ಕಳೆದ ಮೂರು ದಶಕಗಳಲ್ಲಿ ರೌಡಿಸಂ ಕಥಾವಸ್ತುವಿನ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ಸ್ವತಂತ್ರ ಬಂದ ನಂತರ ರೌಡಿಸಂ ಹೇಗೆ ಜನ್ಮ ಪಡೆಯಿತು? ಅಂಡರ್ ವರ್ಲ್ಡ್ ಎನ್ನುವ ಕಾನ್ಸೆಪ್ಟು ಹುಟ್ಟಿಕೊಂಡಿದ್ದು ಹೇಗೆ ಅನ್ನೋದನ್ನು ಬಹುಶಃ ಯಾರೂ ಅನಾವರಣಗೊಳಿಸಿರಲಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಈಗ ತೆರೆ ಕಂಡಿರುವ ಕಬ್ಜ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದೆ; ಅದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಗೆದ್ದಿದೆ.
ಚಿತ್ರದ ಕಥೆ ಶುರುವಾಗೋದೇ ಸ್ವತಂತ್ರ್ಯಪೂರ್ವದಲ್ಲಿ. ದೇಶಕ್ಕಾಗಿ ಹೋರಾಡಿ ಮಡಿದ ಹುತಾತ್ಮನ ಪತ್ನಿ ತನ್ನಿಬ್ಬರು ಮಕ್ಕಳ ಜೊತೆಗೆ ಬದುಕು ಕಟ್ಟಿಕೊಳ್ಳುತ್ತಾಳೆ. ಒಬ್ಬ ಅಮ್ಮನ ಜೊತೆ ದುಡಿಮೆಗೆ ನಿಂತರೆ, ಮತ್ತೊಬ್ಬ ಪೈಲಟ್ ಆಗುವ ಪ್ರಯತ್ನದಲ್ಲಿರುತ್ತಾನೆ. ಇವನಿಗೆ ತೀರಾ ಚಿಕ್ಕಂದಿನಿಂದಲೇ ರಾಜಮನೆತನದ ಹುಡುಗಿಯ ಕಡೆಗೆ ಆಕರ್ಷಣೆಯಿರುತ್ತದೆ. ಕ್ರಮೇಣ ಅದು ಪ್ರೀತಿಯಾಗಿ ಬೆಳೆದಿರುತ್ತದೆ. ಅಪ್ಪನ ವಿರೋಧಗಳನ್ನೆಲ್ಲಾ ದಿಕ್ಕರಿಸಿ ಇವನನ್ನು ಮದುವೆಯಾಗುತ್ತಾಳೆ. ಇವೆಲ್ಲಾ ಬೆಳವಣಿಗೆಗಳ ಹಿಂದೆ-ಮುಂದೆ ನಾಯಕನ ಬದುಕಿನಲ್ಲಿ ಹಲವು ಪಲ್ಲಟಗಳು ಏರ್ಪಟ್ಟಿರುತ್ತವೆ. ಅವನ ಬದುಕಿನ ದಿಕ್ಕನ್ನೇ ಬದಲಿಸಿರುತ್ತವೆ. ಅವೆಲ್ಲಾ ವಿವರಗಳನ್ನು ತಿಳಿಯಲು ʻಕಬ್ಜʼ ಸಿನಿಮಾವನ್ನು ಒಮ್ಮೆ ನೋಡಲೇಬೇಕು.
ಚಿತ್ರದಲ್ಲಿ ಉಪ್ಪಿಗಿಂತಾ ಮೊದಲೇ ತೆರೆ ಮೇಲೆ ಬಂದು ನಿಲ್ಲೋದು ಕಿಚ್ಚ ಸುದೀಪ. ಇವರ ವಿವರಣೆಯೊಂದಿಗೆ ಆರಂಭವಾಗಿ ಇಡೀ ಚಿತ್ರ ಸುದೀಪ್ ಅವರ ನಿರೂಪಣೆಯಲ್ಲೇ ಸಾಗುತ್ತದೆ. ಸ್ವತಂತ್ರ್ಯಾನಂತರ ಏಕಾಏಕಿ ಅರಸೊತ್ತಿಗೆ ಕಳೆದುಕೊಂಡ ಅಂದಿನ ರಾಜಮನೆತನಗಳ ಒದ್ದಾಟ, ಅಧಿಕಾರ ಹೊಂದಲು ಅವರು ನಡೆಸುವ ಸಂಚುಗಳು, ಮಣ್ಣುಪಾಲಾದ ಪ್ರತಿಷ್ಠೆಯನ್ನು ಎತ್ತಿನಿಲ್ಲಿಸಲು ಅವರು ಏನೆಲ್ಲಾ ಅನಾಚಾರಗಳನ್ನು ಮಾಡಿದರು ಅನ್ನೋದು ಕೂಡಾ ʻಕಬ್ಜʼದಲ್ಲಿ ಸೂಚ್ಯವಾಗಿ ಅನಾವರಣಗೊಂಡಿವೆ. ದೇಶಪ್ರೇಮಿ ಕುಟುಂಬದಿಂದ ಬಂದ ಹುಡುಗನೊಬ್ಬನನ್ನು ಸಂದರ್ಭಗಳು ಹೇಗೆ ಅನಾಹುತಕಾರಿಯಾಗಿ ಬೆಳೆಯುವಂತೆ ಮಾಡಿತು, ಅವನು ಘಾತಕ ಗುಣಗಳನ್ನು ಬೆಳೆಸಿಕೊಂಡಿದ್ದು ಯಾರ ವಿರುದ್ಧ ಎಂಬಿತ್ಯಾದಿ ವಿವರಗಳೂ ಇಲ್ಲಿ ತೆರೆದುಕೊಂಡಿವೆ.
ಇದು ಪ್ಯಾನ್ ಇಂಡಿಯಾ ಸಬ್ಜೆಕ್ಟ್ ಆಗಿರೋದರಿಂದ ಬಹುಶಃ ವೈಲೆನ್ಸ್ ಹೆಚ್ಚಾಗಿದೆ; ಸೈಲೆನ್ಸ್ಗೆ ಜಾಗ ಸಿಗದೇ ಹೋಗಿದೆ. ಇಲ್ಲಿ ಕೆ.ಜಿ.ಎಫ್ ಮಾದರಿಯ ಮೇಕಿಂಗ್ ಇದೆ ಅನ್ನೋದು ಬಿಟ್ಟರೆ ಕಥೆ ಸಂಪೂರ್ಣ ಬೇರೆಯದ್ದೇ ಆಗಿದೆ. ರವಿಬಸ್ರೂರ್ ತಮ್ಮ ಶೈಲಿಯನ್ನು ಯಥಾವತ್ತಾಗಿ ಇಲ್ಲೂ ಮುಂದುವರೆಸಿದ್ದಾರೆ. ಎ ಜೆ ಶೆಟ್ಟಿ ಛಾಯಾಗ್ರಹಣ ಅದ್ಭುತವಾಗಿದೆ. ಶ್ರಿಯಾ ಸರಣ್ ನೋಡಲು ಮಾತ್ರವಲ್ಲ, ನಟನೆ ಕೂಡಾ ಬ್ಯೂಟಿಫುಲ್. ಉಪೇಂದ್ರ ಎಂದಿನಂತೆ ನಟನೆ ಮತ್ತು ಫೈಟುಗಳೆರಡರಲ್ಲೂ ಅಬ್ಬರಿಸಿದ್ದಾರೆ. ಸುದೀಪ್ ಇಲ್ಲಿ ಕಾಣಿಸೋದು ಎರಡೇ ದೃಶ್ಯಗಳಲ್ಲಾದರೂ, ಅವರ ದನಿಯ ಮೂಲಕ ಇಡೀ ಚಿತ್ರವನ್ನು ʻಕಬ್ಜʼ ಮಾಡಿಕೊಂಡಿದ್ದಾರೆ. 1975ರ ಸುಮಾರಿಗೆ ಪೊಲೀಸ್ ಅಧಿಕಾರಿಯಾಗಿ ಬಂದವರು ಪ್ರಸ್ತುತ ಕಾಲಘಟ್ಟದಲ್ಲು ಕೂಡಾ ಹೇಗೆ ಅದೇ ಅಧಿಕಾರ, ಅದೇ ಗತ್ತು ಉಳಿಸಿಕೊಂಡರು ಅನ್ನೋದಷ್ಟೇ ಇಲ್ಲಿ ಕಾಡುವ ಪ್ರಶ್ನೆ!
ನೀನಾಸಂ ಅಶ್ವಥ್, ಸುನೀಲ್ ಪುರಾಣಿಕ್, ಬಿ ಸುರೇಶ ಅವರಿಗೆ ಒಳ್ಳೆ ಪಾತ್ರ ಸಿಕ್ಕಿವೆ. ಅನೂಪ್ ರೇವಣ್ಣ ಕೂಡಾ ಗಮನ ಸೆಳೆಯುತ್ತಾರೆ. ಶಿವರಾಜ್ ಕುಮಾರ್ ಕಟ್ಟಕಡೆಯ ದೃಶ್ಯದಲ್ಲಿ ಎಂಟ್ರಿ ಕೊಟ್ಟು ಮುಂದೇನು ಎನ್ನುವ ಅಚ್ಛರಿ ಹುಟ್ಟಿಸುತ್ತಾರೆ. ಒಬ್ಬ ಹಂಟರ್ ಮತ್ತು ಪಂಟರ್ ನಡುವೆ ಫಯರ್ ಕಾಣಿಸಿಕೊಂಡಿದ್ದು ಯಾಕೆ ಅನ್ನೋದನ್ನು ʻಕಬ್ಜ ಭಾಗ-೨ʼರಲ್ಲೇ ನೋಡಬೇಕು. ನಿರ್ದೇಶಕ ಆರ್ ಚಂದ್ರು ತಮ್ಮೆಲ್ಲಾ ಶ್ರಮವನ್ನು ಧಾರೆಯೆರೆದು ʻಕಬ್ಜʼ ರೂಪಿಸಿದ್ದಾರೆ. ಖಂಡಿತಾ ಇದು ಕನ್ನಡದ ಮಟ್ಟಿಗೆ ಬೇರೆ ಲೆವೆಲ್ಲಿನ ಚಿತ್ರವಿದು ಅನ್ನೋದರಲ್ಲಿ ಅನುಮಾನಗಳಿಲ್ಲ. ಅದ್ಧೂರಿ ಬಜೆಟ್, ಅದ್ಭುತ ಮೇಕಿಂಗ್ ಇರುವ ಈ ಸಿನಿಮಾದಲ್ಲಿ ಗಟ್ಟಿ ಕತೆ ಕೂಡಾ ಇದೆ ಅನ್ನೋದೇ ʻಕಬ್ಜʼದ ವಿಶೇಷ!
No Comment! Be the first one.