ಕಾಲಿವುಡ್ ಸ್ಟಾರ್ ಹೀರೋ ವಿಕ್ರಂ ಪುತ್ರ ಧ್ರುವ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವ ’ವರ್ಮಾ’ ಚಿತ್ರ ಸದ್ಯ ಸುದ್ದಿಯಲ್ಲಿದೆ. ತೆಲುಗು ಬ್ಲಾಕ್ ಬಸ್ಟರ್ ’ಅರ್ಜುನ್ ರೆಡ್ಡಿ’ ರಿಮೇಕ್ ಆದ ಚಿತ್ರ ಇದೇ ಫೆಬ್ರವರಿ ೧೪ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಚಿತ್ರವನ್ನು ಸಂಪೂರ್ಣವಾಗಿ ಮರುಚಿತ್ರಿಸಲು ನಿರ್ಧರಿಸಲಾಗಿದೆ. ’ಸೇತು’ ಚಿತ್ರದೊಂದಿಗೆ ವಿಕ್ರಂ ಸಿನಿಮಾ ಬದುಕಿಗೆ ತಿರುವು ನೀಡಿದ ಬಾಲಾ ’ವರ್ಮಾ’ ನಿರ್ದೇಶನದ ಹೊಣೆ ಹೊತ್ತಿದ್ದರು. ಇದೀಗ ಹೊಸ ವರ್ಷನ್ಗೆ ಬೇರೆ ನಿರ್ದೇಶಕರು ಬರಲಿದ್ದಾರೆ. ಇನ್ನು ನಾಯಕಿಯಾಗಿ ನಟಿಸಿದ್ದ ಮೇಘಾ ಚೌಧರಿ ಕೂಡ ಬದಲಾಗುವ ಸಾಧ್ಯತೆಗಳಿವೆ. ಆಕೆಯ ಜಾಗಕ್ಕೆ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕಾಲಿವುಡ್ ಪ್ರವೇಶಿಸುವ ಸಾಧ್ಯತೆಗಳಿವೆ.
ಜಾಹ್ನವಿ ಕಪೂರ್ ಕಳೆದ ವರ್ಷ ’ಧಡಕ್’ ಹಿಂದಿ ಚಿತ್ರದೊಂದಿಗೆ ಬಾಲಿವುಡ್ ಪ್ರವೇಶಿಸಿದ್ದರು. ಸೂಪರ್ಹಿಟ್ ಮರಾಠಿ ಸಿನಿಮಾ ’ಸೈರಾಟ್’ ರೀಮೇಕ್ ಇದು. ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆಲುವು ಸಾಧಿಸಿತ್ತು. ಪ್ರಸ್ತುತ ಜಾಹ್ನವಿ ಐಎಎಫ್ ಪೈಲಟ್ ಗುಂಜನ್ ಸಕ್ಸೇನಾ ಹಿಂದಿ ಬಯೋಪಿಕ್ನಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ತನ್ನ ತಾಯಿ ತವರು ಕಾಲಿವುಡ್ ಪ್ರವೇಶಿಸುವ ಉಮೇದಿನಲ್ಲಿದ್ದಾರೆ. ಈ ಮೊದಲು ಅಜಿತ್ ನಟನೆಯ ’ಪಿಂಕ್’ ಹಿಂದಿ ಚಿತ್ರದ ತಮಿಳು ರಿಮೇಕ್ನಲ್ಲಿ ಜಾಹ್ನವಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಜಾಹ್ನವಿ ತಂದೆ ಬೋನಿ ಕಪೂರ್ ಈ ವದಂತಿಯನ್ನು ಅಲ್ಲಗಳೆದಿದ್ದರು. ಇದೀಗ ’ವರ್ಮಾ’ ಚಿತ್ರದಲ್ಲಿ ಆಕೆ ನಟಿಸುವ ಬಗ್ಗೆ ಚರ್ಚೆಯಾಗುತ್ತಿವೆ. ಜಾಹ್ನವಿ, ಬೋನಿ ಕಪೂರ್ ಸುದ್ದಿಯನ್ನು ಖಚಿತಪಡಸಬೇಕಿದೆ. ಇ೪ ಎಂಟರ್ಟೇನ್ಮೆಂಟ್ ’ವರ್ಮಾ’ ಚಿತ್ರವನ್ನು ನಿರ್ಮಿಸುತ್ತಿದೆ.
#