ಗೀತ ಸಾಹಿತಿಯಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕವಿರಾಜ್ ನಿರ್ದೇಶನದ ಎರಡನೇ ಚಿತ್ರ ಕಾಳಿದಾಸ ಕನ್ನಡ ಮೇಷ್ಟ್ರು. ಈ ಸಿನಿಮಾ ಈಗ ತೆರೆಗೆ ಬರಲು ರೆಡಿಯಾಗಿದೆ. ಸದ್ಯ ಕನ್ನಡ ಮೇಷ್ಟ್ರು ಟ್ರೇಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ತೂಗುದೀಪ ರಿಲೀಸ್ ಮಾಡಿದ್ದಾರೆ. ಈ ಟ್ರೇಲರನ್ನು ದಾಸ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಈ ಚಿತ್ರದ ಕುರಿತು ನಾಯಕನಟ ನವರಸನಾಯಕ ಜಗ್ಗೇಶ್ ಇಲ್ಲೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಅವರದ್ದೇ ಮಾತಲ್ಲಿ ಓದಿದರೇನೆ ಚೆಂದ..
ಕಾಳಿದಾಸ ಕನ್ನಡ ಮೇಷ್ಟ್ರು ಇದು ಮನೆಮನೆಯ ಕಥೆ. ಪ್ರತಿಯೊಬ್ಬರೂ ಸಹ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಾಗ ಮೇ ತಿಂಗಳಲ್ಲಿ ಅವರು ಅನುಭವಿಸುವಂತಹ ಬವಣೆ, ಬದುಕಿನ ಟೆನ್ಷನ್ನುಗಳಳನ್ನು ಮನಸ್ಸಿನಲ್ಲಿಟ್ಟುಕೊಂಡು ಅದ್ಭುತವಾದ ಕಥೆಯನ್ನು ಮಾಡಿದ್ದಾರೆ. ಸೀರಿಯಸ್ ಆಗಿ ಹೇಳಿದರೆ ಜನ ಅದನ್ನು ಡೈಜೆಸ್ಟ್ ಮಾಡಿಕೊಳ್ಳೋದು ಕಷ್ಟ ಅಂತ, ನನ್ನನ್ನ ಇಟ್ಕೊಂಡು ಹಾಸ್ಯ ಮಿಶ್ರಿತವಾಗಿ ಈ ಸಿನಿಮಾ ರೂಪಿಸಿದ್ದಾರೆ. ಪ್ರೇಕ್ಷಕ ಈ ಸಿನಿಮಾವನ್ನ ನೋಡಿದ್ರೆ ಹೌದು, ಇದು ಪ್ರತಿಯೊಬ್ಬರ ಮನೇಲೂ ನಡೆಯೋ ಕಥೆ, ನಮ್ಮನೆಲೂ ನಡೆದಿದೆ ಎಂಬ ಭಾವನೆ ಬರುತ್ತೆ. ಕನ್ನಡ ಎಂದ ತಕ್ಷಣ ಎಲ್ಲವನ್ನೂ ಬಿಟ್ಟು ಕನ್ನಡ ಒಂದನ್ನೇ ಕಲೀಬೇಕು ಅಂತ ಇದೆ, ಆದರೆ ಹಾಗಲ್ಲ. ಕಲಿಯೋದ್ರಲ್ಲಿ ತಪ್ಪಿಲ್ಲ. ಕನ್ನಡ ಪ್ರಧಾನವಾಗಿರಬೇಕು. ಡಾ. ರಾಜ್ಕುಮಾರ್ ರವರು ಹೇಳಿದ್ದಾರೆ, ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ… ಕನ್ನಡ… ಅಂತ. ಆರಾಧನೆ, ಪ್ರೀತಿ, ವಿಶ್ವಾಸ ಎಲ್ಲವೂ ಇಲ್ಲಿ ಕನ್ನಡವೇ. ಇದೇ ಈ ಚಿತ್ರದ ವಿಶೇಷ. ಇದರಲ್ಲಿ ಒಬ್ಬ ಮೇಷ್ಟ್ರು ಪಾತ್ರ ನಿರ್ವಹಿಸಿದ್ದೇನೆ. ಇದುವರೆಗೂ ನಾನೆಂದೂ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಎಲ್ಲರಿಗೂ ಇಷ್ಟವಾಗುತ್ತದೆಂದು ಭಾವಿಸಿದ್ದೇನೆ. ಇದು ಒಂದು ಭಾಷೆಯ ಬಗ್ಗೆ ಪ್ರೀತಿಯಿಂದ ಮಾಡಿದಂತಹ ಚಿತ್ರ. ನಿಮ್ಮೆಲ್ಲರ ಆಶೀರ್ವಾದ ಇರಬೇಕು ಅಂತ ಎಲ್ಲ ಕನ್ನಡಿಗರಲ್ಲೂ ವಿನಂತಿಸುತ್ತೇನೆ. ಸಿನಿಮಾ ನೋಡಿದ್ರೆ ಮಕ್ಕಳಲ್ಲಿ, ಪೋಷಕರಲ್ಲಿ ಸಮಾಧಾನ ಸಂತೋಷ ಸಿಗುತ್ತದೆ.
ನನ್ನ ಹೆಂಡತಿ ಮೂಲತಃ ಬೇರೆ ಭಾಷೆಯವಳು. ಆದರೆ ಕನ್ನಡ ಬಹಳ ಚೆನ್ನಾಗಿ ಮಾತಾಡ್ತಾಳೆ. ನನ್ನ ಮಕ್ಕಳೂ ಸಹ ಕನ್ನಡದಲ್ಲಿ ಬರೆದು ಡೈಲಾಗ್ಗಳನ್ನು ಹೇಳ್ತಾರೆ. ನನ್ನ ಸೊಸೆ ವಿದೇಶೀಯಳು. ಅವಳು ಸಹ ಕನ್ನಡವನ್ನು ಬಹಳ ಚೆನ್ನಾಗಿ ಕಲಿತು ನನ್ನೊಂದಿಗೆ ಮಾತಾಡ್ತಾಳೆ. ನನಗೆ ಇದರ ಬಗ್ಗೆ ಬಹಳ ಖುಷಿ ಇದೆ. ನಾವಿರೋ ಪರಿಸರದಲ್ಲಿ ೭-೮ ಜನಕ್ಕೆ ಕನ್ನಡ ಕಲಿಸಿದ್ರೆ ಸಾಕು. ಇಡೀ ರಾಜ್ಯಕ್ಕೆ ಕಲಿಸುವಂತ ಯೋಗ್ಯತೆ ಇರೋದು ಪತ್ರಿಕಾ ಮಾಧ್ಯಮಕ್ಕೆ ಮತ್ತು ಶಾಲೆಗಳಿಗೆ. ಕನ್ನಡದ ಉಳಿವಿಗಾಗಿ ಒಂದು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇವೆ. ಕನ್ನಡದ ಪ್ರೇಮಿಗಳಿಗಾಗಿ ಈ ಚಿತ್ರವನ್ನ ಸಮರ್ಪಣೆ ಮಾಡುತ್ತೇವೆ.