ಯಾವುದೇ ಕ್ಷೇತ್ರವಿರಲಿ, ಮೊದಲ ಬಾರಿಗೆ ಸಾಧಿಸಿದವರಿಗೆ ಒಂದು ರೀತಿಯ ಸಾತ್ವಿಕ ಅಹಂ ಇರುತ್ತದೆ. ನಾನು ಮುಂದಿದ್ದೇನೆ ಅಂತಾ. ಆದರೆ ಗುಂಡಾಗಿರೋ ಭೂಮಿ ತಿರುಗುತ್ತಿದ್ದಂತೇ, ಮೇಲಿದ್ದದ್ದು ಕೆಳಗೆ ಬರುವಂತೆ, ಕೆಳಗಿದ್ದದ್ದು ಮೇಲಕ್ಕೋಗುವಂತೆ ಇಲ್ಲೂ ಒಂದಷ್ಟು ಪಲ್ಲಟಗಳಾಗುತ್ತವೆ. ಇದ್ದಕ್ಕಿದ್ದಂತೇ ಬಂದವರು ಮಿಂಚುತ್ತಾರೆ. ಏನೇನೂ ಅಲ್ಲದವರೂ ಮೆರೆಯಲು ಶುರು ಮಾಡಿರುತ್ತಾರೆ. ‘ನಾನು ಅಂತಾ ಸೈನು ಮಾಡಿದವನ ಮುಂದೆ ‘ನಾನೇ ಅನ್ನೋರು ಹುಟ್ಟಿಕೊಂಡಿರುತ್ತಾರೆ. ಆಗ ಆ ‘ನಾನು ಅನ್ನೋ ಬ್ರೈನಿನಲ್ಲಿ ಬಾಂಬು ಸಿಡಿದಂತಾಗಿ ಮತ್ತೆ ಎದ್ದು ನಿಂತು, ‘ನಾನು ನಾನೇ ಅಂತಾ ತೋರಿಸುವ ದಿನ ಬರುತ್ತದೆ….
ಇದೇನಿದು ‘ಉಪ್ಪಿ ಬ್ರ್ಯಾಂಡಿನ ಸಿನಿಮಾದ ಡೈಲಾಗಿದ್ದಂತಿದೆ ಅಂದುಕೊಂಡ್ರಾ?
ಹೌದು ಇದು ಉಪೇಂದ್ರ ಅನ್ನೋ ಜ್ವಾಲೆಯ ಕುರಿತಾಗಿಯೇ ಹೇಳುತ್ತಿರುವ ಮಾತು. ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡೋದಕ್ಕೇ ಹೆದರುತ್ತಿದ್ದ ಕಾಲದಲ್ಲಿ ರೌಡಿಗಳ ಪಾತ್ರಕ್ಕೆ ನಿಜ ಜೀವನದಲ್ಲಿ ಲಾಂಗು ಮಚ್ಚು ಹಿಡಿದು ಅಡ್ಡಾಡಿದವರನ್ನೇ ಅಟ್ಟಾಡಿಸಿಕೊಂಡು ಹೋಗಿ ಹಿಡಿದು, ತಂದು ಸಿನಿಮಾದಲ್ಲಿ ಪಾರ್ಟು ಮಾಡಿಸಿದವರು. ಎಲ್ಲೆಲ್ಲೋ ಏನೇನೋ ಆಗಿದ್ದವರನ್ನು ಕರೆತಂದು ‘ನೀನು ಇದನ್ನು ಮಾಡು ಅಂಥಾ ಹೇಳಿ ಮಾಡಿಸಿದವರು. ಒಂದು ವೇಳೆ ಉಪೇಂದ್ರ ಅನ್ನೋ ಭವಿಷ್ಯದ ನಿರ್ದೇಶಕ ಹುಟ್ಟಿಕೊಳ್ಳದೇ ಹೋಗಿದ್ದಿದ್ದರೆ ಗುರುಕಿರಣ್ ನೂರು ಸಿನಿಮಾಗೆ ಸಂಗೀತ ನೀಡಲು ಸಾಧ್ಯವಾಗುತ್ತಿತ್ತಾ? ಸಾಧು ಕೋಕಿಲಾ ಕನ್ನಡ ಚಿತ್ರರಂಗದಲ್ಲಿ ಮುನ್ನೂರು ಸಿನಿಮಾಗಳಿಗೆ ಮ್ಯೂಸಿಕ್ಕು ಮಾಡಿ ದಾಖಲೆ ಬರೆಯಲಾಗುತ್ತಿತ್ತಾ? ಕಳೆದ ಇಪ್ಪತ್ತು ವರ್ಷಗಳಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಅನ್ನಿಸಿಕೊಳ್ಳಲಾಗುತ್ತಿತ್ತಾ? ವಿ ಮನೋಹರ್, ಛಾಯಾಗ್ರಾಹಕ ವೇಣು ಮುಂತಾದವರೆಲ್ಲಾ ಜನ್ಮವೆತ್ತುತ್ತಿದ್ದರಾ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಶಂಕರ್ ರಂಥಾ ಡೈರೆಕ್ಟರ್ರು ‘ನನಗೆ ಕನ್ನಡದ ನಿರ್ದೇಶಕ ಉಪೇಂದ್ರ ಸ್ಫೂರ್ತಿ ಅನ್ನಲಾಗುತ್ತಿತ್ತಾ?
ಒಬ್ಬೇ ಒಬ್ಬ ವ್ಯಕ್ತಿ ಹತ್ತಾರು ಜನ ತಂತ್ರಜ್ಞರು, ನೂರಾರು ಜನ ಕಲಾವಿದರು ಮತ್ತು ತನ್ನ ಸ್ಫೂರ್ತಿಯಿಂದಲೇ ಲೆಕ್ಕವಿಲ್ಲದಷ್ಟು ಜನರನ್ನು ಕರೆತಂದು ಚಿತ್ರರಂಗವೆಂಬ ಸಾಗರಕ್ಕೆ ಸೇರಿಸುತ್ತಾನೆಂದರೆ, ಅದು ಸುಮ್ಮನೆ ಮಾತಾ?
ನೋ ಡೌಟ್. ಯಾರು ಬರಲಿ, ಹೋಗಲಿ ಉಪೇಂದ್ರ ಕನ್ನಡ ಚಿತ್ರರಂಗದ ಮಹಾನ್ ಸಾಧಕ. ತಮ್ಮ ಸಿನಿಮಾವನ್ನು ಇತರ ಭಾಷೆಗಳಿಗೂ ಯಾವತ್ತೋ ಕೊಂಡೊಯ್ದು ಪ್ಯಾನ್ ಇಂಡಿಯಾ ಕಾನ್ಸೆಪ್ಟನ್ನು ಮೊದಮೊದಲಿಗೆ ಸಾಧ್ಯವಾಗಿಸಿದ ಅಪ್ಪಟ ಬುದ್ದಿವಂತ!
ಒಂದೇ ಒಂದು ಭರಪೂರ ಗೆಲುವಿಗಾಗಿ ಕಾತರಿಸುತ್ತಿದ್ದ ಉಪೇಂದ್ರ ಧಿಗ್ಗನೆ ಎದ್ದು ನಿಂತಿದ್ದಾರೆ. ಅದಕ್ಕೆ ಕಾರಣ ‘ಐ ಲವ್ ಯೂ ಸಿನಿಮಾದ ಅಮೋಘ ಯಶಸ್ಸು. ಆರ್. ಚಂದ್ರು ನಿರ್ದೇಶನದ ಈ ಸಿನಿಮಾ ೨೦೧೯ರಲ್ಲಿ ಬಿಡುಗಡೆಯಾಗಿ ನೂರು ದಿನ ಪೂರೈಸಿ, ಗಳಿಕೆಯಲ್ಲೂ ಹಿಸ್ಟರಿ ಕ್ರಿಯೇಟ್ ಮಾಡಿದೆ. ಹಂಡ್ರೆಡ್ ಡೇಸ್ ಅನ್ನೋ ಕಲ್ಪನೆಯೇ ಕಣ್ಮುಚ್ಚಿರುವ ಇವತ್ತಿನ ದಿನಗಳಲ್ಲಿ ನೂರು ದಿನ ಪ್ರದರ್ಶನಗೊಂಡ ಸಿನಿಮಾವಾಗಿ ‘ಐ ಲವ್ ಯೂ ನಿಂತಿದೆ. ಇದೇ ಖುಷಿಯಲ್ಲಿ ಚಂದ್ರು ಮತ್ತು ಉಪ್ಪಿ ಜೋಡಿ ಹ್ಯಾಟ್ರಿಕ್ ಪ್ರಾಜೆಕ್ಟ್ ಆರಂಭಿಸುತ್ತಿದ್ದಾರೆ. ಏಳು ಭಾಷೆಯಲ್ಲಿ, ಏಳು ಬಗೆಯ ವಿಲನ್ನುಗಳು, ನೂರಾರು ಜನ ಸಹ ಕಲಾವಿದರು, ಕೋಟಿಗಟ್ಟಲೆ ಖರ್ಚಿನ ಬೃಹತ್ ಯೋಜನೆ ಇದೇ ತಿಂಗಳ ೧೫ರಂದು ಚಾಲನೆ ಪಡೆಯುತ್ತಿದೆ.
ಉಪೇಂದ್ರ ಅವರನ್ನು ಒಂದು ಸಿನಿಮಾಗಾಗಿ ಒಪ್ಪಿಸುವುದು, ಅವರ ಮನಸ್ಥಿತಿಗೆ ಒಗ್ಗುವಂಥಾ ಸ್ಕ್ರಿಪ್ಟು ರೆಡಿ ಮಾಡಿಕೊಂಡು ಹೋಗಿ ‘ಓಕೆ ಅನ್ನಿಸೋದು ಅಷ್ಟು ಸುಲಭದ ಕೆಲಸವಲ್ಲ. ಆದರೆ ನಿರ್ದೇಶಕ ಚಂದ್ರುಗೆ ಆ ತಾಕತ್ತಿದೆ. ಅದಿಲ್ಲದೇ ಹೋಗಿದ್ದಿದ್ದರೆ ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಬರೋಬ್ಬರಿ ಮೂರನೇ ಸಿನಿಮಾ ತಾನೆ ಎಲ್ಲಿ ಶುರುವಾಗುತ್ತಿತ್ತು. ಉಪೇಂದ್ರ ಅವರಿಗೂ ಗೊತ್ತು, ಚಂದ್ರು ಕೈಗೆ ಸಿನಿಮಾ ಒಪ್ಪಿಸಿದರೆ, ಅಚ್ಚುಕಟ್ಟಾಗಿ ನಟಿಸಿಬಂದರೆ ಸಾಕು. ಮಿಕ್ಕಂತೆ ಎಲ್ಲವನ್ನೂ ಚಂದ್ರು ನಿಭಾಯಿಸಿಕೊಳ್ಳುತ್ತಾರೆ. ಯಾರೂ ಮಾಡದಷ್ಟು ಪ್ರಚಾರ ಕೊಟ್ಟು ಸಿನಿಮಾವನ್ನು ಗೆಲ್ಲಿಸುತ್ತಾರೆ ಅಂತಾ. ಲೆಕ್ಕದಲ್ಲಿ ಪಕ್ಕಾ ಅನ್ನಿಸಿಕೊಂಡಿರುವ ಉಪ್ಪಿ ಚಂದ್ರು ಜೊತೆ ಮಾಡಿದ ಎರಡು ಸಿನಿಮಾಗಳ ವಿಚಾರದಲ್ಲಿ ಎಲ್ಲರನ್ನೂ ಅಚ್ಚರಿಗೀಡುಮಾಡಿದ್ದರು. ಸಂಭಾವನೆಯ ಕೊನೆಯ ಕಂತನ್ನು ತೀರಿಸಲು ಹೋದಾಗ ‘ಇದನ್ನು ನೀವೇ ಇಟ್ಕಳಿ. ಸಿನಿಮಾದ ಪಬ್ಲಿಸಿಟಿಗೆ ಯೂಸ್ ಆಗತ್ತೆ ಅಂದಿದ್ದರು. ಐ ಲವ್ ಯೂ ಸಿನಿಮಾದ ವಿಚಾರದಲ್ಲೂ ಹಾಗೇ ಆಗಿತ್ತು. ಫೈನಲ್ ಪೇಮೆಂಟ್ ಸೆಟಲ್ ಮಾಡಲು ಹೋಗಿದ್ದ ಚಂದ್ರು ಕೈಗೆ ಅದೇ ಇಪ್ಪತ್ತಾರು ಲಕ್ಷ ರುಪಾಯಿಗಳನ್ನು ವಾಪಾಸು ಕೊಟ್ಟು ‘ಇದನ್ನ ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಿ. ನಿಮಗೆ ಅಗತ್ಯವಿದೆ ಅಂದಿದ್ದರು. ಚಂದ್ರುಗಾಗಿ ಉಪ್ಪಿ ಡಿಸ್ಕೌಂಟು ಮಾಡಿದ ಅಮೌಂಟು ಅವರಿಗೆ ಹತ್ತು ಪಟ್ಟು ಹೆಚ್ಚಿಗೆ ಲಾಭ ಮಾಡಿಕೊಟ್ಟಿದೆ. ಐ ಲವ್ ಯೂ ರಿಲೀಸಾಗುತ್ತಿದ್ದಂತೇ ಉಪ್ಪಿಯ ಡೇಟಿಗಾಗಿ ಜನ ಅಕ್ಷರಶಃ ಕ್ಯೂ ನಿಂತಿದ್ದಾರೆ. ಅವರು ಪಡೆಯುತ್ತಿದ್ದ ಸಂಭಾವನೆಗಿಂತಾ ದುಪ್ಪಟ್ಟು ಕೊಡಲೂ ರೆಡಿಯಾಗಿದ್ದಾರೆ.
ಈಗ ಹೇಳಿ ಉಪ್ಪಿ ನಿಜವಾದ ಬುದ್ದಿವಂತ ತಾನೆ?
ಇಪ್ಪತ್ತೈದು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಚಿತ್ರರಂಗದಲ್ಲಿ ಉದಯಿಸಿದ ಉಪ್ಪಿ, ಒಂದೊಂದೇ ಸಾಧನೆ ಮಾಡುತ್ತಾ ಇಡೀ ಚಿತ್ರರಂಗವನ್ನು ಕಬ್ಜ ಮಾಡಿಕೊಂಡಿದ್ದವರು. ಈಗ ಅದೇ ಉಪ್ಪಿ ಮತ್ತು ಚಂದ್ರು ಏಳು ಭಾಷೆಗೆ ಒಟ್ಟಿಗೇ ಕಾಲಿಡುತ್ತಿದ್ದಾರೆ. ಇನ್ನು ಕನ್ನಡ ಮಾತ್ರವಲ್ಲ, ಏಳೂ ಭಾಷೆಗಳಲ್ಲಿ ಅತಿ ಹೆಚ್ಚು ಬಳಕೆಯಾಗೋ ಪದ ‘ಕಬ್ಜ ಅನ್ನೋದರಲ್ಲಿ ಡೌಟೇ ಇಲ್ಲ! ಇಬ್ಬರೂ ಪ್ರತಿಭಾವಂತರು ಏಳೂ ಭಾಷೆಗಳಲ್ಲಿ ಗೆದ್ದು, ಎಲ್ಲರ ಮನಸ್ಸನ್ನು ಕಬ್ಜ ಮಾಡಿಕೊಳ್ಳುವಂತಾದರೆ, ಕನ್ನಡಿಗರಿಗೆ ಅದಕ್ಕಿಂತಾ ಖುಷಿ ಕೊಡೋ ವಿಚಾರ ತಾನೆ ಬೇರೆ ಯಾವುದಿದೆ?
No Comment! Be the first one.