ಸಂಬಂಧ ಸೂಕ್ಷ್ಮಗಳನ್ನು ಮೆಲುವಾಗಿ ಅನಾವರಣಗೊಳಿಸುತ್ತಾ ಪ್ರೇಕ್ಷಕರ ಆಸಕ್ತಿಯನ್ನು ತನ್ನತ್ತ ಕೇಂದ್ರೀಕರಿಸಿಕೊಂಡಿದ್ದ ಚಿತ್ರ ಕದ್ದುಮುಚ್ಚಿ. ಮಂಜುನಾಥ್ ನಿರ್ಮಾಣದ ಈ ಸಿನಿಮಾ ಇದೀಗ ತೆರೆ ಕಂಡಿದೆ. ಮಲೆನಾಡಿನ ಹಸಿರ ಹೊದಿಕೆಯ ನಡುವೆಯೇ ಬಿಚ್ಚಿಕೊಳ್ಳೋ ಕಥೆಯೊಂದಿಗೆ ನವಿರಾಗಿಯೇ ಪ್ರೇಕ್ಷಕರನ್ನೆಲ್ಲ ತಲುಪಿಕೊಂಡಿದೆ.
ಇಲ್ಲಿ ನಾಯಕ ಬೆಂಗಳೂರಿನ ಹುಡುಗ. ಆತನದ್ದು ಭಾರೀ ಶ್ರೀಮಂತಿಕೆಯ ಹಿನ್ನೆಲೆ. ಆದರೂ ಯಾವುದೇ ಕಸಿಸುರಿಲ್ಲದ ಪ್ರೀತಿ ಪಡೆಯೋ ವಿಚಾರದಲ್ಲಿ ಆತನಿಗೆ ಭೀಕರ ಬಡತನದ ಭಾವವೊಂದು ಬಿಟ್ಟೂ ಬಿಡದಂತೆ ಬಾಧಿಸಲಾರಂಭಿಸುತ್ತೆ. ಕಡೆಗೂ ಅದರಿಂದ ತಪ್ಪಿಸಿಕೊಳ್ಳಲಾಗದೆ ನಾಯಕನ ಪಯಣ ಸೀದಾ ಹೋಗಿ ತೀರ್ಥಹಳ್ಳಿ ಸೀಮೆಯ ಹಸಿರಿನ ನೆರಳಿನತ್ತ ಹೊರಳಿಕೊಳ್ಳುತ್ತೆ. ಹಾಗೆ ಬಂದ ನಾಯಕನಿಗೆ ಅಲ್ಲೊಬ್ಬಳು ದೇವತೆಯಂಥಾ ಹುಡುಗಿ ಎದುರಾಗ್ತಾಳೆ.
ಅಲ್ಲಿಂದಾಚೆಗೆ ಲವ್ವು, ಸುತ್ತಾಟ ಮತ್ತು ಮಾಮೂಲಿ ಫಾರ್ಮುಲಾಗಳೇ ಕೊಂಚ ಬೇರೆ ರೀತಿಯಲ್ಲಿ ಜೀಕಾಡುತ್ತವೆ. ಆದರೆ ಏಕಾಏಕಿ ಅಲ್ಲೊಂದು ಟ್ವಿಸ್ಟು. ನಾಯಕಿ ತುಂಬಾ ಇಷ್ಟಪಟ್ಟ ನಾಯಕನನ್ನು ಒಲ್ಲೆ ಅಂದು ಬಿಡುತ್ತಾಳೆ. ನಾಯಕನ ಪಾಲಿಗೆ ತಾನು ಪ್ರೀತಿಸಿದ ಹುಡುಗಿಯ ಮದುವೆಯ ಸಾರಥ್ಯ ವಹಿಸಿಕೊಳ್ಳೋ ದೌರ್ಭಾಗ್ಯ ಬಂದೊದಗುತ್ತದೆ. ಹಸಿರ ನಡುವೆ ಅರಳಿಕೊಂಡ ಪ್ರೀತಿ ನಡುವಲ್ಲಿಯೇ ಬಾಡಿ ಬೆಂಡಾಗಲು ಕಾರಣವೇನು? ಅದು ಮತ್ತೆ ಚಿಗುರಿಕೊಳ್ಳುತ್ತದಾ ಎಂಬುದು ಅಸಲೀ ಕುತೂಹಲ.
ವಸಂತ್ ರಾಜಾ ಒಟ್ಟಾರೆ ಚಿತ್ರವನ್ನು ಬೇರೆಯದ್ದೇ ಜಾಡಿನಲ್ಲಿ ಕಟ್ಟಿ ಕೊಡಲು ಪ್ರಯತ್ನಿಸಿದ್ದಾರೆ. ಕೆಲವೊಂದು ತಿರುವುಗಳಲ್ಲಿ ದೃಷ್ಯಗಳೂ ಬಾಡಿದಂತೆ ಅನ್ನಿಸಿದರೂ ಮತ್ತೆ ಹಸಿರಾಗುತ್ತದೆ. ನಾಯಕ ವಿಜಯ್ ಸೂರ್ಯ, ನಾಯಕಿ ಮೇಘಶ್ರೀ, ದೊಡ್ಡಣ್ಣ, ಸುಚೇಂದ್ರ ಪ್ರಸಾದ್ ಅವರನ್ನೊಳಗೊಂಡ ತಾರಾಗಳ ದೃಷ್ಯಗಳನ್ನೆಲ್ಲ ವರ್ಣಮಯವಾಗಿಸಿದೆ. ಮಾಮೂಲಿಯಾಗಿ ಕಳೆದು ಹೋಗ ಬಹುದಾದ ಕಥೆಯನ್ನ ವಿಭಿನ್ನವಾಗಿಸುವಲ್ಲಿಯೂ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ.
ಹಂಸಲೇಖಾ ಅವರ ಸಂಗೀತ ಕದ್ದುಮುಚ್ಚಿ ಚಿತ್ರದ ನಿಜವಾದ ತಾಕತ್ತು. ಬಹು ಕಾಲದಿಂದ ಸಂಗೀತ ನಿರ್ದೇಶಕರಾಗಿ ಮರಳಿರೋ ಹಂಸಲೇಖಾರ ಸಂಗೀತದ ಪಟ್ಟುಗಳು ಬೆರಗಾಗಿಸುತ್ತವೆ. ಒಂದು ಸಲ ಸರಾಗವಾಗಿ ನೋಡ ಬಹುದಾದ, ಪ್ರೀತಿ, ಸಂಬಂಧ, ಭಾವನೆಗಳ ಜಗತ್ತಿನಲ್ಲಿ ವಿಹರಿಸುವಂತೆ ಮಾಡುವಲ್ಲಿ ಕದ್ದುಮುಚ್ಚಿ ಸಫಲವಾಗಿದೆ.
cinibuzz ರೇಟಿಂಗ್ : *****/***1/2