ತೀರಾ ದೊಡ್ಡ ಬಜೆಟ್ಟು, ಕಲಾವಿದರ ದಂಡು ಇಲ್ಲದಿದ್ದರೂ ಕೆಲವೊಂದು ಸಿನಿಮಾ ನೋಡುವಂತೆ ಕೂರಿಸಿಬಿಡುತ್ತವೆ. ಬಹುಶಃ ಆ ಸಾಲಿಗೆ ಸೇರೋ ಚಿತ್ರ ಕಾರ್ನಿ. ದುನಿಯಾ ರಶ್ಮಿ ಬಹುಕಾಲದ ಗ್ಯಾಪ್ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿರುವ ಸಿನಿಮಾ ಅನ್ನೋದು ಬಿಟ್ಟರೆ ಕಾರ್ನಿಯ ಬಗ್ಗೆ ಜನರಿಗೆ ಹೆಚ್ಚು ಗೊತ್ತಿರಲಿಲ್ಲ. ಆದರೆ ಇಂದು ತೆರೆಗೆ ಬಂದಿರೋ ಕಾರ್ನಿ ನೋಡುಗರ ಪಾಲಿಗೆ ಥ್ರಿಲ್ ನೀಡಿದೆ ಅನ್ನೋದರಲ್ಲಿ ನೋ ಡೌಟ್.
ಕಾದಂಬರಿಕಾರ್ತಿಯೊಬ್ಬಳ ಮೂಲಕ ಕಥೆ ಆರಂಭಗೊಳ್ಳುತ್ತದೆ. ಕಾದಂಬರಿಯಲ್ಲಿ ಬರುವ ಪಾತ್ರಗಳು ನಿಜಜೀವನದಲ್ಲಿ ಕಾಣೆಯಾಗುತ್ತಾ ಬರುತ್ತವೆ. ಒಂದು ಕಡೆ ಕಳೆದುಹೋದವರ ಬಗ್ಗೆ ತನಿಖೆ ನಡೆಸೋ ಪೊಲೀಸರು, ಮತ್ತೊಂದೆಡೆ ಕಾದಂಬರಿಯನ್ನು ಬರೆದ ಲೇಖಕಿ ತನು ಅದೇ ಕಾದಂಬರಿಯ ಮತ್ತೊಂದು ಆವೃತ್ತಿಯನ್ನು ಬರೆಯಲು ಚಿಕ್ಕಮಗಳೂರಿಗೆ ಹೋಗಿರುತ್ತಾಳೆ. ಅಲ್ಲೊಬ್ಬ ಅನಾಮಿಕ ಆಕೆಯ ಮೇಲೆ ಅಟ್ಯಾಕ್ ಮಾಡುತ್ತಾನೆ. ಆತ ಈಕೆಯನ್ನು ಟಾರ್ಗೆಟ್ ಮಾಡಲು ಏನು ಕಾರಣ? ಕಾದಂಬರಿಯಲ್ಲಿ ಬರುವ ಪಾತ್ರಕ್ಕೂ ಬರಹಗಾರ್ತಿಗೂ ಏನಾದರೂ ಲಿಂಕು ಇದೆಯಾ? ಈ ಎಲ್ಲದರ ಹಿಂದಿನ ಅಸಲೀ ರಹಸ್ಯವಾದರೂ ಏನು? ಒಂದೊಂದಾಗಿ ತೆರೆದುಕೊಳ್ಳುತ್ತಾ ಸಾಗುವ ಕಥೆ ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಾ ಸಾಗುತ್ತದೆ.
ಸಿನಿಮಾದ ಬಹುಪಾಲು ಚಿತ್ರೀಕರಣ ಕತ್ತಲೆಯಲ್ಲೇ ನಡೆಯೋದರಿಂದ ನೋಡುಗರ ಕಣ್ಣಿಗೆ ಮಂಕು ಕವಿದ ವಾತಾವರಣ ಆವರಿಸುತ್ತದೆ. ಸಾಮಾನ್ಯವಾಗಿ ಸಸ್ಪೆನ್ಸ್ ಅಥವಾ ಥ್ರಿಲ್ಲರ್ ಸಿನಿಮಾಗಳಲ್ಲಿ ಎದೆ ಧಸಕ್ಕನ್ನುವಂಥಾ ಹಿನ್ನೆಲೆ ಸಂಗೀತವಿರುತ್ತದೆ. ಆದರೆ ಯಾವ ಶಬ್ದವನ್ನೂ ನೀಡದೆ ನಿಶ್ಯಬ್ಧದಲ್ಲೇ ತವಕ ಸೃಷ್ಟಿಸಿದ್ದಾರೆ ಅರಿಂದಂ ಗೋಸ್ವಾಮಿ. ಸಂಕಲನ ಹಾಗೂ ಕಲರಿಂಗ್ ಮಾಡಿರುವ ವಿನಯ್ ಆಲೂರ್ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಾಜೇಶ್ ರಾಮಕೃಷ್ಣ ಗಮನ ಸೆಳೆಯುತ್ತಾರೆ.
ಈ ಸಿನಿಮಾದಲ್ಲಿ ಅಪರೂಪದ ಎಳೆಯೊಂದು ಪ್ರಧಾನವಾಗಿದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟು ಸೆಕ್ಷನ್ ೩೭೭ ಅಮಾನ್ಯಗೊಳಿಸಿರುವ ಸಂದರ್ಭದಲ್ಲಿ ಕಾರ್ನಿ ಬಿಡುಗಡೆಯಾಗಿರುವುದು ಕಾಕತಾಳೀಯವೆನ್ನುವಂತಿದೆ. ಹುಡುಗನಾಗಿ ಹುಟ್ಟಿ ಹೆಣ್ಮಕ್ಕಳಂತೆ ಆಡುವ ಹುಡುಗನೊಬ್ಬನ ಒಳಬಾಧೆಗಳು, ಸಾಮಾಜಿಕ ಸಂಕಟಗಳನ್ನು ಥ್ರಿಲ್ಲರ್ ಸಿನಿಮಾದೊಳಗೆ ಸೇರಿಸಿರುವುದು ನಿಜಕ್ಕೂ ನಿರ್ದೇಶಕ ವಿನೀ ಅವರ ಹೆಚ್ಚುಗಾರಿಕೆ.
#
No Comment! Be the first one.