ಬಿಗ್ ಬಾಸ್ ಜಯಶ್ರೀಯ ಬದುಕು ಯಾಕೋ ಇನ್ನೂ ಸರಿಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಕೊರೋನಾ ವೈರಸ್ಸು ಬರೋ ಮುಂಚೆಯೇ ಜಯಶ್ರೀ ಬದುಕಿಗೆ ಸಾಕಷ್ಟು ವೈರಸ್ಸುಗಳು ವಕ್ಕರಿಸಿಕೊಂಡು ಕಾಟ ಕೊಟ್ಟಿದ್ದವು. ಜಗತ್ತಿನ ಎಲ್ಲ ಕಷ್ಟಗಳೂ ಈಕೆಯನ್ನೇ ಸುತ್ತಿಕೊಂಡಂತಾ ಸಂದರ್ಭಗಳೂ ಸೃಷ್ಟಿಯಾಗಿದ್ದವು. ಇವೆಲ್ಲದರಿಂದ ಖಿನ್ನೆತೆಗೆ ಜಾರಿದ್ದ ಈ ಹುಡುಗಿ ಇವತ್ತು ಏಕಾ ಏಕಿ ʻ I Quit!! Goodbye to the fucking world and Depression ..!..ʼ ಅಂತಾ ಫೇಸ್ ಬುಕ್ಕಲ್ಲಿ ಮೆಸೇಜು ಬಿಟ್ಟು ಆತಂಕ ಸೃಷ್ಟಿಸಿದ್ದಳು. ಅದಾಗಿ ಸ್ವಲ್ಪ ಹೊತ್ತಿಗೇ ಮತ್ತೊಂದು ಪೋಸ್ಟ್ ಹಾಕಿ I’m Alright and safe!! Love you all❤ ಎಂದಿದ್ದಾಳೆ. ಇವನ್ನೆಲ್ಲಾ ನೋಡಿದರೆ ಜಯಶ್ರೀಯ ಮಾನಸಿಕ ಸ್ಥಿತಿ ತೀರಾ ಹಾಳಾಗಿದೆ ಅನ್ನೋದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಜಯಶ್ರೀ ಮತ್ತು ಅವರ ತಾಯಿಯನ್ನು ಆಕೆಯ ಸೋದರಮಾವನೇ ಮನೆಯಿಂದ ಹೊರಹಾಕಿದ್ದ. ಸೋದರಮಾವನಾದವನೇ ಯಾಕೆ ಹೀಗೆ ಮಾಡಿದ? ನಡುರಾತ್ರಿಯಲ್ಲಿ ಎರಡು ಹೆಣ್ಣುಜೀವಗಳನ್ನು ಯಾಕೆ ಮನೆಯಿಂದ ಹೊರದಬ್ಬಿದ ಅಂತೆಲ್ಲಾ ವಿಚಾರಿಸಿದಾಗ ಗಿರೀಶನ ದುಷ್ಟ ಮನಸ್ಥಿತಿ ಮತ್ತು ದುರ್ಬುದ್ದಿಗಳೆಲ್ಲಾ ಬಯಲಿಗೆ ಬರುವಂತಾಗಿತ್ತು. ಜಯಶ್ರೀಯ ಸ್ವಂತ ಸೋದರ ಮಾವ ಗಿರೀಶ್. ಈವೆಂಟ್ ಮ್ಯಾನೇಜ್‌ಮೆಂಟ್ ಅದೂ ಇದೂ ಕಸುಬು ನಡೆಸುತ್ತಾನೆ. ಅಲ್ಲೂ ಈತನಿಗೆ ಒಳ್ಳೇ ಹೆಸರಿಲ್ಲ. ಕೆಲಸ ಮಾಡಿಸಿಕೊಂಡು ನೆಟ್ಟಗೆ ದುಡ್ಡು ಕೊಡದೇ ಸತಾಯಿಸುತ್ತಾನೆ. ಕಂಪೆನಿಗಳಿಂದ ಕಾಸು ಕಿತ್ತು ವಂಚಿಸುತ್ತಾನೆ ಎಂಬೆಲ್ಲಾ ಆರೋಪಗಳಿವೆ.
ಹನುಂತನಗರದಲ್ಲಿ ೮ ಕೋಟಿ ರುಪಾಯಿಗಳ ದೊಡ್ಡ ಮೊತ್ತದ ಆಸ್ತಿ ಇದೆ. ಜಯಶ್ರೀಯ ತಾತ ಮತ್ತು ಅಜ್ಜಿ ಸಂಪಾದಿಸಿದ ಈ ಆಸ್ತಿಯಲ್ಲಿ ಒಂದಿಷ್ಟು ಪಾಲು ಕೊಟ್ಟರೂ ಸಾಕು ಬದುಕಿಗೆ ಅನುಕೂಲವಾಗುತ್ತದೆ ಎನ್ನುವುದಷ್ಟೇ ಜಯಶ್ರೀ ಮತ್ತವರ ಕುಟುಂಬದವರ ಬೇಡಿಕೆ. ಜಯಶ್ರೀ ತಂದೆ ರಾಮಯ್ಯ ಮಂಡ್ಯ ಮೂಲದವರು. ವಕೀಲಿ ವೃತ್ತಿ ನಡೆಸುತ್ತಿದ್ದ ರಾಮಯ್ಯನವರು ಬದುಕಿದ್ದಾಗ ಯಾವುದೋ ವಿಚಾರಕ್ಕೆ ಗಿರೀಶನಿಗೆ ಎರಡೇಟು ಕೊಟ್ಟಿದ್ದರಂತೆ. ಅದಾದನಂತರ ರಾಮಯ್ಯನವರು ತೀರಿಕೊಂಡರು. ಜಯಶ್ರೀ ಮತ್ತವರ ಮನೆಯವರು ಅಜ್ಜಿ ತಾತನೊಂದಿಗೇ ನೆಲೆಸುವ ಪರಿಸ್ಥಿತಿ ಬಂದಿತ್ತು. ಅಲ್ಲಿಂದ ಶುರುವಾಯಿತು ಗಿರೀಶನ ನಿತ್ಯ ದೌರ್ಜನ್ಯ. ಇವರ ಬಳಿ ಇದ್ದ ಒಡವೆಗಳನ್ನೆಲ್ಲಾ ಕಿತ್ತಿಟ್ಟುಕೊಂಡ. ಪದೇ ಪದೇ ಮಾನಸಿಕ ಮತ್ತು ದೈಹಿಕ ಹಲ್ಲೆಗೆ ಮುಂದಾದ. ಈ ಹೆಣ್ಣುಮಗಳ ಮೇಲೆ ಕೆಟ್ಟ ಕಣ್ಣು ಬೀರಿ ಕೀಚಕ ಕೆಲಸಕ್ಕಿಳಿದ. ಅನ್ನಬಾರದ್ದನ್ನೆಲ್ಲಾ ಅಂದ. ಯಾವುದಕ್ಕೂ ಜಯಶ್ರೀ ಸಹಕರಿಸದಿದ್ದಾಗ ಪದೇ ಪದೇ ಥಳಿಸುವುದನ್ನು ಅಭ್ಯಾಸ ಮಾಡಿಕೊಂಡ. ಇಷ್ಟಕ್ಕೂ ಗಿರೀಶ ಮದುವೆಯಾಗಿ ಒಬ್ಬ ಮಗನನ್ನು ಹೊಂದಿದ್ದಾನೆ. ಹೆಂಡತಿಗೆ ಈತ ಕೊಡಬಾರದ ಕಾಟ ಕೊಟ್ಟಿದ್ದ. ಬಾಯಿಗೆ ಬೂಟು ತುರುಕುವಂತಾ ಹೀನ ಕೆಲಸವನ್ನೂ ಮಾಡಿದ್ದ. ನೋಡೋತನಕ ನೋಡಿದ ಗಿರೀಶನ ಪತ್ನಿ ಈತನ ಸಾವಾಸವೇ ಬೇಡ ಅಂತಾ ಬಿಟ್ಟು ಹೋದಳು. ಹೆಂಡತಿ ಬಿಟ್ಟು ಹೋದಮೇಲಂತೂ ಗಿರೀಶ ಜಯಶ್ರೀ ಮತ್ತಾಕೆಯ ತಾಯಿಯನ್ನು ಇನ್ನಿಲ್ಲದಂತೆ ಹಿಂಸಿಸಿದ. ಈಕೆಯ ಅಣ್ಣನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ.
ಇಷ್ಟಕ್ಕೂ ಗಿರೀಶನ ತಂದೆ ಕೃಷ್ಣಯ್ಯ ಮತ್ತು ತಾಯಿ ಗೌರಮ್ಮ ಇಬ್ಬರೂ ತೀವ್ರ ಅನಾರೋಗ್ಯಕ್ಕೀಡಾಗಿ ವರ್ಷಾನುಗಟ್ಟಲೆಯಿಂದ ಹಾಸಿಗೆ ಹಿಡಿದಿದ್ದಾರೆ. ತೀರಾ ಮಲಗಿದ್ದಲ್ಲೇ ಮಲ-ಮೂತ್ರ ಮಾಡಿಕೊಳ್ಳುವಷ್ಟು ಕೆಟ್ಟ ಪರಿಸ್ಥಿತಿಯಲ್ಲಿರುವ ತಂದೆ ತಾಯಿಯಿಂದ ತಾನೊಬ್ಬನೇ ಆಸ್ತಿ ಲಪಟಾಯಿಸುವ ಸ್ಕೆಚ್ಚು ಹಾಕಿದ. ಇಂದು ಜಯಶ್ರೀ ಅಜ್ಜಿ ಗೌರಮ್ಮ ಎಂಥಾ ನಿಕೃಷ್ಟ ಪರಿಸ್ಥಿತಿಯಲ್ಲಿ ಉಸಿರಾಡುತ್ತಿದ್ದಾರೆ ಅನ್ನೋದಕ್ಕೆ ಇಲ್ಲಿರುವ ಫೋಟೋ ಸಾಕ್ಷಿ ಹೇಳುವಂತಿದೆ. ಪ್ರಜ್ಞಾಶೂನ್ಯರಾಗಿ ಬಿದ್ದಿರುವ ತಂದೆ ತಾಯಿಯಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಆಸ್ತಿಪತ್ರಗಳನ್ನು ಬರೆಸಿಕೊಂಡ. ಇದನ್ನೆಲ್ಲಾ ವಿರೋಧಿಸುವ ಜಯಶ್ರೀ ಮತ್ತು ಆಕೆಯ ತಾಯಿ ಶೋಭಾರನ್ನು ಮನೆಯಿಂದಲೇ ಹೊರಹಾಕುವ ಕೆಟ್ಟ ಕೃತ್ಯಕ್ಕೂ ಗಿರೀಶ ಇಳಿದುಬಿಟ್ಟ. ಗಿರೀಶನ ಕಾಟದಿಂದ ಬೇಸತ್ತ ಜಯಶ್ರೀ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಸಾಕಷ್ಟು ಸಲ ಆತ್ಮಹತ್ಯ ಪ್ರಯತ್ನವನ್ನೂ ಮಾಡಿದ್ದಾರೆ. ಇನ್ನು ಈಕೆಯ ತಾಯಿ ಶೋಭಾ ಮಾನಸಿಕ ಸ್ವಾಸ್ಥ್ಯವನ್ನೇ ಕಳೆದುಕೊಂಡು ಮಂಕಾಗಿಬಿಟ್ಟಿದ್ದಾರೆ.
ಬೆಂಗಳೂರಿನ ಹನುಮಂತನಗರದಲ್ಲಿ ಜಯಶ್ರೀಯ ಅಜ್ಜಿ ತಾತ ಸಂಪಾದಿಸಿರುವ ಎಂಟು ಕೋಟಿ ರುಪಾಯಿ ಬೆಲೆ ಬಾಳುವ ಆಸ್ತಿಯಿದೆ. ಕೃಷ್ಣಯ್ಯ ಮತ್ತು ಗೌರಮ್ಮ ಜಯಶ್ರೀಯ ತಾಯಿ ಶೋಭಾಗೆ ಅಂತಾ ಕೊಟ್ಟ ಅಶೋಕನಗರದ ಮನೆಯೊಂದಿದೆ. ಅದರ ಮೇಲೂ ಕಣ್ಣಿಟ್ಟ ಗಿರೀಶ ಆ ಮನೆಯನ್ನೂ ಕಬ್ಜ ಮಾಡುವ ಹುನ್ನಾರ ಮಾಡಿದ. ಯಾವಾಗ ಅದಕ್ಕೆ ಪ್ರತಿರೋಧ ವ್ಯಕ್ತವಾಯಿತೋ ಆಗ ಆತ ಮುಂದಾಗಿದ್ದೇ ಇವರಿಬ್ಬರನ್ನೂ ಮನೆಯಿಂದ ಹೊರಹಾಕುವ ಕೆಲಸಕ್ಕೆ. ಗಿರೀಶ ಎಂಥ ದುಷ್ಟ ಅನ್ನೋದಕ್ಕೆ ಆತ ಕೆಲಸ ಮಾಡುವ ಪರಿಸರ, ಮನೆಯ ಸುತ್ತಮುತ್ತಲಿನವರು ಹೇಳುವ ವಿವರಗಳೇ ನಿದರ್ಶನ ಒದಗಿಸುತ್ತವೆ. ಸದ್ಯ ಜಯಶ್ರೀ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಮಾವನ ವಿರುದ್ಧಎಂಟು ತಿಂಗಳ ಹಿಂದೆಯೇ ದೂರು ನೀಡಿದ್ದರು. ಆಗ ‘ನೀನು ಎಲ್ಲಾದರೂ ಕಂಪ್ಲೇಂಟು ಕೊಡು. ಅದನ್ನು ಹೇಗೆ ಫೇಸ್ ಮಾಡಬೇಕು? ಹೇಗೆ ಹೊರಬರಬೇಕು’ ಅನ್ನೋ ಕ್ರಿಮಿನಲ್ ಮಾತಾಡಿದ್ದ ಗಿರೀಶ.
ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಈ ಪ್ರಕರಣದ ಕುರಿತಾಗಿ ವಿಚಾರಿಸಿದರಾ? ಜಯಶ್ರೀಗೆ ನ್ಯಾಯ ಕೊಡಿಸಿದರಾ ಅನ್ನೋ ಯಾವ ಮಾಹಿತಿಯೂ ಸದ್ಯಕ್ಕಿಲ್ಲ. ಕಳೆದ ಐದಾರು ತಿಂಗಳಿಂದ ಜಯಶ್ರೀ ಮೊಬೈಲ್ ನಂಬರನ್ನೂ ಬದಲಿಸಿಕೊಂಡಿದ್ದಳು. ಯಾರ ಸಂಪರ್ಕಕ್ಕೂ ಸಿಗದೇ ಫೇಸ್ ಬುಕ್ಕಿನಲ್ಲಷ್ಟೇ ಆಕ್ಟೀವ್ ಆಗಿದ್ದ ಜಯಶೀ ಇವತ್ತು ಅದೇ ಫೇಸ್ ಬುಕ್ಕಿನ ವಾಲ್‌ನಲ್ಲಿ ಮೆಸೇಜುಗಳನ್ನು ಪೋಸ್ಟ್ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾಳೆ. ಇಂಥ ಪ್ರಯತ್ನಗಳಿಂದ ದೂರವಿದ್ದು, ಖಿನ್ನತೆಯಿಂದ ಹೊರಬಂದು ಜಯಶ್ರೀ ಬದುಕನ್ನು ಜಯಿಸಲಿ…
Leave a Reply
You must be logged in to post a comment.