ನಾನು ಕೈಗೆ ತಗೊಂಡ ಕೇಸು ಗೆದ್ದೇಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್ ಹೊಂದಿದ ಕ್ರೇಜಿ ಲಾಯರ್ ಅವರು. ಲಾಯರ್ ಗೋವಿಂದ ಮುಟ್ಟಿದ ಕೇಸೆಂದರೆ ಜಡ್ಜ್ಗಳಿಗೂ ಒಂಥರಾ ಕ್ಯೂರಿಯಾಸಿಟಿ. ಇಂಥ ಪಬ್ಲಿಕ್ ಪ್ರಾಸಿಕ್ಯೂಟರ್ ಅದೊಂದು ಮರ್ಡರ್ ಕೇಸನ್ನು ಕೈಗೆತ್ತಿಕೊಳ್ಳುತ್ತಾರೆ. ಅದು ಎನ್ ಜಿ ಓ ಕಾರ್ಯಕರ್ತೆಯೊಬ್ಬಳ ಕೊಲೆ ಪ್ರಕರಣ. ತಮ್ಮದೇ ಶೈಲಿಯಲ್ಲಿ ವಾದ ಮಂಡಿಸುತ್ತಾರೆ. ಆರೋಪಿಗೆ ಶಿಕ್ಷೆಯನ್ನೂ ಕೊಡಿಸುತ್ತಾರೆ. ಅಸಲಿಗೆ ಆತ ಕೊಲೆಯನ್ನು ಮಾಡಿರೋದೇ ಇಲ್ಲ. ಹಾಗೆ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗೋದೇ ನಾಯಕ ದಿಗಂತ್. ಮಾಡದ ಅಪರಾಧಕ್ಕಾಗಿ ಜೈಲಿಗೆ ಹೋದ ಕೊರಗು ಹೀರೋಗೆ. ಅಸಲೀ ವಿಚಾರ ಗೊತ್ತಾದಮೇಲೆ ಪ್ರಾಸಿಕ್ಯೂಟರ್ಗೆ ಪಾಪಪ್ರಜ್ಞೆ ಕಾಡಲು ಶುರುವಾಗುತ್ತದೆ. ಮುಂದೆ ಏನೆಲ್ಲಾ ಘಟಿಸುತ್ತದೆ? ಲಾಯರ್ ಗೋವಿಂದ ಅನ್ಯಾಯದ ಪರವಾ? ನಿರಪರಾಧಿಯ ಪಾಡೇನಾಗುತ್ತದೆ? ಅಸಲಿಗೆ ಈ ಕೊಲೆಯ ಹಿಂದೆ ಯಾರೆಲ್ಲಾ ಇರುತ್ತಾರೆ? ಅದು ಹೇಗೆ ಬೆಳಕಿಗೆ ಬರುತ್ತದೆ? ಇಂಥ ಹತ್ತು ಹಲವು ಪ್ರಶ್ನೆಗಳಿಗೆ ಚಿತ್ರದಲ್ಲಿ ಹಂತ ಹಂತವಾಗಿ ಉತ್ತರ ನೀಡಲಾಗಿದೆ.
ಈ ಹಿಂದೆ ಅಮೃತ ಅಪಾರ್ಟ್ಮೆಂಟ್ ಎನ್ನುವ ಬ್ಯೂಟಿಫುಲ್, ಥ್ರಿಲ್ಲರ್ ಸಿನಿಮಾ ಕೊಟ್ಟಿದ್ದವರು ನಿರ್ದೇಶಕ ಗುರುರಾಜ ಕುಲಕರ್ಣಿ ನಾಡಗೌಡ. ಇದು ನಿರ್ದೇಶಕರಾಗಿ ಅವರ ಎರಡನೇ ಪ್ರಯತ್ನ. ಸಣ್ಣ ಸಣ್ಣ ಪಾತ್ರಕ್ಕೂ ಪ್ರೊಫೆಷನಲ್ ನಟರನ್ನೇ ಬಳಸಿಕೊಂಡಿದ್ದಾರೆ. ರಂಗಾಯಣ ರಘು ನಟನೆ ಎಲ್ಲೂ ʻಓವರ್ʼ ಅನ್ನಿಸುವುದಿಲ್ಲ. ತುಂಬಾನೇ ಸೆಟಲ್ಡ್ ಆಗಿ ನಟಿಸಿದ್ದಾರೆ. ಹಾಗೇ ರವಿಚಂದ್ರ ಕರಿಕೋಟಿನ ಕ್ರೇಜಿ ಲಾಯರ್ ಪಾತ್ರಕ್ಕೆ ಹೇಳಿಮಾಡಿಸಿದಂತೆ ಕಾಣಿಸುತ್ತಾರೆ. ದಿಗಂತ್ ಪಾಪದ ಪ್ರಾಣಿಯಂತೆ ಕಾಣುತ್ತಾರೆ. ರೂಪಾ ರಾಯಪ್ಪ ಮಾದಕತೆಗೆ ಕೊಡುವ ಪ್ರಾಮುಖ್ಯತೆಯನ್ನು ನಟನೆಗೂ ಕೊಡಬೇಕಿದೆ. ಕೃಷ್ಣ ಹೆಬ್ಬಾಲೆ ಥೇಟು ರಾಜಕಾರಣಿಯಂತೆ ಪಾತ್ರ ನಿರ್ವಹಿಸಿದ್ದಾರೆ. ʻಕಿಕಿಕಿಕಿʼ ಅಂತಾ ನಗುವ ಮ್ಯಾನರಿಸಮ್ಮನ್ನು ಸೇರಿಕೊಂಡಿದ್ದಾರೆ. ಕೈಲಾಶ್ ಮತ್ತು ಪ್ರಕಾಶ್ ಬೆಳವಾಡಿ ಸಹಜವಾಗಿದ್ದರೆ, ಸುಜಯ್ ಶಾಸ್ತ್ರಿ ನಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ರಾಜೇಂದ್ರ ಕಾರಂತರದ್ದು ಯಥಾಪ್ರಕಾರ ಓವರ್ ಡ್ರಾಮಾ… ಇಷ್ಟೆಲ್ಲಾ ಕಲಾವಿದರ ನಡುವೆ ಸುಳ್ಳು ಕೇಸಲ್ಲಿ ಫಿಟ್ ಆಗಿ ಬರುವ ಕ್ಯಾರೆಕ್ಟರಿನ ಹುಡುಗ ಅದ್ಭುತವಾಗಿ ನಟಿಸಿದ್ದಾನೆ. ಚಾಮರಾಜನಗರದ ಆತನ ಭಾಷೆಯ ಬಳಕೆ, ನ್ಯಾಚುರಲ್ ನಟನೆ ಎಲ್ಲರನ್ನೂ ಸೆಳೆಯುತ್ತದೆ. ಮೇಘನಾ ಗಾಂವ್ಕರ್ ಮತ್ತು ಮಗನ ಪಾತ್ರದ ಲೂಪ್ ಕ್ರಿಯೇಟ್ ಮಾಡಿ ಅದನ್ನು ಎಂಡ್ ಮಾಡಿಲ್ಲ.. ಲಕ್ಷ್ಮೀ ಗೋಪಾಲಸ್ವಾಮಿ ಅವರನ್ನು ಅತ್ಯಕ್ಕೆ ತಕ್ಕಷ್ಟು ಬಳಸಿಕೊಳ್ಳಲಾಗಿದೆ. ಧನ್ಯಾ ರಾಮ್ಕುಮಾರ್ ಅವರನ್ನು ಅಗತ್ಯವೇ ಇಲ್ಲದೆ ತೋರಿಸಲಾಗಿದೆ.!
ಪಿ.ಕೆ.ಹೆಚ್. ದಾಸ್ ಪ್ರತೀ ದೃಶ್ಯವನ್ನೂ ಕಾಂಪ್ಯಾಕ್ಟ್ ಆಗಿ ತೋರಿಸಿದ್ದಾರೆ. ವೈಡ್ ಎಸ್ಟಾಬ್ಲಿಷ್ ಮಾಡೋದನ್ನು ಅವಾಯ್ಡ್ ಮಾಡಿದ್ದಾರೆ. ಹಲವು ಕಡೆ ಕ್ಲೋಸ್ ರಿಯಾಕ್ಷನ್ಗಳಲ್ಲಿ ಮಾತ್ರ ಕಾಣಿಸುವ ರಂಗಾಯಣ ರಘು ವೈಡ್ನಲ್ಲಿ ಕಾಣಿಸೋದೇ ಇಲ್ಲ. ಇವೆಲ್ಲ ಲಿಮಿಟೇಷನ್ನುಗಳೊಳಗಾಗಿರುವ ಪ್ರಮಾದಗಳು ಅನ್ನಬಹುದು. ಇವೆಲ್ಲ ಏನೇ ಇರಲಿ, ಸಂವಿಧಾನದ ಆಶಯವನ್ನು ಉಳಿಸಿರುವುದು ಈ ಚಿತ್ರದ ಹಿರಿಮೆ…
ಉಳಿದಂತೆ ಒಂದೊಳ್ಳೆ ಕಂಟೆಂಟ್ ಅನ್ನು ಗುರುರಾಜ್ ಕುಲಕರ್ಣಿ ನೀಟಾಗಿ ಪ್ರೆಸೆಂಟ್ ಮಾಡಿದ್ದಾರೆ. ಯಾವುದೇ ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ನಿಶ್ಚಿಂತೆಯಿಂದ ನೋಡಬಹುದು.!
No Comment! Be the first one.