ಸಿನಿಮಾ ನಟಿಯರು ಚಲಾವಣೆಯಲ್ಲಿದ್ದಾಗ ಎಂಥಾ ಪಾತ್ರಗಳಲ್ಲೂ ಲೀಲಾಜಾಲವಾಗಿ ನಟಿಸಿಬಿಡುತ್ತಾರೆ. ಮುಂದೊಂದು ದಿನ ಅದೇ ಸಿನಿಮಾಗಳು, ಅವರೇ ನಟಿಸಿದ ದೃಶ್ಯಗಳು ಅವರನ್ನು ಮುಜುಗರಕ್ಕೀಡು ಮಾಡುತ್ತದೆ. ಇದಕ್ಕೆ ಉದಾಹರಣೆಯಂತೆ ನಟಿಯೊಬ್ಬಳು ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ.
ತೊಂಬತ್ತರ ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಮೆರೆದ, ತನ್ನ ಮಾದಕ ನೋಟ, ಮೈಮಾಟದಿಂದ ರಸಿಕರ ನಿದ್ದೆಗೆಡಿಸಿದ್ದವಳು ಜೂಹಿ ಚಾವ್ಲಾ. ಸುಲ್ತಾನತ್ ಎನ್ನುವ ಸಿನಿಮಾವೊಂದರಲ್ಲಿ ನಟಿಸಿದ್ದ ಜೂಹಿಯನ್ನು ನಮ್ಮ ಕ್ರೇಜ಼ಿ ಸ್ಟಾರ್ ರವಿಚಂದ್ರನ್ ಪ್ರೇಮಲೋಕಕ್ಕಾಗಿ ಕರೆತಂದರು. ಸಿನಿಮಾ ಸೂಪರ್ ಹಿಟ್ ಆಯಿತು. ಹನ್ನೊಂದು ಹಾಡುಗಳಿದ್ದ ಪ್ರೇಮಲೋಕದಲ್ಲಿ ನಿಂಬೆ ಹಣ್ಣಿನಂಥಾ ಹುಡುಗಿ ಜೂಹಿ ಥರಾವರಿ ಮಿಂಚಿದಳು. ಆನಂತರ ಬಾಲಿವುಡ್ಡಿನ ವಿಶಾಲ ಅಂಗಳದಲ್ಲಿ ಜೂಹಿ ಪರಿಪರಿಯಾಗಿ ಮೆರೆದಳು.
ಇಂಥ ಜೂಹಿಗೆ ಈಗ ಮದುವೆಯಾಗಿದೆ. ಜಾಹ್ನವಿ ಮತ್ತು ಅರ್ಜುನ್ ಎಂಬ ಇಬ್ಬರು ಮಕ್ಕಳಿದ್ದಾರೆ. ವಯಸ್ಸು ಐವತ್ತು ದಾಟಿದೆ. ಈ ಹೊತ್ತಿನಲ್ಲಿ ಜೂಹಿ ವಿಚಿತ್ರವಾದ ಮುಜುಗರ ಅನುಭವಿಸುತ್ತಿದ್ದಾಳೆ. ಅದೇನೆಂದರೆ, ತಾನು ನಟಿಸಿದ ಯಾವುದೇ ಸಿನಿಮಾವನ್ನು ನೋಡು ಅಂದಾಗ ಮಗ ಅರ್ಜುನ್ ಅದರಲ್ಲಿ ರೊಮ್ಯಾನ್ಸ್ ಸೀನುಗಳಿವೆಯಾ?ʼ ಅಂತಾ ಪ್ರಶ್ನಿಸುತ್ತಾನಂತೆ. ಒಂದು ವೇಳೆ ʻಹೌದುʼ ಎಂದಾದರೆ, ʻಯಾವ ಕಾರಣಕ್ಕೂ ನಾನು ಆ ಸಿನಿಮಾ ನೋಡೋದಿಲ್ಲ. ನೀನು ಪ್ರಣಯ ದೃಶ್ಯಗಳಲ್ಲಿ ಕಾಣಿಸಿಕೊಂಡ ಸಿನಿಮಾವನ್ನು ನೋಡಲು ನನ್ನ ಮನಸ್ಸಿಗೆ ಹಿಂಸೆಯಾಗುತ್ತದೆ. ಈ ಕಾರಣದಿಂದಲೇ ನಾನು ನಿನ್ನ ಬಹುತೇಕ ಸಿನಿಮಾಗಳನ್ನು ನೋಡಲು ಬಯಸೋದಿಲ್ಲʼ ಎಂದು ಮಗ ಅರ್ಜುನ್ ನೇರವಾಗಿ ಹೇಳಿದ್ದಾನಂತೆ. ಈ ವಿಚಾರವನ್ನು ಸ್ವತಃ ಜೂಹಿಚಾವ್ಲಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ. ಈಕೆಯ ಪತಿ ಜಯ್ ಮೆಹ್ತಾಗೆ ಜೂಹಿಯ ಸಿನಿಮಾಗಳನ್ನು ನೋಡೋದೆಂದರೆ ಇಷ್ಟವಂತೆ. ಅದು ಸಿನಿಮಾ, ನೀನು ನಿರ್ವಹಿಸಿರೋದು ಪಾತ್ರ. ಸಿನಿಮಾವನ್ನು ಸಿನಿಮಾವನ್ನಾಗಿ ನೋಡಬೇಕು. ಅದನ್ನು ಪರ್ಸನಲ್ಲಾಗಿ ಯಾಕೆ ತಗೋಬೇಕು ಅನ್ನೋದು ಮೆಹ್ತಾ ವಾದ. ಮಗ ಅರ್ಜುನ್ ನಿಲುವು ಇದಕ್ಕೆ ವಿರುದ್ಧವಾಗಿದೆ. ನನ್ನ ತಾಯಿ ಯಾರೊಂದಿಗೇ ರೊಮ್ಯಾನ್ಸ್ ದೃಶ್ಯದಲ್ಲಿ ಪಾಲ್ಗೊಂಡಿರೋದನ್ನು ನಾನು ನೋಡಿ ಎಂಜಾಯ್ ಮಾಡಲು ಹೇಗೆ ಸಾಧ್ಯ ಅನ್ನೋದು ಈ ಹುಡುಗನ ವಾದ.
ಏನೇ ಇರಲಿ, ಸಿನಿಮಾ ಕಲಾವಿದರು ಹೆಸರು, ಹಣ ಎಲ್ಲವನ್ನೂ ಸಂಪಾದಿಸಿರುತ್ತಾರೆ. ಇಂಥ ಸೂಕ್ಷ್ಮಗಳು ಅವರನ್ನು ಬಿಟ್ಟೂ ಬಿಡಲಾರದಂತೆ ಕಾಡುತ್ತಿರುತ್ತವೆ. ಜೂಹಿ ಚಾವ್ಲಾ ಅದ್ಭುತ ನಟಿ. ಜನ ಯಾವತ್ತೂ ಮರೆಯದ ಉತ್ತಮ ಪಾತ್ರಗಳನ್ನೂ ನಿರ್ವಹಿಸಿರುವ ಕಲಾವಿದೆ. ಆದರೆ, ಬರೀ ಹಣ ಸಂಪಾದನೆಗಾಗಿ ಎಂತೆಂಥದ್ದೋ ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸಿರುತ್ತಾರಲ್ಲಾ? ಅವರ ಮನೆಯವರು, ಮಕ್ಕಳು ಭವಿಷ್ಯದಲ್ಲಿ ಎಷ್ಟೆಲ್ಲಾ ಮುಜುಗರಗಳನ್ನು ಫೇಸ್ ಮಾಡಬೇಕಾಗುತ್ತದೆ ಅಲ್ಲವಾ?