https://www.youtube.com/watch?v=2freW2IGokw
ಕಡಲತೀರದ ಭಾರ್ಗವ ಎನ್ನುವ ಸಿನಿಮಾವೊಂದು ತಯಾರಾಗಿದೆ. ಸದ್ಯ ಈ ಚಿತ್ರದ ಟ್ರೇಲರ್ ಕೂಡಾ ರಿಲೀಸಾಗಿದೆ. ಇವಕಲಾ ಸ್ಟುಡಿಯೋಸ್ ಬ್ಯಾನರ್ ಈ ಚಿತ್ರವನ್ನು ನಿರ್ಮಿಸಿದೆ. ಸಾಮಾನ್ಯಕ್ಕೆ ಕಡಲ ತೀರದ ಭಾರ್ಗವ ಎನ್ನುವ ಹೆಸರು ಕೇಳುತ್ತಿದ್ದಂತೇ ಇದು ಶಿವರಾಮ ಕಾರಂತರಿಗೆ ಸಂಬಂಧಪಟ್ಟ ಚಿತ್ರವಾ? ಅನ್ನೋ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಚಿತ್ರಕ್ಕೂ ಕಾರಂತರ ಬದುಕು, ಬರಹಗಳಿಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ ವಿಲ್ಲವಂತೆ. ಭರತ್ ಮತ್ತು ಭಾರ್ಗವ ಎಂಬ ಇಬ್ಬರು ಸ್ನೇಹಿತರ ಬದುಕಿನ ಹಾದಿಯನ್ನು ಬಿಚ್ಚಿಡುವ ಕಥೆ ಈ ಸಿನಿಮಾದಲ್ಲಿದೆಯಂತೆ. ಸರಿ ಸುಮಾರು ಐದು ಪ್ರಮುಖ ಪಾತ್ರಗಳ ಸುತ್ತ ಈ ಸಿನಿಮಾದ ಕಥೆ ಆವರಿಸಿಕೊಂಡಿದೆಯಂತೆ. ಸಮುದ್ರದಿಂದ ಆರಂಭವಾಗಿ ಸಮುದ್ರದಲ್ಲೇ ಅಂತ್ಯವಾಗುವ ಕಾರಣಕ್ಕೆ ಕಡಲ ತೀರದ ಭಾರ್ಗವ ಎಂಬ ಹೆಸರನ್ನಿಟ್ಟಿದ್ದಾರಂತೆ.
ಕಳೆದ ಕೆಲವಾರು ವರ್ಷಗಳಿಂದ ಹಲವು ಧಾರಾವಾಹಿ, ಕಿರುಚಿತ್ರಗಳನ್ನು ನಿರ್ದೇಶಿಸಿರುವ ಪನ್ನಗ ಸೋಮಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಭರತ್ ಗೌಡ ಮತ್ತು ವರುಣ್ ರಾಜ್ ಇಬ್ಬರು ನಾಯಕರಾಗಿದ್ದಾರೆ. ಶೃತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ.
ಈ ಟಿವಿ ಶ್ರೀಧರ್ ಮತ್ತು ಹಿರಿಯ ನಟ ಶ್ರೀಧರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಡಲ ತೀರದ ಭಾರ್ಗವ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ. ಅನಿಲ್ ಸಿ.ಜೆ. ಸಂಗೀತ ಸಂಯೋಜ ಮಾಡಿದ್ದಾರೆ. ಡಾ.ವಿ ನಾಗೇಂದ್ರ ಪ್ರಸಾದ್, ಸಾಯಿ ನವೀನ್, ರಾಜ್ ಮುರಳಿ ಗೀತ ಸಾಹಿತ್ಯ ಬರೆದಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಆಶಿಕ್ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಚಿಕ್ಕಮಗಳೂರು, ಕುಮಟಾ, ಗೋಕರ್ಣ ಸುತ್ತಮುತ್ತ ಚಿತ್ರದ ಶೂಟಿಂಗ್ ಮುಗಿಸಿರುವ ಈ ಚಿತ್ರದ ಟ್ರೇಲರ್ ಭಾರ್ಗವನ ಕುರಿತಾದ ಸೂಕ್ಷ್ಮತೆಗಳನ್ನು ಬಿಟ್ಟುಕೊಟ್ಟಿದೆ. ಮಾದಕ ಮತ್ತು ಅದರ ವ್ಯಸನಿಯೊಬ್ಬನ ಸುತ್ತ ಕಥೆ ತಿರುಗುವ ಸಣ್ಣ ಸುಳಿವು ಸಿಕ್ಕಿದೆ. ಇಲ್ಲಿ ಗಂಭೀರ ವಿಚಾರವನ್ನು ಅಷ್ಟೇ ಕ್ರಿಯಾಶೀಲವಾಗಿ ಹೇಳಿದ್ದಾರೆ ಅನ್ನೋದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ.
No Comment! Be the first one.