ಡಾಲಿಯಾಗಿ ಮಾರ್ಪಾಟು ಹೊಂದಿದ ನಂತರ ಕನ್ನಡ ಚಿತ್ರರಂಗದ ಬ್ಯುಸೀ ನಟನಾಗಿರುವ ಧನಂಜಯ ಜಯರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಎರಡು ತಿಂಗಳ ಒಳಗೆ ಇರುವ ಕಮಿಟ್ಮೆಂಟುಗಳನ್ನೆಲ್ಲಾ ಮುಗಿಸಿಕೊಂಡು, ಜಯರಾಜ್ ಪಾತ್ರಕ್ಕಾಗಿ ತಯಾರಿ ಆರಂಭಿಸಲಿದ್ದಾರಂತೆ. ಜುಲೈ ಹೊತ್ತಿಗೆ ಈ ಚಿತ್ರ ಆರಂಭವಾಗಲಿದ್ದು ಇನ್ನೂ ಚಿತ್ರದ ಶೀರ್ಷಿಕೆ ಬಹಿರಂಗಗೊಂಡಿಲ್ಲ.
‘ಹತ್ತು ವರ್ಷ ರೂಲ್ ಮಾಡಲು ಬಂದಿದ್ದೀನಿ’ – ಹೀಗೆನ್ನುತ್ತಾ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ ಅಗ್ನಿ ಶ್ರೀಧರ್. ಒಂದಾನೊಂದು ಕಾಲದಲ್ಲಿ ಬೆಂಗಳೂರು ಅಂಡರ್ವರ್ಲ್ಡ್’ನ ಭಾಗವಾಗಿದ್ದು, ಬರವಣಿಗೆ, ಹೋರಾಟಗಳಲ್ಲಿ ನಿರತರಾದವರು ಶ್ರೀಧರ್. ಅದರ ಜೊತೆಗೇ ‘ಆ ದಿನಗಳು’ ಸಿನಿಮಾದಿಂದ ಚಿತ್ರರಂಗಕ್ಕೂ ಬಂದು ಸ್ಲಂಬಾಲ, ಕಳ್ಳರ ಸಂತೆ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳಲ್ಲಿ ಭಾಗಿಯಾಗಿ, ತಮಸ್ಸು ಎನ್ನುವ ಸಿನಿಮಾವೊಂದರ ನಿರ್ದೇಶನವನ್ನೂ ಮಾಡಿದರು. ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರರಂಗದಿಂದಲೂ ದೂರ ಸರಿದಿದ್ದ ಶ್ರೀಧರ್ ರನ್ನು ಯುವಕರ ತಂಡವೊಂದು ಮತ್ತೆ ಚಿತ್ರರಂಗಕ್ಕೆ ಕರೆದುಕೊಂಡುಬಂದಿದೆ. ಇತ್ತೀಚಿಗೆಷ್ಟೇ ತೆರೆಗೆಬಂದಿದ್ದ ಅಳಿದು ಉಳಿದವರು ಚಿತ್ರತಂಡದ ಅಶು ಬೆದ್ರ, ಶೂನ್ಯ, ತಮ್ಮ ಸಹೋದರನ ಮಗ ಅಭಿ, ಅಪೂರ್ವ, ಬಚ್ಚನ್ ಮಗ ರೋಷನ್ ಮುಂತಾದವರೆಲ್ಲಾ ಒತ್ತಾಯ ಮಾಡಿದ್ದರ ಕಾರಣಕ್ಕೆ ಒಪ್ಪಿಕೊಂಡಿರುವ ಶ್ರೀಧರ್ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಕಳೆದ ನಾಲ್ಕು ದಶಕಗಳ ರೌಡಿಸಮ್ಮು, ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆಯ ಕುರಿತಾಗಿ ಇಂಚಿಂಚೂ ಮಾಹಿತಿ ಹೊಂದಿದ್ದು, ಅದರ ಬಗ್ಗೆ ಮಾತಾಡಬಲ್ಲ ಮತ್ತು ಪರಿಣಾಮಕಾರಿಯಾಗಿ ಬರೆಯಬಲ್ಲ ಏಕೈಕ ವ್ಯಕ್ತಿ ಶ್ರೀಧರ್. ರಾಮ್ ಗೋಪಾಲ್ ವರ್ಮ, ತಮಿಳಿನ ಕೆ.ವಿ. ಆನಂದ್ ಮೊದಲಾದವರು ಶ್ರೀಧರ್ ಬಳಿ ಬಂದು ಕರ್ನಾಟಕದ ಭೂಗತ ಲೋಕದ ಕುರಿತಾಗಿ ಸಿನಿಮಾ, ವೆಬ್ ಸರಣಿಗಳನ್ನು ಮಾಡಲು ಮಾಹಿತಿ ಕೇಳುತ್ತಿರುತ್ತಾರಂತೆ. ಶ್ರೀಧರ್ ಬರೆದಿರುವ ಎದೆಗಾರಿಕೆ ‘ಗ್ಯಾಂಗ್ ಸ್ಟರ್ ಗೀತಾ’ ಹೆಸರಿನಲ್ಲಿ ಇಂಗ್ಲಿಷಿಗೂ ಅನುವಾದಗೊಂಡಿರುವುದರಿಂದ ಶ್ರೀಧರ್ ಅವರಿಗೆ ಬೇಡಿಕೆ ಹೆಚ್ಚಾಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಶ್ರೀಧರ್ ೧೯೭೪ ರಿಂದ ೭೭ರ ಕಾಲಘಟ್ಟವನ್ನು ಮಾತ್ರ ಆಯ್ಕೆ ಮಾಡಿಕೊಂಡು ಆವತ್ತಿನ ರೌಡಿಸಂ ಚರಿತ್ರೆಯನ್ನು ಚಿತ್ರಕತೆಗಿಳಿಸಿದ್ದಾರೆ. ಆ ಕಾಲದಲ್ಲಿ ಬೆಂಗಳೂರು ರೌಡಿಗಳಿಗೆ ಅಧಿಪತಿಯಂತಿದ್ದವನು ಡಾನ್ ಜಯರಾಜ್. ಯುವಕನಾಗಿದ್ದ ಜಯರಾಜ್ ರೌಡಿಸಮ್ಮಿಗೆ ಇಳಿದದ್ದು, ಆ ಸಮಯದಲ್ಲಿದ್ದ ಕರ್ನಾಟಕದ ಮುಖ್ಯಮಂತ್ರಿ, ಪೊಲೀಸ್ ಅಧಿಕಾರಿಗಳ ಪಾತ್ರಗಳಂತೂ ಈ ಚಿತ್ರದಲ್ಲಿದ್ದೇ ಇರಲಿದೆ. ಪೈಲ್ವಾನನಾಗಿದ್ದ ಜಯರಾಜ್ ಕಸರತ್ತು ಮಾಡುತ್ತಿದ್ದ ಗರಡಿ ಮನೆ ಈಗಲೂ ಹಾಗೇ ಇದೆಯಂತೆ. ಅವೆಲ್ಲವನ್ನೂ ಬಳಸಿಕೊಂಡು ನೈಜವಾಗಿ ಸಿನಿಮಾ ಕಟ್ಟಿಕೊಡುವ ಪ್ಲಾನು ಚಿತ್ರತಂಡದ್ದು. ಶೂನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅಭಿ, ಅಪೂರ್ವ ಮುಂತಾದವರೆಲ್ಲಾ ನಿರ್ದೇಶನ ತಂಡದಲ್ಲಿರಲಿದ್ದಾರೆ.
ಡಾಲಿಯಾಗಿ ಮಾರ್ಪಾಟು ಹೊಂದಿದ ನಂತರ ಕನ್ನಡ ಚಿತ್ರರಂಗದ ಬ್ಯುಸೀ ನಟನಾಗಿರುವ ಧನಂಜಯ ಜಯರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಎರಡು ತಿಂಗಳ ಒಳಗೆ ಇರುವ ಕಮಿಟ್ಮೆಂಟುಗಳನ್ನೆಲ್ಲಾ ಮುಗಿಸಿಕೊಂಡು, ಜಯರಾಜ್ ಪಾತ್ರಕ್ಕಾಗಿ ತಯಾರಿ ಆರಂಭಿಸಲಿದ್ದಾರಂತೆ. ಜುಲೈ ಹೊತ್ತಿಗೆ ಈ ಚಿತ್ರ ಆರಂಭವಾಗಲಿದ್ದು ಇನ್ನೂ ಚಿತ್ರದ ಶೀರ್ಷಿಕೆ ಬಹಿರಂಗಗೊಂಡಿಲ್ಲ.