ಕಲಾಸಕ್ತಿಯನ್ನು ಕಂಟ್ರೋಲು ಮಾಡಿಕೊಳ್ಳಲಾಗದೆ ಸಿನಿಮಾ ಮಾಡುತ್ತಿರೋದಾಗಿ ಪೋಸು ಕೊಡೋ ಪಡಪೋಶಿಗಳಿಗೇನೂ ಚಿತ್ರರಂಗದಲ್ಲಿ ಬರವಿಲ್ಲ. ಮಾತೆತ್ತಿದರೆ ಅಕಿರಾ ಕುರಸೋವಾನ ಕನ್ನಡಾವತಾರದಂತೆ ಪೋಸು ಕೊಡೋ ಪಡ್ಡೆಗಳೆಲ್ಲ ಯಾಕೆ ಆಗಾಗ ಬರಗೆಟ್ಟ ಸಿನಿಮಾ ಮಾಡುತ್ತಾರೆ? ಕೆಲ ಚಿತ್ರಗಳೇಕೆ ಆ ಪಾಟಿ ಖರಾಬಾಗಿರುತ್ತವೆ ಎಂಬ ಪ್ರಶ್ನೆ ಸಾಮಾನ್ಯ ಪ್ರೇಕ್ಷಕನನ್ನೂ ಕಾಡುತ್ತದೆ. ಇದೀಗ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಜಯಶ್ರೀ ಚಿತ್ರತಂಡವೊಂದರ ವಿರುದ್ಧ ಆರೋಪಗಳ ಮಳೆಗರೆಯುತ್ತಿದ್ದಾಳಲ್ಲಾ? ಅದರ ಹಿನ್ನೆಲೆಯಲ್ಲಿರೋದೇನೆಂಬುದನ್ನು ಹುಡುಕಾಡಿದರೆ ಪ್ರೇಕ್ಷಕರ ಪ್ರಶ್ನೆಗಳಿಗೆ ಅಸಹ್ಯ ಮೆಚ್ಚಿಕೊಂಡ ತಾಜಾ ಉತ್ತರಗಳು ಯಥೇಚ್ಛವಾಗಿಯೇ ಸಿಗುತ್ತವೆ!
ಜಯಶ್ರೀ ತನ್ನನ್ನು ಯಾವ ಸೂಚನೆಯನ್ನೂ ನೀಡದೆ ನಟ ನಟಿಯರು ಬೇಕಾಗಿದ್ದಾರೆ ಎಂಬ ಚಿತ್ರದಿಂದ ಕೈ ಬಿಟ್ಟಿದ್ದರ ವಿರುದ್ಧ ಸೆಟೆದು ನಿಂತಿದ್ದಾಳೆ. ಈ ಚಿತ್ರಕ್ಕೆ ತಾನೇ ನಾಯಕಿಯಾ ಎಂಬ ಅಗ್ರಿಮೆಂಟ್ ಆಗಿ, ಅಡ್ವಾನ್ಸ್ ಹಣವನ್ನೂ ಕೊಟ್ಟ ನಂತರ ತನ್ನನ್ನು ಚಿತ್ರದ ನಾಯಕಿ ಸ್ಥಾನದಿಂದ ಹೊರ ಹಾಕಲಾಗಿದೆ ಎಂಬುದು ಜಯಶ್ರೀಯ ಕಂಪ್ಲೇಂಟು. ಹೀಗೆ ಅಗ್ರಿಮೆಂಟ್ ಆದ ನಂತರ ನಾಯಕಿಯನ್ನು ಬದಲಾವಣೆ ಮಾಡೋ ಪ್ರಮೇಯ ಬಂದರೂ ಅದಕ್ಕೊಂದು ಸೌಜನ್ಯದ ಹಾದಿಯಿದೆ. ಅದನ್ಯಾಕೆ ಈ ಚಿತ್ರದ ನಿರ್ದೇಶಕ ಮಂಜು ಹೆದ್ದೂರ್ ಪಾಲಿಸಲಿಲ್ಲ? ಜಯಶ್ರೀಯನ್ನು ಅವಸರವಸರವಾಗಿ ಕೈ ಬಿಟ್ಟು ಬೇರೊಬ್ಬ ನಾಯಕಿಯನ್ನು ಫಿಕ್ಸು ಮಾಡಿ ಶೂಟಿಂಗಿಗಿಳಿದು ಬಿಡುವ ಅವಸರವೇನಿತ್ತು? ಇಂಥಾ ನಾನಾ ಗುಮಾನಿಗಳನ್ನಿಟ್ಟುಕೊಂಡು ತಲಾಷಿಗಿಳಿದರೆ ಅಸಹ್ಯದ ವಿಚಾರಗಳೇ ದಂಡಿ ದಂಡಿಯಾಗಿ ತಗುಲಿಕೊಳ್ಳುತ್ತವೆ.
ಬಿಗ್ಬಾಸ್ ಶೋ ಆದ ನಂತರದಲ್ಲಿ ಈ ಜಯಶ್ರೀ ನಟಿಯಾಗೋದರತ್ತಲೇ ಗಮನ ಹರಿಸಿದ್ದಳು. ಈಕೆ ಈಗಾಗಲೇ ಉಪ್ಪು ಹುಳಿ ಖಾರ ಮತ್ತು ಶಿರಾಡಿ ಘಾಟ್ ಚಿತ್ರದಲ್ಲಿ ನಟಿಸಿದ್ದಾಳೆ. ಖಾಸಗಿ ಕಂಪೆನಿಯೊಂದರಲ್ಲಿ ಎಚ್ಆರ್ ಆಗಿದ್ದರೂ ಮಾಡೆಲಿಂಗ್ ಸೆಳೆತದಿಂದ ಅತ್ತ ಸಾಗಿದ್ದ ಈ ಹುಡುಗಿ ಕನ್ನಡಿಗರಿಗೆ ಪರಿಚಿತಳಾಗಿದ್ದೇ ಬಿಗ್ಬಾಸ್ ಶೋನಿಂದ. ಆ ಶೋನಿಂದ ಹೊರ ಬಂದ ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದ ಜಯಶ್ರೀಗೆ ಮಂಜು ಹೆದ್ದೂರ್ ಎಂಬ ಚಟ ಸಾಮ್ರಾಟನನ್ನು ಪರಿಚಯ ಮಾಡಿಸಿದ್ದು ಆಕೆಯ ಸ್ನೇಹ ವಲಯ. ಮಾತೆತ್ತಿದರೆ ತಾನು ಪುಟ್ಟಣ್ಣ ಕಣಗಾಲ್ ಅವರನ್ನೇ ಮೀರಿಸುವ ಐಟಮ್ಮೆಂಬಂತೆ ಪೋಸು ಕೊಡೋ ಈತ ಈ ಹಿಂದೆ ಗ್ಯಾಪಲ್ಲೊಂದು ಸಿನಿಮಾ ಎಂಬ ಔಟ್ ಆಂಡ್ ಔಟ್ ತಗಡು ಚಿತ್ರವೊಂದನ್ನು ನಿರ್ದೇಶನ ಮಾಡಿದ್ದ. ರಾತ್ರಿಯೆಲ್ಲ ಎಣ್ಣೆ ಹೊಡೆದು ಸುಸ್ತಾಗಿದ್ದರೂ ಬೆಳಗ್ಗೆ ಬೇಗನೆದ್ದು ಮುಖಕ್ಕೆ ಹನಿ ನೀರೂ ಚಿಮುಕಿಸದೆ ಓಡೋಡಿ ಸೆಟ್ಟಿಗೆ ಬಂದುಬಿಡುವಂಥಾ ಅಪಾರ ಸಿನಿಮಾ ಪ್ರೀತಿ ಹೊಂದಿರುವಾತ ಹೆದ್ದೂರಿನ ಮಂಜ!
ಇಂಥವನು ಹೇಳಿದ ಕಥೆಯನ್ನು ಒಪ್ಪಿದ ಜಯಶ್ರೀಯನ್ನು ಮಂಜು ಹೆದ್ದೂರ ಮತ್ತವನ ಮ್ಯಾನೇಜರ್ ಮಣಿ ಸೇರಿಕೊಂಡು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದು ತಿಂಗಳ ಹಿಂದೆ. ಅಲ್ಲಿಯೇ ಜಯಶ್ರೀಗೆ ಅಡ್ವಾನ್ಸ್ ಹಣವೂ ಸಂದಾಯವಾಗಿತ್ತು. ಆದರೆ ಅದಾದ ಮಾರನೇ ದಿನದಿಂದಲೇ ಮ್ಯಾನೇಜರ್ ಮಣಿ ಜಯಶ್ರೀಗೆ ಕಾಳು ಹಾಕಲು ಶುರುವಿಟ್ಟುಕೊಂಡಿದ್ದ. ಸುಖಾ ಸುಮ್ಮನೆ ಫೋನು ಮಾಡುತ್ತಿದ್ದವನು ಒಟ್ಟಿಗೆ ಟಿಫನ್ ಮಾಡೋಣ, ಔಟಿಂಗ್ ಹೋಗೋಣ ಅಂತೆಲ್ಲ ಕೆರೆಯಲಾರಂಭಿಸಿದ್ದ. ತಿಂಗಳ ಕಾಲ ಹೀಗೆ ಪಳಗಿಸಿಕೊಳ್ಳಲು ಪ್ರಯತ್ನಿಸಿದ ಮಣಿ ಅದೊಂದು ದಿನ ಹತಾಶೆಯಿಂದ ಜಯಶ್ರೀಗೆ ಫೋನು ಮಾಡಿದವನೇ ನೀವು ಸ್ವಲ್ಪನಾದ್ರೂ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳದಿದ್ರೆ ಕಷ್ಟ ಅಂತ ನೇರವಾಗಿಯೇ ಹೇಳಿದ್ದನಂತೆ. ಅದನ್ನು ಕೇಳಿ ಜಯಶ್ರೀ ತರಾಟೆಗೆ ತೆಗೆದುಕೊಂಡಿದ್ದೇ ಮಣಿ ಕೊಂಚ ಸುಮ್ಮನಾಗಿದ್ದ.
ಇದೆಲ್ಲ ಆಗುವವರೆಗೆ ತಾವಾಯಿತು ತಮ್ಮ ಎಣ್ಣೆ ಸಮಾರಾಧನೆಯಾಯಿತು ಎಂಬಂತಿದ್ದ ನಿರ್ದೇಶಕ ಮಂಜು ಸಾಹೇಬರೂ ಅಖಾಡಕ್ಕಿಳಿದಿದ್ದಾರೆ. ಜಯಶೀಗೆ ಫೋನು ಮಾಡಿ ಸಿನಿಮಾ ಬಿಟ್ಟು ರೊಮ್ಯಾಂಟಿಕ್ ಮೂಡಲ್ಲಿ ಕುಯ್ಯಲು ಶುರುವಿಟ್ಟಿದ್ದಾರೆ. ಹಾಯಾಗಿ ಜಯಶ್ರೀಯ ಜೊತೆ ಲಾಂಗ್ ಡ್ರೈವ್ ಹೋಗೋ ಮಹದಾಸೆಯನ್ನೂ ತೋಡಿಕೊಂಡಿದ್ದಾರೆ. ಆದರೆ ಇದೆಲ್ಲವನ್ನೂ ಜಯಶ್ರೀ ಅವಾಯ್ಡು ಮಾಡಿದಾಗ ಕಾಸ್ಟ್ಯೂಮ್ ಸೆಲೆಕ್ಷನ್ ನೆಪದಲ್ಲಿ ಮಣಿ ಹಾಗು ಮಂಜು ಸೇರಿಕೊಂಡು ಮತ್ತೊಂದು ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ. ಕಾಸ್ಟ್ಯೂಮ್ ಸೆಲೆಕ್ಷನ್ ಎಲ್ಲ ಆದರೂ ಕೂಡಾ ಜಯಶ್ರೀಯನ್ನು ತಮ್ಮೊಂದಿಗೇ ಇರಿಸಿಕೊಂಡಿದ್ದ ಇವರಿಬ್ಬರೂ ಡಿನ್ನರ್ ನೆಪದಲ್ಲಿ ಚಂದ್ರಾ ಲೇಔಟಿನ ಪಬ್ ಒಂದಕ್ಕೆ ಕರೆದುಕೊಂಡು ಹೋಗಿದ್ದರಂತೆ!
ಹೀಗೆ ಏನೇನು ಮಾಡಿದರೂ ಜಯಶ್ರೀ ಹೇಗಾದರೂ ಮಾಡಿ ಈ ಚಿತ್ರದಲ್ಲಿ ನಟಿಸಿದರೆ ಸಾಕೆಂಬುದರ ಬಗೆಗಷ್ಟೇ ಗಮನ ನೆಟ್ಟು ಕೂತಿದ್ದರೆ ಅದೊಂದು ರಾತ್ರಿ ಹೊತ್ತಿನಲ್ಲಿ ಮತ್ತೆ ಮಣಿಯ ಕರೆ ಬಂದಿದೆ. ಹತ್ತೂವರೆಯ ನಂತರ ಫೋನು ಮಾಡಿದ್ದ ಮಣಿ ತಕ್ಷಣವೇ ಪರ್ಫಾರ್ಮೆನ್ಸ್ ವೀಡಿಯೋ ಕಳಿಸುವಂತೆ ದುಂಬಾಲು ಬಿದ್ದಿದ್ದಾನೆ. ಜಯಶ್ರೀ ಸಾಧ್ಯವಿಲ್ಲ ಅಂತ ಮನವರಿಕೆ ಮಾಡಿಕೊಟ್ಟಿದ್ದಾಳೆ. ಇದಾದ ನಂತರ ಮಣಿಗೆ ಹೇಳಿಯೇ ಜಯಶ್ರೀ ಚೆನೈಗೆ ಹೋಗಿ ಬರೋ ಹೊತ್ತಿಗೆಲ್ಲ ಎಲ್ಲವೂ ಉಲ್ಟಾ ಹೊಡೆದಿದೆ. ಈ ಚಿತ್ರದ ವಾಟ್ಸಾಪ್ ಗ್ರೂಪಿನಲ್ಲಿಯೂ ಈಕೆಯ ನಂಬರನ್ನು ಬ್ಲಾಕ್ ಮಾಡಲಾಗಿದೆ. ಮಣಿ ಮತ್ತು ಮಂಜು ಇಬ್ಬರೂ ಈಕೆಯ ಕರೆ ಸ್ವೀಕರಿಸಲೇ ಇಲ್ಲವಂತೆ.
ಇವರಿಬ್ಬರೂ ತನ್ನನ್ನು ಬಳಸಿಕೊಳ್ಳಲು ಹವಣಿಸಿ ಅದು ಸಾಧ್ಯವಿಲ್ಲ ಅಂತ ಗೊತ್ತಾಗಿಯೇ ಬೇರೆ ನಟಿಯನ್ನು ಹಾಕಿಕೊಂಡು ಚಿತ್ರೀಕರಣ ಶುರು ಮಾಡಿದ್ದಾರೆಂಬುದು ಜಯಶ್ರೀಯ ಆರೋಪ. ಅದಕ್ಕೆ ಸರಿಯಾಗಿ ಮಾಧ್ಯಮಗಳ ಮುಂದೆ ಮಂಜು ಹೆದ್ದೂರ ಹೇಳುತ್ತಿರುವ ಸಬೂಬುಗಳೂ ಸಮಂಜಸವಾಗಿದ್ದಂತೆ ಕಾಣುತ್ತಿಲ್ಲ. ಈ ಹುಡುಗಿ ಈ ಪ್ರಕರಣವನ್ನು ಇಲ್ಲಿಗೇ ಬಿಡುವ ಲಕ್ಷಣಗಳೂ ಇಲ್ಲ. ಒಟ್ಟಾರೆಯಾಗಿ ಈ ಮೂಲಕ ಅವಕಾಶ ಕೇಳಿ ಬಂದ ಹುಡುಗೀರ ಜೊತೆ ಕಣ್ಣಾ ಮುಚ್ಚಾಲೆಯಾಡೋ ಕಾಸ್ಟ್ ಕೌಚಿಂಗ್ ಅಸಹ್ಯ ಮತ್ತೆ ಸದ್ದು ಮಾಡಿದೆ!
#
No Comment! Be the first one.