ಬಾಲ್ಯ ಅನ್ನೋದು ಒಟ್ಟಾರೆ ಬದುಕಿನ ತಳಹದಿ. ಆ ಅಡಿಪಾಯ ಒಂಚೂರು ಆಚೀಚೆ ಆದರೂ ಭವಿಷ್ಯವೆನ್ನು ಬಿಲ್ಡಿಂಗು ವಕ್ರವೆದ್ದು ಹೋಗುತ್ತದೆ.
ಯಾವುದೇ ವ್ಯಕ್ತಿಯ ಬಾಲ್ಯದ ದಿನಗಳು ಆತನ ಬದುಕನ್ನು ರೂಪಿಸುತ್ತವೆ ಅನ್ನೋದನ್ನು ಬಹುಶಃ ʻಕಡಲ ತೀರದ ಭಾರ್ಗವʼ ಚಿತ್ರ ನಿರೂಪಿಸುತ್ತದೆ. ದೇಹ ಎರಡು ಜೀವ ಒಂದೇ ಎನ್ನುವಂತೆ ಬೆಳೆಯುವ ಇಬ್ಬರು ಸ್ನೇಹಿತರು. ಅವರ ನಡುವೆ ಬರುವ ಮತ್ತೊಂದು ಪಾತ್ರ. ಆ ನಂತರದ ಬೆಳವಣಿಗೆಗಳು, ಬದಲಾಗುವ ಮನಸ್ಥಿತಿ, ಪರಿಸ್ಥಿತಿಗಳು ಮುಂದೆ ನಡೆಯುವ ಏನೆಲ್ಲಾ ಘಟನೆಗಳಿಗೆ ಕಾರಣವಾಗುತ್ತದೆ ಅನ್ನೋದು ಕಡಲ ತೀರದ ಭಾರ್ಗವ ಚಿತ್ರದಲ್ಲಿ ಬಿಡಿಬಿಡಿಯಾಗಿ ತೆರೆದುಕೊಂಡಿದೆ. ಕೆಲವು ಕತೆಗಳೇ ಹಾಗೆ. ಅವನ್ನು ಸಲೀಸಾಗಿ ಒಂದೇ ಗುಕ್ಕಿನಲ್ಲಿ ಹೇಳಿಬಿಡಲು, ವಿವರಿಸಲು ಸಾಧ್ಯವಾಗುವುದಿಲ್ಲ. ಹಾಗೊಮ್ಮೆ ಹೇಳಿದರೂ ಅರ್ಥವಾಗುವುದಿಲ್ಲ. ದೃಶ್ಯರೂಪದಲ್ಲಿ ಮಾತ್ರ ಕಟ್ಟಿಕೊಡಲು ಸಾಧ್ಯವಾಗುವ ಕತೆಗಳ ಸಾಲಿಗೆ ಕಡಲ ತೀರದ ಭಾರ್ಗವ ಸೇರಿಕೊಂಡಿದ್ದಾನೆ. ಯಾಕೆಂದರೆ, ಇಲ್ಲಿ ಬರಿಯ ವಾಸ್ತವದ ಚಿತ್ರಣಗಳಷ್ಟೇ ಇಲ್ಲ. ಭ್ರಮೆ ಮತ್ತು ರೂಪಕಗಳೂ ಸೇರಿಕೊಂಡಿವೆ. ಒಬ್ಬ ನಾಯಕನ ಬೆನ್ನುಬಿದ್ದಿದ್ದರೆ, ಆ ನಾಯಕ ಮತ್ತೊಬ್ಬಳ ಕನವರಿಕೆಯಲ್ಲಿ ಕಳೆದುಹೋಗಿರುತ್ತಾನೆ. ಅವಳನ್ನು ಮತ್ತೊಬ್ಬ ಮೋಹಿಸುತ್ತಿರುತ್ತಾನೆ…

ಸೈಕಲಾಜಿಕಲ್ ಥ್ರಿಲ್ಲರ್ ಜಾನರಿನ ಈ ಸಿನಿಮಾ ಕನ್ನಡದ ಮಟ್ಟಿಗೆ ಸಾಕಷ್ಟು ಕಾರಣಗಳಿಗಾಗಿ ವಿಶೇಷವೆನಿಸಿದೆ. ಸರಳವಾದ ಕತೆಯನ್ನು ಟ್ರಿಕ್ಕಿ ಸ್ಕ್ರೀನ್ ಪ್ಲೇ ಮೂಲಕ ನಿರೂಪಿಸಿದ್ದಾರೆ. ತಾಂತ್ರಿಕವಾಗಿಯಂತೂ ಯಾವುದೇ ಕೊರತೆಗಳಿಲ್ಲ ಚಿತ್ರವಿದು. ನಿರ್ದೇಶಕ ಪನ್ನಗ ಸೋಮಶೇಖರ್ ಹೊಸ ಹೀರೋಗಳನ್ನಿಟ್ಟುಕೊಂಡು ಇಂಥದ್ದೊಂದು ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವುದೇ ಒಂದು ಸವಾಲು. ಆದರೆ, ಪಟೇಲ್ ವರುಣ್ ಮತ್ತು ಭರತ್ ಇಬ್ಬರೂ ಚಿತ್ರದ ಪಾತ್ರಗಳಂತೆ, ನಟನೆಯಲ್ಲೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಶ್ರುತಿ ಪ್ರಕಾಶ್ ಕೂಡಾ ಅಷ್ಟೇ ಮನೋಜ್ಞವಾಗಿ ಪಾತ್ರ ನಿರ್ವಹಿಸಿದ್ದಾರೆ. ಈ ಟೀವಿ ಶ್ರೀಧರ್ ಅವರಿಗೆ ಬಹುಕಾಲದ ನಂತರ ಎಲ್ಲರ ನೆನಪಿನಲ್ಲುಳಿಯುವ ರೋಲು ಸಿಕ್ಕಿದೆ.
ನೆನಪುಗಳ ಬೇರು ಆಳಕ್ಕಿಳಿಯುತ್ತಾ ಹೋದಂತೆ ಭವಿಷ್ಯದ ದಿನಗಳು ಕಾಂಡವಾಗಿ, ಟಿಸಿಲೊಡೆದ ರೆಂಬೆ, ಕೊಂಬೆಗಳಾಗಿ ಬೆಳೆದು ನಿಲ್ಲುತ್ತದೆ. ಬಾಲ್ಯದಲ್ಲಿ ನಡೆದ ಸ್ನೇಹ, ವಿಶ್ವಾಸ, ಪಶ್ಚಾತ್ತಾಪಗಳೇ ಮನಸಿನೊಳಗೆ ಮೆಟ್ಟಿಲುಗಳಿಲ್ಲದ ಬೆಟ್ಟದಂತೆ ಬೆಳೆದುನಿಂತಿರುತ್ತದೆ. ಹತ್ತಿದರೆ, ಇಳಿಯಲಾರದೆ, ಇಳಿದರೆ ಹತ್ತಲಾರದೇ ವಿಲಗುಟ್ಟುವಂಥಾ ಪಾತ್ರಗಳು ಕ್ಷಣಕ್ಷಣಕ್ಕೂ ಕಾಡುತ್ತವೆ. ʻರಕ್ತ ಹೀರೋ ಜನ ನಮ್ಮ ಸುತ್ತಮುತ್ತಾನೇ ಇದಾರೆ ಅಂದ್ಮೇಲೆ ನಮಗೆ ಈ ಪ್ರಪಂಚಾನೇ ಬೇಡʼ ಎನ್ನುವ ಮಾತುಗಳು ಆಂತರ್ಯದ ಬೇಗುದಿಯನ್ನು ಹೊರಹಾಕುತ್ತವೆ.

ʻʻಈ ಭೂಮಿ ನಾವು ತಿರುಗಿಸಿದಂತೇ ತಿರುಗಬೇಕು… ಈ ಗಾಳಿ ನಾವು ಹೇಳಿದಂಗೇ ಬೀಸಬೇಕು… ಮಳೆ ನಾವು ಕೇಳಿದಾಗ ಬರಬೇಕು… ಆ ಸೂರ್ಯ ನಾವು ಹೇಳಿದಾಗ ಹುಟ್ಟಬೇಕು… ಆ ಚಂದ್ರ ಇನ್ನೂ ಹತ್ತಿರ ಬರಬೇಕು. ಅಷ್ಟೇ ಅಲ್ಲ, ನೀನು ನನ್ನ ಜೊತೆ ಯಾವಾಗದಲೂ ಇರಬೇಕು…ʼʼ ಅನ್ನುವ ನಾಯಕಿಯ ಕಲ್ಪನೆಯ ಮಾತುಗಳು ಎಷ್ಟು ಚೆಂದ ಅನ್ನಿಸುತ್ತವೆ. ʻʻರಾಮಾಯಣದಲ್ಲಿ ಸೀತೆ ಏನಾದ್ರೂ ಮಾಯಾ ಜಿಂಕೆ ಬೇಕು ಅಂತಾ ಕೇಳದೇ ಹೋಗಿದ್ದಿದ್ರೆ. ರಾಮನಿಗೂ ರಾವಣನಿಗೂ ಯುದ್ದಾನೇ ನಡೀತಿರಲಿಲ್ಲ…ʼʼ ಎನ್ನುವ ಮಾತು ಕೇಳಿದಾಗ ಹೌದಲ್ವಾ ಅಂತಾ ಚಿಂತನೆಗೆ ಹಚ್ಚುತ್ತದೆ. ಕೀರ್ತನ್ ಪೂಜಾರಿ ಛಾಯಾಗ್ರಹಣ ಅಚ್ಚರಿ ಮೂಡಿಸಿದರೆ, ಅನಿಲ್ ಸಿ.ಜೆ. ಸಂಗೀತ ಸಿನಿಮಾದ ಕಸುವನ್ನು ಹೆಚ್ಚಿಸಿದೆ.
ಕಟ್ಟ ಕಡೆಯದಾಗಿ ಕಳೆದುಹೋದ ಮಾಯಾ ಜಿಂಕೆಯನ್ನು ಹುಡುಕಿಕೊಂಡು ಹೊರಟವನಿಂದ ಯಾವ ಯುದ್ದ ಶುರುವಾಗಬಹುದು? ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರವೂ ಸಿಗುತ್ತದೆ. ಪನ್ನಗ ಸೋಮಶೇಖರ್ ನಿರ್ದೇಶನದ ಹೊಸ ಮಾದರಿಯ ಈ ಸಿನಿಮಾವನ್ನು ಒಮ್ಮೆ ನೋಡಬಹುದು.