ಸುಳ್ಳು ಅನ್ನೋದು ಮನುಷ್ಯನ ವ್ಯಕ್ತಿತ್ವವನ್ನು ತಿಂದು ಬಿಸಾಕುವ ಗೆದ್ದಲಿದ್ದಂತೆ. ಒಂದು ಸುಳ್ಳನ್ನು ನಿಜವೆಂದು ಸಾಬೀತು ಮಾಡಲು ಹೋಗಿ ಸಾವಿರ ಸುಳ್ಳುಗಳಲ್ಲಿ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಬಹುಶಃ ನವರಸನಾಯಕ ಜಗ್ಗೇಶ್ ಅವರು ಈಗ ಮಾಡುತ್ತಿರೋದು ಅದನ್ನೇ!
ನಮಗೆ ದೊರೆತ ಆಡಿಯೋ ಕ್ಲಿಪ್ ಆಧರಿಸಿ ಕಳೆದ ಫೆಬ್ರವರಿ 10ರಂದು ʻCINIBUZZ’ನಲ್ಲಿ ʻತನ್ನ ಬುಡಕ್ಕೆ ತಾನೇ ಬಾಂಬು ಮಡಗಿಕೊಂಡಿತು ಜಗ್ಗೇಶುʼ ಎನ್ನುವ ವರದಿ ಪ್ರಕಟಿಸಲಾಗಿತ್ತು. (ಈ ವರದಿಯ ಕೊನೆಯಲ್ಲಿ ಆ ವರದಿಯನ್ನು ಯಥಾವತ್ತು ಮರು ಪ್ರಕಟಿಸಲಾಗಿದೆ). ಜಗ್ಗೇಶ್ ಅವರು ಮಾತಿನಿಂದಲೇ ಸೃಷ್ಟಿಸಿಕೊಂಡ ಅವಾಂತರಗಳು ಮತ್ತು ಆಡಿಯೋ ಕ್ಲಿಪ್ಪಿನಲ್ಲಿರುವ ವಿಚಾರದ ಬಗ್ಗೆ ಸವಿವರವಾಗಿ ತಿಳಿಸಲಾಗಿತ್ತು. ನಂತರ ಕನ್ನಡದ ಬಹುತೇಕ ಮಾಧ್ಯಮಗಳಲ್ಲಿ ಈ ವರದಿ, ವಿಚಾರ ಪ್ರಸಾರವಾಯಿತು.
ಮೊನ್ನೆ ದಿನ ದರ್ಶನ್ ಅವರ ಅಭಿಮಾನಿಗಳ ಹೆಸರಿನಲ್ಲಿ ಚಿತ್ರೀಕರಣದ ಜಾಗಕ್ಕೆ ಹೋದ ಕೆಲವು ಹುಡುಗರು ಮುತ್ತಿಗೆ ಹಾಕಿ ಘೇರಾವ್ ಕೂಗಿದ್ದರು. ಈ ಸಂದರ್ಭದಲ್ಲಿ ಜಗ್ಗೇಶ್ ಅವರ ಅನುಭವ, ಪ್ರತಿಭೆಗೆ ಬೆಲೆ ಕೊಡದೆ ಕೆಲವರು ಕೆಟ್ಟಾಕೊಳಕು ಮಾತಾಡಿದ್ದು ತಪ್ಪೇ. ʻಹೌದು ನಾನು ಮಾತಾಡಿದ್ದು ನಿಜ. ಮಾತಿನ ವರಸೆಯಲ್ಲಿ ತಪ್ಪಾಗಿದೆ…ʼ ಅಂತಾ ಕೇಳಿಬಿಟ್ಟಿದ್ದರೆ ಇಷ್ಟೆಲ್ಲಾ ರಂಪಾಟಗಳೇ ಆಗುತ್ತಿರಲಿಲ್ಲ. ಅದು ಬಿಟ್ಟು ಮತ್ತಿನ್ಯಾರ ಮೇಲೋ ಗೂಬೆ ಕೂರಿಸಲು ಹೋಗಿ, ಸುಳ್ಳಿನ ಮೇಲೊಂದು ಸುಳ್ಳು ಹೇಳಿ, ಅದನ್ನು ಸಮರ್ಥಿಸಿಕೊಳ್ಳಲು ಜಾತಿ, ಸಂಘ, ಡಾ. ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್ ರಿಂದ ಹಿಡಿದು ರವಿಚಂದ್ರನ್, ರಮೇಶ್ ಅರವಿಂದ್, ಮಂತ್ರಾಲಯ ರಾಘವೇಂಧ್ರ ಸ್ವಾಮಿಗಳ ತನಕ ಸಿಕ್ಕವರನ್ನೆಲ್ಲಾ ಎಳೆದು ತರುತ್ತಿದ್ದಾರೆ.
ವೆಬ್ ಡಿಸೈನರ್ ದರ್ಶನ್ ಗೆ ಬೈದೆ ಅಂತಾ ಸುಳ್ಳು ಕತೆ ಸೃಷ್ಟಿಸುತ್ತಾರೆ. ತಮಗೆ ಪರಿಚಿತವಿರುವ ಆ ಹುಡುಗನಿಗೆ ಕರೆ ಮಾಡಿ ನಾಟಕೀಯವಾಗಿ ಮಾತಾಡುತ್ತಾರೆ. ಒಂದು ವೇಳೆ ಜಗ್ಗೇಶ್ ಆರೋಪ ಮಾಡಿರುವುದು ವೆಬ್ ಡಿಸೈನರ್ ದರ್ಶನ್ ಮೇಲೆ ಅಂತಲೇ ಇಟ್ಟುಕೊಂಡರೂ, ಆ ಹುಡುಗ ನೂರು ಕುರಿ, ಕೋಳಿ, ತಲೆಮಾಂಸ ಕೇಳುವಷ್ಟರ ಮಟ್ಟಿಗೆ ದೊಡ್ಡ ವ್ಯಕ್ತಿಯಾ? ಮೈಕ್ರೋಸಾಫ್ಟ್ ಮಾಲೀಕನಾ? ಗೂಗಲ್ ಮ್ಯಾನೇಜರಾ?
ಮಾಡಿದ ಒಂದು ಯಡವಟ್ಟನ್ನು ಮುಚ್ಚಲು ಜಗ್ಗೇಶ್ ಪದೇ ಪದೆ ಅಸತ್ಯಗಳನ್ನು ಸೃಷ್ಟಿಸುತ್ತಿದ್ದಾರೆ. ಒಂದು ಕಡೆ ಪ್ರತಿದಿನ ಎದ್ದು ಕನ್ನಡಪ್ರಭ ದಿನಪತ್ರಿಕೆ ಓದುತ್ತೇನೆ ಅನ್ನುತ್ತಾರೆ. ಮತ್ತೊಂದು ಕಡೆ ಹೊಸದಿಗಂತ ಪೇಪರನ್ನು ಪ್ರಮೋಟ್ ಮಾಡ್ತೀನಿ ಅಂತಾರೆ. ಅದು ನನ್ನ ದನಿಯಲ್ಲ, ನಾನು ಮಾತೇ ಆಡಿಲ್ಲ ಅನ್ನುವ ಜಗ್ಗೇಶ್ ಯಾರೋ ಎಂಪಿ3ಯಲ್ಲಿ ಎಡಿಟ್ ಮಾಡಿದ್ದಾರೆ ಅಂಥಾ ಓತಪ್ರೋತವಾಗಿ ಏನೇನೋ ಬಡಬಡಿಸುತ್ತಿದ್ದಾರೆ.
ಸಿನಿಮಾರಂಗದಲ್ಲಿ ಕೆಟ್ಟ ಸಂಪ್ರದಾಯ ಬೆಳೆಯುತ್ತಿದೆ. ಇಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಅಂತೆಲ್ಲಾ ಅನ್ನುವ ಜಗ್ಗೇಶ್ ಸ್ವತಃ ತಾವೇ ಯಾವುದೋ ಒಂದು ಪಕ್ಷ, ಸಂಘಟನೆ, ಪತ್ರಿಕೆಯ ಪರ ಮಾತಾಡುತ್ತಾರೆ. ನಿಜಕ್ಕೂ ರಾಜಕಾರಣ ಮಾಡುತ್ತಿರೋದು ಜಗ್ಗೇಶ್ ಅನ್ನೋದು ಜನಕ್ಕೆ ಗೊತ್ತಾಗಿಹೋಗಿದೆ. ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಾ ಜಗ್ಗೇಶ್ ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಸಿ ಬಳೆದುಕೊಳ್ಳುತ್ತಿದ್ದಾರೆ. ವಿವಾದವೊಂದು ಸೃಷ್ಟಿಯಾಗಿದೆ. ಅದರಿಂದ ಹೊರಬರಲು ಸುಳ್ಳು ಮಾರ್ಗವಾಗಲಾರದು. ಅವರೇ ಹೇಳಿಕೊಂಡಿರುವಂತೆ ಕರ್ನಾಟಕದ ಅಗಣಿತ ಜನ ಅವರನ್ನು ಪ್ರೀತಿಸೋದು ನಿಜ. ಇವತ್ತಿಗೂ ಜಗ್ಗೇಶ್ ಮಾರ್ಕೆಟ್ ಉಳಿಸಿಕೊಳ್ಳುವಂತೆ ಮಾಡಿರುವುದು ಅವರನ್ನು ಬಹಿರಂಗ ಹಾಗೂ ಗುಪ್ತವಾಗಿ ಆರಾಧಿಸುವ ಪ್ರೇಕ್ಷಕರು. ಅದನ್ನು ಉಳಿಸಿಕೊಳ್ಳಬೇಕಿರೋದು ಅವರೇ!
ಜಗ್ಗೇಶ್ ತಾನು ಮಾಡಿದ ತಪ್ಪನ್ನು ಮುಚ್ಚಿ ಹಾಕಲು ರಾಜ್ ಕುಮಾರ್, ವಿಷ್ಣುವರ್ಧನ್ ಮೊದಲಾದವರ ಹೆಸರನ್ನು ಬೀದಿಗೆ ಎಳೆದು ತಂದಿರುವುದು ತಪ್ಪು. ರಾಜ್, ವಿಷ್ಣು ಸರ್ ಎಂದೂ ಕಲೆಯ ಜೊತೆ ರಾಜಕೀಯ ಬೆರೆಸಿರಲಿಲ್ಲ. ತಮ್ಮನ್ನು ತಾವು, ಕಲಾವಿದರು, ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳುತ್ತಿದ್ದರೇ ಹೊರತು ಆರೆಸ್ಸೆಸ್ ಕಾರ್ಯಕರ್ತ ಎನ್ನುತ್ತಿರಲಿಲ್ಲ. ಕಿರಿಯ ಕಲಾವಿದರನ್ನು ಅತ್ಯಂತ ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ್ದರು, ಬೆಂಬಲಿಸುತ್ತಿದ್ದರು. ಸುದೀಪ್ ಅವರ ಹುಚ್ಚ ಚಿತ್ರವನ್ನು ನೋಡಿ ವಿಷ್ಣು ಸರ್ ಭಾವುಕರಾಗಿ ಹೇಳಿಕೆ ನೀಡಿದ್ದು ಈಗಲೂ ನೆನಪಿದೆ.
“ತಾನು ಹಿರಿಯ” ಎಂದು ಪದೇ ಪದೇ ಹೇಳುತ್ತಿರುವ ಜಗ್ಗೇಶ್, ಹಿರಿತನ ಎನ್ನುವುದು ಕಿರಿಯ ಕಲಾವಿದರ ಕುರಿತಂತೆ ಬಾಯಿಗೆ ಬಂದಂತೆ ಆಡುವುದಕ್ಕೆ ಇರುವ ಪರವಾನಿಗೆ ಎಂದು ತಿಳಿಯ ಬಾರದು. ನಿರ್ಮಾಪಕರು ಬೀದಿಗೆ ಬೀಳುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ… ಎಂದು ಜಗ್ಗೇಶ್ ಹೇಳಿದ್ದಾರೆ. ಚಿತ್ರ ರಂಗ ಮಾತ್ರವಲ್ಲ, ಮೋದಿ ಆಡಳಿತದಲ್ಲಿ ಎಲ್ಲ ರಂಗಗಳು ಎಕ್ಕುಟ್ಟಿ ಹೋಗಿವೆ. ಉದ್ಯಮಿಗಳು, ರೈತರೂ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಕನ್ನಡ ಕನ್ನಡ ಎಂದು ಹೇಳಿ ತಮ್ಮ ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಜಗ್ಗೇಶ್ ಉತ್ತರಿಸಬೇಕು . ಶಿವಮೊಗ್ಗದಲ್ಲಿ ನಡೆದ ಬಿಜೆಪಿಯ ಸಭೆಯ ವೇದಿಕೆಯಲ್ಲಿ ಒಂದಕ್ಷರ ಕನ್ನಡ ಇರಲಿಲ್ಲ. ಆಗ ನೀವೇಕೆ ಮೌನವಾಗಿದ್ದಿರಿ? ರಾಜ್ಯದ ಮೇಲೆ ಹಿಂದಿ ಹೇರಿಕೆ ಆಗುತ್ತಿದೆ. ಇವುಗಳ ಬಗ್ಗೆ ಯಾಕೆ ಮಾತಿಲ್ಲ ? ಕನ್ನಡದ ಹೆಸರಲ್ಲಿ ಉಂಡು, ಉತ್ತರದ ಹಿಂದಿಗೆ ಕೊಡೆ ಹಿಡಿಯುತ್ತಿರುವ ನಿಮಗೆ ಈಗ ಕನ್ನಡದ ನೆನಪಾಯಿತೇ ?
-ಬಿ.ಎಂ.ಬಶೀರ್, ಪತ್ರಕರ್ತರು
ವೇದಿಕೆ ಮೇಲೆ ನಿಂತು ಗಂಟೆಗಟ್ಟಲೆ ಪರ್ಸನಾಲಿಟಿ ಡೆವಲಪ್ ಮೆಂಟ್ ಸ್ಪೀಚು ಕೊಡುವ, ತಮ್ಮ ಹಳೇ ಕಷ್ಟದ ದಿನಗಳಿಗೆ ಇನ್ನೊಂದಿಷ್ಟು ಉಪ್ಪು ಹುಳಿ ಖಾರ ಸೇರಿಸಿ ರಸವತ್ತಾಗಿ ಭಾಷಣ ಬಿಗಿಯುವುದರಲ್ಲಿ ನವರಸನಾಯಕ ಜಗ್ಗೇಶ್ ಸಿಕ್ಕಾಪಟ್ಟೆ ಫೇಮಸ್ಸು. ಎಂಥವರೂ ಮರುಳಾಗುವಂತೆ ಮಾತಾಡುವ ಜಗ್ಗೇಶ್ ಗೆ ಅದೇ ಮಾತೆಂಬುದು ಹಲವು ಸಲ ಹಳ್ಳ ತೋಡಿದ್ದಿದೆ. ಜಗ್ಗೇಶ್ ಪಾಲಿಗೆ ಮಾತೆಂಬುದು ಶಕ್ತಿಯೂ ಹೌದು, ಮಹಾ ವೀಕ್ ನೆಸ್ಸೂ ಹೌದು.
ಹಿಂದೊಮ್ಮೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ʻಇಂಡಿಯಾದವರೆಲ್ಲಾ ಒಟ್ಟಾಗಿ ನಿಂತು ಉಚ್ಚೆ ಹೊಯ್ದರೆ ಪಾಕಿಸ್ತಾನವನ್ನು ಮುಳುಗಿಸಿಬಿಡಬಹುದುʼ ಎಂಬ ಹೇಳಿಕೆ ನೀಡಿ ವಿವಾದಕ್ಕೆ ತುತ್ತಾಗಿದ್ದರು. ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಜಗ್ಗೇಶ್ ಇಂಥ ಯಡವಟ್ಟು ಮಾತುಗಳನ್ನು ಆಡುತ್ತಿರುತ್ತಾರೆ. ಈಗ ರಿಲೀಸಾಗಿರುವ ಆಡಿಯೋವೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸುವಂತಿದೆ. ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಜೊತೆಗೆ ಫೋನಿನಲ್ಲಿ ನಡೆಸಿರುವ ಸಂಭಾಷಣೆಯದು.
ʻʻಹೊಸದಿಗಂತ ಪಕ್ಕಾ ಆರೆಸ್ಸೆಸ್ ಪತ್ರಿಕೆ. ಕನ್ನಡಪ್ರಭ, ಪ್ರಜಾವಾಣಿ ಇವರೆಲ್ಲರಿಗಿಂತ ಹೆಚ್ಚಿನ ರೀತಿಯಲ್ಲಿ ಜನ ನೋಡುವಂಥ ಮತ್ತು ನಂಬುವಂಥ ಪತ್ರಿಕೆ ಅದು. ಇದರಲ್ಲಿ ಒಂದೇ ಒಂದು ಅಪಭ್ರಂಶ ಪದ ಇರೋದಿಲ್ಲ. ತುಂಬಾ ಡೀಸೆಂಟು. ನಮ್ಮನೆಯವರು ಈ ಪವರ್ ಫುಲ್ ಪತ್ರಿಕೆಗೆ ಹೆಲ್ತ್ ಬಗ್ಗೆ ಬರೀತಾರೆ. ಈ ಪತ್ರಿಕೆಗೆ ಜಾಹೀರಾತು ಕೊಡೋದನ್ನು ಮಿಸ್ ಮಾಡಬೇಡ. ಅದನ್ನ ಅವಾಯ್ಡ್ ಮಾಡಕ್ಕೆ ಅವರು ಚೂತ್ಯಾ ಥರ ಮಾತಾಡಿದಾರೆ. ಇನ್ನೊಬ್ಬ ನಮ್ಮ ಕಡೆ ಹುಡುಗ ಇದಾನೆ ಆನ್ ಲೈನ್ ಹುಡುಗ. ಮದುವೆ ಆಗಿ ಸಪರೇಟು ಸಂಸಾರ ಮಾಡ್ತಿದಾನೆ. ಒಳ್ಳೇ ಹಾರ್ಡ್ ವರ್ಕರು. ನಮ್ಮತ್ರ ಇರೋರೆಲ್ಲಾ ಅಂತೋರೇನೆ. ಬಟ್… ದರ್ಶನ್ ಥರ ಅವುರ್ ಥರಾ ಇದಾರಲ್ಲಾ? ಅವನಮ್ಮುನ್ ತಲೆ ಮಾಂಸ ಕಳಿಸಿ ಅಣ್ಣಾ…. ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರೆಲ್ಲಾ ಇಲ್ಲ….ʼʼ ಅಂತಾ ಯದ್ವಾ ತದ್ವಾ ಮಾತಾಡಿಬಿಟ್ಟಿದ್ದಾರೆ.
ಸ್ವಾಮಿ ಜಗ್ಗೇಶು… ನೀವು ಸಿನಿಮಾ ಮಂದಿಗಾಗಲಿ, ನಿಮ್ಮನ್ನು ನಂಬಿ ಮತ ಹಾಕಿದ ಕ್ಷೇತ್ರದ ಜನತೆಗಾಗಲಿ ಏನು ಮಾಡಿದ್ದೀರ ಅಂತಾ ಜಗತ್ತಿಗೇ ಗೊತ್ತು. ಪ್ರತಿಯೊಂದರಲ್ಲೂ ಲಾಭವನ್ನೇ ಉದ್ದೇಶವನ್ನಾಗಿಸಿಕೊಂಡಿರುವ ನೀವು ಕೊರೋನಾ ಸಂದರ್ಭದಲ್ಲಿ ಎಷ್ಟು ಜನಕ್ಕೆ ಅನ್ನಾಹಾರ ನೀಡಿದಿರಿ? ಕಷ್ಟದಲ್ಲಿರುವ ಕಲಾವಿದರಿಗೆ ಯಾವ ಬಗೆಯಲ್ಲಿ ಸಹಕರಿಸಿದ್ದೀರಿ. ನೀವು ಒಳ್ಳೇ ನಟ ಅನ್ನೋ ಕಾರಣಕ್ಕಷ್ಟೇ ಜನ ನಿಮ್ಮನ್ನು ಪ್ರೀತಿಸೋದು, ಗೌರವ ನೀಡೋದು. ದರ್ಶನ್ ಅವರ ಅಭಿಮಾನಿಗಳ ಬಗ್ಗೆ ನೀವೆಷ್ಟು ತಿಳಿದುಕೊಂಡಿದ್ದೀರ? ಡಿ ಕಂಪೆನಿ ಬಗ್ಗೆ ನೀವು ಕೇಳಿಲ್ಲವಾ? ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳೆಲ್ಲಾ ಸೇರಿ ನಡೆಸುತ್ತಿರುವ ನೋಂದಾಯಿತ ಸಂಘ ‘ಡಿ ಕಂಪೆನಿ’. ಕರ್ನಾಟಕದ ಇಪ್ಪತ್ತು ಜಿಲ್ಲೆಗಳಲ್ಲಿ ಸದ್ಯ ‘ಡಿ ಕಂಪೆನಿ’ ಕಾರ್ಯ ನಿರ್ವಹಿಸುತ್ತಿದೆ.
ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಜನಪರ ಕಾರ್ಯಗಳಲ್ಲಿ ತೊಡಗಿಕೊಂಡಿರುವ ‘ಡಿ ಕಂಪೆನಿ’ ಹಲವಾರು ಸಾಮಾಜಿಕ ಜವಾಬ್ದಾರಿಯ ಕೆಲಸಗಳನ್ನು ನಡೆಸುತ್ತಲೇ ಬಂದಿದೆ. ಶಾಲೆಗಳನ್ನು ದತ್ತು ತೆಗೆದುಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ವಿದ್ಯಾವಂತ ಹುಡುಗರ ಪಡೆ ದರ್ಶನ್ ಅವರ ಮೇಲಿನ ಪ್ರೀತಿಗಾಗಿ ಎಷ್ಟೆಲ್ಲಾ ಶ್ರಮಿಸುತ್ತಿದ್ದಾರೆ. ಯಾವ ಪ್ರಚಾರವನ್ನೂ ಪಡೆಯದೆ ದುಡಿಯುತ್ತಿದ್ದಾರೆ ಅಂತಾ ನಿಮ್ಮಂತಾ ಬರುಡೆ ಆಸಾಮಿಗಳಿಗೆ ಹೇಗೆ ತಾನೆ ಗೊತ್ತಾಗಲು ಸಾಧ್ಯ? ನಿಮ್ಮ ಹತ್ತಿರ ಬಂದು ತಲೆ ಮಾಂಸ, ಕುರಿ, ಮೇಕೆ ಕೇಳಿದ್ದು ಯಾರು ಅಂತಾ ನೀವು ಹೇಳಬಲ್ಲಿರಾ? ಅಥವಾ ಸುಖಾಸುಮ್ಮನೆ ಗೂಬೆ ಕೂರಿಸುವ ಉದ್ದೇಶದಿಂದಷ್ಟೇ ಹೀಗೆ ಅಪಪ್ರಚಾರ ಮಾಡುತ್ತಿದ್ದೀರಾ?
ನಿಮಗೆ ಆರೆಸ್ಸೆಸ್ ಅಥವಾ ಮತ್ಯಾವುದೋ ಸಂಘಟನೆ, ಪಕ್ಷದ ಮೇಲೆ ಅಭಿಮಾನವಿರಲಿ. ಅದನ್ನು ಯಾರೂ ಬೇಡ ಅನ್ನುತ್ತಿಲ್ಲ. ಒಬ್ಬರನ್ನು ಹೊಗಳುವ ಭರದಲ್ಲಿ ದೊಡ್ಡ ಸಮೂಹದ ಮನಸ್ಸಿನ ಮೇಲೆ ಕಲ್ಲೆಸೆಯಬೇಡಿ ಸ್ವಾಮಿ…
ಬಹುಶಃ ಎಣ್ಣೆ ಏಟಿನಲ್ಲಿ ಓತಪ್ರೋತವಾಗಿ ಮಾತಾಡಿ ಪೇಚಿಗೆ ಸಿಲುಕಿರುವ ಜಗ್ಗೇಶ್, ಈಗ ಆಡಿಯೋ ಲೀಕ್ ಆಗಿರುವ ವಿಚಾರ ತಿಳಿದು ಕಕ್ಕಾಬಿಕ್ಕಿಯಾಗಿದ್ದಾರೆ. ತೋತಾಪುರಿ ಚಿತ್ರದ ಶೂಟಿಂಗಲ್ಲಿ ಭಾಗವಹಿಸಿದ್ದ ಮಿಸ್ಟರ್ ನವರಸ, ಮುಖಕ್ಕೆ ಹಚ್ಚಿದ್ದ ಮೇಕಪ್ಪನ್ನು ಎಡಗೈಲಿ ಒರೆಸಿಕೊಂಡು ದಢಾರಂತಾ ಬೆಂಗಳೂರಿಗೆ ಓಡಿ ಬಂದಿದ್ದಾರೆ. ಮೊದಲೇ ದರ್ಶನ್ ಅವರ ಬಳಿ ಅಪಾಲಜಿ ಕೇಳಲು ಮೇಲಿಂದ ಮೇಲೆ ಕರೆ ಮಾಡಿದರೂ ದಾಸ ಫೋನು ತೆಗೆಯುವ ಮನಸ್ಸು ಮಾಡಿಲ್ಲ. ಯಾಕೆಂದರೆ, ಅದಾಗಲೇ ಅವರಿಗೂ ಈ ಆಡಿಯೋ ತಲುಪಿಯಾಗಿದೆ.. ಜಗ್ಗೇಶ್ ಎಂಥಾ ಡಬಲ್ ಗೇಮ್ ಗಿರಾಕಿ ಅನ್ನೋದು ದರ್ಶನ್ ಅವರಿಗೆ ಅಗ್ರಜ ಸಂದರ್ಭದಲ್ಲೇ ಕರಾರುವಕ್ಕಾಗಿ ತಿಳಿದಿದೆ. ಸದ್ಯ ತಿರುಪತಿ ದರ್ಶನ ಮುಗಿಸಿ ವಾಪಾಸು ಬರುತ್ತಿರುವ ದಚ್ಚು ನಾಳೆ ಏನು ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ!!
ಜಗ್ಗಣ್ಣನ ಚೀಪ್ ಮೆಂಟಾಲಿಟಿಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೇ ದರ್ಶನ್ ಅಭಿಮಾನಿಗಳು ಮನ್ನಿಸಿ ಸುಮ್ಮನಾಗಲಿ ಅನ್ನೋದು ನಮ್ಮ ಬಯಕೆ…
No Comment! Be the first one.