ದಿ ವಿಲನ್ ಅಂತೊಂದು ಸಿನಿಮಾ ಮಾಡಿ, ಅದನ್ನೇ ವರ್ಷಗಟ್ಟಲೆ ಎಳೆದಾಡಿ ಕಡೆಗೂ ಹಳಸಲು ಪ್ರಾಡಕ್ಟೊಂದನ್ನು ಥೇಟರಿಗೆಸೆದವರು ಜೋಗಿ ಪ್ರೇಮ್. ಸ್ಪಾಟಲ್ಲಿಯೇ ಬೋಗಿಗೆ ಬೋಗಿ ಸೇರಿಸಿಕೊಂಡು ಟ್ರೈನು ಬಿಡುವ ಕಲೆಗಾರ ಪ್ರೇಮ್ ವಿಲನ್ ವಿಚಾರದಲ್ಲಿ ಸಾಮಾನ್ಯ ಪ್ರೇಕ್ಷಕರಿಂದಲೂ ಉಗಿಸಿಕೊಂಡಿದ್ದಾಗಿದೆ. ಸುದೀಪ್ ಮತ್ತು ಶಿವಣ್ಣನ ಅಭಿಮಾನಿಗಳಿಗಂತೂ ಈ ಬಗ್ಗೆ ಈ ಕ್ಷಣಕ್ಕೂ ಕೋಪವಿದೆ.
ಹೀಗಿರುವಾಗಲೇ ಮತ್ತೆ ಬೈರೇಗೌಡರ ಕಡೆಯಿಂದ ಬುರುಡೆ ಬಾಣವೊಂದು ಪುಟಿದಿದೆ. ಅದರ ಪ್ರಕಾರವಾಗಿ ಹೇಳೋದಾದ್ರೆ, ಪ್ರೇಮ್ ದಿ ವಿಲನ್ಗೂ ಮುಂಚೆಯೇ ಮಾತಾಡಿದ್ದ ಕಲಿ ಚಿತ್ರವನ್ನ ಮತ್ತೆ ಆರಂಭಿಸಿದ್ದಾರಂತೆ. ಇದೇನು ಸಣ್ಣ ಮಟ್ಟದ ಸಿನಿಮಾ ಅಲ್ಲ. ಇದರಲ್ಲಿ ಭಾರತೀಯ ಚಿತ್ರರಂಗದ ಆರು ಮಂದಿ ಸ್ಟಾರ್ಗಳು ನಟಿಸಲಿದ್ದಾರಂತೆ.
ಪ್ರೇಮ್ ಸಾಹೇಬರು ಇಂಥಾದ್ದೊಂದು ರೋಚಕ ಕಥೆಯನ್ನು ಎಫ್ ಬಿ ಲೈವ್ ಮೂಲಕವೇ ಹೇಳಿಕೊಂಡಿದ್ದಾರೆ. ಈಗಾಗಲೇ ತಲೈವಾ ರಜನೀಕಾಂತ್ ಮತ್ತು ಕಮಲ್ ಹಾಸನ್ ಮುಂತಾದ ದೊಡ್ಡ ನಟರ ಜೊತೆಗೂ ಪ್ರೇಮ್ ಮಾತುಕತೆ ನಡೆಸಿದ್ದಾರಂತೆ. ಈ ಬಾರಿ ದೊಡ್ಡ ಕನಸು ಕಂಡು ಅದ್ಭುತವಾದ ಚಿತ್ರವನ್ನೇ ಮಾಡೋದಾಗಿ ಪ್ರೇಮ್ ಆಣೆ ಪ್ರಮಾಣ ಮಾಡಿ ಹೇಳಿದ್ದಾರೆ. ಆದರೆ ಪ್ರೇಮ್ ಗಿಮಿಕ್ ಗಳನ್ನ ಇಂಚಿಂಚಾಗಿ ಅರ್ಥ ಮಾಡಿಕೊಂಡ ಪ್ರೇಕ್ಷಕರು ಮಾತ್ರ ಈ ಬಗ್ಗೆ ಒಂಚೂರು ತಲೆ ಕೆಡಿಸಿಕೊಂಡಂತಿಲ್ಲ. ಯಾಕೆಂದರೆ, ಪ್ರೇಮ್ ಮುಂದಿನ ವರ್ಷದವರೆಗೆ ಅಜ್ಞಾತವಾಸದಲ್ಲಿದ್ದು ಮತ್ತೊಂದು ಮಹಾ ಬುರುಡೆ ಪುರಾಣದೊಂದಿಗೆ ಪ್ರತ್ಯಕ್ಷವಾದರೂ ಅಚ್ಚರಿಯೇನಿಲ್ಲ!
#
No Comment! Be the first one.