ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು… ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು.. ನೀ ಮೆಟ್ಟುವ ನೆಲ, ಅದೆ ಕರ್ನಾಟಕ, ನೀನೇರುವ ಮಲೆ ಸಹ್ಯಾದ್ರಿ ನೀ ಮುಟ್ಟುವ ಮರ ಶ್ರೀಗಂಧದ ಮರ…. ನೀ ಕುಡಿಯುವ ನೀರ್ ಕಾವೇರಿ.. ಎಲ್ಲಿದ್ದರೆ ಏನ್ ಎಂತಿದ್ದರೆ ಏನ್, ಎಲ್ಲಿದ್ದರೆ ಏನ್ ಎಂತಿದ್ದರೆ ಏನ್, ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ – ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ಸಾಲುಗಳು ಎಷ್ಟು ಚೆಂದ ಅಲ್ಲವೇ?

ಕನ್ನಡಿಗರು ಜಗತ್ತಿನ ಯಾವ ಮೂಲೆಯಲ್ಲಾದರೂ ಬದುಕಿ, ಬಾಳಲಿ, ಕನ್ನಡವನ್ನು ಮರೆಯದಿರಲಿ ಅನ್ನೋದು ಕವಿಯ ಆಶಯವಾಗಿದೆ. ಕುವೆಂಪು ಬಯಸಿದಂತೆ ಬದುಕುತ್ತಿರುವವರೂ ಸಾಕಷ್ಟು ಜನರಿದ್ದಾರೆ. ಆದರೆ, ಸಿನಿಮಾ ರಂಗದ ಕೆಲವು ನಿಯತ್ತಿಲ್ಲದ ಮಂದಿ ಕನ್ನಡದಿಂದಲೇ ಬೆಳೆದು, ಈ ಭಾಷೆಯನ್ನು ಮೆಟ್ಟಿಲಾಗಿಸಿಕೊಂಡು ಮೇಲೇರಿ ಇವತ್ತು ಅದೇ ಏಣಿಯನ್ನು ಒದೆಯುವ ಕೆಲಸ ಮಾಡುತ್ತಿದ್ದಾರೆ.

ಲೂಸ್‌ ಮಾದ ಯೋಗೇಶ್‌ ಹೀರೋ ಆಗಿ ಎಂಟ್ರಿ ಕೊಟ್ಟ ಸಿನಿಮಾ ನಂದ ಲವ್ಸ್‌ ನಂದಿತಾ. ಈ ಚಿತ್ರದಲ್ಲಿ ಶ್ವೇತಾ ಎಂಬ ಹುಡುಗಿ ನಾಯಕಿಯಾಗಿದ್ದಳು. ಈ ಸಿನಿಮಾ ಹಿಟ್‌ ಆಗಿದ್ದೇ ನಂದಿತಾ ಅನ್ನೋ ಹೆಸರೇ ಈಕೆಗೆ ಕಾಯಮ್ಮಾಗಿಹೋಯ್ತು. ಸಿನಿಮಾ ನಟಿಯಾಗೋದಕ್ಕೆ ಮುಂಚೆ ಉದಯ ಟಿವಿಯಲ್ಲಿ ನಿರೂಪಕಿಯಾಗಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದಳು. ಚಿತ್ರವಾರ್ತೆ ಎನ್ನುವ ಕಾರ್ಯಕ್ರಮವನ್ನೂ ಈಕೆ ನಿರೂಪಿಸುತ್ತಿದ್ದಳು. ಹಾಗೆ ನೋಡಿದರೆ, ಶ್ವೇತಾ ಹೀರೋಯಿನ್ ಆಗುವಂತಾ ಮೆಟೀರಿಯಲ್ಲೇ ಆಗಿರಲಿಲ್ಲ. ನಿರ್ದೇಶಕ ಬಿ.ಎನ್. ವಿಜಯ್‌ ಕುಮಾರ್ ಸವೆದುಹೋದ ಸೈಕಲ್‌ ಟ್ಯೂಬಿನಂತಿದ್ದ ಲೂಸ್‌ ಮಾದ ಯೋಗಿಗೆ ಹೊಂದುವಂತಾ ಜೋಡಿಯ ಹುಡುಕಾಟದಲ್ಲಿದ್ದರು.

ಯೋಗಿಗೆ ಈಕೆ ಸರಿಹೊಂದುತ್ತಾಳೆ ಅನ್ನೋ ಕಾರಣಕ್ಕೆ ಶ್ವೇತಾಳನ್ನು ಆಯ್ಕೆ ಮಾಡಿಕೊಂಡಿದ್ದರು. ನಂದ ಲವ್ಸ್‌ ನಂದಿತ ಸಿನಿಮಾ ಕೂಡಾ ಯೋಗಿಗೆ ಹೇಳಿಮಾಡಿಸಿದಂತೆ ಮೂಡಿಬಂದಿತ್ತು. ಜಿಂಕೆಮರೀನಾ ಅನ್ನೋ ಹಾಡನ್ನು ಪಡ್ಡೆ ಹುಡುಗರು ಸಿಕ್ಕಾಪಟ್ಟೆ ಇಷ್ಟ ಪಟ್ಟರು. ಈ ಕಾರಣದಿಂದ ಶ್ವೇತಾಗೂ ಹೆಸರು ಬಂತು. ಒಂದು ಸಿನಿಮಾ ಹಿಟ್‌ ಆದರೂ ಈಕೆಗೆ ಹೇಳಿಕೊಳ್ಳುವಂತಾ ಛಾನ್ಸುಗಳೇನೂ ಸಿಗಲಿಲ್ಲ. ಚಾಮರಾಜಪೇಟೆ ಎನ್ನುವ ಸಿನಿಮಾದಲ್ಲಿ ಈಕೆ ನಟಿಸುವ ಅವಕಾಶ ಪಡೆದಳಾದರೂ ಆ ಸಿನಿಮಾ ಮುಹೂರ್ತದ ನಂತರ ಮುಂದುವರೆಯಲೇ ಇಲ್ಲ. ಆ ಹೊತ್ತಿಗಾಗಲೇ ತಮಿಳಿನ ಅಡ್ಡಕತ್ತಿ, ಎದಿರ್‌ ನೀಚಲ್‌, ಇದಕ್ಕು ತಾನೆ ಆಸೆ ಪಟ್ಟೆ ಬಾಲಕುಮಾರ ಮುಂತಾದ ಸಿನಿಮಾಗಳಲ್ಲಿ ಶ್ವೇತಾ ಛಾನ್ಸು ಗಿಟ್ಟಿಸಿಕೊಂಡಿದ್ದಳು.

ವಿಜಯ್‌ ಸೇತುಪತಿ, ಸಸಿಕುಮಾರ್‌ ಸೇರಿದಂತೆ ಈಕೆ ಯಾರೊಂದಿಗೆ ನಟಿಸಿದಳೋ ಆ ಹೀರೋಗಳೆಲ್ಲಾ ಸ್ಟಾರುಗಳಾಗಿಬಿಟ್ಟರು. ಸಿನಿಮಾಗಳು ಹಿಟ್‌ ಆದವು. ಜೊತೆಗೆ ತೆಲುಗಿನ ಸಿನಿಮಾಗಳಲ್ಲೂ ನಟಿಸಿದಳು. ಈಕೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರಲು ಟ್ರೈ ಮಾಡಿದಳೋ ಇಲ್ಲವೋ? ಗೊತ್ತಿಲ್ಲ. ಆದರೆ ನಮ್ಮವರಂತೂ ಕರೆತರುವ ಪ್ರಯತ್ನವನ್ನು ಮಾಡಲಿಲ್ಲ. ಈ ನಡುವೆ ಯಶ್‌ ಅಭಿನಯದ ಕಿರಾತಕ -೨ ಚಿತ್ರಕ್ಕೆ ಈಕೆಯೇ ನಾಯಕಿ ಅಂತಾ ಸುದ್ದಿಯಾದರೂ, ಸಿನಿಮಾ ನಿಂತಿತು.

ಬಸವೇಶ್ವರ ನಗರ ಬಳಿಯಿರುವ ಕಮಲಾನಗರದ ಸ್ಲಮ್ಮಿನಲ್ಲಿ ಬೆಳೆದ ಹುಡುಗಿ ಶ್ವೇತಾ ಟೀವಿ ನಿರೂಪಕಿಯಾಗಿ, ಸಿನಿಮಾ ನಟಿಯಾಗಿ, ಕನ್ನಡದ ಗಡಿ ದಾಟಿ ತಮಿಳುನಾಡಲ್ಲಿ ಹೆಸರು ಮಾಡಿದ್ದೇನೋ ಸರಿ. ಆದರೆ ಈಕೆ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಆಡಿರುವ ಮಾತುಗಳನ್ನು ಕೇಳಿದರೆ, ಕನ್ನಡಿಗರ ಮನಸ್ಸು ವ್ಯಘ್ರಗೊಳ್ಳದೇ ಇರೋದಿಲ್ಲ. ʻʻನಾನು ಆಲ್‌ ಮೋಸ್ಟ್‌ ಕನ್ನಡವನ್ನು ಮರೆತೇಬಿಟ್ಟಿದ್ದೀನಿ. ಮನೆಯಲ್ಲೂ ನಾನು ತಮಿಳಿನಲ್ಲೇ ಮಾತಾಡೋದು…ʼʼ ಎಂಬ ದಟ್ಟದರಿದ್ರದ ಮಾತುಗಳನ್ನಾಡಿದ್ದಾಳೆ ಈ ಹುಡುಗಿ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ನೆರೆಯ ಸಿನಿಮಾರಂಗಗಳಲ್ಲಿ ಹೆಸರು ಮಾಡಿರುವ ಅಗಣಿತ ಕಲಾವಿದರಿದ್ದಾರೆ. ಸೂಪರ್‌ ಸ್ಟಾರ್‌ ರಜನಿ ಕಾಂತ್, ಅರ್ಜುನ್‌ ಸರ್ಜಾ ಆದಿಯಾಗಿ ಇವತ್ತಿನ ಅನುಷ್ಕಾ ಶೆಟ್ಟಿ ತನಕ ದಂಡಿ ದಂಡಿ ಕಲಾವಿದರು ಇಲ್ಲಿಂದ ಹೋಗಿ ಅಕ್ಷರಶಃ ಪರಭಾಷೆಗಳಲ್ಲಿ ಆಳ್ವಿಕೆ ನಡೆಸಿದ್ದಾರೆ. ಅವೆರಲ್ಲಾ ಯಾವತ್ತೂ ಇಂತಾ ದೌಲತ್ತಿನ ಮಾತಾಡಿಲ್ಲ.

ಕನ್ನಡದಿಂದ ಲಾಟು ಲಾಟು ಜನ ತಮಿಳು-ತೆಲುಗು ಸೇರಿದಂತೆ ದೇಶದ ಎಲ್ಲ ಭಾಷೆಗಳಲ್ಲೂ ನಟಿಸಿದ್ದಾರೆ. ಸಾಕಷ್ಟು ಮಂದಿ ಉದ್ಯೋಗಕ್ಕೆ ಯಾವುದು ಒಳ್ಳೇ ಜಾಗ ಅನಿಸಿತೋ ಅಲ್ಲಲ್ಲೇ ನೆಲೆ ಕಂಡುಕೊಂಡಿದ್ದಾರೆ. ಆದರೆ ಯಾವತ್ತಿಗೂ ಕನ್ನಡ-ಕರ್ನಾಟಕವನ್ನು ಅವರು ಮರೆತಿಲ್ಲ. ಬಿಡುವು ಸಿಕ್ಕಿತೆಂದರೆ ಮೊದಲು ಓಡೋಡಿ ಬರೋದು ಕನ್ನಡ ನೆಲಕ್ಕೆ. ಇವತ್ತು ರಜನಿಕಾಂತ್, ಪ್ರಕಾಶ್ ರೈ ಸೇರಿದಂತೆ ಕರ್ನಾಟಕದಿಂದ ವಲಸೆ ಹೋಗಿರುವ ನಟರೆಲ್ಲಾ ಬೇಸರ ಅನಿಸಿದಾಗ, ಮನಸ್ಸು ಭಾರವಾದಾಗ ಸೀದಾ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸುತ್ತಾರೆ.

ರಜನಿಕಾಂತ್ ರಂಥಾ ನಟ ಜಗತ್ತಿನ ಯಾವ ಮೂಲೆಗೆ ಬೇಕಾದರೂ ಹೋಗಿ ರಿಲ್ಯಾಕ್ಸ್ ಮಾಡಬಹುದು. ಆದರೆ ಅವರು ಆಡಿ ಬೆಳೆದ ಗವೀಪುರ, ಗುಟ್ಟಳ್ಳಿ, ಹನುಮಂತನಗರದ ರಸ್ತೆ ರಸ್ತೆಗಳಲ್ಲಿ ಮುಖ ಮರೆಸಿಕೊಂಡು ಓಡಾಡಿ ಹೋದರೇನೇ ಅವರ ಮನಸ್ಸಿಗೆ ನಿರಾಳ. ಯೋಗರಾಜ ಭಟ್ಟರು ಬರೆದಿರುವ ‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ ಅನ್ನೋ ಸಾಲು ಸ್ವತಃ ಈ ನಟರ ಅನುಭವಕ್ಕೆ ಬಂದಿರಲಾರದು. ಬದುಕಿಗಾಗಿ ಎಲ್ಲೇ ಇದ್ದರೂ ಜನ್ಮ ನೀಡಿದ ಸ್ಥಳ ಯಾರನ್ನೇ ಆದರೂ ಸೆಳೆಯದೇ ಇರೋದಿಲ್ಲ.

ಆರಕ್ಕೇರದ ಮೂರಕ್ಕಿಳಿಯದ ಛಾಯಾ ಸಿಂಗ್‌ ನಾನೀಗ ತಮಿಳಿನ ಮನೆಮಗಳು ಅಂದಿದ್ದಳು. ಇಲ್ಲೇ ಹುಟ್ಟಿ ಬೆಳೆದು ಹೆಸರು ಮಾಡಿದ ಚಪ್ಲಿ ವಿಜಯಲಕ್ಷ್ಮಿ ಇಲ್ಲಿ ಬಂದು ಚಪ್ಪರ್‌ ಎತ್ತಿ, ಸಿಕ್ಕಸಿಕ್ಕವರ ಬಳಿ ಕಾಸು ಕಿತ್ತುಕೊಂಡು ಹೋಗಿ ʻಇನ್ಯಾವತ್ತೂ ಕರ್ನಾಟಕಕ್ಕೆ ಕಾಲಿಡಲ್ಲʼ ಅಂದಳು. ಈಗ ಇದೇ ಹಾದಿಯನ್ನು ಅನುಸರಿಸುತ್ತಿರುವ ನಂದಿತಾ ಶ್ವೇತಾ ʻನಾನು ಕನ್ನಡವನ್ನೇ ಮರೆತುಬಿಟ್ಟಿದ್ದೀನಿʼ ಎನ್ನುವ ದುರಹಂಕಾರದ ಮಾತಾಡಿಬಿಟ್ಟಿದ್ದಾಳೆ. ಸಂದರ್ಶನ ನೀಡುವ ಭರದಲ್ಲಿ, ಎಕ್ಸೈಟ್‌ ಮೆಂಟಿಗೆ ಒಳಗಾಗಿ ಈಕೆ ಹೀಗಂದಳೋ ಅಥವಾ ನಿಜಕ್ಕೂ ಈಕೆ ಕನ್ನಡವನ್ನು ಮರೆತಿದ್ದಾಳೋ ಗೊತ್ತಿಲ್ಲ… ಆದರೆ ಶ್ವೇತಾ ನಿಜಕ್ಕೂ ತಪ್ಪು ಮಾತಾಡಿದ್ದಾಳೆ.

ಈ ನೆಲದಲ್ಲಿ ಜನ್ಮವೆತ್ತಿ, ನಮ್ಮ ಭಾಷೆಯನ್ನು ಮರೆತು, ಮತ್ತೆಲ್ಲೋ ಕೂತು ಬೇಕಾಬಿಟ್ಟಿ ಮಾತಾಡುವ ಯಾರನ್ನೂ ಕನ್ನಡಿಗರು ಕ್ಷಮಿಸಬಾರದು. ಅಹಂಕಾರಕ್ಕೆ ಉದಾಸೀನವೇ ಮದ್ದು ಅನ್ನುವಂತೆ ಇನ್ಯಾವತ್ತೂ ಇಂಥವರಿಗೆ ಕರೆದು ಅವಕಾಶ ಕೊಡಬಾರದು. ಕನ್ನಡವನ್ನು ಮರೆತು ತಮಿಳಿನಲ್ಲಿ ಮಾತಾಡುವುದರಲ್ಲೇ ಈಕೆಗೆ ಹೆಮ್ಮೆಯಿದ್ದೆರೆ ಅಲ್ಲೇ ಸುಖವಾಗಿರಲಿ. ಜೈ ಕರ್ನಾಟಕ ಮಾತೆ!!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬಿಚ್ಚುಗತ್ತಿ ಹಿಡಿದವನ ಕೈಲಿ ಲಾಂಗು!

Previous article

ರಮೇಶ್‌ ಅರವಿಂದ್‌ ಹುಟ್ಟು ಹಬ್ಬಕ್ಕೆ 100 ಸಾಂಗ್‌ ಗಿಫ್ಟ್!‌

Next article

You may also like

Comments

Leave a reply

Your email address will not be published. Required fields are marked *