ರಾಜಕುಮಾರ ಚಿತ್ರದ ನಂತರ ಮತ್ತೊಂದು ಚಿತ್ರದಲ್ಲಿ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜ್ ಕುಮಾರ್ ಜೊತೆಯಾಗುತ್ತಿದ್ದಾರೆ. ರಾಜಕುಮಾರ ಕನ್ನಡ ಚಿತ್ರರಂಗದಲ್ಲಿಯೇ ಸಾರ್ವಕಾಲಿಕ ದಾಕಲೆ ಬರೆದ ಚಿತ್ರ. ಇದೇ ಜೋಡಿಯ ಮುಂದಿನ ಚಿತ್ರದ ಬಗ್ಗೆ ಎಲ್ಲೆಡೆ ನಾನಾ ದಿಕ್ಕಿನಲ್ಲಿ ಕುತೂಹಲ, ಚರ್ಚೆ ಆರಂಭವಾಗಿದೆ. ಆದರೀಗ ಈ ಚಿತ್ರದ ಶೀರ್ಷಿಕೆ ಏನೆಂಬುದರ ಬಗ್ಗೆ ಸುಳಿವೊಂದು ಸಿಕ್ಕಿದೆ.
ಸಂತೋಷ್ ಆನಂದರಾಮ್ ಈ ಚಿತ್ರದ ಕಥೆ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನೂ ಈಗಾಗಲೇ ಮುಗಿಸಿಕೊಂಡಿದ್ದಾರೆ. ಆದರೆ ಇದಕ್ಕೆ ಟೈಟಲ್ ಏನಿಡಬಹುದೆಂಬುದೇ ಅವರನ್ನು ಬಹು ದೊಡ್ಡ ಬಾಧೆಯಾಗಿ ಕಾಡಿತ್ತಂತೆ. ಕಡೆಗೂ ಒಂದಷ್ಟು ಟೈಟಲ್ಲುಗಳನ್ನು ಅಳೆದೂತೂಗಿ ಈ ಚಿತ್ರದ ಕಥೆಗೆ ಅನುಗುಣವಾಗಿ ಜ್ವಾಲಾಮುಖಿ ಅಂತ ಹೆಸರಿಡಲಾಗಿದೆ.
ಜ್ವಾಲಾಮುಖಿ ೧೯೮೫ರಲ್ಲಿ ತೆರೆ ಕಂಡಿದ್ದ ಡಾ.ರಾಜ್ ಕುಮಾರ್ ನಟನೆಯ ಚಿತ್ರದ ಟೈಟಲ್. ಆ ಚಿತ್ರ ದೊಡ್ಡ ಮಟ್ಟದಲ್ಲಿಯೇ ಗೆದ್ದಿತ್ತು. ಅದು ಇಂದಿಗೂ ರಾಜ್ ಅಭಿನಯದ ಟಾಪ್ ಚಿತ್ರಗಳ ಸಾಲಿನಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದೆ. ಇದೀಗ ಪುನೀತ್ ಚಿತ್ರಕ್ಕೆ ಅದೇ ಹೆಸರು ನಿಕ್ಕಿಯಾಗಿದೆ.
ಈ ಟೈಟಲ್ ಅನ್ನು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಬಿಡುಗಡೆಗೊಳಿಸಲಿದ್ದಾರಂತೆ. ಅದಾದ ನಂತರ ಈ ಚಿತ್ರದ ಉಳಿದ ರೂಪುರೇಷೆಗಳ ಬಗ್ಗೆ ವಿವರ ಸಿಗಲಿದೆ. ಸದ್ಯಕ್ಕೆ ತಾರಾಗಣದ ಆಯ್ಕೆ ಕಾರ್ಯ ಬಿರುಸಿಂದ ನಡೆಯುತ್ತಿದೆ. ಅಂತೂ ಸಂತೋಷ್ ಆನಂದರಾಮ್ ಅವರು ಪುನೀತ್ ಅಭಿಮಾನಿಗಳಿಗೆ ಇಷ್ಟವಾಗುವಂಥಾ ಟೈಟಲ್ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
#
No Comment! Be the first one.