ಇವತ್ತಿನ ನಿರ್ದೇಶಕರು ಸೂಪರ್ ಸ್ಟಾರ್’ಗಳ ಜೊತೆ ಒಂದೊಂದು ಸಿನಿಮಾ ಮಾಡಿ ಮುಗಿಸೋ ಹೊತ್ತಿಗೇ ಉಸ್ಸಪ್ಪಾ ಅಂತಾ ಏದುಸಿರು ಬಿಡುತ್ತಿರುತ್ತಾರೆ. ಹೀರೋಗಳೂ ಸಹ ನಿರ್ದೇಶಕರ ಮೇಲೆ ನೂರೆಂಟು ಬಗೆಯ ಮುನಿಸಿಕೊಂಡು ಮುಖ ತಿರುಗಿಸಿರುತ್ತಾರೆ!
ಆದರೆ, ನಿರ್ದೇಶಕ ಆರ್. ಚಂದ್ರು ಮತ್ತು ಉಪೇಂದ್ರ ನಡುವೆ ಅದೆಂಥಾ ಅನ್ಯೋನ್ಯತೆ ಬೆಸೆದುಕೊಂಡಿದೆಯೋ ಗೊತ್ತಿಲ್ಲ. ಈಗಾಗಲೇ ಬ್ರಹ್ಮ, ಐ ಲವ್ ಯೂ ಎಂಬ ಎರಡು ಸಿನಿಮಾಗಳನ್ನು ಮುಗಿಸಿರುವ ಈ ಜೋಡಿಯ ಮುಖದಲ್ಲಿ ಯಾವ ಆಯಾಸವೂ ಕಾಣುತ್ತಿಲ್ಲ. ಉಪ್ಪಿ ಮತ್ತು ಚಂದ್ರು ಸೇರಿ ಈಗ ಹ್ಯಾಟ್ರಿಕ್ ಮಾಡಲು ಹೊರಟಿದ್ದಾರೆ.
ಬ್ರಹ್ಮ ಸಿನಿಮಾ ಕಂಪ್ಲೀಟ್ ಆದ ಸಮಯದಲ್ಲಿ ಉಪೇಂದ್ರ ಒಂದು ಮಾತು ಹೇಳಿದ್ದರು. “ನಾನು ಯಾವುದೇ ಒಂದು ಸಿನಿಮಾದ ಕಥೆ, ಚಿತ್ರಕತೆ ಸೇರಿದಂತೆ ಎಲ್ಲ ವಿಭಾಗದಲ್ಲೂ ಇನ್ವಾಲ್ವ್ ಆಗ್ತೀನಿ. ಈ ಸಿನಿಮಾದಲ್ಲಿ ನಟಿಸೋದು ಬಿಟ್ಟು ಬೇರೇನೂ ಮಾಡಿಲ್ಲ” ಅಂದಿದ್ದರು. ಮತ್ತೆ ಐ ಲವ್ ಯೂ ಸಿನಿಮಾ ಬಿಡುಗಡೆಗೂ ಮುಂಚೆ ಕೂಡಾ ‘ಚಂದ್ರು ಜೊತೆ ಸಿನಿಮಾ ಮಾಡೋದೆಂದರೆ ಸಲೀಸು. ನನಗೆ ಒಂದಿಷ್ಟೂ ಒತ್ತಡ ಅನ್ನಿಸುವುದಿಲ್ಲ. ಹೇಗೆ ಸಿನಿಮಾ ಮಾಡಿ ಮುಗಿಸಿಬಿಡುತ್ತಾರೋ ಗೊತ್ತಿಲ್ಲ. ಹೂ ಎತ್ತಿದಷ್ಟು ಸಲೀಸಾಗಿ ಚಿತ್ರೀಕರಣ ಕಂಪ್ಲೀಟ್ ಆಗಿರುತ್ತದೆ” ಎಂದು ಹೇಳಿದ್ದರು.
ಬಿಡುಗಡೆಯಾಗಿ ಈ ವರ್ಷದ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿರುವ ಐ ಲವ್ ಯೂ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಈಗ ಉಪ್ಪಿ ಮತ್ತು ಚಂದ್ರು ಕಾಂಬಿನೇಷನ್ನಿನಲ್ಲಿ ಮೂಡಿಬರಲಿರುವ ಮೂರನೇ ಚಿತ್ರಕ್ಕೆ ‘ಕಬ್ಜ’ ಅಂತಾ ಹೆಸರಿಡಲಾಗಿದೆ. ಈ ಸಿನಿಮಾ ಬರೋಬ್ಬರಿ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ‘ಕಬ್ಜ’ ಕಣ್ತೆರೆಯಲಿದೆ. ಐ ಲವ್ ಯೂ ಚಿತ್ರದ ನೂರನೇ ದಿನದ ಸಂಭ್ರಮಾಚರಣೆಯ ದಿನದಂದೇ ‘ಕಬ್ಜ’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ರೆಟ್ರೋ ಕಾಲಘಟ್ಟದ ಕತೆ ಇದು ಎಂದು ಹೇಳುವ ಸೂಚನೆಯನ್ನು ಚಂದ್ರು ಬಿಟ್ಟುಕೊಟ್ಟಿದ್ದಾರೆ. ಬೆಲ್’ಬಾಟಮ್ ಪ್ಯಾಂಟು, ದೊಡ್ಡ ಕಾಲರಿನ ಶರ್ಟು, ಕೈಲೊಂದು ಲಾಂಗು ಹಿಡಿದು ಉಪ್ಪಿ ನಡೆದು ಬರುತ್ತಿರುವ ಚಿತ್ರ ಮತ್ತು ಏಳೂ ಭಾಷೆಗಳ ಟೈಟಲ್ ಬಿಡುಗಡೆಯಾಗಿದೆ. ಮೊದಲ ಪೋಸ್ಟರ್’ನಲ್ಲೇ ಹತ್ತಾರು ಒಳಹುಗಳನ್ನು ನೀಡಿದ್ದಾರೆ. ಈ ವರೆಗೆ ಚಂದ್ರು ನಿರ್ದೇಶಿಸಿರುವ ಬಹುತೇಕ ಎಲ್ಲ ಸಿನಿಮಾಗಳೂ ಹೆಸರು ಮತ್ತು ದುಡ್ಡು ಮಾಡಿವೆ. ಕನ್ನಡ ಚಿತ್ರರಂಗದ ಪಾಲಿಗೆ ಚಂದ್ರ್ರು ಲಕ್ಕಿ ಹ್ಯಾಂಡ್ ಅಂತಲೇ ಫೇಮಸ್ಸು. ಕಬ್ಜ ಮೂಲಕ ಇತರೆ ಏಳು ಭಾಷೆಗಳಿಗೆ ಕಾಲಿಡುತ್ತಿರುವ ಚಂದ್ರು ಮತ್ತು ಉಪ್ಪಿ ಜೋಡಿ, ಇಡೀ ಭಾರತೀಯ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಕಬ್ಜ ಮಾಡಿಕೊಳ್ಳಲಿ!
No Comment! Be the first one.