ದುನಿಯಾ ರಶ್ಮಿ ಹೊಸಾ ಸ್ವರೂಪದಲ್ಲಿ ಮತ್ತೆ ವಾಪಾಸಾಗಿರುವ ಚಿತ್ರ ಕಾರ್ನಿ. ಈಗಾಗಲೇ ಬಿಡುಗಡೆಯಾಗಿ ಟ್ರೈಲರ್ ಮೂಲಕವೇ ನಿಗೂಢವಾದುದೇನನ್ನೋ ಪ್ರೇಕ್ಷಕರತ್ತ ದಾಟಿಸಿರೋ ಈ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಬೇರೇನನ್ನೂ ಯೋಚಿಸಲೇ ಸಾಧ್ಯವಾಗದಂತೆ ಪ್ರೇಕ್ಷಕರನ್ನು ಆರಂಭದಿಂದ ಮುಕ್ತಾಯದವರೆಗೂ ಹಿಡಿದಿಡುವಂಥಾ ಚಿತ್ರ ರೂಪಿಸಬೇಕೆಂಬ ಹಂಬಲದೊಂದಿಗೇ ಈ ಚಿತ್ರ ತಯಾರಾಗಿದೆ. ಕಾಡು, ಕತ್ತಲು ಮತ್ತು ಅದರ ಗರ್ಭದಲ್ಲಿ ತೆರೆದುಕೊಳ್ಳೋ ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕ… ಇದನ್ನೆಲ್ಲ ಅಂತರಾಳವಾಗಿಸಿಕೊಂಡಿರೋ ಈ ಚಿತ್ರ ತೆರೆ ಕಾಣಲು ದಿನವಷ್ಟೇ ಬಾಕಿ ಉಳಿದಿದೆ.
ಐವರು ಹುಡಿಗಿಯರು ಮಲೆನಾಡ ಸೀಮೆಯ ಕಾಡಿನಲ್ಲಿ ನಾಪತ್ತೆಯಾಗುತ್ತಾರೆ. ಅವರೆಲ್ಲರ ಹಿಂದೆಯೂ ಒಂದೊಂದು ಕಥೆ. ಅವರೆಲ್ಲ ಯಾಕೆ ಹಾಗೆ ಏಕಾಏಕಿ ನಾಪತ್ತೆಯಾಗುತ್ತಾರೆ? ಅದರಿಂದ ಹೇಗೆ ಪಾರಾಗುತ್ತಾರೆಂಬುದರ ಸುತ್ತ ಕಥೆ ಸಾಗುತ್ತೆ. ಈ ಐವರು ಹುಡುಗೀರಲ್ಲಿ ಒಬ್ಬರಾಗಿ ಮುಖ್ಯವಾದ ಪಾತ್ರದಲ್ಲಿ ರಶ್ಮಿ ನಡಿಸಿದ್ದಾರೆ.
ಈ ಚಿತ್ರವನ್ನು ಗೋವಿಂದರಾಜ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಮಾಡಿರುವವರು ವಿನೋದ್ ಕುಮಾರ್. ನಿರ್ದೇಶನದ ಕನಸು ಹೊತ್ತು ಚಿತ್ರರಂಗಕ್ಕೆ ಬಂದಿದ್ದ ವಿನೋದ್ ಒಂದಷ್ಟು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಬಳಿಕ ಸಂಕಲನಕಾರರಾಗಿಯೂ ಕೆಲಸ ಮಾಡಿದ್ದಾರೆ. ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಚಿತ್ರದ ಟ್ರೈಲರ್ ಎಡಿಟಿಂಗ್ ಮಾಡಿದ್ದವರೂ ಇದೇ ವಿನೋದ್.
ವಿನೋದ್ ಅವರಿಗೆ ಹಾಲಿವುಡ್ ಶೈಲಿಯದ್ದೊಂದು ಚಿತ್ರ ಮಾಡಬೇಕೆಂಬುದು ಬಹು ದಿನದ ಕನಸಾಗಿತ್ತು. ಹಾಡು ಮುಂತಾದ ಸಿದ್ಧಸೂತ್ರಗಳ ಗೊಡವೆಯಿಲ್ಲದೆ ಕಥೆಯೇ ಮುಖ್ಯವಾಗಿರೋ ಕಾರ್ನಿ ಚಿತ್ರವನ್ನು ಅವರು ಕಡೆಗೂ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಹಾಡುಗಳಿಲ್ಲ. ಬಿಲ್ಡಪ್ಪುಗಳೂ ಇಲ್ಲ. ಆದರೆ ಅದ್ಯಾವುದೂ ನೆನಪೇ ಆಗದ ಹಾಗೆ ಕಥೆಯನ್ನು ರೂಪಿಸಲಾಗಿದೆ ಎಂಬುದು ನಿರ್ದೇಶಕರ ಭರವಸೆ.
ಈ ಚಿತ್ರದ ಕಥೆ ರೆಡಿ ಮಾಡಿಕೊಂಡ ಘಳಿಗೆಯಲ್ಲಿ ವಿನೋದ್ ಕುಮಾರ್ ಅವರನ್ನು ನಾಯಕಿ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳೋದೆಂಬ ಪ್ರಶ್ನೆ ಕಾಡಿತ್ತು. ಇದಕ್ಕೆ ನಟನೆಯ ಕಸುವು ಹೊಂದಿರೋ ನಟಿಯೇ ಬೇಕಾಗಿತ್ತು. ಆಗ ವಿನೋದ್ ಕುಮಾರ್ ಅವರಿಗೆ ನೆನಪಾದದ್ದು ರಶ್ಮಿ. ಇದುವರೆಗೂ ಪಕ್ಕದ ಮನೆ ಹುಡುಗಿಯಂಥಾ ಕ್ಯಾರೆಕ್ಟರುಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ರಶ್ಮಿ ಈ ಚಿತ್ರದಲ್ಲಿ ಬದಲಾದ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ, ಇಲ್ಲಿನ ಪಾತ್ರವೂ ಅಷ್ಟೇ ಭಿನ್ನವಾಗಿದೆಯಂತೆ.
ಇದೊಂದು ಮಹಿಳಾ ಪ್ರಧಾನ ಚಿತ್ರ ಎಂಬಂಥಾ ಮಾತೂ ಕೇಳಿ ಬರುತ್ತಿದೆ. ಆದರೆ ಇದು ಪಕ್ಕಾ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಕಾರ್ನಿ ಅಂದರೆ ದುರ್ಗಾ ಮಾತೆಯ ಕೈಲಿರೋ ದುಷ್ಟ ಸಂಹಾರದ ಅಸ್ತ್ರ. ಈ ಕಥನವೂ ಅಂಥಾದ್ದೇ ಹೂರಣ ಹೊಂದಿರೋದರಿಂದ ಆ ಟೈಟಲ್ ಅನ್ನೇ ಇಡಲಾಗಿದೆಯಂತೆ. ಇನ್ನು ಕಾರ್ನಿ ಹಾರರ್ ಚಿತ್ರ ಎಂಬಂತೆಯೂ ಸುದ್ದಿ ಹರಿದಾಡುತ್ತಿದೆ. ಆದರಿದು ಹಾರರ್ ಚಿತ್ರವಲ್ಲ. ಆದರೆ ಇಲ್ಲಿ ಅದನ್ನೇ ಮೀರಿಸುವಂಥಾ ಬೆಚ್ಚಿ ಬೀಳಿಸುವಂಥಾ ವಿಚಾರಗಳಿವೆ.
#
No Comment! Be the first one.