ಕನ್ನಡದ ಚಿತ್ರರಂಗ ಇನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಸಿಕ್ಕಿಕೊಂಡಿದೆ. ಅಪ್ಪನ ಆಸೆ ಈಡೇರಿಸಲು ಮಗ ಮುಂದೆ ನಿಲ್ಲೋ ಕತೆಗಳಿಲ್ಲಿ ಮಾಮೂಲು. ಆದರೆ ಅದಕ್ಕೆ ತದ್ವಿರುದ್ದವಾದ ಕತೆಯ ಸಿನಿಮಾವೊಂದು ತೆರೆಗೆ ಬಂದಿದೆ. ಅದು ಜೂಲಿಯೆಟ್೨.
ಯಾವುದೋ ಕಾಲದಲ್ಲಿ ಅಪ್ಪ ಬಿಟ್ಟುಬಂದ ಊರಿನ ದಾರಿಯಲ್ಲಿ ಸಾಗುವ ಹೆಣ್ಣುಮಗಳು. ಅದಕ್ಕೆ ಕಾರಣ ಅಪ್ಪನಿಗೆ ಕೊಟ್ಟ ಮಾತು. ಅನಿರೀಕ್ಷಿತವಾಗಿ ಸಾವನ್ನಪ್ಪುವ ಅಪ್ಪ ಉಸಿರು ನಿಲ್ಲಿಸುವ ಮುನ್ನ ಮಗಳಿಗೆ ಒಂದು ಟಾಸ್ಕ್ ಕೊಟ್ಟಿರುತ್ತಾರೆ. ಅದನ್ನು ಈಡೇರಿಸಲು ಈಕೆ ಅಪ್ಪನ ಊರಿಗೆ ಹೋಗುತ್ತಾಳೆ. ಅಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿರುತ್ತದೆ. ಈಕೆ ನೆರವೇರಿಸಲು ಹೋದ ಕಾರ್ಯಕ್ಕೆ ನೂರೆಂಟು ವಿಜ್ಞಗಳು ಎದುರಾಗುತ್ತವೆ. ಆ ರಾಕ್ಷಸರ ಪ್ರಪಂಚ ಈಕೆಯ ಮೇಲೆ ಹೇಗೆಲ್ಲಾ ಎರಗಿಬರುತ್ತದೆ. ಅದರಿಂದ ಜೂಲಿಯೆಟ್ ಹೇಗೆ ಪಾರಾಗುತ್ತಾಳೆ ಅನ್ನೋದು ಕಟ್ಟಕಡೆಯ ತನಕ ಕಾಡುವ ಅಂಶ.
ಜೂಲಿಯೆಟ್ ತಂದೆ ಕೊಟ್ಟ ಆ ಜವಾಬ್ದಾರಿ ಯಾವುದು? ಅದನ್ನು ಈಡೇರಿಸುವ ದಾರಿಯಲ್ಲಿ ಆಗಂತುಕರು ಯಾಕೆ ಅಡ್ಡಿ ಮಾಡುತ್ತಾರೆ? ಈ ಕಥೆಯಲ್ಲಿ ಅಡಗಿರುವ ಮರ್ಮವೇನು? ಅನ್ನೋದನ್ನೆಲ್ಲಾ ತಿಳಿಯಲು ಚಿತ್ರವನ್ನೊಮ್ಮೆ ನೋಡಲೇಬೇಕು
ಬಹುತೇಕ ಕತ್ತಲಲ್ಲಿ ದೃಶ್ಯಗಳನ್ನು ಪೋಣಿಸಿದ್ದರೂ, ತಾಂತ್ರಿಕ ಗುಣಮಟ್ಟ ಅದ್ಭುತವಾಗಿ ಮೂಡಿಬಂದಿದೆ.
ಬೃಂತಾ ಆಚಾರ್ಯ ಇನ್ನುಮುಂದೆ ಹೆಸರಿನ ಹಿಂದೆ ಜೂಲಿಯೆಟ್ ಅಂತ ಪರ್ಮನೆಂಟಾಗಿ ಸೇರಿಸಿಕೊಳ್ಳಬಹುದು. ಅಷ್ಟರ ಮಟ್ಟಿಗೆ ಈಕೆ ಪಾತ್ರದೊಳಗೆ ಇಳಿದಿದ್ದಾರೆ. ವಿರಾಟ್ ಬಿ ಗೌಡ ಅವರಿಗೆ ಕಥೆಯನ್ನು ಕ್ಷಣ ಕ್ಷಣಕ್ಕೂ ರೋಚಕೊಳಿಸುವ ಮಾಂತ್ರಿಕ ವಿಧ್ಯೆ ಒಲಿದಿದೆ. ಇದನ್ನು ಜೂಲಿಯೆಟ್ ಋಜುವಾತುಗೊಳಿಸಿದ್ದಾಳೆ!
ಕರಾವಳಿಯ ಒಳ ಭಾಗಗಳನ್ನು ಆಂಟೋ ಪರಿಣಾಮಕಾರಿಯಾಗಿ ಸೆರೆ ಹಿಡಿದಿದ್ದಾರೆ. ಸಚಿನ್ ಬಸ್ರೂರು ನೀಡಿರುವ ಹಿನ್ನೆಲೆ ಸಂಗೀತ ಸಿನಿಮಾಗೆ ಶಕ್ತಿಯನ್ನು ಹೆಚ್ಚಿಸಿದೆ. ಕಡಿಮೆ ಅವಧಿಯ ಸಿನಿಮಾ ಇದಾಗಿದ್ದರೂ ಹೆಚ್ಚು ಕಾಲ ಕಾಡುವ ಕತೆ ಹೊಂದಿದೆ ಅನ್ನೋದು ವಿಶೇಷ. ಖಂಡಿತಾ ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಲೇಬೇಕು….
No Comment! Be the first one.