ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಕೆ ನಿರ್ದೇಶಿಸಿರುವ ಹಾಗೂ ಕೌಶಿಕ್ ಸಂಗೀತ ನೀಡಿರುವ “ಕಾಣೆಯಾಗಿದ್ದಾಳೆ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಹುಡುಕಿ ಕೊಟ್ಟವರಿಗೆ ಬಹುಮಾನ ಎಂಬ ಅಡಿಬರಹ ಈ ಚಿತ್ರಕ್ಕಿದೆ.
ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಟಿ, ನಿರ್ದೇಶಕಿ ಪ್ರಿಯಾಹಾಸನ್, ನಟಿಯರಾದ ಶರಣ್ಯ, ನಿಶಿತಾ ಗೌಡ, “ಫಾರ್ ರಿಜಿಸ್ಟ್ರೇಶನ್” ಚಿತ್ರದ ನಿರ್ದೇಶಕ ನವೀನ್ ದ್ವಾರಕನಾಥ್, ನಿರ್ಮಾಪಕ ನವೀನ್ ರಾವ್ ಮುಂತಾದವರು ಮುಖ್ಯ ಅತಿಥಿಗಳಾಗಿ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ನಾನು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದ ಜೊತೆ ಒಡನಾಟ ಹೊಂದಿದ್ದೇನೆ. ಇದು ನನ್ನ ಎರಡನೇ ನಿರ್ದೇಶನದ ಚಿತ್ರ. ಸಮಾಜಿಕ ಕಳಕಳಿಯಿರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡಬಹುದು. ಹೆಚ್ಚಿನ ಓದಿನ ಸಲುವಾಗಿ ನಗರಕ್ಕೆ ಬಂದ ಹೆಣ್ಣುಮಗಳೊಬ್ಬಳು ಯಾವರೀತಿ ತೊಂದರೆ ಅನುಭವಿಸುತ್ತಾಳೆ ಎನ್ನುವುದೇ ಪ್ರಮುಖ ಕಥಾಹಂದರ. ವಿನಯ್ ಕಾರ್ತಿ ನಾಯಕನಾಗಿ ನಟಿಸಿದ್ದು, ಕೀರ್ತಿ ಭಟ್ ಈ ಚಿತ್ರದ ನಾಯಕಿ. ಸದ್ಯ ತೆಲುಗು ಬಿಗ್ ಬಾಸ್ ನಲ್ಲಿ ನಮ್ಮ ನಾಯಕಿ ಇರುವುದರಿಂದ ಇಲ್ಲಿಗೆ ಬಂದಿಲ್ಲ. ಹಿರಿಯ ನಟಿ ಗಿರಿಜಾ ಲೋಕೇಶ್, ವಿನಯಾಪ್ರಸಾದ್, ಬಿರಾದಾರ್ ಮುಂತಾದವರು ಚಿತ್ರದಲ್ಲಿದ್ದಾರೆ. ಕೌಶಿಕ್ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿ ಸಹ ಚಿತ್ರವನ್ನು ವೀಕ್ಷಿಸಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದೆ. ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲವಾರ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದರು ನಿರ್ದೇಶಕ – ನಿರ್ಮಾಪಕ ಆರ್.ಕೆ.
ನಾನು ಹೊಸಕೋಟೆ ಬಳಿಯ ಹಳ್ಳಿಯವನು. ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದೆ. ಆನಂತರ ನಿರ್ದೇಶಕ ಆರ್ ಕೆ ಅವರು ಭೇಟಿಯಾದಾಗ ಈ ಚಿತ್ರದ ಬಗ್ಗೆ ಹೇಳಿದರು. ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದರು ಎಂದು ನಾಯಕ ವಿನಯ್ ಕಾರ್ತಿ ತಿಳಿಸಿದರು.ನಾನು ಆರ್ ಕೆ ಅವರ ಜೊತೆ ನಟಿಸಿರುವ ಎರಡನೇ ಸಿನಿಮಾ. ಅದ್ಭುತ ನಿರ್ದೇಶಕ ಈತ. ಒಳ್ಳೆಯ ಸಿನಿಮಾ ಮಾಡಿದ್ದಾರೆ ಪ್ರೋತ್ಸಾಹ ನೀಡಿ ಎನ್ನುತ್ತಾರೆ ಹಿರಿಯ ನಟಿ ಗಿರಿಜಾ ಲೋಕೇಶ್.
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕೌಶಿಕ್ ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ ಸಂಜಯ್ ಹಾಗೂ ಚಿತ್ರದಲ್ಲಿ ನಟಿಸಿರುವ ಅಂಜನಾ ಗಿರೀಶ್ ಚಿತ್ರದ ಕುರಿತು ಮಾತನಾಡಿದರು.
No Comment! Be the first one.