೆಯ ವೈವಿದ್ಯಮಯ ಪಾತ್ರಗಳನ್ನು ನೀಡಿದ್ದಾರೆ. ನಿರ್ಮಾಪಕರ ಪಾಲಿಗೆ ‘ಕಲೆಕ್ಷನ್ ಕಿಂಗ್’ ಆಗಿರುವ ಜಗ್ಗೇಶ್ ಅಂದಿನಿಂದ ಇಂದಿನವರೆಗೂ ನಿರ್ಮಾಪಕ ಹೂಡಿದ ಹಣಕ್ಕೆ ಮಿನಿಮಮ್ ಗ್ಯಾರೆಂಟಿ ನೀಡುವ ಏಕೈಕ ನಟನಾಗಿದ್ದಾರೆ.

ಇಂದಿಗೂ ಸಹ ಜಗ್ಗೇಶ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜಗ್ಗೇಶ್ ಚಿತ್ರಗಳೆಂದರೆ ಹಬ್ಬ ಎಂದೇ ಅರ್ಥ. ವಿಶೇಷ ಅಂದರೆ, ಈವತ್ತಿನ ಹುಡುಗರೂ ಕೂಡಾ ಅವರ ಚಿತ್ರಗಳ ಅಭಿಮಾನಿಗಳೇ. ಈವತ್ತಿಗೂ ಭಾರೀ ಕ್ರೇಜ಼್ ಹೊಂದಿರೋ ಜಗ್ಗೇಶ್ ಅವರಿಗೆ ತೋತಾಪುರಿ ಚಿತ್ರದ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭವಾಗಲಿ ಅಂತ ಹಾರೈಸೋಣ. ಹ್ಯಾಪಿ ಬರ್ತಡೇ ಜಗ್ಗೇಶ್ ಸರ್…

CG ARUN

ಧೃವ ಸರ್ಜಾ ದರ್ಶನ್ ಬಗ್ಗೆ ಏನಂದರು ಗೊತ್ತಾ?

Previous article

ಒಡೆಯನನ್ನು ಮೀಟ್ ಮಾಡಬೇಕು ಅನ್ನೋ ಬಯಕೆ ಇವರಿಗೆ…

Next article

You may also like

Comments

Leave a reply

Your email address will not be published. Required fields are marked *